ನೀಟ್‌ ಪರೀಕ್ಷೆ; ರಾಜ್ಯದ ಸಾಧಕರು

7

ನೀಟ್‌ ಪರೀಕ್ಷೆ; ರಾಜ್ಯದ ಸಾಧಕರು

Published:
Updated:
ನೀಟ್‌ ಪರೀಕ್ಷೆ; ರಾಜ್ಯದ ಸಾಧಕರು

ಬೆಂಗಳೂರು: ಸಿಇಟಿಯಲ್ಲಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದ ಶ್ರೀಧರ್‌ ದೊಡ್ಡಮನಿ ನೀಟ್‌ನಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.

‘ವೈದ್ಯಕೀಯ ಕ್ಷೇತ್ರ ಪ್ರವೇಶಿಸಬೇಕು ಎಂಬ ಕನಸಿನಿಂದ ನೀಟ್‌ ಪರೀಕ್ಷೆ ಬರೆದಿರಲಿಲ್ಲ. ಅನುಭವಕ್ಕಾಗಿ ಪರೀಕ್ಷೆ ತೆಗೆದುಕೊಂಡಿದ್ದೆ. ನಿರೀಕ್ಷೆಗೂ ಮೀರಿದ ರ‍್ಯಾಂಕಿಂಗ್‌ ಸಿಕ್ಕಿದೆ. ಇದು ನನ್ನ ಖುಷಿಯನ್ನು ದುಪ್ಪಟ್ಟುಗೊಳಿಸಿದೆ’ ಎಂದು ಎಕ್ಸಲೆಂಟ್‌ ಪಿಯು ವಿಜ್ಞಾನ ಕಾಲೇಜಿನ ಶ್ರೀಧರ್‌ ಖುಷಿ ವ್ಯಕ್ತಪಡಿಸಿದರು.

‘ನೀಟ್‌ಗಾಗಿ ವಿಶೇಷ ಯತ್ನ ನಡೆಸಿರಲಿಲ್ಲ. ಭೌತ ವಿಜ್ಞಾನ, ರಸಾಯನ ವಿಜ್ಞಾನವನ್ನು ಸಿಇಟಿಗಾಗಿಯೇ ಅಭ್ಯಾಸ ಮಾಡಿದ್ದೆ.  ಭೌತ ವಿಜ್ಞಾನದಲ್ಲಿ 180ಕ್ಕೆ 175, ರಸಾಯನ ವಿಜ್ಞಾನದಲ್ಲಿ 180ಕ್ಕೆ 160, ಜೀವ ವಿಜ್ಞಾನದಲ್ಲಿ 360ಕ್ಕೆ 320 ಅಂಕ ಗಳಿಸಿರುವೆ. ಜೀವ ವಿಜ್ಞಾನವನ್ನು ಆಸಕ್ತಿಯಿಂದ ಅಧ್ಯಯನ ನಡೆಸಿದ್ದರೆ ಇನ್ನಷ್ಟು ಉತ್ತಮ ರ‍್ಯಾಂಕಿಂಗ್‌ ದೊರಕುತ್ತಿತ್ತು’ ಎಂದರು.

‘ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದಿಲ್ಲ. ಸುರತ್ಕಲ್‌ ಎನ್‌ಐಟಿಕೆಯಲ್ಲಿ ಕಂಪ್ಯೂಟರ್‌ ವಿಭಾಗದ ಎಂಜಿನಿಯರಿಂಗ್‌ ಕೋರ್ಸ್‌ ಮಾಡುವೆ. ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭೌತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವೆ’ ಎಂದು ತಿಳಿಸಿದರು.

ವೈದ್ಯಕೀಯ ವೃತ್ತಿ ನನ್ನ ಕನಸು: ‘ಸಿಇಟಿಯಲ್ಲಿ ಬಿ.ಎಸ್ಸಿ (ಅಗ್ರಿ) 3ನೇ ರ‍್ಯಾಂಕ್ ಪಡೆದುಕೊಂಡಿದ್ದೆ ಆದರೆ ಚಿಕ್ಕವಯಸ್ಸಿನಿಂದ ನನಗೆ ವೈದ್ಯಳಾಗುವ ಕನಸು ಇದೆ. ವಿವಿಎಸ್‌ ಸರ್ದಾರ್ ಪಟೇಲ್ ಕಾಲೇಜಿನಲ್ಲಿ ಪಿಯುಸಿ ಓದಿದೆ. ಅಲ್ಲಿನ ಶಿಕ್ಷಕರು ಹಾಗೂ ಬೇಸ್‌ ಇನ್‌ಸ್ಟಿಟ್ಯೂಟ್ ಸಹಾಯದಿಂದ ಉತ್ತಮ ಅಭ್ಯಾಸ ಮಾಡಿದೆ. 500ರೊಳಗಿನ ರ‍್ಯಾಂಕ್‌ ನಿರೀಕ್ಷೆ ಇತ್ತು’ ಎಂದು ಮಹಿಮಾ ಕೃಷ್ಣ ಹೇಳಿದರು.

‘ಅಪ್ಪ ಸಾಫ್ಟ್‌ವೇರ್‌ ಎಂಜಿನಿಯರ್‌, ಅಮ್ಮ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ನಾನು ಎಂಬಿಬಿಎಸ್‌ ಮಾಡಬೇಕು ಅನ್ನುವುದು ಅವರ ಕನಸು ಕೂಡ ಹೌದು. ಮುಂದೆ ಯಾವ ವಿಷಯದಲ್ಲಿ ಪರಿಣತಿ ಪಡೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಿಲ್ಲ. ಒಳ್ಳೆಯ ಕಾಲೇಜು ಸಿಕ್ಕಿದರೆ ಅಲ್ಲಿ ನನಗೆ ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿಕೊಂಡು ಮುಂದುವರಿಯುತ್ತೇನೆ’ ಎಂದರು.

ನೇತ್ರ ತಜ್ಞನಾಗುವೆ: ‘ಅಪ್ಪ, ಅಮ್ಮ ಇಬ್ಬರೂ ನೇತ್ರ ತಜ್ಞರು. ನನಗೂ ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ. ಸಿಇಟಿಯಲ್ಲಿ ಪಶುವೈದ್ಯಕೀಯ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದೆ. ವೈದ್ಯನಾಗುವ ಕನಸಿನಿಂದ ನೀಟ್‌ ಪರೀಕ್ಷೆಯನ್ನೂ ಬರೆದೆ. 1000ದೊಳಗೆ ರ‍್ಯಾಂಕ್ ಸಿಗುವ ನಿರೀಕ್ಷೆ ಇತ್ತು. ಆದರೆ 342ನೇ ರ‍್ಯಾಂಕ್ ಸಿಕ್ಕಿದ್ದು ಖುಷಿಯಾಯಿತು’ ಎಂದು ಬೀದರ್‌ನ ವಿನೀತ್ ಹೇಳಿದ್ದಾರೆ.

‘ಶಾಹೀನ್ ಪಿ.ಯು ಕಾಲೇಜಿನಲ್ಲಿ ಪಿಯುಸಿ ಓದಿದೆ. ಶಾಲೆ ಹಾಗೂ ಮನೆಯಲ್ಲಿ ನನಗೆ ಉತ್ತಮ ಬೆಂಬಲವಿದೆ. ಇದರಿಂದ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry