ದೊಡ್ಡ ಕ್ಷೇತ್ರದಲ್ಲಿ ‘ದೊಡ್ಡ ಕುಳ’ಗಳ ಪೈಪೋಟಿ

7

ದೊಡ್ಡ ಕ್ಷೇತ್ರದಲ್ಲಿ ‘ದೊಡ್ಡ ಕುಳ’ಗಳ ಪೈಪೋಟಿ

Published:
Updated:
ದೊಡ್ಡ ಕ್ಷೇತ್ರದಲ್ಲಿ ‘ದೊಡ್ಡ ಕುಳ’ಗಳ ಪೈಪೋಟಿ

ಕಲಬುರ್ಗಿ: ವಿಧಾನ ಪರಿಷತ್‌ನ ಈಶಾನ್ಯ ಪದವೀಧರರ ಕ್ಷೇತ್ರ ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ವಿಸ್ತೀರ್ಣದಲ್ಲಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಕ್ಷೇತ್ರ ಇದು. ಹೀಗಾಗಿ ಪ್ರಮುಖ ಪಕ್ಷಗಳು ‘ದೊಡ್ಡ ಕುಳ’ಗಳಿಗೇ ಮಣೆ ಹಾಕಿವೆ.

ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಅವರು ಹುಮನಾಬಾದ್‌ನ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಇವರು ಬೀದರ್‌ ಜಿಲ್ಲೆ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ. ಬಿಜೆಪಿ ಹುರಿಯಾಳು ಕೆ.ಬಿ. ಶ್ರೀನಿವಾಸ್‌ ಅವರು ಹೊಸಪೇಟೆಯ ಗಣಿ ಉದ್ಯಮಿ. ಜೆಡಿಎಸ್‌ನ ಪ್ರತಾಪ್‌ ರೆಡ್ಡಿ ಅವರು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ರಿಯಲ್‌ ಎಸ್ಟೇಟ್ ಉದ್ಯಮಿ.

ಈ ಮೂವರು ‘ಬಲಾಢ್ಯ’ರ ಮಧ್ಯೆ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ, ಹೋರಾಟಗಾರ ರಾಯಚೂರಿನ ಡಾ.ರಜಾಕ್‌ ಉಸ್ತಾದ್‌ ಸಹ ಕಣದಲ್ಲಿದ್ದಾರೆ.

ಈ ಕ್ಷೇತ್ರ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನೂ ಒಳಗೊಂಡಿತ್ತು. ಹರಪನಹಳ್ಳಿಯನ್ನು ಈಗ ಬಳ್ಳಾರಿ ಜಿಲ್ಲೆಗೆ ಸೇರಿಸಲಾಗಿದೆ. ಒಟ್ಟು 41 ವಿಧಾನಸಭಾ ಕ್ಷೇತ್ರಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ವಿಧಾನಸಭಾ ಸದಸ್ಯರ ಬಲಾಬಲದಲ್ಲಿ ಕಾಂಗ್ರೆಸ್‌ 21, ಬಿಜೆಪಿ 16 ಹಾಗೂ ಜೆಡಿಎಸ್‌ 4 ಶಾಸಕರನ್ನು ಹೊಂದಿವೆ.

30 ವರ್ಷಗಳಿಂದ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಕಲಬುರ್ಗಿಯ ಡಾ.ಎಂ.ಆರ್‌.ತಂಗಾ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿದ್ದರು. ಆನಂತರ 2006ರಲ್ಲಿ ರಾಯಚೂರು ಜಿಲ್ಲೆಯ ಮನೋಹರ ಮಸ್ಕಿ, 2012ರಲ್ಲಿ ಕಲಬುರ್ಗಿಯ ಅಮರನಾಥ ಪಾಟೀಲ ಆಯ್ಕೆಯಾದರು. ಬಿಜೆಪಿಯು ಅಮರನಾಥ ಪಾಟೀಲರಿಗೆ ಮತ್ತೆ ಟಿಕೆಟ್‌ ನೀಡಿಲ್ಲ.

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇದ್ದರೂ ಸಹ ಇಲ್ಲಿ ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಎದುರಾಳಿಗಳು.

ಜೆಡಿಎಸ್‌ ಪರ ಬಸವರಾಜ ಹೊರಟ್ಟಿ, ಬಿಜೆಪಿ ಪರ ಶಾಸಕರಾದ ಬಿ.ಶ್ರೀರಾಮುಲು, ಸಿ.ಟಿ.ರವಿ ಪ್ರಚಾರ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಾಬಲ್ಯ ಮುಂದುವರೆಸಬೇಕು ಎಂಬ ಉಮೇದಿನಲ್ಲಿರುವ ಬಿಜೆಪಿ ರಘುನಾಥರಾವ್‌ ಮಲ್ಕಾಪುರೆ, ಎನ್.ರವಿಕುಮಾರ್‌ ಅವರನ್ನು ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ವೈಯಕ್ತಿಕ ನೆಲೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ನಾಲ್ಕೈದು ದಿನಗಳಿಂದ ವಾಟಾಳ್‌ ನಾಗರಾಜ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.

371 (ಜೆ) ಕಲಂ ಸಮರ್ಪಕ ಅನುಷ್ಠಾನ, ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿ ವಿಷಯಗಳು ಪ್ರಮುಖವಾಗಿ ಚರ್ಚೆಯಾಗುತ್ತಿವೆ. ಅಭ್ಯ

ರ್ಥಿಗಳು ಭರವಸೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ, ಈ ಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕಡಿಮೆ. ಬಳ್ಳಾರಿ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳೂ ಅಷ್ಟಕ್ಕಷ್ಟೇ. ಈ ವಿಷಯ ಅಷ್ಟಾಗಿ ಚರ್ಚೆಗೆ ಬರುತ್ತಿಲ್ಲ.

ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರದ ಅಬ್ಬರವೂ ಹೆಚ್ಚುತ್ತಿದೆ. ನಗರಗಳಲ್ಲಿ ಕೆಲ ಅಭ್ಯರ್ಥಿಗಳು ಬೃಹತ್‌ ಜಾಹೀರಾತು ಫಲಕಗಳನ್ನೂ ಹಾಕಿದ್ದಾರೆ. ಮತದಾರರ ಮೊಬೈಲ್‌ಗಳಿಗೆ ಪ್ರಮುಖ ಅಭ್ಯರ್ಥಿಗಳು ನಿತ್ಯವೂ ಎಸ್‌ಎಂಎಸ್‌ ಕಳಿಸುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಅಭ್ಯರ್ಥಿ ಅಷ್ಟೇ ಅಲ್ಲ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಧ್ವನಿ ಸಂದೇಶವನ್ನೂ ಕಳಿಸುತ್ತಿದೆ.

ಈ ಕ್ಷೇತ್ರ ರಚನೆಯಾಗಿದ್ದು 1988ರಲ್ಲಿ. ಅಲ್ಲಿಂದ ಮೂರು ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಜೈನ ಸಮುದಾಯದ ಡಾ.ಎಂ.ಆರ್‌.ತಂಗಾ ಅವರನ್ನು ಗೆಲ್ಲಿಸಿದ್ದ ಇಲ್ಲಿಯ ಮತದಾರರು ‘ಜಾತ್ಯತೀತತೆ’ ಮೆರೆದಿದ್ದರು. ಈಗ ‘ಜಾತಿ’ಯ ಮಾತು ಜೋರಾಗಿ ಕೇಳಿಬರುತ್ತಿದೆ.

‘ಜೆಡಿಎಸ್‌ ಅಭ್ಯರ್ಥಿ ಆಂಧ್ರ ರೆಡ್ಡಿ, ಬಿಜೆಪಿ ಅಭ್ಯರ್ಥಿ ವೀರಶೈವ ಲಿಂಗಾಯತ ರೆಡ್ಡಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಚುನಾವಣೆಯಲ್ಲಿ ‘ಕೊಡುಗೆ’ಗಳ ಜೊತೆಗೆ ಅಭ್ಯರ್ಥಿಗಳ ಜಾತಿಯೂ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮತದಾರರೊಬ್ಬರು ಹೇಳಿದರು.

‘ಒಟ್ಟು ಮತದಾರರಲ್ಲಿ ಕಲಬುರ್ಗಿ ಜಿಲ್ಲೆಯವರು ಶೇ 28ರಷ್ಟಿದ್ದಾರೆ. ಪಕ್ಷಗಳು ಈ ಜಿಲ್ಲೆಯವರಿಗೆ ಟಿಕೆಟ್‌ ನೀಡಿಲ್ಲ ಎಂಬ ಅಸಮಾಧಾನವೂ ಇಲ್ಲಿಯ ಮತದಾರರಿಗೆ ಇದೆ. ಜಾತಿ ಮತ್ತು ಒಳಒಪ್ಪಂದ ಫಲಿತಾಂಶವನ್ನು ನಿರ್ಧರಿಸಲಿವೆ’ ಎಂದು ಉಪನ್ಯಾಸಕರೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry