4

ಗಿಡ ನೆಡಿ, ಗಿಡ ನೆಡಿ...

Published:
Updated:
ಗಿಡ ನೆಡಿ, ಗಿಡ ನೆಡಿ...

ನೀರಿನ ಬಾಟಲ್ ರೀತಿ ಆಕ್ಸಿಜನ್ ಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ!

ಬೆಂಗಳೂರಿಗೆ ದೆಹಲಿ ಪರಿಸ್ಥಿತಿ ಬರುವ ಸಾಧ್ಯತೆ ಹೆಚ್ಚಿದೆ. ಕೋಟಿಗೂ ಹೆಚ್ಚು ಜನ, ಅರ್ಧಕೋಟಿ ಮೀರಿದ ವಾಹನಗಳು, ದಿನವೂ ಬೆಂಗಳೂರಿಗೆ ಬಂದು ಹೋಗುವ ಲಕ್ಷಾಂತರ ಮಂದಿ, ಕೈಗಾರಿಕೆಗಳು ಉಗುಳುವ ಹೊಗೆ, ಕಟ್ಟಡ, ರಸ್ತೆ ಕಾಮಗಾರಿಗಳು ಬೆಂಗಳೂರಿನ ವಾತಾವರಣವನ್ನು ದಯನೀಯ ಸ್ಥಿತಿಗೆ ತಂದಿವೆ. ಕಾಮಗಾರಿ ಹೆಸರಲ್ಲಿ ಹಾಗೂ ಮಳೆ ಬಂತು ಎಂಬ ಕಾರಣಕ್ಕೆ ಬೆಳೆದಿರುವ ಮರಗಳನ್ನು ಕಡಿಯುವ ಪ್ರವೃತ್ತಿಯು ಇನ್ನಷ್ಟು ಅಸಹನೀಯಗೊಳಿಸಿದೆ.

35 ವರ್ಷಗಳ ಹಿಂದೆ ನಾನು ಹಚ್ಚಿದ್ದ ಗಿಡಗಳು ಈಗ ನಾಲ್ಕು ಅಡಿಯ ಸುತ್ತಳತೆಯಷ್ಟು ಬೆಳೆದಿವೆ. ಮರ ಕಡಿದರೆ ಅಂತಹ ಮರವೊಂದು ನಿಲ್ಲಬೇಕಾದರೆ ಮತ್ತೆ 35 ವರ್ಷ ಕಾಯಬೇಕು. ಮೂರು ದಶಕಗಳ ಹಿಂದೆ ಬಾವಿ, ನಲ್ಲಿ ನೀರನ್ನು ಕುಡಿಯುತ್ತಿದ್ದೆವು.

ಮುಂದೊಂದು ದಿನ ಬಾಟಲ್ ನೀರು ಬರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಅದು ಈಗ ನಿಜವಾಗಿದೆ. ಹಾಗೆಯೇ ವಿಪರೀತ ಎನಿಸುವಷ್ಟು ಹೆಚ್ಚಾಗಿರುವ ವಾಯುಮಾಲಿನ್ಯದಿಂದಾಗಿ ಆಮ್ಲಜನಕದ ಬಾಟಲ್‍ಗಳನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಮುಂದೊಂದು ದಿನ ಬಂದರೆ ಅಚ್ಚರಿಯಿಲ್ಲ.

ಮರ ಕಡಿದ ಜಾಗದಲ್ಲಿ ಮತ್ತೊಂದು ಸಸಿ ನೆಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಸಸಿಯೊಂದು ಮರವಾಗಲು ದೀರ್ಘಾವಧಿ ಬೇಕು. ಮರಗಿಡಗಳ ಸಂಖ್ಯೆ ಹೆಚ್ಚಿಸಬೇಕೆಂದರೆ ಚೆನ್ನಾಗಿ ಬೆಳೆದ ಗಿಡಗಳನ್ನೇ ಹಚ್ಚಬೇಕು. 6-8 ಅಡಿ ಎತ್ತರವಿರುವ ಗಿಡಗಳನ್ನು ನೆಡುವುದು ಸದ್ಯಕ್ಕಿರುವ ಪರಿಹಾರ.

1982ರ ಅವಧಿಯಲ್ಲಿ ಜನನಿಬಿಡ ಆನಂದರಾವ್ ವೃತ್ತ ಸಮೀಪ ಮಧ್ಯರಾತ್ರಿ ಎರಡು ಗಂಟೆ ಹೊತ್ತಿನಲ್ಲಿ ಸುಮಾರು 15 ಅಡಿ ಎತ್ತರದ ಗಿಡಗಳನ್ನು ಹಚ್ಚಿದ್ದೆ. ಈಗ ಅವು ಹೆಮ್ಮರಗಳಾಗಿವೆ. ಚಿಕ್ಕವನ್ನು ನೆಟ್ಟಿದ್ದರೆ ಅವು ಬದುಕುತ್ತಲೂ ಇರಲಿಲ್ಲ, ಬೆಳೆಯುತ್ತಲೂ ಇರಲಿಲ್ಲ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನಾನು ಹಚ್ಚಿರುವ ಮರಗಳೇ ನಳನಳಿಸುತ್ತಿವೆ.

ಇರುವ ಗಿಡಗಳನ್ನು ಉಳಿಸಿಕೊಳ್ಳುವುದೂ ಮಹತ್ವದ ಕೆಲಸವೇ. ಪಾರ್ಕಿಂಗ್ ಕಾರಣಕ್ಕೋ, ಕಾಂಪೌಂಡ್, ಅಂಗಡಿ ಅಥವಾ ಚರಂಡಿಗೆ ಅಡ್ಡ ಬರುತ್ತದೆ ಎಂಬ ಕಾರಣಕ್ಕೋ ಮನೆ ಮುಂದಿನ ಮರಗಳಿಗೆ ಕೊಡಲಿ ಹಾಕುವುದನ್ನು ಮೊದಲು ನಿಲ್ಲಿಸಬೇಕು. ಜನರೂ ಜಾಗೃತರಾಗಬೇಕು.

-ಎಸ್.ಜಿ. ನೇಗಿನಹಾಳ, ನಿವೃತ್ತ ಐಎಫ್‍ಎಸ್ ಅಧಿಕಾರಿ

**

‘ಸಾಕು’ ಎನ್ನೋಣ...

ಬೆಂಗಳೂರಿಗರು ಮೊದಲಿನಿಂದಲೂ ಪ್ರಕೃತಿ ಜೊತೆ ಹೊಂದಾಣಿಕೆ ಮಾಡಿಕೊಂಡು ಬೆಳೆದವರು. ಇಲ್ಲಿನ ಹವಾಗುಣವೇ ಒಂದು ವರ.

ಈಗ್ಗೆ 15 ವರ್ಷಗಳ ಹಿಂದೆ ಕಾರು ತೊಳೆಯುವ ಪ್ರವೃತ್ತಿಯೇ ಇರಲಿಲ್ಲ. ಬಟ್ಟೆಯಲ್ಲಿ ಒರೆಸುತ್ತಿದ್ದರು. ಬಳಿಕ ಬಕೆಟ್‍ನಲ್ಲಿ ತೊಳೆಯಲು ಶುರು ಮಾಡಿದರು. ಈಗ ಪೈಪ್ ಹಚ್ಚಿ ಯಥೇಚ್ಛವಾಗಿ ನೀರು ಪೋಲು ಮಾಡಿ ಕಾರು ಸ್ವಚ್ಛಗೊಳಿಸುತ್ತಾರೆ.

ಎಷ್ಟು ನೀರು ಖರ್ಚಾಯಿತು ಎಂಬ ಲೆಕ್ಕವಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದರೆ ಫೈನ್ ಹಾಕುತ್ತಾರೆ. ಆದರೆ ನೀರು ಪೋಲು ಮಾಡಿದರೆ ಅಥವಾ ಮರ ಕಡಿದರೆ ಏಕೆ ದಂಡ ಹಾಕುವುದಿಲ್ಲ. ಇದು ಶಿಕ್ಷಾರ್ಹ ಅಪರಾಧವಲ್ಲವೇ?

ಪಾಲಿಕೆ ವ್ಯಾಪ್ತಿಯಲ್ಲಿ ಮರ ಕಡಿಯುವುದು ಈಗ ದಂಧೆಯಾಗಿದೆ. ಅರಣ್ಯ ವಿಭಾಗದವರು ಇದಕ್ಕಾಗಿ ಸಾವಿರಾರು ರೂಪಾಯಿ ಪಡೆಯುತ್ತಾರೆ. ಅವರೇ ಹುಡುಕಿಕೊಂಡು ಬಂದು ಮರ ಕಡಿಯುತ್ತಾರೆ. ಮರ ಕಡಿಯುವ ಗುತ್ತಿಗೆದಾರರೂ ಇದ್ದಾರೆ. ಪ್ರಶ್ನಿಸಿದರೆ ಹೆದರಿಸುತ್ತಾರೆ. ಇದು ಮರಗಳ ಜೀವನ್ಮರಣದ ಪ್ರಶ್ನೆ.

ಚರಂಡಿಯ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸಿ ಈಗ ರಿಪೇರಿ ಮಾಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು. ಅವರ ಮಾತನ್ನು ಒಪ್ಪಿಕೊಂಡಿದ್ದೇವೆ ಕೂಡಾ. ಮೊದಲೇ ಪ್ರಶ್ನಿಸಿದ್ದರೆ ಜಲಮೂಲಗಳಿಗೆ ಈ ಸ್ಥಿತಿ ಬರುತ್ತಿರಲಿಲ್ಲ.

ಕಸವನ್ನು ಉಪಯೋಗಕ್ಕೆ ಬಾರದ್ದು ಎಂಬುದೇ ತಪ್ಪು. ಸರಿಯಾಗಿ ಬಳಸಿಕೊಂಡಲ್ಲಿ, ಅದು ನಿಜಕ್ಕೂ ಸಂಪನ್ಮೂಲ. ತರಕಾರಿ, ಧಾನ್ಯಗಳನ್ನು ಹೊತ್ತ ಸಾವಿರಾರು ಲಾರಿಗಳು ಬೆಂಗಳೂರಿಗೆ ಬರುತ್ತವೆ. ಆದರೆ ತ್ಯಾಜ್ಯವನ್ನು ಗೊಬ್ಬರ ಮಾಡುವ ಗೋಜಿಗೇ ಹೋಗದಿರುವುದು ಸೋಜಿಗ. ಕಸ ಎತ್ತುವವರಿಗೆ ಗುತ್ತಿಗೆ ಕೊಡಲು ಇರುವಷ್ಟು ವ್ಯವಧಾನವು ಅದನ್ನು ಗೊಬ್ಬರ ಮಾಡಿ, ರೈತರಿಗೆ ಕೊಡುವುದಕ್ಕೆ ಇಲ್ಲ.

ಒಂದು ಚಿಕ್ಕ ಮಳೆಬಂದರೂ ಸುಧಾರಿಸಿಕೊಳ್ಳಲು ಬೆಂಗಳೂರು ಹೆಣಗಾಡುತ್ತದೆ. ನೀರು ಹರಿದು ಹೋಗಲು ಜಾಗವಿಲ್ಲ. ಒಂದಿಂಚು ಜಾಗ ಬಿಡಲು ಯಾರೂ ತಯಾರಿಲ್ಲ. ಅದು ಹರಿಯುವುದಾದರೂ ಎಲ್ಲಿಗೆ? ನೀರು ಎಂಬ ಸಂಪನ್ಮೂಲವು ಬೆಂಗಳೂರಿಗೆ ಶಾಪ ಎಂಬಂತಾಗಿರುವುದು ಇದೇ ಕಾರಣಕ್ಕೆ.

ಪರಿಸರದ ಸಮಸ್ಯೆಗಳಿಗೆ ಪರಿಹಾರಗಳು ಸರಳವಾಗಿವೆ. ಆದರೆ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಸಾಮಾಜಿಕ ಜಾವಾಬ್ದಾರಿಯ ಜೊತೆಗೆ ‘ಸಾಕು’ ಎಂಬ ಮನಸ್ಥಿತಿ ಈಗಿನ ತುರ್ತು ಅಗತ್ಯ.

-ಈಶ್ವರ ಪ್ರಸಾದ್, ಪರಿಸರವಾದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry