ಜಿಲ್ಲೆಯಾದ್ಯಂತ ಯೋಗ ಜಾಗೃತಿ, ಪ್ರಕೃತಿ ಚಿಕಿತ್ಸೆ

7
ಆಳ್ವಾಸ್‌ ವಿದ್ಯಾರ್ಥಿಗಳಿಂದ 20 ದಿನಗಳ ಉಚಿತ ತರಬೇತಿ

ಜಿಲ್ಲೆಯಾದ್ಯಂತ ಯೋಗ ಜಾಗೃತಿ, ಪ್ರಕೃತಿ ಚಿಕಿತ್ಸೆ

Published:
Updated:

ಮಂಡ್ಯ: ದಕ್ಷಿಣ ಕನ್ನಡ ಜಿಲ್ಲೆ, ಮೂಡುಬಿದಿರೆ ತಾಲ್ಲೂಕಿನ ಮಿಜಾರುನಲ್ಲಿರುವ ಆಳ್ವಾಸ್‌ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ನಗರದಲ್ಲಿ ಕಳೆದ ಮೂರು ದಿನಗಳಿಂದ ಯೋಗ ಜಾಗೃತಿ ಹಾಗೂ ಪ್ರಕೃತಿ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಜೂನ್‌ 21ರಂದು ನಡೆಯುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ವಿವಿಧೆಡೆ ಜನರಿಗೆ ಉಚಿತವಾಗಿ ಯೋಗ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಪ್ರಕೃತಿ ಚಿಕಿತ್ಸೆ, ಆಹಾರ ಪಥ್ಯ, ಯೋಗ ಥೆರಪಿ, ಆಕ್ಯುಪಂಕ್ಚರ್‌ ಚಿಕಿತ್ಸೆ ನೀಡಲಾಗುತ್ತಿದೆ. ಸಂಸ್ಥೆಯು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳನ್ನು ಕಳುಹಿಸಿದೆ. ಅದರಂತೆ ಮಂಡ್ಯ ಜಿಲ್ಲೆಗೆ ನಾಲ್ವರು ವಿದ್ಯಾರ್ಥಿಗಳು ಬಂದಿದ್ದು ನಗರದ ವಿವಿಧೆಡೆ ಯೋಗ ತರಬೇತಿ ಹಾಗೂ ಪ್ರಕೃತಿ ಚಿಕಿತ್ಸೆ ನೀಡುತ್ತಿದ್ದಾರೆ. ಎನ್‌.ಅಪೂರ್ವಾ, ಕೆ.ಎಸ್‌.ಶಂಕರ್‌, ಸುರಕ್ಷ ಹರ್ಷಿಣಿ, ಮಧುಶ್ರೀ ಅವರು ನಗರದಲ್ಲಿ ನಾಲ್ಕು ಕಡೆ ತರಬೇತಿ ನೀಡುತ್ತಿದ್ದಾರೆ.

ಜಿಲ್ಲಾ ಮೀಸಲು ಪಡೆ ಮೈದಾನದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ‘ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಯೋಗಾಭ್ಯಾಸ ಮಾಡ ಬೇಕು. ಒತ್ತಡ ಮುಕ್ತ ಜೀವನಕ್ಕಾಗಿ ಯೋಗ ಅಮೂಲ್ಯ ವಾದುದು. ಈ ನಿಟ್ಟಿನಲ್ಲಿ ಪೊಲೀಸರು ಈ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ರಾಧಿಕಾ ತಿಳಿಸಿದರು. ಡಿಎಆರ್‌ ಮೈದಾನದಲ್ಲಿ ಬೆಳಿಗ್ಗೆ 6ರಿಂದ 7 ಗಂಟೆಯವರೆಗೆ ತರಬೇತಿ ನಡೆಯುತ್ತಿದೆ. ಪೊಲೀಸರ ಕುಟುಂಬದ ಸದಸ್ಯರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬೆಳಿಗ್ಗೆ 5ರಿಂದ 6 ಗಂಟೆಯವರೆಗೆ ನಗರದ ಅಭಿನವ ಭಾರತಿ ಪ್ರಾಥಮಿಕ ಶಾಲೆ ಆವರಣದಲ್ಲಿ ಯೋಗ ತರಬೇತಿ ನಡೆಯುತ್ತಿದೆ. ಶಿಬಿರದಲ್ಲಿ ಸುತ್ತಮುತ್ತಲ ಬಡಾವಣೆಗಳ ಜನರು ತರಬೇತಿ ಪಡೆಯುತ್ತಿದ್ದಾರೆ. ರೋಟರಿ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. 9ರಿಂದ 15 ವರ್ಷ ವಯಸ್ಸಿನ ಮಕ್ಕಳು ಮಾಡಬಹುದಾದ ಆಸನಗಳನ್ನು ಕಲಿಸಿಕೊಡಲಾಗುತ್ತಿವೆ. ವಿವಿಧ ಶಾಲೆಯ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬೆಳಿಗ್ಗೆ 9–10 ಗಂಟೆಯವರೆಗೆ ಶಿಬಿರ ನಡೆಯುತ್ತಿದೆ.

ನಗರದಲ್ಲಿ ಮಾತ್ರವಲ್ಲದೇ ಆಳ್ವಾಸ್‌ ಸಂಸ್ಥೆಯ ತಂಡ ತಾಲ್ಲೂಕು ಕೇಂದ್ರಗಳಲ್ಲೂ ಯೋಗ ತರಬೇತಿ ನೀಡುತ್ತಿದೆ. ವಿಶ್ವ ಯೋಗ ದಿನಾಚರಣೆಯ ದಿನ ಎಲ್ಲರನ್ನೂ ಸೇರಿಸಿ ಬೃಹತ್‌ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದೆ.

‘ನಾವು ನಾಲ್ವರು 20 ದಿನಗಳ ಕಾಲ ಮಂಡ್ಯದಲ್ಲೇ ಉಳಿದು ಯೋಗ ತರಬೇತಿ ನೀಡುತ್ತಿದ್ದೇವೆ. ಜನರಿಗೆ ಯೋಗ ಹಾಗೂ ಪಕೃತಿ ಚಿಕಿತ್ಸೆಯ ಮಹತ್ವ ತಿಳಿಸಿಕೊಡುತ್ತಿದ್ದೇವೆ. ಇಂಗ್ಲಿಷ್‌ ಚಿಕಿತ್ಸಾ ಪದ್ಧತಿಯಿಂದ ಹಲವು ಅಡ್ಡ ಪರಿಣಾಮಗಳಿವೆ. ಹೀಗಾಗಿ ಪ್ರಕೃತಿ ಚಿಕಿತ್ಸೆಯಿಂದ ಆಗುವ ಲಾಭಗಳ ಅರಿವು ಮೂಡಿಸುತ್ತಿದ್ದೇವೆ. ಕಾರ್ಯಾಗಾರ ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದೇವೆ. ಮಂಡ್ಯದಲ್ಲಿ ಯೋಗ ಓಟವನ್ನೂ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇವೆ’ ಎಂದು ಯೋಗ ತರಬೇತುದಾರರಾದ ಎನ್‌.ಅಪೂರ್ವಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry