ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್: ಕಿನ್ಯಾ ಎದುರು ಗೆದ್ದ ಭಾರತ

7
ಜಯದ ಕಾಣಿಕೆ ಕೊಟ್ಟ ಚೆಟ್ರಿ

ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್: ಕಿನ್ಯಾ ಎದುರು ಗೆದ್ದ ಭಾರತ

Published:
Updated:
ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್: ಕಿನ್ಯಾ ಎದುರು ಗೆದ್ದ ಭಾರತ

ಮುಂಬೈ : ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು ನೂರನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಸಾಧನೆಯನ್ನು ಸೋಮವಾರ ದಾಖಲಿಸಿದರು. ಎರಡು ಗೋಲು ಹೊಡೆಯುವ ಮೂಲಕ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡರು.

ಮುಂಬೈನ ಫುಟ್‌ಬಾಲ್ ಅರೇನಾದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಚೆಟ್ರಿ ಮತ್ತು ಲಾಲ್‌ಪೆಕ್ಲುವಾ ಅವರು ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಭಾರತ ತಂಡವು 3–0ಯಿಂದ ಕಿನ್ಯಾ ವಿರುದ್ಧ ಜಯಿಸಿತು.

ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮುಂದೆ ಕಿನ್ಯಾ ಆಟಗಾರರ ’ಬಿರುಸಿನ ಆಟ’ವನ್ನು ಚೆಟ್ರಿ ಬಳಗ ಮೆಟ್ಟಿನಿಂತಿತು. 65ನೇ ನಿಮಿಷದಲ್ಲಿ ಎದುರಾಳಿ ಆಟಗಾರ ಅಡ್ಡ ಬಂದು ಚೆಟ್ರಿ ಅವರನ್ನು ಕೆಡವಿದ್ದರು. ಅದಕ್ಕೆ ತಕ್ಕ ಮುಯ್ಯಿ ತೀರಿಸಿಕೊಂಡರು.

68ನೇ ನಿಮಿಷದಲ್ಲಿ  ಚೆಟ್ರಿ ಕಾಲ್ಚಳಕ ತೋರಿದರು. ಅವರು ಒದ್ದ ಚೆಂಡು ಮಿಂಚಿನ ವೇಗದಲ್ಲಿ ಗೋಲುಪೆಟ್ಟಿಗೆಯೊಳಗೆ ನುಗ್ಗಿತು. ಕೀನ್ಯಾ ಗೋಲ್‌ಕೀಪರ್ ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಅವರ ಕೈಗೆ  ಬಡಿದ ಚೆಂಡು ಸೀದಾ ಗೋಲುಪೆಟ್ಟಿಗೆಯೊಳಗೆ ನುಗ್ಗಿ ನೆಟ್‌ಗೆ ಅಪ್ಪಳಿಸಿತು. ಚೆಟ್ರಿಯನ್ನು ಸಹ ಆಟಗಾರರು ತಬ್ಬಿ ಮುದ್ದಾಡಿದರು. ಆದರೆ ‘ಕೂಲ್‌ ಕ್ಯಾಪ್ಟನ್’ ಚೆಟ್ರಿ ಮಾತ್ರ ಹೆಚ್ಚು ಸಂಭ್ರಮಿಸಲಿಲ್ಲ. ಆದರೆ, ಪ್ರೇಕ್ಷಕರತ್ತ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

ಅದಾಗಿ ಮೂರು ನಿಮಿಷಗಳ ನಂತರ ಜೆಜೆ ಲಾಲ್‌ಪೆಕ್ಲುವಾ ಕೂಡ ಮಿಂಚಿದರು. ಹಾಫ್‌ ವಾಲಿ ಕಿಕ್ ಮಾಡಿದ ಅವರ  ಆಟಕ್ಕೆ ಎದುರಾಳಿ ತಂಡದ ರಕ್ಷಣಾ ಆಟಗಾರರು ತಬ್ಬಿಬ್ಬಾದರು. ಭಾರತದ ಅಭಿಮಾನಿಗಳಲ್ಲಿ ಸಂಭ್ರಮ ಮೇರೆ ಮೀರಿತು.  72ನೇ ನಿಮಿಷದಲ್ಲಿ ಫಾರ್ವರ್ಡ್‌ ಆಟಗಾರ ಸಂದೇಶ್ ಜಿಂಗಾನ್ ಗಾಯಗೊಂಡು ಕೆಲಹೊತ್ತು ಹೊರನಡೆದರು.

97ನೇ ನಿಮಿಷದಲ್ಲಿ ಮತ್ತೆ ಗರ್ಜಿಸಿದ ಚೆಟ್ರಿ ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ತಮ್ಮ ಕರೆಗೆ ಓಗೊಟ್ಟು ಬಂದಿದ್ದ ಫುಟ್‌ಬಾಲ್ ಪ್ರೇಮಿಗಳಿಗೆ ಗೆಲುವಿನ ಕಾಣಿಕೆ ನೀಡಿದರು.

**

ನಾಯಕನ ಮನವಿ: ಕ್ರೀಡಾಂಗಣ ಭರ್ತಿ

‘ಫುಟ್‌ಬಾಲ್‌ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬನ್ನಿ’ ಎಂದು ನಾಯಕ ಸುನಿಲ್‌ ಚೆಟ್ರಿ ಅವರು ಮನವಿ ಮಾಡಿದ ನಂತರ ಭಾರತ–ಕೀನ್ಯಾ ನಡುವಣ ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟಗೊಂಡಿದ್ದವು.

‘ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಕೀನ್ಯಾ ವಿರುದ್ಧದ ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಂದ್ಯ ವೀಕ್ಷಣೆಗೆ ಉತ್ಸಾಹ ತೋರಿದ್ದಾರೆ’ ಎಂದು ಮುಂಬೈ ಫುಟ್‌ಬಾಲ್‌ ಅರೆನಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶನಿವಾರ ತಾವು ಮಾತನಾಡಿದ್ದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಚೆಟ್ರಿ ‘ಯುರೋಪಿನ ಪ್ರತಿಷ್ಠಿತ ಫುಟ್‌ಬಾಲ್‌ ಕ್ಲಬ್‌ಗಳನ್ನು ಬೆಂಬಲಿಸುವ ಭಾರತದ ಅಭಿಮಾನಿಗಳಿಗೆ ನನ್ನದೊಂದು ಮನವಿ. ನಿಮ್ಮ ಅನಿಸಿಕೆಯಂತೆ ಹೇಳುವುದಾದರೆ, ಯುರೋಪಿನ ಕ್ಲಬ್‌ಗಳಿಗೆ ಹೋಲಿಸಿದರೆ ನಮ್ಮ ಗುಣಮಟ್ಟ ಕಡಿಮೆ ಇರಬಹುದು. ಆದರೆ, ನಿಮಗೆ ಎಂದೂ ನಿರಾಸೆ ತರಿಸುವುದಿಲ್ಲ. ನಮ್ಮ ಸಾಮರ್ಥ್ಯ ಮೀರಿ ಆಡುತ್ತೇವೆ. ನಿಮ್ಮ ಬೆಂಬಲ ನಮಗೆ ಅಗತ್ಯ. ಆದ್ದರಿಂದ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಿ’ ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry