ಡಿಸೆಂಬರ್ ಒಳಗೆ ಅಣೆಕಟ್ಟು ಪೂರ್ಣಗೊಳಿಸಿ

2
ಕಾಮಗಾರಿ ಸ್ಥಳ ಪರಿಶೀಲಿಸಿದ ವಿಧಾನಸಭಾ ಅಧ್ಯಕ್ಷ ರಮೇಶ್‌ಕುಮಾರ್‌ ಸೂಚನೆ

ಡಿಸೆಂಬರ್ ಒಳಗೆ ಅಣೆಕಟ್ಟು ಪೂರ್ಣಗೊಳಿಸಿ

Published:
Updated:

ಬಂಗಾರಪೇಟೆ: ಕ್ರಿಸ್ಮಸ್ ಆಚರಣೆ ಒಳಗಾಗಿ ಯರಗೋಳ್ ಅಣೆಕಟ್ಟು ಕಾಮಗಾರಿ ಪೂರ್ಣಗೊಳಿಸಲೇಬೇಕು ಎಂದು ವಿಧಾನಸಭಾ ಅಧ್ಯಕ್ಷ ಕೆ.ರಮೇಶ್ ಕುಮಾರ್ ಅವರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ಗಳಿಗೆ ಸೂಚಿಸಿದರು.

ತಾಲ್ಲೂಕಿನ ಯರಗೋಳ್ ಅಣೆಕಟ್ಟು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾತನಾಡಿದರು. ಹೆಚ್ಚು ಕಾರ್ಮಿಕರು ಮತ್ತು ಯಂತ್ರಗಳನ್ನು ಬಳಸಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ತಾಕೀತು ಮಾಡಿದರು.

ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿ ಸಲಾಗುವುದು. ವಿನಾ ಕಾರಣ ವಿಳಂಬ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಯೋಜನೆ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ಸಂಪನ್ಮೂಲ ಒದಗಿಸಲು ಸರ್ಕಾರ ಸಿದ್ಧ ಎಂದರು.

ತ್ವರಿತವಾಗಿ ಮೂರ್ನಾಲ್ಕು ಮೀಟರ್ ಅಣೆಕಟ್ಟು ನಿರ್ಮಿಸಿ, ಹರಿಯುವ ನೀರನ್ನು ಶೇಖರಣೆ ಮಾಡುವ ಕೆಲಸ ಮಾಡಲಾಗುವುದು. ಬೊಗಸೆ ನೀರನ್ನೂ ವ್ಯರ್ಥವಾಗಿ ಹರಿಯಲು ಬಿಡುವುದಿಲ್ಲ ಎಂದು ತಿಳಿಸಿದರು.

ಒಟ್ಟು 1.20 ಲಕ್ಷ ಘನ ಮೀಟರ್‌ನಷ್ಟು ಅಣೆಕಟ್ಟು ನಿರ್ಮಿಸಬೇಕಿದ್ದು, ಈಗಾಗಲೆ 20 ಸಾವಿರ ಘನ ಮೀಟರ್ ಅಣೆಕಟ್ಟು ಕಾಮಗಾರಿ ಮುಗಿದಿದೆ. ಉಳಿದ 1 ಲಕ್ಷ ಘನ ಮೀಟರ್ ಕಾಮಗಾರಿ ನಡೆಸಬೇಕಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ನಡೆಯುತ್ತಿದ್ದು. ₹ 240 ಕೋಟಿ ಬಿಡುಗಡೆ ಮಾಡಲಾಗಿದೆ. ಆ ಪೈಕಿ ₹ 80 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ₹ 160 ಕೋಟಿ ರಾಜ್ಯ ಸರ್ಕಾರದ್ದಾಗಿದೆ. ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸಭೆ: ‘ಇಂತಹ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿ, ಅನುಭವ ಇರುವ ಎಂಜಿನಿಯರ್‌ಗಳ ಸಭೆ ಕರೆದು ಚರ್ಚಿಸುತ್ತೇವೆ. ಇಲ್ಲಿನ ಭೌಗೋಳಿಕ ಮತ್ತು ವಾಸ್ತವ ಸ್ಥಿತಿ ಬಗ್ಗೆ ವಿವರಿಸಿ ಎಷ್ಟು ಕಾಲಾವಕಾಶ ಅಗತ್ಯವಿದೆ ಎನ್ನುವ ಬಗ್ಗೆ ತಿಳಿದುಕೊಳ್ಳುತ್ತೇವೆ’ ಎಂದರು.

ಅನುಭವಿ ಎಂಜಿನಿಯರ್‌ಗಳ ಅಭಿಪ್ರಾಯ ಪಡೆದು ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲಿನ ಎಂಜಿನಿ ಯರ್‌ಗಳು ಕೇಳುವ ಕಾಲಾವಕಾಶ ಮತ್ತು ಅನುಭವ ಆಧರಿಸಿ ಕಾಮಗಾರಿ ಮುಗಿಸಲು ಒತ್ತಾಯ ಹೇರಲಾಗುವುದು ಎಂದರು.

ದಶಕದ ಹಿಂದೆ ಶಂಕುಸ್ಥಾಪನೆ ಮಾಡಿದ್ದರೂ ಹಲವು ಅಡೆತಡೆಗಳಿಂದ ಕಾಮಗಾರಿ ಕುಂಠಿತಗೊಂಡಿತ್ತು. ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ದೊರೆಯುವುದು ತಡವಾಯಿತು. ಈಗ ಎಲ್ಲಾ ಅಡಚಣೆಗಳು ಮುಗಿದಿವೆ. ಇನ್ನು ಮುಂದೆ ತ್ವರಿತವಾಗಿ ಕಾಮಗಾರಿ ನಡೆಯಲಿದೆ ಎಂದರು.

ಎಲ್ಲ ಅನನುಕೂಲಗಳಿದ್ದರೂ 15 ತಿಂಗಳಲ್ಲಿ ಕೆಸಿ ವ್ಯಾಲಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಆ ಎಲ್ಲ ಅನುಭವಗಳಿಂದ ಯರಗೋಳ್ ಯೋಜನೆ ಪೂರ್ಣಗೊಳಿಸುವ ಆತ್ಮವಿಶ್ವಾಸ, ಧೈರ್ಯ ನಮಗಿದೆ. ಮಾಡೆ ತೀರುತ್ತೇವೆ. 2020ರೊಳಗೆ ಎತ್ತಿನ ಹೊಳೆ ಯೋಜನೆಯನ್ನೂ ಪೂರ್ಣಗೊಳಿಸುತ್ತೇವೆ ಎಂದರು.

ಎಂಜಿನಿಯರ್‌ಗಳ ವಿರುದ್ಧ ಅಸಮಾಧಾನ

ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳ ಚಂರಂಡಿ ಮಂಡಳಿ ಎಂಜಿನಿಯರ್‌ಗಳು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವ ಉದ್ದೇಶವಿಲ್ಲ. ಕಾಮಗಾರಿ ಪೂರ್ಣಗೊಳಿಸುವಂತೆ ಹಲ ಬಾರಿ ಸೂಚಿಸಿದ್ದರೂ ಕಾಳಜಿ ವಹಿಸುತ್ತಿಲ್ಲ. ಹಣ ಲೂಟಿ ಮಾಡುವುದೇ ಅವರ ಉದ್ದೇಶವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ರಮೇಶ್ ಕುಮಾರ್ ಅವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry