ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಗೆ ಹೆಂಗಸರು ಹೋಗಬಾರದು ಎನ್ನುವ ನಿಷೇಧ ನಿಜಕ್ಕೂ ಪ್ರಾಚೀನವೇ?

ಸರಣಿ ಟ್ವಿಟ್‌ನಲ್ಲಿ ಖ್ಯಾತ ಮಲಯಾಳಂ ಲೇಖಕ ಮಾಧವನ್ ಪ್ರಶ್ನೆ
Last Updated 30 ಸೆಪ್ಟೆಂಬರ್ 2018, 8:42 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲ ವಯಸ್ಸಿನ ಮಹಿಳೆಯರೂ ಶಬರಿಮಲೆಗೆ ಹೋಗಬಹುದು’ ಎನ್ನುವ ಸುಪ್ರೀಂಕೋರ್ಟ್ ತೀರ್ಪು ಜನರಲ್ಲಿ ಚರ್ಚೆ ಹುಟ್ಟುಹಾಕಿದೆ. ಇದರ ಜೊತೆಜೊತೆಗೆ ಭಿನ್ನತೀರ್ಪು ಓದಿದ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ವ್ಯಕ್ತಪಡಿಸಿರುವ ವಿಚಾರಗಳನ್ನು ಕೆಲವರು ಹೊಸ ದೃಷ್ಟಿಕೋನ ಮತ್ತು ಇತಿಹಾಸದ ಬೆಳಕಿನಲ್ಲಿ ವ್ಯಾಖ್ಯಾನಿಸಲು ಯತ್ನಿಸುತ್ತಿದ್ದಾರೆ.

‘ಶಬರಿಮಲೆಗೆ 10ರಿಂದ 50 ವರ್ಷದೊಳಗಿರುವ ಹೆಂಗಸರು ಹೋಗಬಾರದು’ ಎನ್ನುವ ನಿರ್ಬಂಧದ ಮೂಲವನ್ನೇ ಕೆದಕಲು ಯತ್ನಿಸಿದ್ದಾರೆ ಖ್ಯಾತ ಮಲಯಾಳಂ ಲೇಖಕ ಎನ್‌.ಎಸ್.ಮಾಧವನ್. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು 1972ಕ್ಕೂ ಮೊದಲು ಇದ್ದ ಸಂಪ್ರದಾಯಗಳು, 1986ರ ಸಿನಿಮಾ ಚಿತ್ರೀಕರಣ ಪ್ರಸಂಗ, 1990ರಲ್ಲಿ ಹೈಕೋರ್ಟ್‌ಗೆ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಪ್ರಸ್ತಾಪಿಸಿದ್ದಾರೆ.

ಅವರ ಸರಣಿ ಟ್ವಿಟ್‌ಗಳ ಕನ್ನಡಾನುವಾದ ಇಲ್ಲಿದೆ...

‘ಶಬರಿಮಲೆಗೆ ಮಹಿಳೆಯರು ಹೋಗಬಾರದು ಎನ್ನುವ ನಿಷೇಧ ಎಷ್ಟು ವರ್ಷ ಹಳೆಯದು? ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಿದ್ದು 1972ರಲ್ಲಿ. ಕಾರಣ ಕೆಲ ಪುರುಷ ಭಕ್ತರಿಗೆ ಮಹಿಳೆಯರು ಬರುವುದು ತಪ್ಪಾಗಿ ಕಂಡಿತು. 1972ಕ್ಕೂ ಮೊದಲು ಮಹಿಳೆಯರು ಮುಕ್ತವಾಗಿ ಶಬರಿಮಲೆಗೆ ಹೋಗುತ್ತಿದ್ದರು, ಪೂಜೆ ಸಲ್ಲಿಸುತ್ತಿದ್ದರು. ರಾಷ್ಟ್ರಪತಿ ಭೇಟಿಗಾಗಿ ಶಬರಿಮಲೆಗೆ ರಸ್ತೆ ನಿರ್ಮಾಣವಾದ ನಂತರ ಭೇಟಿ ನೀಡುತ್ತಿದ್ದ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿತ್ತು.

‘ಇದೇನು ಅಂಥ ಉತ್ತಮ ತೀರ್ಪು ಎಂದು ನನಗೆ ಅನಿಸುತ್ತಿಲ್ಲ. 1986ರಲ್ಲಿ ತಮಿಳು ಸಿನಿಮಾವೊಂದರ ಚಿತ್ರೀಕರಣ ಶಬರಿಮಲೆಯಲ್ಲಿ ನಡೆಯಿತು. ಈ ಸಿನಿಮಾದಲ್ಲಿ ನಟಿಯೊಬ್ಬರು ದೇಗುಲದ 18 ಮೆಟ್ಟಿಲುಗಳ ಮೇಲೆ ಡಾನ್ಸ್ ಮಾಡುವ ದೃಶ್ಯವಿದೆ. ಚಿತ್ರೀಕರಣದ ಹಕ್ಕಿಗಾಗಿ ದೇವಸ್ವಂ ಮಂಡಳಿಯು ₹7500 ಶುಲ್ಕ ಪಡೆದಿತ್ತು. 1990ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ನಂತರ ಕೇರಳ ಹೈಕೋರ್ಟ್ ಮಹಿಳೆಯರಿಗೆ ದೇಗುಲ ಪ್ರವೇಶವಿಲ್ಲ ಎಂದು ತೀರ್ಪು ನೀಡಿತು.

‘1991ರ ತನ್ನ ತೀರ್ಪಿನಲ್ಲಿ ಕೇರಳ ಹೈಕೋರ್ಟ್ ತಿರುವಾಂಕೂರು ರಾಣಿಯು 1939ರಲ್ಲಿ ಶಬರಿಮಲೆಗೆ ಭೇಟಿ ನೀಡಿದ್ದ ವಿಚಾರ ಪ್ರಸ್ತಾಪಿಸಿದೆ. ಚೋರೂಣುಆಚರಣೆ (ಅನ್ನಪ್ರಾಶನ) ಸಂದರ್ಭದಲ್ಲಿಯೂ ಮಹಿಳೆಯರು ಉಪಸ್ಥಿತರಿರುತ್ತಿದ್ದರು ಎಂದು ಹೈಕೋರ್ಟ್ ಹೇಳುತ್ತೆ. ಆದರೆ ಬುದ್ಧಿವಂತ ಅರ್ಚಕರು ದೇವರವಿಗ್ರಹ ಮತ್ತು ಚೂರೂಣು ನಡೆಯುವ ಸ್ಥಳದ ಮಧ್ಯೆ ಧ್ವಜಸ್ತಂಭ ಪ್ರತಿಷ್ಠಾಪಿಸುವಮೂಲಕ ಇದಕ್ಕೆ ತಡೆಯೊಡ್ಡಿದರು.

‘ತೀರ್ಪಿನಲ್ಲಿ ಧಾರ್ಮಿಕ ನಂಬುಗೆಗಳ ಕುರಿತು ಪ್ರಸ್ತಾಪಿಸಿದ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಒಂದು ವಿಷಯ ಮರೆತುಬಿಟ್ಟರು ಎನಿಸುತ್ತೆ. ಅಧೀನ ನ್ಯಾಯಾಲಯವೊಂದು ನೀಡಿದ ತೀರ್ಪನ್ನು ಮೇಲಿನ ನ್ಯಾಯಾಲಯ ರದ್ದುಪಡಿಸಬಹುದು. ಆದರೆ ಕೆಲವು ವಿಚಾರಗಳಲ್ಲಿ ಸಂಪ್ರದಾಯ ಲೆಕ್ಕಕ್ಕೆ ಇರುವುದಿಲ್ಲ. ಈ ಉದಾಹರಣೆ ಗಮನಿಸಿ.

‘ದೇಗುಲಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಹಕ್ಕನ್ನು ಬ್ರಾಹ್ಮಣ ಅರ್ಚಕ ಕುಟುಂಬ ಚಲಾಯಿಸುತ್ತದೆ. ಇದೇ ರೀತಿ ದೇಗುಲದೊಂದಿಗೆ ಈಳವ ಕುಟುಂಬವೊಂದಕ್ಕೂ ಸಂಬಂಧವಿತ್ತು. ಅಯ್ಯಪ್ಪ ಸಮರಕಲೆಯನ್ನು ಈ ಕುಟುಂಬದಿಂದ ಕಲಿತ ಎಂದು ಹೇಳಲಾಗುತ್ತಿತ್ತು.

‘ಈ ಕುಟುಂಬಕ್ಕೆ ವೆಡಿ ವಳಿಪ್ಪಾಡು (ಸಶಸ್ತ್ರ ಗೌರವ) ಸಲ್ಲಿಸುವ ಏಕಸ್ವಾಮ್ಯ ಹಕ್ಕು ಇತ್ತು. ಆದರೆ ಟಿಡಿಬಿ (ತಿರುವಾಂಕುರ್ ದೇವಸ್ವಾಂ ಮಂಡಳಿ) ಈ ಕುಟುಂಬದಿಂದ ಹಕ್ಕು ಕಿತ್ತುಕೊಂಡು, ಸಾರ್ವಜನಿಕ ಹರಾಜು ಪ್ರಕ್ರಿಯೆ ಜಾರಿ ಮಾಡಿತು. ಗಮನಿಸಿ, ಇದು ಕೇವಲ ಲಿಂಗತಾರತಮ್ಯ ಮಾತ್ರವೇ ಅಲ್ಲ. ಅದಕ್ಕೂ ಮೀರಿದ ಸಾಕಷ್ಟು ವಿಷಯಗಳು ಇದರಲ್ಲಿವೆ.

‘ಶಬರಿಮಲೆಯಲ್ಲಿರುವ ಮತ್ತೊಂದು ಪುರಾತನ ಸಂಪ್ರದಾಯ ರಾತ್ರಿ 10.55ಕ್ಕೆ ‘ಹರಿವರಾಸನಮ್ ಹಾಡುವುದು’. ಈ ಸಂಪ್ರದಾಯ ಆರಂಭವಾಗಿದ್ದು 1955ರಲ್ಲಿ. ಸಂಗೀತ ನಿರ್ದೇಶಕ ದೇವರಾಜನ್ ಮಾಸ್ಟರ್ ಈ ಹಾಡಿಗೆ ಸ್ವರ ಸಂಯೋಜಿಸಿದರು. ಈಗ ಇದೂ ಪುರಾತನ ಸಂಪ್ರದಾಯ ಎನಿಸಿಕೊಂಡಿದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT