ಗಬ್ಬು ನಾರುತ್ತಿದೆ ಕಾಟಿಬೇಸ್‌ ಬಡಾವಣೆ

7
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ

ಗಬ್ಬು ನಾರುತ್ತಿದೆ ಕಾಟಿಬೇಸ್‌ ಬಡಾವಣೆ

Published:
Updated:
ಗಬ್ಬು ನಾರುತ್ತಿದೆ ಕಾಟಿಬೇಸ್‌ ಬಡಾವಣೆ

ಸಿಂಧನೂರು: ಸಿಂಧನೂರು ನಗರದ 6ನೇ ವಾರ್ಡ್‌ನ ಕಾಟಿಬೇಸ್ ಬಡಾವಣೆಯಲ್ಲಿ ಚರಂಡಿ ಸ್ವಚ್ಛಗೊಳಿಸಿ ತಿಂಗಳುಗಳೇ ಕಳೆದಿದ್ದು, ಸ್ವಚ್ಛ ಮಾಡುವ ನಗರಸಭೆ ಸಿಬ್ಬಂದಿ ಬಾರದಿರುವುದರಿಂದ ಚರಂಡಿಯಲ್ಲಿ ಬಿದ್ದ ಘನತ್ಯಾಜ್ಯ ವಸ್ತುಗಳಿಂದ ಓಣಿ ಗಬ್ಬು ನಾರುತ್ತಿದೆ.

‘ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಒಮ್ಮೆ ಬಂದು ಹೋಗಿದ್ದ ಸ್ವಚ್ಛತಾ ಸಿಬ್ಬಂದಿ ಮತ್ತೆ ಇತ್ತ ತಿರುಗಿ ನೋಡಿಲ್ಲ. ಯುಜಿಡಿ ಮತ್ತು ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳುವ ಸಲುವಾಗಿ ತೋಡಿದ್ದ ತಗ್ಗುಗಳನ್ನು ಮುಚ್ಚಿಲ್ಲ. ಇದ್ದ ಚರಂಡಿಗಳು ತುಂಬಿ ತುಳುಕುತ್ತಿದ್ದರೂ ಯಾರೂ ಇತ್ತ ಕಡೆ ಲಕ್ಷ್ಯ ವಹಿಸಿಲ್ಲ. ಮನೆಯ ಮುಂಭಾಗದ ಕಟ್ಟೆಯಲ್ಲಿ ಕುಳಿತುಕೊಂಡರೆ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ದುರ್ನಾತಕ್ಕೆ ಮನೆಯಲ್ಲಿ ಕುಳಿತು ಊಟ ಮಾಡುವುದು ಸಹ ಕಷ್ಟವಾಗಿದೆ’ ಎಂದು ಇಲ್ಲಿನ ನಿವಾಸಿ ಬಸವರಾಜ ಹೇಳಿದರು.

ಚರಂಡಿಯ ದುರ್ವಾಸನೆಯಿಂದ ಸೊಳ್ಳೆಗಳು ಹೆಚ್ಚಿ ಸಾಂಕ್ರಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ. ಇಲ್ಲಿನ ಕೆಲ  ನಿವಾಸಿಗಳಿಗೆ ಮಲೇರಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರಸಭೆ ಸದಸ್ಯ ಹಾಜಿ ಮಸ್ತಾನ್ ಅವರ ಗಮನಕ್ಕೆ ತರಲಾಗಿದೆಯಾದರೂ ಸ್ಯಾನೆಟರಿ ಇನ್‌ಸ್ಪೆಕ್ಟರ್ ಅವರನ್ನು ಕಳುಹಿಸುತ್ತೇನೆ ಎಂದು ಹೇಳುತ್ತಾರೆ. ಯಾರನ್ನೂ ಕಳುಹಿಸಿಲ್ಲ. ಇನ್ನಾದರೂ ನಗರಸಭೆ ಅಧಿಕಾರಿಗಳು, ಸದಸ್ಯರು ಚರಂಡಿ ಸ್ವಚ್ಛಗೊಳಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿ ಅನ್ವರ್ ಹುಸೇನ್ ಒತ್ತಾಯಿಸಿದ್ದಾರೆ.

6ನೇ ವಾರ್ಡಿನ ಸಮಸ್ಯೆಯನ್ನು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದು ತಕ್ಷಣ ಸಮಸ್ಯೆ ನಿವಾರಿಸುವುದಾಗಿ ನಗರಸಭೆ ಸದಸ್ಯ ಹಾಜಿ ಮಸ್ತಾನ್ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry