ಸುಳಿವು ನೀಡಿದ ಹಚ್ಚೆ ಗುರುತು

7
7 ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ 4 ಜನರ ತಂಡ

ಸುಳಿವು ನೀಡಿದ ಹಚ್ಚೆ ಗುರುತು

Published:
Updated:

ಹುಣಸೂರು: ನಗರದಲ್ಲಿ ನಡೆದ ಸರಣಿ ಕಳವು ಪ್ರಕರಣ ಮತ್ತು ನ್ಯಾಯಾಧೀಶರ ಮನೆ ಕಳವು ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಡಿವೈಎಸ್‌ಪಿ ಭಾಸ್ಕರ್ ರೈ ತಿಳಿಸಿದ್ದಾರೆ.

ಅಜಾದ್‌ನಗರದ ನಿವಾಸಿ ಕಿರಣ್‌ ಅಲಿಯಾಸ್‌ ಸುಧಿ, ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ನಿವಾಸಿ ವಿನೋದ್‌ ಅಲಿಯಾಸ್‌ ಸೂರಿ ಆರ್‌.ಎಕ್ಸ್‌, ಹುಣಸೂರಿನ ಸರಸ್ವತಿಪುರಂ ನಿವಾಸಿ ಸಂದೀಪ್‌ ಅಲಿಯಾಸ್‌ ವಿಲನ್‌ ಅವರನ್ನು ವಶಕ್ಕೆ ಪಡೆದಿದ್ದು, ಶಿವಮೊಗ್ಗ ಜಿಲ್ಲೆ ಶಿರಸಿಯ ನಿವಾಸಿ ಶಿವು ತಲೆ ಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.

ಘಟನ ವಿವರ: ‘ನ್ಯಾಯಾಧೀಶ ಗಿರೀಶ್‌ ಚಟ್ನಿ ಅವರ ಮನೆಯ ಬಾಗಿಲು ಬೀಗವನ್ನು ಮೇ 21ರ ರಾತ್ರಿ ಒಡೆದು ಮನೆಯಲ್ಲಿದ್ದ ಲ್ಯಾಪ್‌ಟಾಪ್‌, ದ್ವಿಚಕ್ರ ವಾಹನವನ್ನು ಕಳವು ಮಾಡಲಾಗಿತ್ತು. ಈ ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪಿ.ಎಸ್‌.ಐ ಮಹೇಶ್‌ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಜೂನ್‌ 2ರಂದು ಬೆಳಿಗ್ಗೆ 3 ಗಂಟೆಯಲ್ಲಿ ಮಹೇಶ್‌ ಸಿಬ್ಬಂದಿಯೊಂದಿಗೆ ಹೊಸ ಪೋಸ್ಟ್‌ ಆಫೀಸ್‌ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಹೊಂಡಾ ಆಕ್ವಿವಾದಲ್ಲಿ ತೆರಳುತ್ತಿದ್ದ ಮೂವರು ಪೊಲೀಸ್‌ ಜೀಪ್‌ ನೋಡುತ್ತಿದ್ದಂತೆ ಏಕಾಏಕಿ ವೇಗವಾಗಿ ಓಡಿಸಿಕೊಂಡು ಹೋದರು. ಅನುಮಾನಗೊಂಡು ಅವರನ್ನು ಹಿಂಬಾಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರೋಪಿಯೊಬ್ಬನ ಕೈ ಹೆಬ್ಬೆರಳಿನ ಬಳಿ ಇದ್ದ ‘ರನ್ನ’ ಎಂಬ ಹಚ್ಚೆ ಗುರುತು ‍ಪ್ರಕರಣವನ್ನು ಭೇದಿಸಲು ಸಹಕಾರಿಯಾಯಿತು ಎಂದು ಅವರು ತಿಳಿಸಿದರು.

ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವ್ಯಕ್ತಿಯ ಕೈಯಲ್ಲಿ ಹಚ್ಚೆ ಗುರುತಿತ್ತು. ಬಂಧಿತನ ಕೈ ಮೇಲೆಯೂ ಅದೇ ಗುರುತು ಇತ್ತು. ಈ ಕುರಿತು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪನ್ನು ಒಪ್ಪಿಕೊಂಡರು ಎಂದು ಬಾಸ್ಕರ್‌ ರೈ ತಿಳಿಸಿದರು.

ಕೊಲೆ ಪ್ರಕರಣ ಬೆಳಕಿಗೆ: ಇತ್ತೀಚಿಗೆ ನಗರದ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಕೊಳೆತ ಶವ ಪತ್ತೆಯಾಗಿತ್ತು. ₹300ಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಸುಳಿವು ಬಿಟ್ಟು ಕೊಟ್ಟಿದ್ದಾರೆ. ಕೊಲೆಯಾದ ವ್ಯಕ್ತಿ ಹೆಗ್ಗಡದೇವನಕೋಟೆ ತಾಲ್ಲೂಕಿಗೆ ಸೇರಿದ್ದು ಆತನ ಹೆಸರು ಮತ್ತು ವಿಳಾಸ ಕುರಿತು ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

7 ಕಳವು ಪ್ರಕರಣ: ಹುಣಸೂರು ನಗರದಲ್ಲಿ ಕಳೆದ ತಿಂಗಳಲ್ಲಿ ನಡೆದ 7 ಕಳವು ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ.  ಅವುಗಳಿಗೆ ಸಂಬಂಧಿಸಿದಂತೆ ಮೂರು ದ್ವಿಚಕ್ರ ವಾಹನ ಸೇರಿದಂತೆ 38 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಸೇರಿದಂತೆ ಒಟ್ಟು ₹2.80 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಹೇಶ್‌, ಎ.ಎಸ್‌.ಐ.ದೊಡ್ಡೇಗೌಡ, ಪ್ರಭಾಕರ್‌, ಜಗದೀಶ್‌, ರವಿಕುಮಾರ್‌, ರಾಜೇಗೌಡ,ಚೇತನ್‌, ವೆಂಕಟೇಶ್ ಪ್ರಸಾದ್‌, ಕಿರಣ್‌ ಮತ್ತು ಲೋಕೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry