ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರ: ಹದಗೆಟ್ಟ ರಸ್ತೆ, ಓಡಾಟ ದುಸ್ತರ

Last Updated 4 ಜೂನ್ 2018, 12:32 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣದಲ್ಲಿ ಎರಡು ವರ್ಷಗಳಿಂದ ಒಳಚರಂಡಿ ಕಾಮಗಾರಿ ಮುಗಿಯದ ಕಾರಣ ನಾಗರಿಕರು ಪರದಾಡುವಂತಾಗಿದೆ.

ಪಟ್ಟಣದ ತಂಬಾಕದ ನಗರ ಸೇರಿದಂತೆ ವಿವಿಧ ಸುಮಾರು ₹8 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗೆ ಡಾಂಬರು ರಸ್ತೆ ಕಿತ್ತು ಹಾಕಿದ್ದು, ಪೈಪ್ ಅಳವಡಿಸಿ ಮಣ್ಣು ಹಾಕಿ ಮುಚ್ಚಲಾಗಿದೆ. ಆದರೆ, ರಸ್ತೆ ಅಗೆಯಲಾದ ಪರಿಣಾಮ ಮಳೆ ಬಂದಾಗ ರಸ್ತೆ ಕೆಸರುಮಯ ಆಗುತ್ತಿದೆ. ನಾಗರಿಕರ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ.

‘ತಂಬಾಕದ ನಗರದ ಮುಖ್ಯರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದು 2 ವರ್ಷವಾಗುತ್ತಿದೆ. ರಸ್ತೆಯಲ್ಲಿ ಡಾಂಬರೀಕರಣ ಮಾಡಿದ ಕುರುಹು ಸಹ ಕಾಣದಂತಾಗಿದೆ. ಮಳೆ ಬಂದರೆ ತಗ್ಗು, ಗುಂಡಿಗಳಲ್ಲಿ ನೀರು ನಿಂತು ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಇದರಿಂದ ಓಡಾಡುವುದೇ ದುಸ್ತರವಾಗುತ್ತಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರ ಪಾಡು ಹೇಳತೀರದು. ಸಂಬಂಧಪಟ್ಟವರು ಮಳೆಗಾಲ ಆರಂಭಕ್ಕೆ ಮೊದಲು ರಸ್ತೆ ದುರಸ್ತೆ ಮಾಡಿಸಿದರೆ ಉತ್ತಮ’ ಎನ್ನುತ್ತಾರೆ ತಂಬಾಕದ ನಗರದ ನಿವಾಸಿ ಮಂಜುನಾಥ ಕೋಣನತಲಿ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜಾರಾಂ ಪವಾರ, ‘ಪಟ್ಟಣದ ರಸ್ತೆಗಳು ಸಾಕಷ್ಟು ಹದಗೆಟ್ಟಿರುವುದು ನಿಜ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಶಾಸಕ ಬಿ.ಸಿ.ಪಾಟೀಲ ವಿಶೇಷ ಸಭೆ ನಡೆಸಿ ತಿಳಿಸಿದ್ದು, ರಸ್ತೆಗಳ ದುರಸ್ತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಅದರಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ’ ಎಂದರು.

**
ಮಳೆಗಾಲ ಆರಂಭವಾಗುವ ಮೊದಲು ಎಲ್ಲ ರಸ್ತೆ ಸರಿಪಡಿಸಿ ಡಾಂಬರೀಕರಣ ಮಾಡಿಸಿದ್ದರೆ ಅನುಕೂಲ. ಈ ಬಗ್ಗೆ ಪಟ್ಟಣ ಪಂಚಾಯ್ತಿ ಗಮನ ಹರಿಸುತ್ತಿಲ್ಲ
– ಮಂಜುನಾಥ ಕೋಣನತಲಿ, ಸ್ಥಳೀಯ ನಿವಾಸಿ 

ಕೆ.ಎಚ್.ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT