ಸೌಂದರ್ಯ ಕಳೆದುಕೊಂಡ ಅಲಂಕಾರಿಕ ಗಿಡ

7
ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿ ನೆಟ್ಟಿದ್ದ ಸಸಿಗಳು

ಸೌಂದರ್ಯ ಕಳೆದುಕೊಂಡ ಅಲಂಕಾರಿಕ ಗಿಡ

Published:
Updated:
ಸೌಂದರ್ಯ ಕಳೆದುಕೊಂಡ ಅಲಂಕಾರಿಕ ಗಿಡ

ರಾಯಚೂರು: ನಗರದ ಬಸವೇಶ್ವರ ವೃತ್ತದಿಂದ ಪ್ರವಾಸಿಮಂದಿರದವರೆಗಿನ ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿ ಬರಡಾಗಿ ನಿಂತಿರುವ ಮರಗಳ ಸಾಲು ನೋಡಿದವರ ಮನ ಕಲಕುತ್ತಿದ್ದು, ಬೆಳೆದು ಕಂಗೊಳಿಸಬೇಕಿದ್ದ ಸಸಿಗಳು ನಿತ್ರಾಣಗೊಂಡಿರುವುದಕ್ಕೆ ಪರಿಸರವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಹಸಿರಿನಿಂದ ನಳನಳಿಸಬೇಕಿದ್ದ ಮರಗಳು ಉಸಿರು ಕಳೆದುಕೊಂಡು ಒಣಗಿ ರಸ್ತೆಗೆ ಅಡ್ಡಲಾಗಿ ಬೀಳಲಾರಂಭಿಸಿವೆ. ಸೂಕ್ತ ಪಾಲನೆ, ಪೋಷಣೆ ಇಲ್ಲದೆ ಕೇವಲ ಮೂರು ತಿಂಗಳಲ್ಲಿ ಸಂಪೂರ್ಣ ನಿಸ್ತೇಜಗೊಂಡಿವೆ. ಕಿರಿದಾದ ರಸ್ತೆ ವಿಭಜಕದಲ್ಲಿ ಯಾವ ಹಂತದ ಸಸಿ ನೆಟ್ಟು ಬೆಳೆಸಬೇಕು, ಯಾವ ತಿಂಗಳಲ್ಲಿ ಸಸಿ ಬೆಳೆಸಿದರೆ ಉತ್ತಮ ಎಂಬುದನ್ನು ಯೋಚಿಸದೆ ಗಿಡಗಳನ್ನು ನೆಟ್ಟಿರುವುದರಿಂದ ಅವುಗಳಲ್ಲಾ ಈಗ ಒಣಗಿ ಹೋಗಿದ್ದು, ನಿಂತ ಸಸಿಗಳನ್ನೆಲ್ಲ ಕಿತ್ತು ಹಾಕುವ ಅನಿವಾರ್ಯತೆ  ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಸಿಸಿ ರಸ್ತೆ ಕಾಮಗಾರಿ ರೈಲ್ವೆ ನಿಲ್ದಾಣ ವೃತ್ತದಲ್ಲಿ ಇನ್ನೂ ಬಾಕಿ ಉಳಿದಿದೆ. ಅಲ್ಲದೆ, ಪೂರ್ವ ಯೋಜನೆಯ ಪ್ರಕಾರ, ಆರ್‌ಟಿಒ ಕ್ರಾಸ್‌ನಿಂದ ಅಗ್ನಿಶಾಮಕ ಠಾಣೆವರೆಗೂ ರಸ್ತೆ ನಿರ್ಮಿಸಬೇಕಿತ್ತು. ಸಂಪೂರ್ಣ ಕಾಮಗಾರಿ ಮುಗಿಯದಿದ್ದರೂ ಕಳೆದ ಫೆಬ್ರುವರಿಯಲ್ಲಿ ಸಿಸಿ ಹೆದ್ದಾರಿ ಉದ್ಘಾಟನೆ ಸಮಾರಂಭ ನಡೆಸಲಾಯಿತು.

ಸಮಾರಂಭಕ್ಕಾಗಿ ತರಾತುರಿಯಲ್ಲಿ ವಿಭಜಕದಲ್ಲಿ ಮರಗಳನ್ನು ಬೆಳೆಸಿದ ರೀತಿಯಲ್ಲಿ ಸುಮಾರು ಎಂಟರಿಂದ ಹನ್ನೆರಡು ಅಡಿ ಬೆಳೆದಿದ್ದ ಅಲಂಕಾರಿಕ ಅಡಿಕೆ ಮರ (ಪಾಮ್‌ ಟ್ರೀಸ್) ಗಳನ್ನು ನೆಡಲಾಗಿತ್ತು. ಇವುಗಳ ಸಾಲು ನಗರದ ಸೌಂದರ್ಯ ಹೆಚ್ಚಿಸಿದ್ದವು. ಆದರೆ ಮೂರು ತಿಂಗಳಲ್ಲಿ ಸೌಂದರ್ಯವೆಲ್ಲ ಮಾಸಿ ಹೋಗಿದೆ. ಮರಗಳನ್ನು ಉಳಿಸುವ ಸಂಬಂಧ ಅಧಿಕಾರಿಗಳು ಹಾಗೂ ಕಾಮಗಾರಿ ಪಡೆದ ಗುತ್ತಿಗೆದಾರರು ಯಾವುದೇ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿಲ್ಲ.

'ರಾಯಚೂರಿನಲ್ಲಿ ಸದ್ಯಕ್ಕೆ ಎಲ್ಲ ಕಾಮಗಾರಿಗಳು ಅರ್ಧಂಬರ್ಧ ಸ್ಥಿತಿಯಲ್ಲಿವೆ. ಹೆದ್ದಾರಿಯಲ್ಲಿ ತಂದು ನೆಟ್ಟಿದ್ದ ಮರಗಳು ತುಂಬಾ ಚೆನ್ನಾಗಿದ್ದವು. ಅವುಗಳಿಗೆ ತಿಪ್ಪೆ ಗೊಬ್ಬರ ಹಾಕಿ ಎರಡು ಹೊತ್ತು ನೀರು ಹಾಕಿದ್ದರೆ ಉಳಿದುಕೊಳ್ಳುತ್ತಿದ್ದವು. ಮಳೆಗಾಲದಲ್ಲಿ ನೆಟ್ಟಿದ್ದರೆ, ತಾನಾಗಿಯೇ ಬೇರುಬಿಟ್ಟು ಬೆಳೆಯುತ್ತಿದ್ದವು. ಬೇಸಿಗೆಯಲ್ಲಿ ಮರ ನೆಟ್ಟು ಅವು ಒಣಗುವುದಕ್ಕೆ ಕಾರಣರಾದವರಿಗೆ ದಂಡ ಹಾಕಬೇಕು' ಎಂದು ಸಾಮಾಜಿಕ ಕಾರ್ಯಕರ್ತ ಉರುಕುಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.

**

ರಸ್ತೆ ನಿರ್ಮಾಣದ ಗುತ್ತಿಗೆ ಪಡೆದವರನ್ನು ಈ ಬಗ್ಗೆ ವಿಚಾರಿಸಿ, ಕ್ರಮಕ್ಕೆ ಸೂಚನೆ ನೀಡಲಾಗುವುದು

ವೀರಣ್ಣ ಬಿರಾದಾರ, ಜಿಲ್ಲಾ ನಗರ ಅಭಿವೃದ್ಧಿ ಕೋಶಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry