ಸೋಮವಾರ, ಡಿಸೆಂಬರ್ 9, 2019
24 °C
ಐದು ಪ್ರಮುಖ ಬುಕ್ ಆಫ್‌ ರೆಕಾರ್ಡ್ಸ್‌ಗಳಲ್ಲಿ ಸಾಧನೆ ದಾಖಲು

ಕೈಗಾದ ಪೋರ ಈಗ ದಾಖಲೆ ವೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗಾದ ಪೋರ ಈಗ ದಾಖಲೆ ವೀರ

ಕಾರವಾರ: ಸಾಮಾನ್ಯವಾಗಿ ಕಾಲಿಗೆ ‘ಸ್ಕೇಟ್‌’ ತೊಟ್ಟು ಐದು ಅಡಿ ನಡೆಯುವುದೇ ಕಷ್ಟ. ಅಂಥ ದರಲ್ಲಿ ಐದೂವರೆ ವರ್ಷದ ಪುಟ್ಟ ಪೋರನೊಬ್ಬ ಮರಕಾಲ (ಸ್ಟಿಲ್ಟ್‌) ಮೇಲೆ ಸ್ಕೇಟಿಂಗ್ ಪ್ರದರ್ಶನ ನೀಡುವ ಮೂಲಕ ಮೂರು ಹೊಸ ದಾಖಲೆಗಳನ್ನು ಮಾಡಿದ್ದಾನೆ.

ಕೈಗಾದ ಪೂಜಾ ಹೆಬ್ಳೇಕರ್ ಹಾಗೂ ಸುಮಂತ್ ಹೆಬ್ಳೇಕರ್ ದಂಪತಿಯ ಪುತ್ರ ಶ್ಯಾಮ್ ಈ ಸಾಧನೆ ಮಾಡಿರುವ ಬಾಲಕ. ಭಾನುವಾರ ನಗರದ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಸಾರ್ವಜನಿಕರು, ಪ್ರಮುಖ ಐದು ಬುಕ್‌ ಆಫ್ ರೆಕಾರ್ಡ್ಸ್‌ನ ಪ್ರತಿನಿಧಿಗಳು ಹಾಗೂ ಪಾಲಕರ ಸಮ್ಮುಖದಲ್ಲಿ ಶ್ಯಾಮ್ ಈ ಸಾಧನೆ ಮಾಡಿದ.

ದಿನಕ್ಕೆ ಮೂರು ಗಂಟೆಯಂತೆ ಒಂದೂವರೆ ವರ್ಷಗಳ ಕಠಿಣ ಪರಿಶ್ರಮದಿಂದ ‘ಸ್ಟಿಲ್ಟ್‌ ಸ್ಕೇಟಿಂಗ್‌’ ಅಭ್ಯಾಸ ನಡೆಸಿದ ಶ್ಯಾಮ್, ಅದರ ಫಲವಾಗಿ ಇದೀಗ ಮೂರು ವಿಶ್ವ ದಾಖಲೆ ಬರೆದಿದ್ದಾನೆ. ಇದು, ಪ್ರಮುಖ ಐದು ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ಭಾನುವಾರ ದಾಖಲಾಗಿದೆ.

ದಾಖಲೆಯ ಕ್ಷಣ: ದಾಖಲೆಯ ಸಲುವಾಗಿಯೇ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಶ್ಯಾಮ್ ‘ಸ್ಟಿಲ್ಟ್’ ಸ್ಕೇಟಿಂಗ್‌ ಪ್ರದರ್ಶನ ಏರ್ಪಡಿಸಲಾಗಿತ್ತು. ಮೊದಲು ಕಾಲಿಗೆ 72 ಇಂಚು ಎತ್ತರದ ಮರಕಾಲನ್ನು ಬಂಧಿಸಿ, ಅದಕ್ಕೆ ಸ್ಕೇಟ್‌ ಅನ್ನು ತೊಡಿಸಲಾಗಿತ್ತು. ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಅಂಕಣವನ್ನು 15 ಸುತ್ತು ಹಾಕುವ ಮೂಲಕ 2.8 ಕಿ.ಮೀ. ‘ಸ್ಟಿಲ್ಟ್ ಸ್ಕೇಟಿಂಗ್’ ಮಾಡಿ ಎಲ್ಲರನ್ನು  ಬೆರಗುಗೊಳಿಸಿದ. ಈ ವೇಳೆ ಪ್ರೇಕ್ಷಕರ ಚಪ್ಪಾಳೆ ಆತನಿಗೆ ಪ್ರೋತ್ಸಾಹದ ಜತೆಗೆ ಹುಮ್ಮಸ್ಸು ನೀಡುತ್ತಿತ್ತು.

ನಂತರ, ಅದೇ ಎತ್ತರದಲ್ಲಿ 5 ಸುತ್ತು ಹಿಮ್ಮುಖವಾಗಿ 650 ಮೀಟರ್‌ವರೆಗೆ ಚಲಿಸಿದ. ಕೊನೆಯದಾಗಿ 87 ಇಂಚಿನ ಮರಕಾಲ ಮೇಲೆ 500 ಮೀಟರ್‌ವರೆಗೆ ಕ್ರಮಿಸಿ ದಾಖಲೆ ಬರೆಯುವಲ್ಲಿ ಯಶಸ್ವಿಯಾದ. ಸ್ಥಳದಲ್ಲಿದ್ದ ಪರ್ಫೆಕ್ಟ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರತಿನಿಧಿ ಕಾಮತ್ ಕಿಶೋರ್ ಜೋಶಿ, ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್‌ನ ಹರ್ಷವರ್ಧನ, ರೆಕಾರ್ಡ್ ಹೋಲ್ಡರ್ ರಿಪಬ್ಲಿಕ್‌ನ (ಯುನೈಟೆಡ್‌ ಕಿಂಗ್ಡಮ್) ಪ್ರಸಾದ್ ಆರ್.ಜಿ., ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ಹರೀಶ್ ಆರ್‌.ಶ್ಯಾಮ್‌ನ ಸಾಧನೆಯನ್ನು ವಿಶ್ವ ದಾಖಲೆ ಎಂದು ಅಧಿಕೃತವಾಗಿ ಘೋಷಿಸಿದರು. ಈ ವೇಳೆ ಎಲ್ಲರ ಹರ್ಷ ಮುಗಿಲು ಮುಟ್ಟಿತ್ತು. ಚಪ್ಪಾಳೆ, ‘ಶ್ಯಾಮ್.. ಶ್ಯಾಮ್..’ ಘೋಷಣೆ ಬಾಲಕನ ಸಾಧನೆಯನ್ನು ಸಾರಿ ಸಾರಿ ಹೇಳಿತು.

ಖುಷಿಗೆ ಪಾರವೇ ಇಲ್ಲ: ಪುತ್ರ ದಾಖಲೆ ಮಾಡುತ್ತಿದ್ದಂತೆ ಪಾಲಕರ ಕಣ್ಣಿನಲ್ಲಿ ಆನಂದಭಾಷ್ಪ ಹರಿದಿತ್ತು. ‘ಸಹೋದರಿ ದುರ್ಗಾ ಹಾಕಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಳು. ಇದರಿಂ ದಾಗಿ ಸ್ಫೂರ್ತಿಗೊಂಡಿದ್ದ ಶ್ಯಾಮ್ ಈ ದಾಖಲೆಗೆ ಸಿದ್ಧನಾಗಿದ್ದ. ಆತನಿಗೆ ನಾಲ್ಕು ವರ್ಷವಿದ್ದಾಗ, ಅಂದರೆ ಒಂದೂ ವರೆ ವರ್ಷದ ಹಿಂದೆ ದಾಖಲೆಯ ಕನಸಿಗೆ ತರಬೇತುದಾರ ದಿಲೀಪ್ ಹಾಗೂ ನಾನು ನೀರೆದಿದ್ದೆವು’ ಎನ್ನುತ್ತಾರೆ ಶ್ಯಾಮ್ ಅವರ ತಂದೆ ಸುಮಂತ್ ಹೆಬ್ಳೇಕರ್.

‘ಮರಕಾಲನ್ನು (ಸ್ಟಿಲ್ಟ್‌) ನಾಲ್ಕೈದು ಬಾರಿ ನಾವೇ ತಯಾರಿಸಿದೆವು. ಆದರೆ ಅದು ಸರಿ ಹೊಂದುತ್ತಿರಲಿಲ್ಲ. ಕೊನೆಗೆ ಒಂದು ಸರಿಯಾಗಿ ಹೊಂದಿತು. ಅದನ್ನು ತೊಟ್ಟ ಶ್ಯಾಮ್ ಅನೇಕ ಬಾರಿ ಬಿದ್ದು ಪೆಟ್ಟು ಮಾಡಿಕೊಂಡು. ಆದರೂ ಛಲ ಬಿಡದೆ, ಗೋಡೆ, ಮೇಜುಗಳನ್ನು ಹಿಡಿದು ಅಭ್ಯಾಸ ಮಾಡಿದ. ಶಾಲೆಯಿಂದ ಬಂದ ಬಳಿಕ ಮೂರು ತಾಸು ಇದರಲ್ಲೇ ನಿರತನಾದ. ತಾಯಿ ಆತನಿಗೆ ಸಾಥ್ ನೀಡಿದಳು. ಅದು ಈಗ ಇಲ್ಲಿಯವರೆಗೆ ತಂದು ನಿಲ್ಲಿಸಿದೆ’ ಎನ್ನುತ್ತಾರೆ ಅವರು.

ಸಾಧನೆಯ ಹಿಂದೆ ದಿಲೀಪ್

ಕೈಗಾ ಅಣುಸ್ಥಾವರದ ಉದ್ಯೋಗಿಗಳ ಮಕ್ಕಳು ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಅನೇಕ ವಿದ್ಯಾರ್ಥಿಗಳು ಸ್ಕೇಟಿಂಗ್‌ನ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ್ದಾರೆ. ಈ ಎಲ್ಲ ಸಾಧನೆಗಳ ಹಿಂದೆ ತರಬೇತುದಾರ ದಿಲೀಪ್‌ ಹಣಬರ್‌ ಅವರ ಪರಿಶ್ರಮ ಗಮನಾರ್ಹವಾಗಿದೆ.

ದೇವರಾಜ ನಾಯ್ಕ

ಪ್ರತಿಕ್ರಿಯಿಸಿ (+)