ಬಿಜೆಪಿ–ಜೆಡಿಯು ಮುಸುಕಿನ ಗುದ್ದಾಟ

7
ಪಟ್ನಾದಲ್ಲಿ ಗುರುವಾರ ಎನ್‌ಡಿಎ ಅಂಗಪಕ್ಷಗಳ ಸಭೆ

ಬಿಜೆಪಿ–ಜೆಡಿಯು ಮುಸುಕಿನ ಗುದ್ದಾಟ

Published:
Updated:
ಬಿಜೆಪಿ–ಜೆಡಿಯು ಮುಸುಕಿನ ಗುದ್ದಾಟ

ಪಟ್ನಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎ ನೇತೃತ್ವವನ್ನು ನಿತೀಶ್‌ ಕುಮಾರ್‌ ಅವರಿಗೇ ನೀಡಬೇಕು ಎಂದು ಜೆಡಿಯು ಆಗ್ರಹಿಸಿದೆ. ಅದರ ಬೆನ್ನಿಗೇ, ಎನ್‌ಡಿಎ ಮಿತ್ರಪಕ್ಷಗಳ ಸಭೆಯನ್ನು ಗುರುವಾರ (ಜೂನ್‌ 7) ಪಟ್ನಾದಲ್ಲಿ ಕರೆಯಲಾಗಿದೆ.

ಜೆಡಿಯು ಅಧ್ಯಕ್ಷರಾಗಿರುವ ನಿತೀಶ್‌ ಅವರು ತಮ್ಮ ಆಪ್ತರ ಜತೆ ಭಾನುವಾರ ನಾಲ್ಕು ತಾಸು ಸಮಾಲೋಚನೆ ನಡೆಸಿದ್ದಾರೆ.

‘ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎಯ ನೇತೃತ್ವವನ್ನು ನಿತೀಶ್‌ ಅವರೇ ವಹಿಸಿಕೊಳ್ಳಲಿದ್ದಾರೆ’ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿದ್ದಾರೆ.

ಉಪಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾದ ನಂತರ, ಜೆಡಿಯು ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗಿದೆ. ‘2014ರಲ್ಲಿದ್ದ ಮೋದಿ ಜಾದೂ ಈಗ ಇಲ್ಲ’ ಎಂಬುದು ಜೆಡಿಯುನ ನಿಲುವಾಗಿದೆ.

‘2014ರಲ್ಲಿ ಮೋದಿ ಅವರು ಏಕಾಂಗಿಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಅಧಿಕಾರಕ್ಕೆ ತಂದಿದ್ದಾರೆ. ನಂತರದ ನಾಲ್ಕು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಇತ್ತೀಚಿನ ಉಪಚುನಾವಣೆ ಫಲಿತಾಂಶಗಳು ಈ ವಾಸ್ತವಕ್ಕೆ ಹಿಡಿದ ಕನ್ನಡಿ’ ಎಂದು ಜೆಡಿಯುನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಸ್ಥಾನ ಹಂಚಿಕೆ ಸಂದರ್ಭದಲ್ಲಿ ದೊಡ್ಡ ಪಾಲು ಪಡೆಯುವುದು ನಿತೀಶ್‌ ಅವರ ಕಳವಳದ ಹಿಂದಿನ ನಿಜವಾದ ಕಾರಣ ಎಂದು ಬಿಜೆಪಿ ಹೇಳಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಮೈತ್ರಿ ಇತ್ತು. ಆಗ, ಜೆಡಿಯು 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ 15ರಲ್ಲಿ ಸ್ಪರ್ಧಿಸಿತ್ತು.

2014ರಲ್ಲಿ ಚಿತ್ರಣ ಸಂಪೂರ್ಣವಾಗಿ ಬದಲಾಗಿತ್ತು. ಬಿಜೆಪಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22ರಲ್ಲಿ ಗೆದ್ದಿತ್ತು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಏಳರಲ್ಲಿ ಸ್ಪರ್ಧಿಸಿ ಆರರಲ್ಲಿ ಗೆದ್ದರೆ, ಆರ್‌ಎಲ್‌ಎಸ್‌ಪಿ ಸ್ಪರ್ಧಿಸಿದ್ದ ಮೂರೂ ಕ್ಷೇತ್ರಗಳಲ್ಲಿಯೂ ಗೆದ್ದಿತ್ತು.

ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದ ಜೆಡಿಯು ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಎರಡರಲ್ಲಿ ಮಾತ್ರ ಗೆಲುವು ಕಂಡಿತ್ತು.

ಮುಂದಿನ ಚುನಾವಣೆಯಲ್ಲಿ ಜೆಡಿಯುಗೆ ಎಷ್ಟು ಸ್ಥಾನ ನೀಡಬೇಕು ಎಂಬ ಇಕ್ಕಟ್ಟು ಬಿಜೆಪಿಯ ಮುಂದೆ ಇದೆ. ‘ನಿತೀಶ್‌ ಅವರ ಜಾದೂ ಕೂಡ ಮುಗಿದಿದೆ. ಜೆಹನಾಬಾದ್‌ ಮತ್ತು ಜೋಕಿಹಾತ್‌ ಉಪಚುನಾವಣೆಗಳಲ್ಲಿ ಗೆಲ್ಲುವುದು ನಿತೀಶ್‌ ಅವರಿಗೆ ಸಾಧ್ಯವಾಗಿಲ್ಲ’ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry