ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಪ್ರಯಾಣ ದರ ಏರಿಕೆಗೆ ಪ್ರಸ್ತಾವ: ಸಿದ್ಧತೆ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡೀಸೆಲ್‌ ಬೆಲೆ ಹೆಚ್ಚಳದಿಂದ ಉಂಟಾದ ಹೊರೆ ತಗ್ಗಿಸಲು ಪ್ರಯಾಣ ದರ ಏರಿಸುವ ಸಂಬಂಧ ಸರ್ಕಾರದ ಒಪ್ಪಿಗೆ ಪಡೆಯಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ.

‘ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹ 70ರ ಗಡಿ ದಾಟಿದೆ. ಪ್ರತಿ ದಿನ ₹ 70 ಲಕ್ಷದಷ್ಟು ಡೀಸೆಲ್‌ ವೆಚ್ಚಕ್ಕೆ ಹೋಗುತ್ತಿದೆ. ಸಗಟು ಖರೀದಿ ಹಿನ್ನೆಲೆಯಲ್ಲಿ ಸಾರಿಗೆ ನಿಗಮವು ಪ್ರತಿ ಲೀಟರ್‌ಗೆ ₹2ರ ರಿಯಾಯಿತಿ ಪಡೆಯುತ್ತಿದೆ. ಹಾಗಿದ್ದರೂ ನಿರಂತರವಾಗಿ ಬೆಲೆ ಏರುತ್ತಿರುವುದರಿಂದ ಬಸ್‌ಗಳ ನಿರ್ವಹಣೆ ಕಷ್ಟವಾಗಿದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಿಬ್ಬಂದಿಗೆ ಪರಿಷ್ಕೃತ ವೇತನ ಪಾವತಿ, ತುಟ್ಟಿಭತ್ಯೆಯಲ್ಲಿ ಶೇ 26ರ ಹೆಚ್ಚಳ ಎಲ್ಲವೂ ಸೇರಿ ಸುಮಾರು ₹ 100 ಕೋಟಿಯಷ್ಟು ಹೊರೆ ಇದೆ. ಮುಂದೆ ವಾರ್ಷಿಕ ವೆಚ್ಚವನ್ನು ₹ 370 ಕೋಟಿಯಷ್ಟು ಹೆಚ್ಚಿಸಬೇಕಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತೀರಿ ಎಂಬ ಪ್ರಶ್ನೆಗೆ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಇದು ನಾವಷ್ಟೇ ಕೈಗೊಳ್ಳುವ ನಿರ್ಧಾರ ಅಲ್ಲ. ಸಾರಿಗೆ ಸಚಿವರಾಗಿ ಬರುವವರು ಅಧಿಕಾರ ವಹಿಸಿಕೊಂಡ ಬಳಿಕ ಈ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು. ಕಳೆದ ವರ್ಷ ನಿಗಮವು ₹ 177 ಕೋಟಿ ನಷ್ಟ ಅನುಭವಿಸಿ ಇತ್ತೀಚೆಗಷ್ಟೇ ಚೇತರಿಸಿಕೊಂಡಿತ್ತು. ಈಗ ಆಗುತ್ತಿರುವ ನಷ್ಟ ತಡೆಗಟ್ಟಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಕೆಎಸ್‌ಆರ್‌ಟಿಸಿ ಮಾಡುವ ದರ ಹೆಚ್ಚಳ ವಾಯವ್ಯ ಕರ್ನಾಟಕ ಸಾರಿಗೆ, ಈಶಾನ್ಯ ಸಾರಿಗೆ ನಿಗಮಗಳಿಗೂ ಅನ್ವಯವಾಗಲಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಪ್ರತ್ಯೇಕವಾದ ಪ್ರಸ್ತಾವದೊಂದಿಗೆ ಸರ್ಕಾರದ ಮುಂದೆ ಬರಲಿದೆ.

‘ವೆಚ್ಚ ಹೆಚ್ಚಳವಾದ ಕುರಿತು ಲೆಕ್ಕಾಚಾರ ಹಾಕುತ್ತಿದ್ದೇವೆ. ಡೀಸೆಲ್‌ ದರ ಇದೇ ರೀತಿ ಏರುತ್ತಾ ಹೋದರೆ ನಾವು ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ.

– ಎಸ್‌.ಆರ್‌.ಉಮಾಶಂಕರ್‌, ಎಂ.ಡಿ, ಕೆಎಸ್‌ಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT