ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಿಗೆ ಸಿಲುಕದ ಸ್ವಾವಲಂಬಿ ಕೃಷಿಕ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಭದ್ರಾವತಿ ತಾಲ್ಲೂಕು ಹೊಳೆಬೈರಸಂದ್ರದ ಕುಮಾರ್ ನಾಯ್ಡು ತಾನಾಯ್ತು, ತನ್ನ ಪಾಡಾಯ್ತು ಎಂಬಂತೆ ಕೃಷಿ ಮಾಡುತ್ತಿರುವ ಯುವಕ. ಇದರ ಅರ್ಥ ಯಾರ ಹಂಗಿಗೂ ಒಳಗಾಗದವರು ಎಂದು.

ಅವರು ಕಳೆದ ಒಂದು ದಶಕದಿಂದ ಬೀಜಕ್ಕಾಗಲೀ, ಗೊಬ್ಬರಕ್ಕಾಗಲೀ ಕಂಪನಿಯನ್ನೋ, ಅಂಗಡಿಯನ್ನೋ, ಕೃಷಿ ಸಂಪರ್ಕ ಕೇಂದ್ರವನ್ನೋ ಅವಲಂಬಿಸಿದವರಲ್ಲ. ಏಳೆಂಟು ವರ್ಷಗಳಿಂದೀಚೆಗಂತೂ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರುವುದರ ಬದಲಿಗೆ ಗ್ರಾಹಕರೇ ಇವರಲ್ಲಿಗೆ ಬಂದು ಕೊಳ್ಳುವಂತೆ ಮಾಡಿಕೊಂಡಿದ್ದಾರೆ. ಇವರು ನಿಜ ಅರ್ಥದ ಸ್ವಾವಲಂಬಿ ಕೃಷಿಕ.

ನಾಲ್ಕೈದು ವರ್ಷಗಳ ಹಿಂದೆ ಬತ್ತ ಬೆಳೆಯಲು ಕೂಲಿಕಾರರ ಸಮಸ್ಯೆ ವಿಪರೀತವಾಯಿತು. ಇವರೇನು ಕಂಗಾಲಾಗಲಿಲ್ಲ, ಇತರೆ ಕೆಲವು ರೈತರಂತೆ ಬತ್ತ ಬೆಳೆಯುವುದನ್ನು ಕೈಬಿಡಲೂ ಇಲ್ಲ. ಕೃಷಿ ಇಲಾಖೆಯಿಂದ ಬತ್ತದ ನಾಟಿ ಯಂತ್ರವನ್ನು ಬಾಡಿಗೆಗೆ ತಂದು ಸಸಿ ನಾಟಿ ಮಾಡಿದರು, ಕೈಚಾಲಿತ ಕಳೆ ಕೀಳುವ ಯಂತ್ರದಿಂದ ತಂದೆಯ ಜತೆಗೂಡಿ ಕಳೆ ತೆಗೆದರು.

ಅದೇ ಪದ್ಧತಿಯನ್ನು ಈಗಲೂ ಮುಂದುವರಿಸಿದ್ದಾರೆ. ಸಮಸ್ಯೆಗಳು ಬಂದಾಗಲೆಲ್ಲಾ ಈ ರೀತಿಯ ಉತರಗಳನ್ನು ತಾವೇ ಕಂಡುಕೊಳ್ಳುತ್ತಾ ಸಾಗುತ್ತಿದ್ದಾರೆ.

‘ಸಿದ್ದಸಣ್ಣ’ ಮತ್ತು ‘ಎಚ್.ಎಂ.ಟಿ’ ಎಂಬ ಎರಡು ದೇಸಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ. ಬತ್ತದಿಂದ ಅಕ್ಕಿ ಮಾಡಿ ಐದು, ಹತ್ತು ಹಾಗೂ 25 ಕೆ.ಜಿ ಬ್ಯಾಗುಗಳಲ್ಲಿ ಮಾರಾಟ ಮಾಡುತ್ತಾರೆ. ಕೆ.ಜಿ ಒಂದಕ್ಕೆ ಈ ವರ್ಷ ₹ 55ರಿಂದ ₹ 65 ಸಿಗುತ್ತಿದೆ. ದೇಸಿ ತಳಿ ಅಕ್ಕಿಗೆ ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ವಿಶಾಖಪಟ್ಟಣ ಮುಂತಾದ ನಗರಗಳಲ್ಲಿ ಸುಮಾರು 30 ಜನ ನಿಶ್ಚಿತ ಗ್ರಾಹಕರಿದ್ದಾರೆ. ಕೆಲವೊಮ್ಮೆ ಗ್ರಾಹಕರೇ ಬಂದು ಖರೀದಿಸುತ್ತಾರೆ, ಇಲ್ಲವೇ ಕುಮಾರ್ ಅವರೇ ಪಾರ್ಸಲ್ ಕಳಿಸುತ್ತಾರೆ. ‘ನಂಬ್ಕೆ ಉಳಿಸ್ಕೊಂಡಿದೀನಿ, ಹಾಗಾಗಿ ವರ್ಷಾ ವರ್ಷ ಡಿಮ್ಯಾಂಡ್ ಜಾಸ್ತಿ ಆಗ್ತಾ ಇದೆ’– ಇದು ನಾಯ್ಡು ಅವರ ವ್ಯಾಪಾರದ ತಳಹದಿ.

ಪ್ರತಿ ತಿಂಗಳೂ ಅಕ್ಕಿ ಮಾರಾಟ ನಿರಂತರ. ಸರಾಸರಿ ₹30 ಸಾವಿರದವರೆಗೂ ವ್ಯಾಪಾರ. ಗ್ರಾಹಕರ ಬೇಡಿಕೆಗನುಗುಣವಾಗಿ ಪಾಲಿಷ್ ಮಾಡುತ್ತಾರೆ. ಮಿಲ್ ಆದಾಗ ಬಂದ ಅಕ್ಕಿ ನುಚ್ಚನ್ನು ತಾವೇ ಸಾಕಿರುವ ಮೀನುಗಳಿಗೆ ಆಹಾರವಾಗಿಸುತ್ತಾರೆ. ಬತ್ತದ ತೌಡು ಹಸುಗಳಿಗೆ ಪುಷ್ಟಿಕರ ಮೇವು.

(‘ಸಿದ್ದಸಣ್ಣ’ ದೇಸಿ ಬತ್ತದ ತಳಿಯೊಂದಿಗೆ ಕುಮಾರ್ ನಾಯ್ಡು.)

ಭದ್ರಾ ನದಿ ಪಕ್ಕದಲ್ಲೇ ಇದ್ದರೂ, ಗೊಂದಿ ನೀರಾವರಿ ನಾಲೆಯ ಅಚ್ಚುಕಟ್ಟುದಾರರಾಗಿದ್ದರೂ ಗದ್ದೆಗೆ ತಡುಮು ನೀರನ್ನೇ ಕೊಡುವುದು ಪದ್ಧತಿ(ಬಿಟ್ಟು ಬಿಟ್ಟು ನೀರು ಕೊಡುವ ಪದ್ಧತಿ). ‘ಗದ್ದೆ ಬಿರುಕು ಬಿಡದಂತೆ ತೇವ ಕಾಪಾಡಿದರೆ ಸಾಕು’ ಎಂಬ ತತ್ವ ಇವರದು. ಹೀಗೆ ಮಾಡುವುದರಿಂದ ಬತ್ತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಕೀಟ-ರೋಗ ಬಾಧೆ ಕಡಿಮೆಯಾಗುತ್ತದೆ ಎಂಬುದು ನಾಯ್ಡು ಅನುಭವಕ್ಕೆ ಬಂದಿದೆ.

ಗದ್ದೆಯಲ್ಲೇ ಮೀನು ಸಾಕಾಣಿಕೆ: ಬತ್ತದ ತಾಕಿನಲ್ಲಿ ಒಂದು ಭಾಗ ಜೌಗು. ಸದಾ ನೀರು ತುಂಬಿರುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಲು ಮೀನು ಸಾಕಣೆ ಶುರು ಮಾಡಿದರು. ಕಳೆದ ವರ್ಷ ಒಂದು ಎಕರೆಯಷ್ಟು ಭತ್ತದ ಗದ್ದೆಯಲ್ಲಿ ಆರೇಳು ಕ್ವಿಂಟಲ್ ಮೀನು ಇಳುವರಿ ಸಿಕ್ಕಿದೆ. ಕೆ.ಜಿ ಮೀನಿಗೆ ಸರಾಸರಿ ₹100 ದೊರಕಿತ್ತು. ಹೆಚ್ಚಿಗೆ ಖರ್ಚಿಲ್ಲದೆ ಪೂರಕ ಆದಾಯ ಇದು.

ರಸಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕ ಬಳಸುವುದಿಲ್ಲವಾದ್ದರಿಂದ ನಾಯ್ಡು ಗದ್ದೆಯ ಮೀನಿಗೆ ಬೇಡಿಕೆಯೂ ಹೆಚ್ಚು. ‘ಗದ್ದೆಯಲ್ಲಿ ಮೀನು ಸಾಕುವಾಗ ನೀರು ಹೆಚ್ಚು ಆಚೀಚೆ ಹೋಗದಂತೆ ಎಚ್ಚರಿಕೆ ವಹಿಸಬೇಕು’ ಎಂಬುದು ಅವರ ಸಲಹೆ.

ಈ ರೀತಿ ಮೀನು ಸಾಕಾಣಿಕೆಯಿಂದ ಪ್ರೇರಣೆಯಾಗಿ ಇತ್ತೀಚೆಗೆ ಒಂದು ಎಕರೆಯಷ್ಟು ದೊಡ್ಡದಾದ ಹೊಂಡವನ್ನೇ ಮೀನು ಸಾಕಣಿಕೆಗಾಗಿ ನಿರ್ಮಿಸಿದ್ದಾರೆ. ಅದು ನೀರು ಸಂಗ್ರಹಣೆಗೂ ಸೈ, ಮೀನು ಸಾಕಾಣಿಕೆಗೂ ಸೈ. ಈ ಹೊಂಡದಲ್ಲಿ ಮೃಗಾಲ್, ಕಾಟ್ಲಾ, ಹುಲ್ಲುಗೆಂಡೆ ಮುಂತಾದ ಮೀನು ಮರಿಗಳನ್ನು ತಂದು ಬಿಡುವುದಷ್ಟೇ ಇವರ ಕೆಲಸ. ಬೆಳೆದು ದೊಡ್ಡವಾದಾಗ ಹಿಡಿದು ಮಾರುತ್ತಾರೆ, ಇಲ್ಲವೇ ಗುತ್ತಿಗೆ ಕೊಡುವುದೂ ಉಂಟು.

ಬದುವಿನಲ್ಲಿ ವೈವಿಧ್ಯ ಬೆಳೆ: ಗದ್ದೆ ಬದುಗಳು, ಹೊಲದ ರಸ್ತೆಯ ಆಸು-ಪಾಸು ಹಾಗೂ ಮೀನು ಹೊಂಡದ ಏರಿಯನ್ನು ಖಾಲಿ ಬಿಟ್ಟವರೇ ಅಲ್ಲ. ಋತುಮಾನಕ್ಕನುಗುಣವಾಗಿ ಅರಿಶಿನ, ತೊಗರಿ, ಹಸಿರೆಲೆ ಗೊಬ್ಬರ ಇತ್ಯಾದಿ ಹಾಕುತ್ತಾರೆ. ಹನ್ನೆರಡು ಜಾತಿಯ ಅರಿಶಿನ ತಳಿಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಈ ವರ್ಷ ಬೀಜೋತ್ಪಾದನೆ ಮಾಡುತ್ತಿದ್ದಾರೆ.

(ಕೂಲಿ ಕಾರ್ಮಿಕರ ಸಮಸ್ಯೆಗೆ ಬತ್ತ ನಾಟಿಗೆ ಯಂತ್ರಗಳಿಂದ ಪರಿಹಾರ)

ಮೂರು ಗಿರ್ ತಳಿ ಹಸುಗಳಿವೆ. ಬೆಣ್ಣೆ ಮತ್ತು ತುಪ್ಪ ಮಾರಾಟಕ್ಕೆ ಪ್ರಾಧಾನ್ಯ. ಒಂದು ಕೆ.ಜಿ ತುಪ್ಪಕ್ಕೆ ₹ 1500 ಬೆಲೆಯಂತೆ ಮಾರಾಟವಾಗುತ್ತದೆ. ‘ತುಪ್ಪಕ್ಕೆ ತುಂಬಾ ಬೇಡಿಕೆ ಇದೆ. ಆದರೆ ಪೂರೈಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ನಾಯ್ಡು. ಹಾಗೆಂದು ಹೆಚ್ಚು ಹಸು ಸಾಕುವ ಯೋಚನೆಯೂ ಇಲ್ಲ. ಏಕೆಂದು ಕೇಳಿದರೆ ‘ನಿಭಾಯಿಸುವುದು ಕಷ್ಟ’ ಎಂಬ ಉತ್ತರ.

ಕೃಷಿಯೇತರ ಚಟುವಟಿಕೆಗಳಲ್ಲೂ ಆಸಕ್ತಿ: ಕುಮಾರ್ ನಾಯ್ಡುಗೆ ವ್ಯವಸಾಯ ವಿಷಯದಲ್ಲಿ ತಂದೆ ನೆರವಾಗುತ್ತಾರೆ. ಬಹುತೇಕ ಕೆಲಸಗಳನ್ನು ಅಪ್ಪ – ಮಗ ಇಬ್ಬರೇ ನಿಭಾಯಿಸುತ್ತಾರೆ. ಇಷ್ಟು ಬಿಡುವಿಲ್ಲದ ಹೊಲಗೆಲಸದ ನಡುವೆಯೂ ನಾಯ್ಡು, ಕೊಪ್ಪ ದೊಡ್ಡಕೆರೆ ಗ್ರಾಮದ ನೀರು ಬಳಕೆದಾರ ಸಂಘದ ನಿರ್ದೇಶಕ ಹಾಗೂ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ ತಮ್ಮ ಅನುಭವ ವಿನಿಮಯ ಮಾಡುತ್ತಿದ್ದಾರೆ. ಆಗಾಗ ಕೃಷಿ ತರಬೇತಿ ನೀಡಲು ಹೋಗುವುದೂ ಉಂಟು.

ಬಿಕಾಂ ಪದವೀಧರ ಕುಮಾರ್ ವ್ಯವಸಾಯಕ್ಕೆ ಬರುವ ಮುನ್ನ ಎರಡು ವರ್ಷ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದರು. ಅಪ್ಪನ ಜತೆ ಕೈಜೋಡಿಸಲು ಕೃಷಿಗೆ ಬರಬೇಕಾಯಿತು. ಬಂದ ಸ್ವಲ್ಪ ಅವಧಿಯಲ್ಲೇ ಊರೆಲ್ಲಾ ಮಾಡುವಂತಹ ಸಿದ್ಧ ಮಾದರಿ ಕೃಷಿಗೆ ಜೋತು ಬೀಳದೇ ತನ್ನದೇ ದಾರಿ ಕಂಡುಕೊಂಡರು. ಆ ನಿರ್ಧಾರವೇ ಇವರ ಕೈಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT