ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳಾಂತರ’ದಿಂದ ಮರಗಳಿಗೆ ಮರುಜೀವ

ನೈರುತ್ಯ ರೈಲ್ವೆ ಇಲಾಖೆಯ ಪ್ರಾಯೋಗಿಕ ಯತ್ನಕ್ಕೆ ಭಾಗಶಃ ಯಶಸ್ಸು
Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು 2017ರ ಅಕ್ಟೋಬರ್‌ನಲ್ಲಿ ಸ್ಥಳಾಂತರ ಮಾಡಿದ್ದ ಮರಗಳು ನಿಧಾನಕ್ಕೆ ಚಿಗುರೊಡೆದು ನಳನಳಿಸುತ್ತಿವೆ.

ಕತ್ತರಿಸಿರುವ ಒಂದಿಷ್ಟು ಮರಗಳ ರೆಂಬೆಗಳ ಮೇಲೆ ಚಿಗುರು ಮೂಡಿದರೆ, ಇನ್ನೊಂದಿಷ್ಟು ಮರಗಳು ಆಗಲೇ ಹಸಿರು ಹೊದ್ದಿವೆ.

ಹುಬ್ಬಳ್ಳಿ– ಚಿಕ್ಕಜಾಜೂರು ನಡುವೆ ಜೋಡಿ ರೈಲ್ವೆ ಮಾರ್ಗ ನಿರ್ಮಿಸುವಾಗ, ರೈಲ್ವೆಯು 62 ಮರಗಳನ್ನು ಸ್ಥಳಾಂತರ ಮಾಡಿತ್ತು. ಆ ಪೈಕಿ 46 ಮರಗಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಪ್ರದೇಶದಲ್ಲಿ ಹಾಗೂ 16 ಮರಗಳನ್ನು ಹಾವೇರಿ ತಾಲ್ಲೂಕಿನ ಕರ್ಜಗಿ ರೈಲ್ವೆ ಪ್ರದೇಶದಲ್ಲಿ ನೆಡಲಾಗಿತ್ತು. ಇದೀಗ ಅವುಗಳಲ್ಲಿ ಶೇ 80ರಷ್ಟು ಮರಗಳು ಮತ್ತೆ ಚಿಗುರಿ, ಮರು ಜೀವ ಪಡೆದಿವೆ.

‘ಗುಲ್‌ಮೊಹರ್, ಬೇವು, ಹೊಂಗೆ ಸೇರಿದಂತೆ ಏಳು ಜಾತಿಯ ಮರಗಳನ್ನು ದೇವರಗುಡ್ಡ ರೈಲ್ವೆ ಯಾರ್ಡ್‌ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆ ಪೈಕಿ 38 ಮರಗಳು ಈಗಾಗಲೇ ಚಿಗುರಿವೆ. ಅದರಲ್ಲಿ ಎಂಟು ಬೇವಿನ ಮರಗಳು ಇನ್ನೂ ಚಿಗುರಿಲ್ಲ. ಆದರೆ, ಅವುಗಳ ಕಾಂಡ ಹಸಿಯಾಗಿದೆ. ಈ ಸಲದ ಮುಂಗಾರು ಮಳೆ ಸಮಯದಲ್ಲಿ ಅವು ಮರು ಜೀವ ಪಡೆಯುವ ವಿಶ್ವಾಸವಿದೆ’ ಎಂದು ಮರಗಳ ಸ್ಥಳಾಂತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೈಲ್ವೆ ಸಹಾಯಕ ಎಂಜಿನಿಯರ್‌ (ನಿರ್ಮಾಣ) ಎ. ಪದ್ಮನಾಭನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮರಗಳ ಸ್ಥಳಾಂತರ ಎಂಬುದು ನೈರುತ್ಯ ರೈಲ್ವೆ ಪಾಲಿಗೆ ಮೊದಲ ಪ್ರಯತ್ನ. ನಿರ್ಮಾಣ ವಿಭಾಗದ ಮುಖ್ಯ ಎಂಜಿನಿಯರ್ ಅಲೋಕ್ ತಿವಾರಿ ಹಾಗೂ ಉಪ ಮುಖ್ಯ ಎಂಜಿನಿಯರ್‌ ಶೆರ್ಫುದ್ದೀನ್‌ ಒತ್ತಾಸೆಯಲ್ಲಿ ಈ ಕೆಲಸ ನಡೆದಿತ್ತು ಎಂದು ಅವರು ವಿವರಿಸಿದರು.

ಸ್ಥಳಾಂತರ ಸವಾಲು: ‘ಮರಗಳ ಸ್ಥಳಾಂತರ ಸವಾಲಿನ ಕೆಲಸವಾಗಿತ್ತು. ದೇವರಗುಡ್ಡಕ್ಕೆ ಸ್ಥಳಾಂತರಿಸಲಾದ ಮರಗಳು 20– 25 ವರ್ಷ ವಯಸ್ಸಿನವು. ಅವುಗಳನ್ನು ಒಂದೇ ವಿಧಾನ, ಗೊಬ್ಬರ, ರಾಸಾಯನಿಕ ಪ್ರಕ್ರಿಯೆ ನಡೆಸಿ ಸ್ಥಳಾಂತರಿಸಲಾಗಿತ್ತು. ಆದರೆ, ಬೇವಿನ ಮರಗಳಿಗೆ ಒಂದಿಷ್ಟು ಹೆಚ್ಚುವರಿ ಕಾಳಜಿ ವಹಿಸಲಾಗಿತ್ತು. ಹೈದರಾಬಾದ್ ಮೂಲದ ಗ್ರೀನ್‌ ಮಾರ್ನಿಂಗ್‌ ಹಾರ್ಟಿಕಲ್ಚರ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ಮರಗಳನ್ನು ಸ್ಥಳಾಂತರ ಮಾಡಿತ್ತು’ ಎಂದು ಶೆರ್ಫುದ್ದೀನ್‌ ಹೇಳಿದರು.

‘ಖರ್ಚು ದೊಡ್ಡದೇನಲ್ಲ’: ‘ಪ್ರತಿ ಮರ ಸ್ಥಳಾಂತರಕ್ಕೆ ಅಂದಾಜು ₹ 20 ಸಾವಿರ ವೆಚ್ಚವಾಗಿದೆ. ಮರಗಳ ಗಾತ್ರ ಹಾಗೂ ಕೊಂಡೊಯ್ಯುವ ದೂರ ಅವಲಂಬಿಸಿ ವೆಚ್ಚದಲ್ಲಿ ವ್ಯತ್ಯಾಸವಾಗಿದೆ. ಈ ಮರಗಳು ಮತ್ತೆ ಚಿಗುರೊಡೆದು ಬದುಕಿದರೆ, ಪ್ರತಿ ಮರವು 10 ಜನರಿಗೆ ಆಗುವಷ್ಟು ಆಮ್ಲಜನಕ ಕೊಡಬಲ್ಲದು. ಒಂದು ಸಸಿ ನೆಟ್ಟು ಅಷ್ಟು ಆಮ್ಲಜನಕ ಪಡೆಯಲು ಮತ್ತೆ 15-20 ವರ್ಷ ಕಾಯಬೇಕು. ಹೀಗಾಗಿ ಈ ಮರಗಳಿಗೆ ಮಾಡಿದ ವೆಚ್ಚ ದೊಡ್ಡದೇನಲ್ಲ’ ಎಂಬುದು ಪದ್ಮನಾಭನ್‌ ಹೇಳಿದರು.

ಗದಗಿನಲ್ಲೂ ಯಶಸ್ವಿ...

ಮರಗಳ ಸ್ಥಳಾಂತರ ಗದಗಿನಲ್ಲೂ ಯಶ ಕಂಡಿದೆ. ಹುಬ್ಬಳ್ಳಿ– ಗದಗ ರಸ್ತೆ ವಿಸ್ತರಣೆ ವೇಳೆ, ಮರಗಳ ಮಾರಣ ಹೋಮ ತಪ್ಪಿಸಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಈ ಕ್ರಮ ವಹಿಸಿತ್ತು.

‘ವಿವಿಧ ಬಗೆಯ 453 ಮರಗಳನ್ನು ಗದಗಿನ ಭೀಷ್ಮಕೆರೆ ಸೇರಿದಂತೆ ಹಲವೆಡೆ ಬುಡ ಸಮೇತ ಸ್ಥಳಾಂತರಿಸಿ ನೆಡಲಾಗಿತ್ತು. ಅದರಲ್ಲಿ ಶೇ 90ರಷ್ಟು ಮರಗಳು ಬದುಕುಳಿದಿವೆ. ಆದರೆ, ಕೆಲ ಬೇವಿನ ಮರಗಳು ವಿಫಲವಾಗಿವೆ’ ಎಂದು ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಕ್ಷೀರಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT