ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಒಡೆದ ಕೆರೆ ಏರಿ– ಸಿಡಿಲಿಗೆ ಕುಸಿದ ಮನೆ

ಕೆರೆ ಬಯಲಿನಲ್ಲಿ ಬೆಳೆದ 20 ಎಕರೆ ಭತ್ತದ ಬೆಳೆ ನಾಶ
Last Updated 4 ಜೂನ್ 2018, 10:13 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಕೆರೆಯ ಏರಿ ಒಡೆದು ಅಪಾರ ನೀರು ಪೋಲಾಗಿದ್ದು, ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ನಾಶವಾಗಿದೆ. ಅಲ್ಲದೇ ಕೆರೆ ಬಯಲಿನಲ್ಲಿ ಬೆಳೆದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಬೆಳೆ ಹಾಳಾಗಿದೆ.

ಸಿಡಿಲು ಬಡಿದು ಗ್ರಾಮದ ಎನ್.ಮಂಜೇಗೌಡ ಅವರಿಗೆ ಸೇರಿದ ಮನೆ ಚಾವಣಿ, ಗೋಡೆ ಸಹಿತ ಕುಸಿದು ಬಿದ್ದಿದೆ. ಆ ಸಮಯದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿಯಾಗಿಲ್ಲ. ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು, ಬಟ್ಟೆಗಳು, ಮತ್ತಿತರ ವಸ್ತುಗಳು ಗೋಡೆಯ ಅಡಿಗೆ ಸಿಲುಕಿ ಉಪಯೋಗಕ್ಕೆ ಬಾರದಾಗಿವೆ

ಭಾರಿ ಮಳೆಯ ಕಾರಣ ಗ್ರಾಮದ ಕೆರೆ ಏರಿಯು ಒಡೆದು ಒಂದು ವಾರದಿಂದ ಸಂಗ್ರಹಗೊಂಡಿದ್ದ ಸಾಕಷ್ಟು ಪ್ರಮಾಣದ ನೀರು ವ್ಯರ್ಥವಾಗಿ ಹಳ್ಳಕ್ಕೆ ಹರಿದು ಹೋಗಿದೆ. ಕೆರೆಯ ಅಂಗಳದ ಸುಮಾರು 20 ಎಕರೆ ಬಯಲಿನಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ. ನಾಯಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಚಾರ ಬಂದ್ ಆಗಿದ್ದು ಜನರು ಪರದಾಡುವಂತಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜು ತಯಾರಿಸಲು ಕ್ರಮ ಕೈಗೊಂಡಿರುವುದಾಗಿ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ತಿಳಿಸಿದ್ದಾರೆ.

ನೆಲ ಕಚ್ಚಿದ ಭತ್ತ

ಮದ್ದೂರು: ಶನಿವಾರ ರಾತ್ರಿ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಟಾವು ಮಾಡಿದ್ದ ಹಾಗೂ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಪಟ್ಟಣ ಸೇರಿದಂತೆ ಗೊರವನಹಳ್ಳಿ, ಚನ್ನಸಂದ್ರ, ದೇಶಹಳ್ಳಿ, ನಗರಕೆರೆ ಗ್ರಾಮಗಳಲ್ಲಿ ಜಮೀನಿನಲ್ಲಿ ಕಟಾವು ಮಾಡಿದ್ದ ಸಾವಿರಾರು ಎಕರೆ ಪ್ರದೇಶದ ಭತ್ತದ ತೆನೆ ಹಾಗೂ ಹುಲ್ಲು ನಾಶವಾಗಿದೆ. ಅಲ್ಲದೇ ಕಟಾವು ಮಾಡದೆ ಇದ್ದ ಭತ್ತದ ಬೆಳೆಯೂ ಗದ್ದೆಯಲ್ಲಿಯೇ ನೆಲ ಕಚ್ಚಿದೆ.

ಆಗ್ರಹ: ಮಳೆಯಿಂದಾಗಿ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್‌ ಚನ್ನಸಂದ್ರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT