ಗುರುವಾರ , ಡಿಸೆಂಬರ್ 12, 2019
17 °C

ಸಾಲಮನ್ನಾದ ಸುತ್ತ ಕಾಣಿಸಿದ ಸಮೂಹ ಸನ್ನಿ

ನಾರಾಯಣ ಎ
Published:
Updated:
ಸಾಲಮನ್ನಾದ ಸುತ್ತ ಕಾಣಿಸಿದ ಸಮೂಹ ಸನ್ನಿ

ರೈತರ ಸಾಲಮನ್ನಾ ಮಾಡುವ ವಿಷಯದ ಸುತ್ತ ಹೋದ ವಾರ ರಾಜ್ಯ ಕಂಡದ್ದು ಅಕ್ಷರಶಃ ಸಮೂಹ ಸನ್ನಿಯನ್ನು. ಚುನಾವಣೆಯನ್ನು ಗೆಲ್ಲುವ ಧಾವಂತದಲ್ಲಿ ಜಾತ್ಯತೀತ ಜನತಾದಳದವರು (ಜೆಡಿಎಸ್‌) ಹಿಂದೆ ಮುಂದೆ ಯೋಚಿಸದೆ ನೀಡಿದ ಭರವಸೆ ಮತ್ತು ಅದರ ಸುತ್ತ ನಡೆದುಹೋದ ರಂಪಾಟ ಈ ರಾಜ್ಯದ ರಾಜಕೀಯ ನಾಯಕತ್ವ ಯಾವ ಮಟ್ಟದ್ದು ಮತ್ತು ಅದರ ಯೋಚನೆಗಳು ಎಂತಹ ಸತ್ವದ್ದು ಎಂದು ಸಾರಿದವು. ರಾಜಕೀಯದ ಮಂದಿಯ ಮಾತು ಹಾಗಿರಲಿ. ಇಡೀ ಬೆಳವಣಿಗೆಗಳ ಸುತ್ತ ನಡೆದ ಸಾರ್ವಜನಿಕ ಚರ್ಚೆಯಾದರೂ ಹೇಗಿತ್ತು ಎಂದರೆ ಅದು ಎಲ್ಲೂ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯ ಬಾಲಿಶತನವನ್ನು ಪ್ರಶ್ನಿಸಲಿಲ್ಲ. ಬದಲಿಗೆ ‘ಪ್ರಣಾಳಿಕೆಯಲ್ಲಿ ಅದೇನೋ ಹೇಳಿದ್ದೀರಲ್ಲ, ಈಗ ಅದನ್ನು ಮಾಡಿಯೇ ತೀರಬೇಕು’ ಎಂದು ಒತ್ತಡ ತರುವ ರೀತಿಯಲ್ಲಿತ್ತು.

ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಕೂಡಾ ಸಾಲಮನ್ನಾ ಮಾಡುವ ಭರವಸೆ ನೀಡಿತ್ತು. ಇಲ್ಲಿ ಸಮಸ್ಯೆ ಇರುವುದು ಸಾಲಮನ್ನಾದ ಪರಿಕಲ್ಪನೆಯಲ್ಲಿ ಅಲ್ಲ. ಸಮಸ್ಯೆ ಇರುವುದು ಅದನ್ನೊಂದು ರಾಜಕೀಯ ಘೋಷಣೆಯನ್ನಾಗಿಸುವುದರಲ್ಲಿ. ಸಾಲಮನ್ನಾ ಎನ್ನುವುದು ಒಂದು ನಿರ್ದಿಷ್ಟವಾದ ಸಂಕಷ್ಟಕ್ಕೆ ಕೆಲ ವಿಶಿಷ್ಟವಾದ ಸಂದರ್ಭಗಳಲ್ಲಿ

ಪರಿಹಾರವಾಗಿ ಬಳಸಬಹುದಾದ ಒಂದು ಉಪಕ್ರಮ. ಅದು ಯಾವತ್ತೂ ವ್ಯಾಪಕವಾದ ಸಂಕಷ್ಟವೊಂದನ್ನು ನಿವಾರಿಸಲು ಸರ್ವತ್ರ ಬಳಸಬಹುದಾದ ಪರಿಹಾರೋಪಾಯವಾಗಲು ಸಾಧ್ಯವಿಲ್ಲ. ಇದನ್ನು ತಜ್ಞರು ನೂರಾರು ಬಾರಿ ಸಾರಿ ಹೇಳಿದ್ದಾರೆ. ಜನತಾದಳವಾಗಲೀ, ಬಿಜೆಪಿಯಾಗಲೀ ಸಾಲಮನ್ನಾವನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುವಾಗ ಯಾವ ನಿರ್ದಿಷ್ಟವಾದ ಸಂಕಷ್ಟವನ್ನೂ ಹೆಸರಿಸಲಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ ಅದಕ್ಕಾಗಿ ಸಾಲ ಮನ್ನಾ ಮಾಡುತ್ತೇವೆ ಎಂದಷ್ಟೇ ಎರಡೂ ಪಕ್ಷಗಳು ಹೇಳಿದ್ದು. ಅಷ್ಟು ಹೇಳಿದರೆ ಸಾಕಾಗುವುದಿಲ್ಲ. ರೈತರು ಯಾವತ್ತೂ ಸಂಕಷ್ಟದಲ್ಲೇ ಇದ್ದರು. ಕಳೆದ ಮೂವತ್ತು ವರ್ಷಗಳಲ್ಲಿ ಈ ಸಂಕಷ್ಟ ಹೆಚ್ಚಿದೆ ಎಂದು ಆ ಕ್ಷೇತ್ರವನ್ನು ಬಲ್ಲವರು ಹೇಳುತ್ತಾರೆ. ಆದುದರಿಂದ ಏಕಾಏಕಿ ಈ ಪ್ರಸ್ತಾಪ ಯಾಕೆ ಎಂದು ಎರಡೂ ಪಕ್ಷಗಳನ್ನು, ಅವುಗಳು ಪ್ರಣಾಳಿಕೆ ಬಿಡುಗಡೆ ಮಾಡಿದಾಗಲೇ ಪ್ರಶ್ನಿಸಬೇಕಿತ್ತು.

ಒಂದು ವೇಳೆ ಸಾಲಮನ್ನಾ ಮಾಡಲೇಬೇಕಾಗಿದ್ದರೂ ಅದು ಇಡೀ ರಾಜ್ಯದ ಅರ್ಥ ಸೂಕ್ಷ್ಮಗಳನ್ನು ಮತ್ತು ಸಾರ್ವಜನಿಕ ಹಣಕಾಸು ವ್ಯವಸ್ಥೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಂಡು ನಾಜೂಕಿನಿಂದ ಅಡಿ ಇಡಬೇಕಾದ ವಿಷಯ. ಹಾಗಿರುವಾಗ ಪ್ರಮುಖ ರಾಜಕೀಯ ಪಕ್ಷಗಳು ನಿಂತ ನಿಲುವಿನಲ್ಲಿ ಇದನ್ನೆಲ್ಲಾ ಮಾಡಿಬಿಡುತ್ತೇವೆ, ಉದಯಿಸಿದ ಸೂರ್ಯ ಮುಳುಗೇಳುವುದರೊಳಗೆ ಮಾಡಿ ತೀರುತ್ತೇವೆ, ಯಾವ ಷರತ್ತೂ ಇಲ್ಲದೆ ಎಲ್ಲಾ ಕೊಟ್ಟುಬಿಡುತ್ತೇವೆ ಎಂಬುದಾಗಿ ವೀರಾವೇಶದಿಂದ ಘೋಷಿಸುವಾಗಲೂ ಅದನ್ನು ಯಾರೂ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ! ಅದೇನೋ ಪರವಾಗಿಲ್ಲ. ಯಾಕೆಂದರೆ ನಾವು ಚುನಾವಣಾ ಪ್ರಣಾಳಿಕೆಗಳನ್ನು ಯಾವತ್ತೂ ಅಷ್ಟೊಂದು ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ‘ಹೇಳಿದ್ದನ್ನು ಮಾಡಿ ಮುಗಿಸಿ’ ಅಂತ ಒಂದೆಡೆ ವಿರೋಧ ಪಕ್ಷವಾದ ಬಿಜೆಪಿ, ಇನ್ನೊಂದೆಡೆ ಮಾಧ್ಯಮಗಳು ಮುಗಿಬಿದ್ದದ್ದು, ಅದನ್ನು ಹೊಸ ಸರ್ಕಾರದ ಪಾಲುದಾರರು ನಿಭಾಯಿಸಿದ್ದು ಇತ್ಯಾದಿಗಳನ್ನೆಲ್ಲಾ ನೋಡುತ್ತಿದ್ದರೆ ಒಂದು ಪ್ರಶ್ನೆ ಕಾಡುತ್ತದೆ. ಇಷ್ಟು ಸ್ಪಷ್ಟವಾಗಿರುವುದನ್ನು ಅರ್ಥ ಮಾಡಿಕೊಳ್ಳಲು ಸಿದ್ಧರಿಲ್ಲದವರು ಮತ್ತು ಬದ್ಧರಿಲ್ಲದವರು ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಹೇಗೆ ನಿಭಾಯಿಸಬಲ್ಲರು ಎಂಬ ಪ್ರಶ್ನೆ ಅದು.

ಜನತಾದಳ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಗಮನಿಸಿ: ‘ನಾಡಿನ ರೈತ ಬಾಂಧವರು ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲ ಬಗೆಯ ಸಾಲವನ್ನು ಜೆಡಿಎಸ್ ಸರ್ಕಾರ ರಚನೆಯಾದ ಕೇವಲ 24 ಗಂಟೆಗಳಲ್ಲಿ, ಅದೂ ಒಂದೇ ಹಂತದಲ್ಲಿ ಮನ್ನಾ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ’ (ಪುಟ 16). ಇದನ್ನು ಮುಂದುವರಿಸಿ ಪುಟ 57ರಲ್ಲಿ ಹೀಗೆ ಹೇಳಲಾಗಿದೆ: ‘ರಾಜ್ಯದ ಪ್ರತಿಯೊಬ್ಬ ರೈತನೂ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಕೃಷಿ ಸಾಲವನ್ನು ಯಾವುದೇ ಷರತ್ತುಗಳಿಲ್ಲದೆ ಶೇಕಡ 100 ರಷ್ಟು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು’. ಬಿಜೆಪಿಯವರ ಪ್ರಣಾಳಿಕೆಯಲ್ಲಿ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಿತ್ತು, ಆದರೆ ಅವರ ಪ್ರಸ್ತಾಪದಲ್ಲೂ ಆತುರವಿತ್ತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು ಹೀಗೆ: ‘ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ ಒಂದು ಲಕ್ಷ ರೂಪಾಯಿವರೆಗಿನ ರೈತರ ಬೆಳೆ ಸಾಲವನ್ನು ನಮ್ಮ ಅನ್ನದಾತನ ಏಳಿಗೆಯ ದೃಷ್ಟಿಯಿಂದ ಮನ್ನಾ ಮಾಡಲಾಗುವುದು’ (ಪುಟ 6- ಇಂಗ್ಲಿಷ್ ಆವೃತ್ತಿ).

ಚುನಾವಣಾ ಪ್ರಣಾಳಿಕೆ ಎಂದರೆ ಅದೊಂದು ರಾಜಕೀಯ ಭರವಸೆಗಳ ಕಂತೆ. ಆ ಭರವಸೆಗಳು ದೊಡ್ಡ ಮಟ್ಟಿಗೆ ವಸ್ತುಸ್ಥಿತಿಯನ್ನು ಆಧರಿಸಿಕೊಂಡು ರೂಪುಗೊಂಡಿರುವುದಿಲ್ಲ. ಯಾವ ಭರವಸೆ ಯಾವ ವರ್ಗವನ್ನು ಹೇಗೆ ತಟ್ಟೀತು, ಯಾವ ಭರವಸೆಯಿಂದ ಎಷ್ಟೆಷ್ಟು ವೋಟು ಗಿಟ್ಟೀತು ಎನ್ನುವ ಪಕ್ಕಾ ರಾಜಕೀಯ ವ್ಯಾಪಾರದ ಲೆಕ್ಕಾಚಾರ ಮಾತ್ರ ಅದರಲ್ಲಿರಲು ಸಾಧ್ಯ. ಹಾಗೆ ನೋಡಿದರೆ ಚುನಾವಣಾ ಪ್ರಚಾರದ ವೈಖರಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗಿಂತ ಒಂದು ತೂಕ ಹೆಚ್ಚು ಮೇಲ್ಮಟ್ಟದಲ್ಲಿ ವ್ಯವಹರಿಸಿರುವ ಜನತಾದಳದ ಪ್ರಣಾಳಿಕೆಯಲ್ಲಿ ಹೀಗೊಂದು ಲಂಗುಲಗಾಮಿಲ್ಲದ ಭರವಸೆ ಸೇರಿಕೊಳ್ಳಲೇಬಾರದಿತ್ತು. ಜನತಾದಳಕ್ಕೆ ಅದೆಂತಹ ಒತ್ತಡದ ಸನ್ನಿವೇಶದಲ್ಲೂ ಮಾತಿನಲ್ಲಿ-ಕೃತಿಯಲ್ಲಿ ಸಮತೋಲನ ಕಳೆದುಕೊಳ್ಳದ ದೇವೇಗೌಡರಂತಹ ಹಿರಿಯರ ಮಾರ್ಗದರ್ಶನ ಇತ್ತು. ಆ ಪಕ್ಷಕ್ಕೆ ಇಪ್ಪತ್ತು ತಿಂಗಳು ಮುಖ್ಯಮಂತ್ರಿಯಾಗಿ ರಾಜ್ಯದ ಹಣಕಾಸು ವ್ಯವಸ್ಥೆ ಹೇಗೆ ಪ್ರವರ್ತಿಸುತ್ತದೆ ಎನ್ನುವುದನ್ನು ಸ್ವಾನುಭವದಿಂದ ಬಲ್ಲ ಕುಮಾರಸ್ವಾಮಿಯವರ ನಾಯಕತ್ವ ಇತ್ತು. ಪ್ರಣಾಳಿಕೆಯ ರೂವಾರಿಯಾಗಿ ಅದಕ್ಕೆ ರಾಜ್ಯದ ಹಣಕಾಸು ಇಲಾಖೆಯನ್ನು ನಿರ್ವಹಿಸಿದ ಮಾಜಿ ಐಎಎಸ್‌ ಅಧಿಕಾರಿಯೊಬ್ಬರ ತಾಂತ್ರಿಕ ನೈಪುಣ್ಯದ ಬಲ ಇತ್ತು. ಇಷ್ಟೆಲ್ಲಾ ಇದ್ದರೂ ಈ ರೀತಿಯ ಒಂದು ಭರವಸೆಯನ್ನು ಜನತಾದಳ ನೀಡಿತ್ತು ಎಂದರೆ ಇದಕ್ಕೆ ಏನು ಹೇಳುವುದು? ವೋಟಿನ ಬೇಟೆಯಲ್ಲಿ ಅನುಭವ, ವಿವೇಚನೆ, ನೈಪುಣ್ಯ... ಇತ್ಯಾದಿ ಯಾವುದಕ್ಕೂ ಯಾವ ಸ್ಥಾನವೂ ಇಲ್ಲ ಎಂದಲ್ಲವೇ?

ಬಹುಶಃ ಬಿಜೆಪಿಗೆ ಹೇಗಾದರೂ ಮಾಡಿ ಕೇಂದ್ರದಿಂದ ಒಂದಷ್ಟು ಸಹಾಯ ಪಡೆದುಕೊಳ್ಳುವ ಭರವಸೆ ಇತ್ತು ಅಂತ ಕಾಣಿಸುತ್ತದೆ. ಆ ಭರವಸೆಯಿಂದಲೇ ಅದು ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಸಾಲಮನ್ನಾ ಮಾಡಿಯೇ ಬಿಡುತ್ತೇವೆ ಅಂತ ಹೇಳಿದ್ದಿರಬಹುದು. ಆದಕಾರಣವೇ ಬಹುಮತವಿಲ್ಲದೆ ಒಂದು ದಿನದ ಮಟ್ಟಿಗೆ ಅರ್ಧಬಂರ್ಧ ಮುಖ್ಯಮಂತ್ರಿಯಾಗಿರುತ್ತಲೇ ಬಿಜೆಪಿಯ ಯಡಿಯೂರಪ್ಪ ಅವರು ಸಾಲಮನ್ನಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದ್ದಿರಬಹುದು. ಈ ಭರವಸೆಯನ್ನು ನಿಜಕ್ಕೂ ಯಡಿಯೂರಪ್ಪ ಅವರು ಕೇಂದ್ರದಿಂದ ಪಡೆದುಕೊಂಡಿದ್ದೇ ಆದರೆ ಬಿಜೆಪಿ ಇಲ್ಲಿ ಇನ್ನೊಂದು ರೀತಿಯ ಕೆಟ್ಟ ರಾಜಕೀಯ ಮಾಡುತ್ತಿದೆ ಅಂತಲೇ ಅರ್ಥ. ಕೇಂದ್ರ ಸರ್ಕಾರವು ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲಮನ್ನಾ ಮಾಡಲು ಸಹಾಯ ಮಾಡಿರಲಿಲ್ಲ. ಒಂದು ವೇಳೆ ಬಿಜೆಪಿ ಇಲ್ಲಿ ಸರ್ಕಾರ ರಚಿಸಿದಾಗ ನೆರವು ನೀಡುವ ಇರಾದೆ ಕೇಂದ್ರ ಸರ್ಕಾರಕ್ಕೆ ಇತ್ತು ಅಥವಾ ಇದೆ ಎಂದಾದಲ್ಲಿ ಅದೊಂದು ಪ್ರಶ್ನಾರ್ಹ ನೀತಿಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಕೇಂದ್ರದಿಂದ ಈ ರೀತಿಯ ನೆರವು, ಬೇರೊಂದು ಪಕ್ಷದ ಸರ್ಕಾರವಿದ್ದರೆ ಅಂತಹ ನೆರವಿಲ್ಲ ಎನ್ನುವುದು ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರ.

ಇಂತಹದ್ದೊಂದು ನೀತಿಗೆ ಬಿಜೆಪಿ ಅಣಿಯಾಗುತ್ತಿದೆ ಎನ್ನುವ ಸಂಶಯಕ್ಕೆ ಇನ್ನೊಂದು ಕಾರಣ ಅದು ಚುನಾವಣಾ ಪ್ರಚಾರದಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದ ಒಂದು ವಿಚಾರ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ, ಅರ್ಥಾತ್ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೆ, ರಾಜ್ಯದ ಅಭಿವೃದ್ಧಿ ಸುಸೂತ್ರವಾಗಿ ನಡೆಯುತ್ತದೆ; ಒಂದು ವೇಳೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಇದ್ದರೆ ಅದು ಅಭಿವೃದ್ಧಿಗೆ ತೊಡಕು ಎನ್ನುವುದಾಗಿತ್ತು ಆ ಸಂದೇಶ. ಇದು ಪ್ರಜಾತಂತ್ರ ವಿರೋಧಿ, ಒಕ್ಕೂಟ ವ್ಯವಸ್ಥೆಯ ವಿರೋಧಿ ಸಂದೇಶ. ಹೀಗೊಂದು ಒಳಸುಳಿ ಇಲ್ಲದೆ ಹೋಗಿದ್ದರೆ ಬಿಜೆಪಿಯಾದರೂ ಅಧಿಕಾರಕ್ಕೆ ಬಂದಾಕ್ಷಣ ಸಾಲಮನ್ನಾ ಮಾಡಲು ಹೇಗೆ ಸಾಧ್ಯವಾಗುತ್ತಿತ್ತು. ಕಾಂಗ್ರೆಸ್ಸಿಗೆ ಮತ್ತು ಜನತಾದಳಕ್ಕೆ ಸಿಗದೇ ಹೋದ ಅದ್ಯಾವ ದ್ರವ್ಯ ಮೂಲ ಬಿಜೆಪಿಗೆ ಲಭಿಸುತ್ತಿತ್ತು?

ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಜನತಾದಳದಷ್ಟೇ ಕಾಂಗ್ರೆಸ್‌ ಕೂಡ ಕಾತರದಿಂದಲೂ, ಹತಾಶೆಯಿಂದಲೂ ಇತ್ತು. ಅದೂ ಏನೇನೋ ಕಸರತ್ತು ಮಾಡಿ ಎಷ್ಟು ಸಾಧ್ಯವೋ ಅಷ್ಟು ವೋಟು ಗಿಟ್ಟಿಸಿಕೊಳ್ಳುವ ತವಕದಲ್ಲಿತ್ತು. ಆದರೂ ಅದು ಸಾಲಮನ್ನಾ ಮಾಡಲಿಲ್ಲ ಮತ್ತು ಮಾಡುತ್ತೇನೆ ಅಂತ ಘೋಷಿಸಲಿಲ್ಲ. ಇದು ಏನನ್ನು ತೋರಿಸುತ್ತದೆ ಎಂದರೆ ಸ್ವತಃ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿಗೆ ರಾಜ್ಯದ ಬೊಕ್ಕಸದ ಸ್ಥಿತಿ ಹೇಗಿದೆ ಎಂಬ ಅರಿವಿತ್ತು ಮತ್ತು ಇದ್ದ ಸ್ಥಿತಿಯಲ್ಲಿ ಸಾಲಮನ್ನಾ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಅದು ಬಂದಿತ್ತು ಎಂದು ತಾನೇ? ಬೊಕ್ಕಸದಲ್ಲಿ ದುಡ್ಡಿದ್ದಿದ್ದರೆ ಅಥವಾ ಅದನ್ನು ಸುಲಭವಾಗಿ ಹೊಂದಿಸುವಂತಿದ್ದರೆ ಕಾಂಗ್ರೆಸ್‌ ತಾನೇ ಸಾಲಮನ್ನಾ ಮಾಡಿ ಇನ್ನೂ ಒಂದಷ್ಟು, ಬಂದಷ್ಟು, ವೋಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳದೆ ಖಂಡಿತಾ ಇರುತ್ತಿರಲಿಲ್ಲ. ಇದನ್ನು ಕಂಡೂ ಕಂಡೂ ಉಳಿದೆರಡೂ ಪಕ್ಷಗಳು ಅಧಿಕಾರಕ್ಕೆ ಬಂದಾಕ್ಷಣ ಸಾಲಮನ್ನಾ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದು ಚಾರಿತ್ರಿಕ ಹುಂಬತನ. ಕಾಂಗ್ರೆಸ್ ಮಾಡದ ಅದ್ಯಾವುದೋ ತಂತ್ರ ಹೂಡಿ ಸಾಲಮನ್ನಾಕ್ಕೆ ಬೇಕಾದ ಹಣಕಾಸು ಹೊಂದಿಸಿಕೊಳ್ಳಲು ಸಾಧ್ಯವಿದೆ ಎಂದು ಭಾವಿಸಿದರೂ ಇಂತಹದ್ದೊಂದು ಭರವಸೆ ಪ್ರಣಾಳಿಕೆಯ ಭಾಗವಾಗಬಾರದಿತ್ತು.

ಸಾಲಮನ್ನಾ ಮಾಡಿಯೇ ತೀರಬೇಕೆಂದು ಈಗ ಬಿಜೆಪಿ ಚಂಡಿ ಹಿಡಿಯುತ್ತಿದೆ. ಹದಿನೈದು ದಿನಗಳ ನಂತರ ಸರ್ಕಾರ ಮುಂದಿಡುವ ಸಾಲಮನ್ನಾದ ಪರಿಷ್ಕೃತ ಸೂತ್ರದ ಮೇಲೆ ಮತ್ತೆ ಅದು ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಬಹುದು. ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದೇವೆ ಎಂದು ಬಿಜೆಪಿ ಭಾವಿಸುತ್ತಿರಬಹುದು. ಆದರೆ ನಿಜಕ್ಕೂ ಅದು ಪೇಚಿಗೆ ಸಿಲುಕಿಸುತ್ತಿರುವುದು ಕೇವಲ ಸರ್ಕಾರವನ್ನಲ್ಲ. ಅದು ಇಡೀ ರಾಜ್ಯದ ಆರ್ಥಿಕ ಭದ್ರತೆಯನ್ನು ಹಾಳುಗೆಡವಿ ಎಂದು ಒತ್ತಾಯಿಸುತ್ತಿದೆ. ಈ ವಿಚಾರದಲ್ಲಿ ಬಂದ್‌ಗೆ ಬಿಜೆಪಿ ಕರೆ ನೀಡಿದ್ದು, ಆನಂತರ ನಿಲುವು ಬದಲಾಯಿಸಿದ್ದು, ನಂತರವೂ ಕೆಲವೆಡೆ ಒತ್ತಾಯಪೂರ್ವಕವಾಗಿ ಬಂದ್ ಅನ್ನು ಜನರ ಮೇಲೆ ಹೇರಿದ್ದು ನೋಡುತ್ತಿದ್ದರೆ ಬಿಜೆಪಿ ಚುನಾವಣಾ ಕಾಲದಲ್ಲಿ ತೋರಿದ ಅದೇ ಅಪ್ರಬುದ್ಧ ನಡವಳಿಕೆಯನ್ನು ಚುನಾವಣಾ ನಂತರವೂ ಮುಂದುವರಿಸುತ್ತಿರುವಂತಿದೆ. ಸರ್ಕಾರವೊಂದು ಮಾಡಲೇಬೇಕಾದ್ದನ್ನು

ಮತ್ತು ಮಾಡಲು ಸಾಧ್ಯವಿರುವುದನ್ನು ಯಾವುದೋ ಕುಂಟು ನೆಪ ಹೇಳಿ ಮಾಡದೆ ಇದ್ದಾಗ ಪ್ರತಿಪಕ್ಷವೊಂದು ತೀವ್ರವಾದ ಪ್ರತಿಭಟನಾ ಅಸ್ತ್ರವನ್ನು ಬಳಸಬಹುದು. ಅಂತಹ ಸಂದರ್ಭದಲ್ಲೂ ಬಂದ್‌ಗೆ ಕರೆ ನೀಡುವುದು ಬಾಲಿಶ ಪ್ರವೃತ್ತಿಯೇ ಆಗುತ್ತದೆ. ಸಾಲಮನ್ನಾ ಎನ್ನುವುದು ಸರ್ಕಾರವೊಂದು ಮಾಡಲೇಬೇಕಾದ ಕೆಲಸವೂ ಅಲ್ಲ, ಮಾಡಲು ಸಾಧ್ಯವಿದ್ದು ಅದನ್ನು ಈ ಸರ್ಕಾರ ಮಾಡುತ್ತಿಲ್ಲ ಎನ್ನುವ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ. ಜನತಾದಳದವರು ಯಾವುದೇ ಷರತ್ತುಗಳೇ ಇಲ್ಲದೆ ತತ್‌ಕ್ಷಣ ಸಾಲಮನ್ನಾ ಮಾಡಿಬಿಡುತ್ತೇವೆ ಎಂದು ಹೇಳುವುದರ ಮೂಲಕ ಎಡವಿದರೆ, ಬಿಜೆಪಿ ಹಾಗೆ ಮಾಡಿಯೇ ತೀರಬೇಕು ಎಂದು ಒತ್ತಾಯಿಸುವುದರ ಮೂಲಕ ಎಡವುತ್ತಿದೆ.

ಪ್ರತಿಕ್ರಿಯಿಸಿ (+)