ಆಕರ್ಷಕ ಚೆಲುವಿನ ಗುಲ್‌ಮೊಹರ್ ಗುಂಗಿನಲ್ಲಿ...

7
ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪು ಹೂಗಳ ಸಂಭ್ರಮ

ಆಕರ್ಷಕ ಚೆಲುವಿನ ಗುಲ್‌ಮೊಹರ್ ಗುಂಗಿನಲ್ಲಿ...

Published:
Updated:
ಆಕರ್ಷಕ ಚೆಲುವಿನ ಗುಲ್‌ಮೊಹರ್ ಗುಂಗಿನಲ್ಲಿ...

ಕೆರೂರ: ಹೂವಿನಿಂದ ನಾರು ಸ್ವರ್ಗಕ್ಕೇರಿತು ಎಂಬಂತೆ ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಕ್ಷಣ ಮನ ಸ್ಸು ಮುದಗೊಳಿಸುವ, ತನ್ನ ಅಂದದ ಬಣ್ಣದಿಂದ ಆಕರ್ಷಿಸುವ ‘ಗುಲ್ ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲ (ಬೆಂಕಿಯ)ಲ್ಲಿ ಅರಳುವ ಸುಂದರಿಯರು ಎಂದರೆ ಉತ್ಪ್ರೇಕ್ಷೆಯಲ್ಲ.

ಐತಿಹಾಸಿಕ ಗೋಲಗುಂಬಜ್, ಬಾದಾಮಿ ಗುಹಾಂತರ ದೇಗುಲ ಮುಂತಾದ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ವಿಶಿಷ್ಟ ಸ್ವಾಗತ ಬೀರುವ ಈ ಗುಲ್ ಮೊಹರ್ ಹೂವಿನ ಮರಗಳು. ಕೆರೂರ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ (218) ಬದಿಗುಂಟ ಹಾಗೂ ಬಾದಾಮಿ ಸಾಗುವ ರಸ್ತೆ ಬದಿ ಬೆಳೆದ ನೂರಾರು (ಉ.ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು) ಗಿಡಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಈ ಬಾರಿ ಕೆಂಡದಂತಹ ಉರಿ ಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್ (ಹೂ) ಮೊಹರ್ (ನವಿಲು) ಜೀವ ಕಳೆ ಪಡೆದವಂತೆ ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂವಿನ ವಿಶೇಷತೆ.

ಹಸಿರು ಹುಲ್ಲನ್ನೇ ಬಾಡಿಸುವಂತೆ ಪ್ರಖರ ಬೇಸಿಗೆ ಬಿಸಿಲಿನಲ್ಲಿ ಅರಳುವ ಈ ಹೂವು ಪ್ರಕೃತಿ ನೀಡಿದ ಅಚ್ಚರಿ ಎನ್ನಬಹುದು. ಬೆಳಗಿನ ತಂಪು ಹವೆ, ಚೂರು-ಪಾರು ವರುಣನ ಕೃಪೆಯಿಂದ ಅರಳುವ ಕ್ಯಾಸಿಲಾ ಜವನಿಕಾ ಜಾತಿಯ ಮರಗಳನ್ನು ಹಳ್ಳಿಗರು ಸಂಕೇಶ್ವರ ಗಿಡ ಎಂದೇ ಗುರುತಿಸುತ್ತಾರೆ.

ಪ್ರಕೃತಿಯ ವಿಶೇಷತೆ ಎಂಬಂತೆ ರಸ್ತೆ ಬದಿ ಅಲ್ಲಲ್ಲಿ ಬೆಳೆದು ನಿಂತಿರುವ ಗುಲ್ ಮೊಹರ್ ರಾಶಿ, ರಾಶಿ ಹೂಗಳು ಸುಮಾರು ಆರೇಳು ಅಡಿ ಎತ್ತರದ ಮರಗಳಲ್ಲಿ ಸೃಷ್ಟಿಯ ಸೊಬಗಿನ ಜೊತೆಗೆ ಚೆಲುವನ್ನು ಸಹ ಪ್ರಕೃತಿ ಪ್ರಿಯರಿಗೆ ಉಣ ಬಡಿಸುತ್ತವೆ.

ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ ಮೊಹರ್ ಮರಗಳಲ್ಲಿನ ಕೆಂಪು ಹೂಗಳನ್ನು ಕಂಡ ಕ್ಷಣ ಮನಸ್ಸು ಸೆಳೆವ ಜೊತೆಗೆ ಹಿತಾನುಭವ ನೀಡುತ್ತವೆ ಎನ್ನುತ್ತಾರೆ ವೈದ್ಯ ಬಸವರಾಜ ಬೊಂಬ್ಲೆ.

ಹೂವು ಚೆಲುವೆಲ್ಲಾ ತಂದೆಂದಿತು: ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದೆರಡು ವರ್ಷಗಳ ಹಿಂದೆ ನೂರಾರು ಮರಗಳ ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ ಮೊಹರ್ ಮರಗಳು ಬಲಿಯಾಗಿವೆ. ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ ಮೊಹರ್’ ಹೂ ಪ್ರಕೃತಿ ಪ್ರಿಯರಿಗೆ ಅಪರೂಪ ಆಗುತ್ತಿವೆ ಎಂಬುದು ಇಲ್ಲಿನ ವಾಯು ವಿಹಾರಿ ಈಶ್ವರ ಕಡಿವಾಲದ ಅವರ ಬೇಸರದ ನುಡಿ. ಏನೇ ಇರಲಿ ಕವಿಯ ಬಣ್ಣನೆಯಂತೆ ‘ಹೂ ಚೆಲುವೆಲ್ಲಾ ತಂದೆಂದಿತು’ ಎನ್ನುವ ಗುಲ್ ಮೊಹರ್ ಹೂಗಳ ಅಂದ–ಚಂದ, ಆಕರ್ಷಣೆಗೆ ತನಗೆ ತಾನೇ ಸಾಟಿ ಎಂದು ಕೆಂಬಣ್ಣದಿಂದ ಮೈ, ಮನಗಳಿಗೆ ಪ್ರಫುಲ್ಲತೆ ನೀಡುವ ಹೂಗಳು ಬಿರು ಬಿಸಿಲಲ್ಲೂ ನಸುನಗುತ್ತಾ ಪ್ರವಾಸಿಗರು, ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆವ ಇವು ಪುಷ್ಪಲೋಕದ ಅಪ್ಸರೆಯರು

ಪ್ರಭು ಎಂ. ಲಕ್ಷೆಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry