ಎಚ್‌ಡಿಕೆ ಪ್ರಣಾಳ ಶಿಶು: ಯೋಗೇಶ್ವರ್ ಲೇವಡಿ

7
ಮುಖ್ಯಮಂತ್ರಿ ಅಭ್ಯರ್ಥಿ ಎಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಆಯ್ಕೆ, ಕೃತಜ್ಞತಾ ಸಭೆಯಲ್ಲಿ ಆರೋಪ

ಎಚ್‌ಡಿಕೆ ಪ್ರಣಾಳ ಶಿಶು: ಯೋಗೇಶ್ವರ್ ಲೇವಡಿ

Published:
Updated:

ಚನ್ನಪಟ್ಟಣ: ‘ಇಲ್ಲಿನ ಜನ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗೆಲ್ಲಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ದೊಡ್ಡಮಳೂರಿನಲ್ಲಿ ಭಾನುವಾರ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಅನುಷ್ಠಾನ ಸಾಧನೆ ಕೊಚ್ಚಿಹೋಗಿದೆ’ ಎಂದು ಟೀಕಿಸಿದರು.

‘ಚುನಾವಣೆ ನಂತರ ಯೋಗೇಶ್ವರ್ ಗಂಟು ಮೂಟೆ ಕಟ್ಟಿಕೊಂಡು ಊರು ಖಾಲಿ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ನಾನೇಕೆ ಊರು ಖಾಲಿ ಮಾಡಲಿ. ನಾನು ಇಲ್ಲಿಯವನು. ಹೊರಗಿನವನಲ್ಲ. ಜನರು ನನ್ನನ್ನು ಸೋಲಿಸಿದ್ದಾರೆ. ಅಧಿಕಾರ ಇರಲಿ, ಇಲ್ಲದೇ ಇರಲಿ ನಾನು ಈ ತಾಲ್ಲೂಕಿನ ವ್ಯಕ್ತಿ. ಇಲ್ಲೇ ಇರುತ್ತೇನೆ. ಚುನಾವಣೆ ಬರಲಿ, ಹೋಗಲಿ ನಮ್ಮ ನಿಮ್ಮ ಸಂಬಂಧ ನೀರು ಹಾಗೂ ಮೀನಿನ ನಡುವಿನ ಸಂಬಂಧ. ಹಾಗಾಗಿ ಎಲ್ಲರೊಂದಿಗೆ ಈ ಹಿಂದೆ ಇದ್ದಂತೆ ಬೆರೆಯುತ್ತೇನೆ’ ಎಂದರು.

ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಗೆದ್ದಿರುವುದು ಖುಷಿ ವಿಚಾರ. ಈಗ ಚನ್ನಪಟ್ಟಣ ಮುಖ್ಯಮಂತ್ರಿ ಕ್ಷೇತ್ರವಾಗಿದೆ. ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲಿ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ರೈತರ ಸಾಲಮನ್ನಾ, ವೃದ್ಧರಿಗೆ ಭತ್ಯೆ ಸೇರಿದಂತೆ ಅವರು ನೀಡಿರುವ ಭರವಸೆಗಳಿಗೆ ಜನ ಮರುಳಾಗಿದ್ದಾರೆ. ಅವರು ತಮ್ಮ ಭರವಸೆ ಈಡೇರಿಸಲಿ ಎಂದು ಹೇಳಿದರು.

ಇಬ್ಬರೂ ರಾಜಕೀಯ ಶತ್ರುಗಳು: ‘ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂತಮ್ಮ ರಾಜಕೀಯ ಶತ್ರುಗಳುಅವರನ್ನ ಹಿಂದೆಯೂ ಎದುರು ಹಾಕಿಕೊಂಡಿದ್ದೇನೆ. ಮುಂದೆಯೂ ಎದುರು ಹಾಕಿಕೊಳ್ಳುತ್ತೇನೆ. ನಾನು ಯಾವ ಚುನಾವಣೆಯಿಂದಲೂ ಹಿಂದೆ ಸರಿದಿಲ್ಲ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮೂರು ಚುನಾವಣೆ ಎದುರಿಸಿದ್ದೇನೆ. ಅನಿತಾ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಸೋಲಿಸಿದ್ದೇನೆ. ಪಕ್ಷ ಸೂಚಿಸಿದರೆ ರಾಮನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಾಗಿದ್ದೇನೆ. ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದೇನೆ’ ಎಂದರು.

ಬಿಜೆಪಿ ಜಿಲ್ಲಾ  ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ತಾಲ್ಲೂಕು ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಮುಖಂಡ ಮಲವೇಗೌಡ ಇದ್ದರು.

ಜಿಲ್ಲೆಯ ಜೀವನದಿಗಳನ್ನು ಉಳಿಸಿ

ಕುಮಾರಸ್ವಾಮಿ ಅವರು ಸಾಂದರ್ಭಿಕ ಶಿಶು ಅಲ್ಲ. ದೇವೇಗೌಡರ ಮಂತ್ರದಿಂದ ಹುಟ್ಟಿರುವ ಪ್ರಣಾಳ ಶಿಶು. ಕುಮಾರಸ್ವಾಮಿ ಸರ್ಕಾರ ದೇವೇಗೌಡರ ಮಂತ್ರ ಶಕ್ತಿಯಿಂದ ಹುಟ್ಟಿರುವ ಮಗು ಎಂದು ಯೋಗೇಶ್ವರ್ ಲೇವಡಿ ಮಾಡಿದರು.

ಡಿ.ಕೆ.ಶಿವಕುಮಾರ್ ಅವರಿಗೆ ನೀರಾವರಿ ಮಂತ್ರಿ ಸ್ಥಾನ ಕೊಡುವುದಾಗಿ ಹೇಳಲಾಗುತ್ತಿದೆ. ಅವರಿಗೆ ಆ ಖಾತೆ ಸಿಕ್ಕರೆ ನನ್ನ ನೀರಾವರಿ ಕನಸು ಅವರು ನನಸು ಮಾಡಲು ಮನವಿ ಮಾಡಿಕೊಳ್ಳುತ್ತೇನೆ. ಕೆ.ಆರ್.ಎಸ್.ನಿಂದ ಕಣ್ವ ಡ್ಯಾಮ್ ಗೆ ನೀರು ಹರಿಸಿ ಜಿಲ್ಲೆಯ ಜೀವನದಿಗಳನ್ನು ಪುನರುಜ್ಜೀವನಗೊಳಿಸಲಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry