7
ಚಿಕ್ಕಮಗಳೂರು, ಕಡೂರು– ಬೀರೂರು, ಎನ್‌.ಆರ್‌.ಪುರದಲ್ಲಿ ಅಬ್ಬರಿಸಿದ ಮೃಗಶಿರೆ ಮಳೆ

ಗರಿಗೆದರಿದ ಕೃಷಿ ಚಟುವಟಿಕೆ; ರೈತರಲ್ಲಿ ಹರ್ಷ

Published:
Updated:
ಗರಿಗೆದರಿದ ಕೃಷಿ ಚಟುವಟಿಕೆ; ರೈತರಲ್ಲಿ ಹರ್ಷ

ಕಡೂರು: ಬರದ ಬೇಗೆಯಿಂದ ಬಳಲಿದ್ದ ಕಡೂರು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಸುರಿದ ಮೃಗಶಿರೆ ಮಳೆ ಜನರು ಮನೆಯಿಂದ ಹೊರಬಾರದಂತೆ ತಡೆಯಿತು. ಬಿರುಸಾಗಿ ಸುರಿದ ಮಳೆಯಿಂದ ಕೆಲವೆಡೆ ಹಳ್ಳಗಳು ತುಂಬಿ ಹರಿದವು.

ಇತಿಹಾಸ ಪ್ರಸಿದ್ಧ ಯಳಗೊಂಡ ನಹಳ್ಳಿಯ ಖಂಡು ಗದಹಳ್ಳಿ ಸೋಮೇಶ್ವರ ಸ್ವಾಮಿ ಜಾತ್ರೆ 12 ವರ್ಷಕ್ಕೊಮ್ಮೆ ನಡೆಯುತ್ತದೆ. ಆಗ ಹತ್ತಿರವಿರುವ ಎಣ್ಣೆಹೊಳೆ ಎಂಬಲ್ಲಿ ಹರಿಯುವ ನೀರಿನಿಂದ ಪಂಜು ಹಚ್ಚುವ ಪವಾಡ ನಡೆಯುತ್ತದೆ. ಕಳೆದ ವರ್ಷ ಜಾತ್ರೆ ಸಮಯದಲ್ಲಿ ಮಳೆ ಬಾರದೆ ಜನರು ನಿರಾಶೆಗೊಂಡಿದ್ದರು. ಭಾನುವಾರದ ಮಳೆಗೆ ಖಂಡುಗದಹಳ್ಳಿಯ ಹಳ್ಳ ತುಂಬಿ ಹರಿಯುತ್ತಿದ್ದು, 12 ವರ್ಷದ ಬಳಿಕ ಮೊದಲ ಬಾರಿ ಹರಿಯುತ್ತಿರುವದನ್ನು ಕಂಡ ಊರಿನ ಯುವಕರು ನೀರಿನಲ್ಲಿ ಉತ್ಸಾಹದಿಂದ ಕುಣಿದರು. ಇಡೀ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಎಲ್ಲೆಡೆಯೂ ಬಿರುಸಿನ ಮಳೆಯಾಗಿದೆ.

ಬೀರೂರು ಸುತ್ತಮುತ್ತ ಮಳೆ

ಬೀರೂರು: ಬೀರೂರು ಹೋಬಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನ ಉತ್ತಮ ಮಳೆ ಸುರಿಯಿತು. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಭಾನುವಾರ ಮತ್ತೇ ಸುರಿದು ಆಹ್ಲಾದಕರ ವಾತಾವರಣ ಸೃಷ್ಟಿಸಿತು. ಜಿಟಿಜಿಟಿಯಾಗಿ ಸುರಿದ ಮಳೆ ಈಗಾಗಲೇ ಬಿತ್ತನೆಯಾಗಿರುವ ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಮೊದಲಾದ ಬೆಳೆಗಳಿಗೆ ಅನುಕೂಲ ಕಲ್ಪಿಸಿತು.

ಹಿರೇನಲ್ಲೂರು, ಗಿರಿಯಾಪುರ, ಬಳ್ಳಿಗನೂರು, ಎಮ್ಮೆದೊಡ್ಡಿ, ಜೋಡಿತಿಮ್ಮಾಪುರ ಭಾಗದಲ್ಲಿಯೂ ಮಳೆ ಉತ್ತಮವಾಗಿ ಸುರಿದಿದ್ದು, ಗಿರಿಯಾಪುರ ಕೆರೆ ಕೋಡಿ ಬಿದ್ದಿದೆ. ಈ ಬಾರಿ ಸಮಯಕ್ಕೆ ಸರಿಯಾಗಿ ಪ್ರಕೃತಿ ಕೈ ಹಿಡಿದಿರುವುದು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಕೆರೆಗಳಿಗೆ ನೀರು ತುಂಬುವ ಮತ್ತು ರೈತರ ಬದುಕಿಗೆ ಬೆಳಕು ತುಂಬುವ ಆಶಾಕಿರಣವಾಗಿ ಮಳೆ ಗೋಚರಿಸಿದೆ.

ಚಿಕ್ಕಮಗಳೂರಿನಲ್ಲಿ ಉತ್ತಮ ಮಳೆ

ಚಿಕ್ಕಮಗಳೂರು: ನಗರದಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 12.30ರಿಂದ 1.30ರವರೆಗೆ ಬಿರುಸಿನ ಮಳೆ ಸುರಿಯಿತು.

ಬಸ್‌ ನಿಲ್ದಾಣದ ಎದುರಿನ ಐ.ಜಿ.ರಸ್ತೆಯಲ್ಲಿ ಕೆರೆಯಂತೆ ನೀರು ನಿಂತಿತ್ತು. ಸಂಜೆ 5 ಗಂಟೆಗೆ ಹತ್ತು

ನಿಮಿಷ ತುಂತುರು ಮಳೆ ಸುರಿಯಿತು. ನಗರದ ಸುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ.

ಮೂರು ಗಂಟೆ ಸುರಿದ ಭಾರಿ ಮಳೆ

ನರಸಿಂಹರಾಜಪುರ: ಪಟ್ಟಣದಾದ್ಯಂತ ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೆ ನಿರಂತರವಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.

ಪಟ್ಟಣದ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತುಂತುರು ಮಳೆ ಬಂದು ನಿಂತಿತು. ಮಧ್ಯಾಹ್ನ 3ಕ್ಕೆ ಪುನಃ ಆರಂಭವಾದ ಮಳೆ ಸಂಜೆ 6ರವರೆಗೂ ಒಂದೇ ಸಮನೆ ಭಾರಿ ಪ್ರಮಾಣದಲ್ಲಿ ಸುರಿಯಿತು. ಗುರುವಾರ ಸುರಿದ ಮಳೆಯೊಂದಿಗೆ ಗುಡುಗು ಸಿಡಿಲು ಸೇರಿಕೊಂಡಿತ್ತು. ಆದರೆ, ಭಾನುವಾರ ಗುಡುಗು, ಸಿಡಿಲು ಇಲ್ಲದೇ ಮಳೆ ಧೋ... ಎಂದು ಭೋರ್ಗರೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry