ಯುವಜನರೇ, ಹೊಡೆ ಬಡಿ ಗೊಡವೆಗೆ ಹೋಗಬೇಡಿ

7
ಜನರ ಸಂಪರ್ಕಕ್ಕೆ ಸಿಗುವುದಕ್ಕಾಗಿ ಮಂಗಳೂರು ನಗರ, ಸುರತ್ಕಲ್‌ ಮತ್ತು ಗುರುಪುರ ಕೈಕಂಬದಲ್ಲಿ ಕಚೇರಿ ಆರಂಭ

ಯುವಜನರೇ, ಹೊಡೆ ಬಡಿ ಗೊಡವೆಗೆ ಹೋಗಬೇಡಿ

Published:
Updated:
ಯುವಜನರೇ, ಹೊಡೆ ಬಡಿ ಗೊಡವೆಗೆ ಹೋಗಬೇಡಿ

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್‌ ಶೆಟ್ಟಿ ದಂತ ವೈದ್ಯಕೀಯ ಪರಿಷತ್‌ನಲ್ಲಿ ಕೆಲಸ ಮಾಡಿದ  ಅನುಭವಿ. ಮೊತ್ತ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ತಮ್ಮ ಕಾರ್ಯಚಟುವಟಿಕೆಯ ಆದ್ಯತೆಗಳ ಬಗ್ಗೆ ವಿವರಿಸಿದ್ದಾರೆ. ಕೋಮುಸೂಕ್ಷ್ಮ ಪ್ರದೇಶ, ಕೈಗಾರಿಕೆ ಮತ್ತು ವಸತಿ ಕ್ಷೇತ್ರದ ತ್ಯಾಜ್ಯ ನದಿಯನ್ನು ಸೇರುವ ಮೂಲಕ ಕಲುಷಿತಗೊಳ್ಳುತ್ತಿರುವ ಜಲಮೂಲ ಸ್ವಚ್ಛ ಗೊಳಿಸುವುದು, ಕೈಗಾರಿಕೆಗಳ ನಡುವೆ ಬಾಳುತ್ತಿರುವ ಕಾರ್ಮಿಕರ ಹಕ್ಕುಗಳ ರಕ್ಷಣೆ, ನಾಗರಿಕರಿಗೆ ಮಾಲಿನ್ಯ ಮುಕ್ತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಶಾಸಕರ ಮೇಲಿದೆ. ಈ ಕುರಿತು ಅವರ ಕ್ರಿಯಾ ಯೋಜನೆಯನ್ನು ಅವರ ಮಾತುಗಳಲ್ಲೇ ಸೆರೆ ಹಿಡಿಯುವ ಪ್ರಯತ್ನವನ್ನು ‘ಪ್ರಜಾವಾಣಿ’ ಮಾಡಿದೆ.

4 ಹಿಂದುತ್ವದ ಆಧಾರದಲ್ಲಿ ಗೆಲುವು ಕಂಡಿದ್ದೀರಿ. ಕೋಮುಸೌಹಾರ್ದ ಕಾಪಾಡುವ ಜವಾಬ್ದಾರಿ ಹೇಗೆ ನಿಭಾಯಿಸುವಿರಿ?

ಕೋಮು ಸೌಹಾರ್ದತೆ ನಮ್ಮ ಜನರ ನಡುವೆ ಇದ್ದೇ ಇದೆ. ಯಾವುದೋ ಕಾರಣಕ್ಕೆ ಗಲಭೆಗಳು ಉಂಟಾದಾಗ ಕಾನೂನು ಸುವ್ಯವಸ್ಥೆ ಸುಭದ್ರವಾಗಿರಬೇಕು. ಅಂದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಕಾರ್ಯವೈಖರಿಯಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು. ತಪ್ಪಿತಸ್ಥರು ಯಾರಿದ್ದಾರೋ ಅವರಿಗೆ ಶಿಕ್ಷೆಯಾಗುವ ಸಂದರ್ಭ, ಇವನು ನಮ್ಮವನು, ತಮ್ಮವನು ಎಂಬ ಮಾತು ಹೇಳದೇ ಸುಂದರ ಸಮಾಜ ನಿರ್ಮಾಣಕ್ಕಾಗಿ ತಪ್ಪಿತಸ್ಥರನ್ನು ಶಿಕ್ಷಿಸುವುದು ಮುಖ್ಯ ಎಂಬ ಸಾಮಾಜಿಕ ಅರಿವು ಎಲ್ಲರಿಗೂ ಇರಬೇಕು. ಸಮಾಜವಿರೋಧಿ ಕೃತ್ಯಗಳು ನಡೆದಾಗ ಸಮುದಾಯದ ನಾಯಕರು ಅವುಗಳನ್ನು ಖಂಡಿಸಬೇಕು. ಯುವಜನತೆಯೂ ಅಭಿವೃದ್ಧಿ ವಿಚಾರಗಳಲ್ಲಿ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ವಿಚಾರದಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ಹೊಡೆ ಬಡಿ ಗೊಡವೆಗೆ ಹೋಗುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರೊಡನೆ ಮಾತುಕತೆ ನಡೆಸುವ ಉದ್ದೇಶ ನನಗಿದೆ.

4 ಫಲ್ಗುಣಿ ನದಿಯ ಮಾಲಿನ್ಯ ಸುರತ್ಕಲ್‌, ಮಂಗಳೂರು ನಗರದ ಜನತೆಯನ್ನು ಕಾಡುತ್ತಿದೆ. ಕೈಗಾರಿಕೆಗಳ ಮಾಲಿನ್ಯದಿಂದ ಸುರತ್ಕಲ್‌ ಮತ್ತು ಕಾಟಿಪಳ್ಳದ ಜನತೆ ಕಂಗಾಲಾಗಿದ್ದಾರೆ. ಇವುಗಳ ಪರಿಹಾರಕ್ಕೇನು ಕಾರ್ಯಸೂಚಿ?

ನದಿಯ ಮಾಲಿನ್ಯಕ್ಕೆ ಜನವಸತಿ ಮತ್ತು  ಕೈಗಾರಿಕೆಗಳ ತ್ಯಾಜ್ಯದ ನಿರ್ವಹಣೆಯಲ್ಲಿ ಆಗಿರುವ ಸಮಸ್ಯೆ ಕಾರಣವಾಗಿರಬಹುದು. ಮಾಲಿನ್ಯದ ಮೂಲವನ್ನು ಪತ್ತೆ ಮಾಡಿ, ಮಾತುಕತೆಯ ಮೂಲಕ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕೆಂದಿದ್ದೇನೆ. ಕೈಗಾರಿಕೆಗಳೂ ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮವನ್ನು ಅನುಸರಿಸುವಂತೆ ಮಾಡುವುದು ನನ್ನ ಕರ್ತವ್ಯ. ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಮಿಕರಿಗೆ ಮೂಲಸೌಕರ್ಯ ಒದಗುವಂತೆ ನೋಡಿಕೊಳ್ಳುವುದು, ಅವರ ಜೀವ ರಕ್ಷಣೆಗೆ ಬೇಕಾದ ಕ್ರಮ ಅನುಸರಿಸುವಂತೆ ಕೈಗಾರಿಕೆಗಳಿಗೆ ಸೂಚಿಸುವ ಕೆಲಸ ಮಾಡುತ್ತೇನೆ. ಸಮಯದ ಚೌಕಟ್ಟು ಹಾಕಿಕೊಂಡು ಆದ್ಯತೆಯ ಮೇರೆಗೆ ಈ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದೇನೆ.

4 ನಿಮ್ಮ ಆದ್ಯತೆಗಳು ಯಾವುವು?

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡಬೇಕಾಗಿದೆ. ಸ್ಥಳೀಯರಲ್ಲಿ ಅಗತ್ಯ ಕೌಶಲ ಇಲ್ಲ ಎಂಬುದು ಕೈಗಾರಿಕೆಗಳ ದೂರು. ಅದಕ್ಕಾಗಿ ಕೌಶಲ ಅಬಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿಯನ್ನು ಕೊಡಬೇಕಾಗಿದೆ. ಖಾಲಿ ಹುದ್ದೆಗಳಿಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರೇ ನೇಮಕಗೊಳ್ಳಬೇಕು ಎಂಬುದು ನನ್ನ ಆಶಯ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಸ್ವಚ್ಛತೆಯತ್ತಲೂ ಗಮನ ಹರಿಸಬೇಕಾಗಿದೆ. ಕರಾವಳಿಯ ಜನರು ಶಾಂತ ಸ್ವಭಾವದವರು. ಹಾಗಂತ ಇಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್‌ ಶಿಕ್ಷಣ ಪದ್ಧತಿಯನ್ನು ಆರಂಭಿಸುವ ಯೋಜನೆಯಿದೆ. ಸರ್ಕಾರದ ಅನುದಾನಕ್ಕಾಗಿ ಆಗ್ರಹಿಸಿ ಜೊತೆಗೆ ಖಾಸಗಿ ವಲಯದ ನೆರವು ಪಡೆದುಕೊಂಡು ಸರ್ಕಾರಿ ಶಾಲೆಗಳ ಕ್ಲಾಸ್‌ ರೂಮ್‌ಗಳನ್ನು ಇನ್ನಷ್ಟು ಆಧುನಿಕ ಮಾಡುವ ಯೋಚನೆ ಇದೆ.

4 ನಿಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇಲ್ಲವೇ?

ನೀರಿನ ಮೂಲವಿದ್ದರೂ ಸ್ವಚ್ಛವಾದ ನೀರಿಲ್ಲ ಎಂಬುದನ್ನು ಕಂಡಿದ್ದೇನೆ. ಆದ್ದರಿಂದ ಅಂತರ್ಜಲವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವುದು, ಸೌರ ವಿದ್ಯುತ್‌ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಲಾಗುವುದು. ಬಯೋ ಟಾಯ್ಲೆಟ್‌ಗಳನ್ನು ನಿರ್ಮಿಸಿದಲ್ಲಿ ಸ್ವಚ್ಛತೆಗೆ ಒತ್ತು ನೀಡಬಹುದು.  ಈ ಉದ್ದೇಶಗಳಿಗೆ ಕೆಲಸ ಮಾಡುವ ಉತ್ತಮ ಕಾರ್ಯಪಡೆಯೊಂದು ನನ್ನೊಡನೆ ಇದೆ. ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ಕೆಲಸ ಮಾಡಿದ ಅನುಭವ ಇದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡಿದ ಪರಿಣಿತರಿದ್ದಾರೆ. ಅವರ ನೆರವಿನೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಬೇಕು ಎಂಬ ಆಸೆ ಇದೆ. ಜನರ ಸಂಪರ್ಕಕ್ಕೆ ಸಿಗಬೇಕು ಎಂಬ ಉದ್ದೇಶದಿಂದ ಮಂಗಳೂರು ನಗರದಲ್ಲಿ ಮಾತ್ರವಲ್ಲದೆ, ಸುರತ್ಕಲ್‌ ಮತ್ತು ಗುರುಪುರ ಕೈಕಂಬದಲ್ಲಿ ಕಚೇರಿಯನ್ನು ಆರಂಭಿಸಿ ಕೆಲಸ ಶುರು ಮಾಡುತ್ತಿದ್ದೇನೆ.

4 ಎತ್ತಿನಹೊಳೆ ತಿರುವು ಯೋಜನೆಯನ್ನು ನೀವು ಬೆಂಬಲಿಸುತ್ತೀರಾ ?

ಇಲ್ಲ. ಜನರಿಗೆ ಬೇಡದ ಯೋಜನೆಯನ್ನು ನಾನು ಬೆಂಬಲಿಸುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry