7

ಕುಮಾರಸ್ವಾಮಿ ಭೇಟಿಯಾದ ಕಮಲಹಾಸನ್‌: ಪರಸ್ಪರ ಮಾತುಕತೆ

Published:
Updated:
ಕುಮಾರಸ್ವಾಮಿ ಭೇಟಿಯಾದ ಕಮಲಹಾಸನ್‌: ಪರಸ್ಪರ ಮಾತುಕತೆ

ಬೆಂಗಳೂರು: ತಮಿಳುನಾಡಿನ ರಾಜಕೀಯ ಮುಖಂಡ, ನಟ ಕಮಲಹಾಸನ್‌ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ‘ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ರಜನಿಕಾಂತ್ ಅಭಿನಯದ ‘ಕಾಲಾ’ ಸಿನಿಮಾ ಬಿಡುಗಡೆ ಕುರಿತು ಉಭಯ ನಾಯಕರು 10 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲಹಾಸನ್‌, ‘ಕಾವೇರಿ‌ ಸಮಸ್ಯೆ ಪರಿಹಾರಕ್ಕೆ ಸೇತುವೆಯಾಗಲು‌ ಸಿದ್ಧ’ ಎಂದು ಹೇಳಿದರು.

ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸೌಹಾರ್ದಯುತ ವಾತಾವಣ ಮೂಡಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

‘ನಾವು ಮತ್ತು ಕರ್ನಾಟಕದ ಜನ ಸಹೋದರರೇ ತಾನೆ... ಕಾವೇರಿ ಇಲ್ಲದೆ ಎರಡೂ ರಾಜ್ಯಗಳ ಜನತೆ ಬದುಕಲು ಸಾಧ್ಯವಿಲ್ಲ. ಹಾಗಾಗಿಯೇ ಕಾವೇರಿ ವಿವಾದ ಕುರಿತಂತೆಯೂ ಚರ್ಚಿಸಿದ್ದೇವೆ. ಕುಮಾರಸ್ವಾಮಿಯವರ ಮಾತಿನಿಂದ ಹೃದಯ ತುಂಬಿ ಬಂದಿದೆ’ ಎಂದು ಕಮಲಹಾಸನ್‌ ತಿಳಿಸಿದರು.

ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ಎರಡೂ ರಾಜ್ಯಗಳ ರೈತರ ನಡುವೆ ಕಾವೇರಿ ನೀರು ಹಂಚಿಕೆಯಾಗಬೇಕು. ಈ ಸಂಬಂಧ ತಮಿಳುನಾಡು ಸರ್ಕಾರದ ಜತೆಯೂ ಮಾತುಕತೆಗೆ ನಾನು ಸಿದ್ಧ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾಗಿ ಹೋಗಬೇಕು ಎಂದು ಎಚ್‌ಡಿಕೆ ಹೇಳಿದರು.

‘ಕಾಲಾ’ ಚಿತ್ರ ವಿವಾದದ ಬಗ್ಗೆ ನಾನು ಯಾವುದೇ ಚರ್ಚೆ ಮಾಡಿಲ್ಲ. ಅದಕ್ಕಾಗಿ ವಾಣಿಜ್ಯ ಮಂಡಳಿ ಇದೆ. ಅವರು ನೋಡಿಕೊಳ್ಳುತ್ತಾರೆ. ನಾನು ತಮಿಳುನಾಡು ಜನತೆಯ ಪರವಾಗಿ ಬಂದಿದ್ದೇನೆ. ಕುರುವೈ ಬೆಳೆಗೆ ನೀರು ಬೇಕು. ನಮ್ಮದು ಚಿಕ್ಕ ಪಕ್ಷ, ತಮಿಳು ನಾಡು ಜನತೆಗಾಗಿ ನಾನು ಕರ್ನಾಟಕ-ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆಗೆ ನಾನು ಸಿದ್ಧನಿದ್ದೇನೆ. ನಮ್ಮ ಕುಟುಂಬದಲ್ಲೂ ವಕೀಲರಿದ್ದಾರೆ. ಎಲ್ಲರೂ ಸಹ ಕಾವೇರಿ ವಿವಾದ ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಬೇಕೆಂದೆ ಸಲಹೆ ನೀಡಿದ್ದಾರೆ ಎಂದು ಕಮಲಹಾಸನ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry