ಸರ್ಕಾರವನ್ನು ದೇವರೇ ಕಾಪಾಡಬೇಕು: ಹೈಕೋರ್ಟ್‌

7
ಅಧಿಕಾರಿ ಹೇಳಿಕೆಗೆ ಹೈಕೋರ್ಟ್‌ ಅತೃಪ್ತಿ

ಸರ್ಕಾರವನ್ನು ದೇವರೇ ಕಾಪಾಡಬೇಕು: ಹೈಕೋರ್ಟ್‌

Published:
Updated:
ಸರ್ಕಾರವನ್ನು ದೇವರೇ ಕಾಪಾಡಬೇಕು: ಹೈಕೋರ್ಟ್‌

ಬೆಂಗಳೂರು: ‘ಕೋರ್ಟ್ ಆದೇಶ ಪಾಲಿಸಲು ಆಗದು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯೊಬ್ಬರು ನ್ಯಾಯಪೀಠದ ಎದುರು ಅಸಹಾಯಕತೆಯಿಂದ ಕೈಚೆಲ್ಲುತ್ತಾರೆ ಎಂದರೆ ಸರ್ಕಾರವನ್ನು ದೇವರೇ ಕಾಪಾಡಬೇಕು’ ಎಂದು ಹೈಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ.

ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಡಿ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಯೊಬ್ಬರಿಗೆ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ನೀಡಲು ಹೈಕೋರ್ಟ್ ಈ ಹಿಂದೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಪ್ರಕರಣದ ಸೋಮವಾರ ಮತ್ತೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಹಾಜರಿದ್ದ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯೊಬ್ಬರು, ‘ಆದೇಶ ಪಾಲಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿರಲಿಲ್ಲ. ಹೀಗಾಗಿ ನಾವೇನು ಮಾಡಲಾಗದು’ ಎಂದು ನ್ಯಾಯಮೂರ್ತಿ ಎಚ್.ಜಿ.ರಮೇಶ್ ನೇತೃತ್ವದ ವಿಭಾಗೀಯ ಪೀಠಕ್ಕೆ ಉತ್ತರಿಸಿದ್ದರು. ವಿಚಾರಣೆ ನಂತರ ಪ್ರಕರಣವನ್ನು ಮಂಗಳವಾರಕ್ಕೆ (ಜೂ.5) ಮುಂದೂಡಲಾಯಿತು.

ಮಧ್ಯಾಹ್ನದ ಕಲಾಪದಲ್ಲಿ ಇದೇ ಮಾದರಿಯ ಮತ್ತೊಂದು ಅರ್ಜಿ ಇದೇ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆಗ ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರಿಗೆ, ‘ಅಲ್ಲಾ ವಕೀಲರೇ, ನೀವೇನೋ ಆದೇಶಕ್ಕಾಗಿ ಕೋರ್ಟ್‌ಗೆ ಮನವಿ ಮಾಡುತ್ತೀರಿ. ಆದರೆ, ಬೆಳಿಗ್ಗೆ ತಾನೆ ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಹೆಚ್ಚುವರಿ ಕಾರ್ಯದರ್ಶಿಯೊಬ್ಬರು ಕೋರ್ಟ್ ಹೊರಡಿಸಿದ ಆದೇಶ ಪಾಲಿಸಲಾಗದು ಎಂದು ಕೈ ಚೆಲ್ಲಿದರು. ಹೀಗಿರುವಾಗ ಕೋರ್ಟ್ ಯಾವ ಆದೇಶ ಹೊರಡಿಸಿದರೆ ಏನು ಪ್ರಯೋಜನ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಲ್ಲವೂ ಕಾನೂನಿನ ಪ್ರಕಾರವೇ ನಡೆಯಬೇಕು ಎಂದು ಹೇಳುವಾಗ, ಇದು ಸರ್ಕಾರದ ಆಡಳಿತ ವೈಖರಿಯ ಪ್ರತಿಬಿಂಬ. ಈ ರೀತಿಯ ಅಧಿಕಾರಿಗಳು ನಮ್ಮ ಕಾನೂನುಗಳಿಗೆ ಅಪಾಯಕಾರಿ’ ಎಂದು ಆಕ್ರೋಶ ಹೊರ ಹಾಕಿದರು.

‘ಇಂತಹ ಅಧಿಕಾರಿಗೆ ಸರ್ಕಾರಿ ವಕೀಲರೂ ಸಲಹೆ ಕೊಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ ರಮೇಶ್‌, ‘ಈ ಸಂಗತಿಯನ್ನು ಅಡ್ವೊಕೇಟ್‌ ಜನರಲ್ ಗಮನಕ್ಕೆ ತರಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry