ಚಾಲನಾ ಪರವಾನಗಿ ಈಗ ಬಲು ಸುಲಭ!

7
ಜಿಲ್ಲೆಯ ಪ್ರಾದೇಶಿಕ ಸಾರಿಗೆ ಆಯುಕ್ತರ (ಆರ್‌ಟಿಒ) ಕಚೇರಿಯಲ್ಲಿ ‘ಸಾರಥಿ–4’ ತಂತ್ರಾಂಶ ಸೇವೆಗೆ ಚಾಲನೆ

ಚಾಲನಾ ಪರವಾನಗಿ ಈಗ ಬಲು ಸುಲಭ!

Published:
Updated:
ಚಾಲನಾ ಪರವಾನಗಿ ಈಗ ಬಲು ಸುಲಭ!

ಚಿಕ್ಕಬಳ್ಳಾಪುರ: ಚಾಲನಾ ಪರವಾನಗಿ ಪತ್ರ ನೀಡುವ ಪ್ರಕ್ರಿಯೆಯನ್ನು ಜನಸ್ನೇಹಿಗೊಳಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಅನುಷ್ಠಾನಕ್ಕೆ ತಂದಿರುವ ‘ಸಾರಥಿ–4’ ಎಂಬ ಹೊಸ ತಂತ್ರಾಂಶ ಜೂನ್ 1 ರಿಂದ ನಗರದ ಪ್ರಾದೇಶಿಕ ಸಾರಿಗೆ ಆಯುಕ್ತರ (ಆರ್‌ಟಿಒ) ಕಚೇರಿಯಲ್ಲಿ ಸಹ ಬಳಕೆಗೆ ಬಂದಿದ್ದು, ಇನ್ನು ಮುಂದೆ ನಾಗರಿಕರು ಸುಲಭವಾಗಿ ಚಾಲನಾ ಪರವಾನಗಿ ಪತ್ರ ಪಡೆಯಬಹುದಾಗಿದೆ.

ಚಾಲನಾ ಪರವಾನಗಿ ಪತ್ರ ನೀಡುವ ಪ್ರಕ್ರಿಯೆಯಲ್ಲಿ ಚುರುಕು ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ‘ರಾಷ್ಟ್ರೀಯ ಮಾಹಿತಿ ಕೇಂದ್ರ’ದ (ಎನ್‌ಐಸಿ) ಮೂಲಕ ಸಿದ್ಧಪಡಿಸಿದ ಈ ನೂತನ ತಂತ್ರಾಂಶ ಈಗಾಗಲೇ ದೇಶದ 15 ರಾಜ್ಯಗಳಲ್ಲಿ ಬಳಕೆಯಾಗುತ್ತಿದೆ. ರಾಜ್ಯದಲ್ಲಿ 10 ತಿಂಗಳ ಹಿಂದಿನಿಂದ ಬೆಂಗಳೂರಿನಲ್ಲಿ ‘ಸಾರಥಿ–4’ ಬಳಕೆಯಾಗುತ್ತಿದೆ.

ಈ ನೂತನ ಸೇವೆಯನ್ನು ಹಂತ ಹಂತವಾಗಿ ಇಡೀ ರಾಜ್ಯದಾದ್ಯಂತ ವಿಸ್ತರಿಸಲು ಉದ್ದೇಶಿಸಿರುವ ಸಾರಿಗೆ ಇಲಾಖೆ ಮೊದಲ ಹಂತವಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಧುಗಿರಿ, ನೆಲಮಂಗಲ, ಕೆ.ಜಿ.ಎಫ್, ಮೈಸೂರು ವಿಭಾಗಗಳ ಆರ್‌ಟಿಒ ಕಚೇರಿಯಲ್ಲಿ ಜೂನ್ 1ರಿಂದ ‘ಸಾರಥಿ–4’ಗೆ ಚಾಲನೆ ನೀಡಿದೆ.

ಏನಿದು ‘ಸಾರಥಿ–4’?

ಈ ಮೊದಲು ನಾಗರಿಕರು ‘ವಾಹನ ಕಲಿಕಾ ಅರ್ಹತಾ ಪತ್ರ’ (ಎಲ್‌ಎಲ್‌ಆರ್) ಮತ್ತು ಚಾಲನಾ ಪರವಾನಗಿ ಪತ್ರ (ಡ್ರೈವಿಂಗ್ ಲೈಸೆನ್ಸ್) ಪಡೆಯಲು ಆರ್‌ಟಿಒ ಕಚೇರಿಗೆ ಅಲೆದಾಡಬೇಕಿತ್ತು. ಎಲ್‌.ಎಲ್‌.ಆರ್ ಮತ್ತು ಡಿಎಲ್ ನೀಡುವ ಪ್ರಕ್ರಿಯೆಯ ಪ್ರತಿಯೊಂದು ಕೆಲಸವನ್ನು ಕಚೇರಿ ಸಿಬ್ಬಂದಿ ನಿರ್ವಹಿಸುತ್ತಿದ್ದರು. ಇದರಿಂದ ಮಧ್ಯವರ್ತಿಗಳು ಮತ್ತು ಅಧಿಕಾರಿಗಳಿಂದ ಲಂಚದ ಹಾವಳಿ ಆರೋಪ ಕೇಳಿಬರುತ್ತಿದ್ದವು.

ಅರ್ಜಿದಾರರು ಈ ಹಿಂದೆ ಆರ್‌ಟಿಒ ಕಚೇರಿಗೆ ಹೋಗಿ ಅರ್ಜಿ ಪಡೆದು ಭರ್ತಿ ಮಾಡಿ, ಸರದಿ ಸಾಲಿನಲ್ಲಿ ನಿಂತು ಅರ್ಜಿಯೊಂದಿಗೆ ನಗದು ಪಾವತಿಸಬೇಕಿತ್ತು. ಜತೆಗೆ ಲಿಖಿತ ಮತ್ತು ವಾಹನ ಚಾಲನಾ ಪರೀಕ್ಷೆಗಾಗಿ ಅಧಿಕಾರಿಗಳು ನೀಡುವ ಸಮಯ ಎದುರು ನೋಡುತ್ತ ಕಾಯಬೇಕಿತ್ತು. ಆದರೆ ಈ ಹೊಸ ಸೇವೆಯಲ್ಲಿ ಅವುಗಳಿಗೆ ತಿಲಾಂಜಲಿ ಇಡಲಾಗಿದೆ. ಇಲ್ಲಿ ಪ್ರತಿಯೊಂದು ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯುವ ಕಾರಣ ವಿಳಂಬ, ವಂಚನೆಗೆ ಅವಕಾಶವಿಲ್ಲ ಎನ್ನುತ್ತಾರೆ ಆರ್‌ಟಿಒ ಕಚೇರಿ ಅಧಿಕಾರಿಗಳು.

ಇದೀಗ ಜಿಲ್ಲೆಯಲ್ಲಿ ಎಲ್‌.ಎಲ್‌.ಆರ್ ಮತ್ತು ಡಿಎಲ್ ಪಡೆಯಲು ಇಚ್ಛಿಸುವವರು ‘ಪರಿವಾಹನ್’ ಎಂಬ ಜಾಲತಾಣದಲ್ಲಿ ಆನ್‌ಲೈನ್‌ ಅರ್ಜಿ ಭರ್ತಿ ಮಾಡಿ, ಅದರೊಂದಿಗೆ ಅಗತ್ಯ ದಾಖಲೆಗಳು, ಭಾವಚಿತ್ರ, ಸಹಿ ಇತ್ಯಾದಿ ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಶುಲ್ಕವನ್ನು ಸಹ ಆನ್‌ಲೈನ್‌ನಲ್ಲಿಯೇ ಪಾವತಿ ಮಾಡಬೇಕು. ಅರ್ಜಿ ಭರ್ತಿ ಮಾಡುವಾಗ ಅರ್ಜಿದಾರ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಬೇಕು.

ಆರ್‌ಟಿಒ ಕಚೇರಿಯಲ್ಲಿ ಬೆಳಿಗ್ಗೆ 10.30 ರಿಂದ 12.30ರ ವರೆಗೆ ಒಂದು ತಾಸಿಗೊಂದರಂತೆ ಎರಡು ಪಾಳಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿದಾರರು ಮೊದಲೇ ತಮಗೆ ಅನುಕೂಲವಾದ ದಿನಾಂಕ ಮತ್ತು ಪರೀಕ್ಷೆ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹೊಸ ವ್ಯವಸ್ಥೆಯಲ್ಲಿದೆ. ಆನ್‌ಲೈನ್‌ನಲ್ಲಿ ಸೃಜನೆಯಾಗುವ ಸ್ವೀಕೃತಿ ಪ್ರತಿಯೊಂದಿಗೆ ನಿಗದಿತ ಸಮಯಕ್ಕೆ ಕಚೇರಿಗೆ ತೆರಳಿ ಪರೀಕ್ಷೆ ತೆಗೆದುಕೊಳ್ಳಬೇಕು.

ಲಂಚದ ಹಾವಳಿ ತಪ್ಪಿದೆ

ಈ ಹಿಂದೆ ವಾಹನ ಚಾಲನಾ ಪರವಾನಗಿಗಾಗಿ ಮಧ್ಯವರ್ತಿಗಳು, ಅಧಿಕಾರಿಗಳಿಗೆ ಲಂಚ ನೀಡಬೇಕಿತ್ತು ಎಂದು ಕೇಳಿದ್ದೆ. ಆಗೆಲ್ಲ ಹಣ ನೀಡದವರಿಗೆ ಯಾವುದಾದರೂ ನೆಪ ಒಡ್ಡಿ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಇದೀಗ ಎಲ್ಲವೂ ಆನ್‌ಲೈನ್‌ ವ್ಯವಸ್ಥೆಯಲ್ಲಿ ಇರುವುದರಿಂದ ಯಾರೇ ಆಗಲಿ ಅರ್ಜಿದಾರರಿಗೆ ಮೋಸ ಮಾಡಲು ಆಗುವುದಿಲ್ಲ

ಧನುಷ್‌, ಚಿಕ್ಕಬಳ್ಳಾಪುರ ನಿವಾಸಿ

ಹಂತ ಹಂತದಲ್ಲಿ ಸಂದೇಶ

ಈ ಮೊದಲು ಅರ್ಜಿ ಯಾವ ಹಂತದಲ್ಲಿದೆ ಎಂಬುದು ಕಚೇರಿಗೆ ಬಂದು ತಿಳಿದುಕೊಳ್ಳಬೇಕಿತ್ತು. ಇದೀಗ ಹಂತಹಂತವಾಗಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ಹೋಗುತ್ತದೆ. ಎಲ್‌ಎಲ್‌ಆರ್ ಅರ್ಜಿದಾರರೇ ಮುದ್ರಿಸಿಕೊಂಡು ಬಳಸಬಹುದು. ಗಣಕೀಕೃತಗಳ ಪರೀಕ್ಷೆಯಿಂದ ಅಧಿಕಾರಿಗಳ ವಿರುದ್ಧ ದೂರು ಹೇಳುವ ಪ್ರಮೇಯ ಇಲ್ಲ. ಏಜೆಂಟರ ಹಾವಳಿ ನಿಲ್ಲಲಿದೆ

– ಕೆ.ಆರ್.ಸುಪ್ರಿಯಾ, ಆರ್‌ಟಿಒ ಕಚೇರಿ ತಾಂತ್ರಿಕ ಸಹಾಯಕಿ

ಪರೀಕ್ಷೆಯು ತುಂಬಾ ಸರಳವಾಗಿದೆ

ಈ ಮೊದಲು ಪರೀಕ್ಷೆಗಾಗಿ ಅಧಿಕಾರಿಗಳನ್ನು ಎದುರು ನೋಡುತ್ತ ಕಾಯ್ದು ಕುಳಿತುಕೊಳ್ಳಬೇಕಿತ್ತು. ಇದೀಗ ನಮಗೆ ಅನುಕೂಲವಾದ ಸಮಯಕ್ಕೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ನೀಡಿದ್ದು ಬಹಳ ಉಪಯುಕ್ತವಾಗಿದೆ. ಜತೆಗೆ ಪರೀಕ್ಷೆ ಭಾಷಾ ಮಾಧ್ಯಮ ಆಯ್ಕೆ ಸೌಲಭ್ಯ ಇರುವುದರಿಂದ ಸುಲಭವಾಗಿ ಪರೀಕ್ಷೆ ಎದುರಿಸಬಹುದು. ಪರೀಕ್ಷೆಯಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲದಂತಾಗಿರುವುದು ಸಂತಸ ತಂದಿದೆ

– ಹರೀಶ್‌, ಜಡಲತಿಮ್ಮನಹಳ್ಳಿ ನಿವಾಸಿ

ಅಲೆದಾಟ ತಪ್ಪಲಿದೆ

ಹೊಸ ವ್ಯವಸ್ಥೆಯಿಂದ ಲೈಸೆನ್ಸ್‌ಗಾಗಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಸಮಯ, ಹಣ ಉಳಿತಾಯವಾಗಲಿದೆ. ಕೆಲಸ ಬಿಟ್ಟು ಸರದಿ ಸಾಲಿನಲ್ಲಿ ಕಾಯ್ದು ಅಧಿಕಾರಿಗಳ ಜತೆ ಕಿತ್ತಾಡುವುದು ನಿಲ್ಲಲಿದೆ. ಪರೀಕ್ಷೆ ಫಲಿತಾಂಶದಲ್ಲಿ ಅಧಿಕಾರಿಗಳು ವಂಚಿಸಲು ಸಾಧ್ಯವಿಲ್ಲ. ತ್ವರಿತಗತಿಯಲ್ಲಿ ನಾವೇ ಎಲ್‌ಎಲ್‌ಆರ್ ಮುದ್ರಿಸಿಕೊಳ್ಳುವ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ

ಜಗನ್ನಾಥ್‌, ಮಂಚನಬಲೆ ನಿವಾಸಿ

ಈ ಮೊದಲು ಎಲ್‌.ಎಲ್‌.ಆರ್ ಪಡೆಯುವವರು ಆರ್‌ಟಿಒ ಕಚೇರಿಯಲ್ಲಿ ನೀಡುವ ಪ್ರಶ್ನೆ ಪತ್ರಿಕೆ ನೋಡಿಕೊಂಡು ಪೇಪರ್‌ನಲ್ಲಿ ಉತ್ತರದ ಆಯ್ಕೆಗಳನ್ನು ಗುರುತಿಸಿ ಬರೆಯಬೇಕಿತ್ತು. ಆದರೆ ಇದೀಗ ಈ ಪರೀಕ್ಷೆಯನ್ನು ಸಹ ಆನ್‌ಲೈನ್‌ ಆಗಿ ಮಾರ್ಪಡಿಸಲಾಗಿದೆ. ಈ ಪರೀಕ್ಷೆಯ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ. ಅರ್ಜಿದಾರ ತಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವಿದೆ.

ಅರ್ಜಿದಾರರು ಕಂಪ್ಯೂಟರ್‌ ಎದುರು ಕುಳಿತು ಅದರಲ್ಲಿ ಬರುವ ತಲಾ ಮೂರು ಉತ್ತರದ ಆಯ್ಕೆಗಳು ಇರುವ 15 ಪ್ರಶ್ನೆಗಳಿಗೆ ಸೂಕ್ತ ಉತ್ತರದ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿದರೆ ಸಾಕು. ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಆ ಪರೀಕ್ಷೆಯ ಫಲಿತಾಂಶ ಬರುತ್ತದೆ.

ಹತ್ತಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಚಾಲನಾ ಪರವಾನಗಿ ಪತ್ರ ಮಂಜೂರಾಗಿದೆ ಎಂಬ ಕಂಪ್ಯೂಟರ್‌ನಲ್ಲಿಯೇ ಪ್ರದರ್ಶನವಾಗುತ್ತದೆ. ಜತೆಗೆ ಮೊಬೈಲ್‌ಗೆ ರವಾನೆಯಾಗುತ್ತದೆ. ಮೊಬೈಲ್‌ಗೆ ಬಂದ ಸಂಖ್ಯೆಯ ಮೂಲಕ ಪರಿವಾಹನ್ ಜಾಲತಾಣದಲ್ಲಿ ಎಲ್‌.ಎಲ್‌.ಆರ್ ಸೃಜಿಸಿ ಅರ್ಜಿದಾರ ಮುದ್ರಿಸಿಕೊಂಡು ಬಳಸಬಹುದು. ಅದಕ್ಕೆ ಯಾವುದೇ ಅಧಿಕಾರಿಯ ಸಹಿಯ ಅಗತ್ಯವಿಲ್ಲ. ಆರ್‌ಟಿಒ ಕಚೇರಿಯಲ್ಲಿ ಕೂಡ ಎಲ್‌.ಎಲ್‌.ಆರ್ ಮುದ್ರಿತ ಪ್ರತಿ ಪಡೆಯಬಹುದು.

ಡಿಎಲ್ ಪಡೆಯುವುದು ಸುಲಭ

ಎಲ್‌.ಎಲ್‌.ಆರ್ ಪಡೆದುಕೊಂಡವರು ಡಿಎಲ್ ಪಡೆದುಕೊಳ್ಳುವುದು ಹೊಸ ವ್ಯವಸ್ಥೆಯಲ್ಲಿ ಮತ್ತಷ್ಟು ಸುಲಭವಾಗಿದೆ. ಡಿಎಲ್‌ ಬಯಸಿ ಆನ್‌ಲೈನ್ ಅರ್ಜಿ ಸಲ್ಲಿಸುವವರು ಈ ಹಿಂದೆ ಎಲ್‌ಎಲ್‌ಆರ್ ಅರ್ಜಿ ಭರ್ತಿ ಮಾಡಿದಾಗ ಸೃಜಿಸಿದ ಸ್ವೀಕೃತಿ ಪತ್ರದ ಸಂಖ್ಯೆ ನಮೂದಿಸಿದರೆ ಸಾಕು ಅರ್ಜಿದಾರರ ವೈಯಕ್ತಿಕ ಮಾಹಿತಿ ಸ್ವಯಂ ಚಾಲಿತವಾಗಿ ಅರ್ಜಿಯಲ್ಲಿ ನಮೂದಾಗುತ್ತವೆ.

ಬಳಿಕ ಅರ್ಜಿದಾರ ಸ್ವೀಕೃತಿ ಪ್ರತಿ ಮುದ್ರಿಸಿಕೊಂಡು ಅಗತ್ಯ ದಾಖಲೆಗಳ ಅಸಲಿ ಪ್ರತಿಯೊಂದಿಗೆ ಆರ್‌ಟಿಒ ಕಚೇರಿಗೆ ಬಂದು ಆನ್‌ಲೈನ್ ಮತ್ತು ಚಾಲನಾ ಪರೀಕ್ಷೆ ತೆಗೆದುಕೊಂಡರೆ ಅದರ ಫಲಿತಾಂಶ ಮೊಬೈಲ್‌ಗೆ ರವಾನೆಯಾಗುತ್ತದೆ. ಪಾಸಾದರೆ ಚಾಲನಾ ಪರವಾನಗಿ ಪತ್ರದ ಸಂಖ್ಯೆ ಸಹ ತೋರಿಸುತ್ತದೆ. ಬಳಿಕ ಆರ್‌ಟಿಒ ಕಚೇರಿಯಿಂದ ಅರ್ಜಿದಾರರ ಮನೆಗೆ ಅಂಚೆ ಮೂಲಕ ಚಾಲನಾ ಪರವಾನಗಿ ಪತ್ರ ತಲುಪುತ್ತದೆ. ಹೀಗಾಗಿ ಕಚೇರಿ ಅಲೆದಾಟ ತಪ್ಪಲಿದೆ.

**

‘ಸಾರಥಿ–4’ ತಂತ್ರಾಂಶದಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗುತ್ತದೆ. ಆರ್‌ಟಿಒ ಕಚೇರಿ ಸಿಬ್ಬಂದಿ ವಿರುದ್ಧದ ಆರೋಪಗಳಿಗೆ ಅವಕಾಶ ಇಲ್ಲದಂತಾಗುತ್ತದೆ

ಪಾಂಡುರಂಗಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry