ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ: ವಾಹನ ನಿಲುಗಡೆಗೆ ಪರದಾಟ

ಮಹಾಮಸ್ತಕಾಭಿಷೇಕ ಮುಗಿದು 4 ತಿಂಗಳು ಕಳೆದರೂ ನಿಲ್ಲದ ಆಕರ್ಷಣೆ, ವಾರಾಂತ್ಯದಲ್ಲಿ ಜನದಟ್ಟಣೆ
Last Updated 4 ಜೂನ್ 2018, 12:23 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ವಿಶ್ವ ಪ್ರಸಿದ್ಧ ವಿಂಧ್ಯಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಮುಗಿದು 4 ತಿಂಗಳು ಕಳೆದರೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗಿದ್ದು, ವಾಹನ ನಿಲುಗಡೆ ಸಮಸ್ಯೆ ಎದುರಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕವಾದ ವಾಹನ ನಿಲುಗಡೆಯ ವ್ಯವಸ್ಥೆ ಇಲ್ಲದೇ ಕಾರಣ ಮುಖ್ಯವಾಗಿ ವಾರಾಂತ್ಯದ ದಿನದಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

88ನೇ ಮಹಾಮಸ್ತಕಾಭಿಷೇಕ ಫೆಬ್ರುವರಿ ತಿಂಗಳು ವೈಭವವಾಗಿ ಜರುಗಿತ್ತು. ಈಗಲೂ ಇಲ್ಲಿಗೆ ಆಗಮಿಸುವ ಭಕ್ತರ ಮತ್ತು ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ವಾರಾಂತ್ಯದಲ್ಲಿ  ರಾಜ್ಯದ ವಿವಿಧೆಡೆ ಮತ್ತು ಹೊರ ರಾಜ್ಯಗಳಿಂದ ಅಸಂಖ್ಯ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.

ಕ್ಷೇತ್ರವು ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ರಸ್ತೆಗಳು ಕಿರಿದಾಗಿವೆ. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಗಳನ್ನು ವಿಸ್ತರಣೆಗೆ ಒತ್ತು ನೀಡಲಿಲ್ಲ. ಹೀಗಾಗಿ, ವಾಹನ ದಟ್ಟಣೆ ಸಮಸ್ಯೆ ಇದೆ ಎನ್ನುತ್ತಾರೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರವಿ ನಂಜಪ್ಪ ದೂರುತ್ತಾರೆ.

ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ರೂಪಿಸದ ಕಾರಣ ಶನಿವಾರ ಮತ್ತು ಭಾನುವಾರ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಸೇರಿ ವಿವಿಧ ಸಮಸ್ಯೆಗಳು ಸಾಮಾನ್ಯವಾಗಿದೆ ಎಂದು ಮೈಸೂರುರಸ್ತೆಯ ವ್ಯಾಪಾರಿ ವರ್ಧಮಾನ ಅಸಮಾಧಾನ ವ್ಯಕ್ತ ಪಡಿಸುತ್ತಾರೆ.

ಭಾನುವಾರ ತುಮಕೂರು ಜಿಲ್ಲೆ ದಿಗಂಬರ ಜೈನ ಸಮಾಜದ ವತಿಯಿಂದ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ ಏರ್ಪಡಿಸಲಾಗಿತ್ತು.

ಇದರ ನಿಮಿತ್ತ ಪಟ್ಟಣಕ್ಕೆ ಪ್ರವಾಸಿಗರು ಬಂದಿದ್ದ ವಾಹನಗಳನ್ನು ಪೋಲೀಸ್‌ ಸ್ಟೇಷನ್‌ ರಸ್ತೆ, ಮೈಸೂರು ರಸ್ತೆ, ಶ್ರೀಮಠದ ಹಳೇ ಅಂಚೇ ಕಚೇರಿ, ಚಂದ್ರಗಿರಿ, ವಿಂಧ್ಯಗಿರಿ ರಸ್ತೆ, ಬೆಂಗಳೂರು ರಸ್ತೆ, ಈಶ್ವರ ಬೀದಿ, ಮುಸ್ಲಿಂ ಬೀದಿ, ಶ್ರೀಕಂಠ ನಗರ ಬಡಾವಣೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT