ಮುಂದಾಲೋಚನೆ ಇಲ್ಲದ ಬಿಆರ್‌ಟಿಎಸ್‌ ಜನರಿಗೆ ಶಾಪ

7
ಧಾರವಾಡ: ಮಳೆ ನೀರಿನಿಂದ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ ಆಕ್ರೋಶ

ಮುಂದಾಲೋಚನೆ ಇಲ್ಲದ ಬಿಆರ್‌ಟಿಎಸ್‌ ಜನರಿಗೆ ಶಾಪ

Published:
Updated:

ಧಾರವಾಡ: ‘ಯಾವುದೇ ಮುಂದಾಲೋಚನೆ ಇಲ್ಲದೆ ರೂಪಗೊಂಡಿರುವ ಬಿಆರ್‌ಟಿಎಸ್‌ ಯೋಜನೆ ಸಾರ್ವಜನಿಕರಿಗೆ ಒಂದು ಶಾಪವಾಗಿದೆ’ ಎಂದು ಶಾಸಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.

ಬಿಆರ್‌ಟಿಎಸ್‌ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ಪತ್ರಿಕೆಗಳಲ್ಲಿ ವರದಿಯಾದ ಬೆನ್ನಲ್ಲೇ, ಅರವಿಂದ ಬೆಲ್ಲದ ಸೋಮವಾರ ಆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಅಹಮದಾಬಾದ್‌ನ ‘ಸೆಟ್‌’ ಎಂಬ ಕಂಪನಿ ಯೋಜನೆಯ ನೀಲನಕ್ಷೆ ತಯಾರಿಸಿದೆ. ಯಾವುದೇ ರೀತಿಯ ಸರ್ವೆ ಮಾಡದೆ, ತಯಾರಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದರು.

‘ಧಾರವಾಡ ಏಳು ಗುಡ್ಡಗಳ ಹಾಗೂ ಏಳು ಕೆರೆಯುಳ್ಳ ಸುಂದರ ಊರು. ಇಲ್ಲಿನ ಎತ್ತರದ ಪ್ರದೇಶದಿಂದ ಹರಿದು ಬರುವ ನೀರು ನಿರ್ದಿಷ್ಟ ಕೆರೆಗೆ ಸೇರುತ್ತದೆ. ಇದನ್ನು ಅಧ್ಯಯನ ಮಾಡದೇ ಯೋಜನೆ ರೂಪಿಸಿದ್ದಾರೆ. ಹಾಗಾಗಿ, ನೀರು ಸರಾಗವಾಗಿ ಹರಿಯದೆ ಸಾರ್ವಜನಿಕ ಪ್ರದೇಶಗಳಿಗೆ ನುಗ್ಗುತ್ತಿದೆ. ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.

‘ಸಾರ್ವಜನಿಕರ ಸಮಸ್ಯೆ ಹಾಗೂ ನೀಲನಕ್ಷೆ ಇಲ್ಲದೆ ಅಧಿಕಾರಿಗಳು ಬಿಆರ್‌ಟಿಎಸ್‌ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಈ ಯೋಜನೆಯಲ್ಲಿ ನೂರೆಂಟು ಸಮಸ್ಯೆಗಳಿವೆ. ಬಿಆರ್‌ಟಿಎಸ್ ಅಧಿಕಾರಿಗಳು ಯೋಜನಾಬದ್ಧವಾಗಿ ಕೆಲಸ ಮಾಡುವುದನ್ನು ಬಿಟ್ಟು ಗೌಂಡಿಗಳಂತೆ ಕೆಲಸ ಮಾಡುತ್ತಿದ್ದಾರೆ. ಯೋಜನೆ ಆರಂಭಗೊಂಡು ಆರು ವರ್ಷಗಳು ಉರುಳಿದರೂ ಈವರೆಗೂ ಯೋಜನೆಯ ನೀಲ ನಕ್ಷೆ ತೋರಿಸಿಲ್ಲ. ಈ ಯೋಜನೆಯನ್ನು ದೇವರೇ ಕಾಪಾಡಬೇಕು’ ಎಂದರು.

‘ಮಳೆಯಿಂದ ಇಷ್ಟೊಂದು ಪ್ರಮಾಣದಲ್ಲಿ ಹಾನಿಯಾಗಿದ್ದರೂ ಅಧಿಕಾರಿಗಳಿಗೆ ಜನರ ಕುರಿತು ಕಳಕಳಿಯೇ ಇಲ್ಲ. ಜವಾಬ್ದಾರಿ ಮರೆತು ಅವೈಜ್ಞಾನಿಕ ನೀಲನಕ್ಷೆ ತಯಾರಿಸಿದ ಎಂಜಿನಿಯರ್‌ಗಳು ಹಾಗೂ ಅದನ್ನು ಸ್ವೀಕರಿಸಿದ ಬಿಆರ್‌ಟಿಎಸ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು’ ಎಂದು ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.

‘ಮಳೆಯಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರೂ ಅಧಿಕಾರಿಗಳು ಉತ್ತರಿಸಿಲ್ಲ. ಸಮಸ್ಯೆ ಎದುರಿಸುತ್ತಿರುವ ಸ್ಥಳಗಳಿಗೂ ಭೇಟಿ ನೀಡಿಲ್ಲ. ಬಿಆರ್‌ಟಿಎಸ್ ಅಧಿಕಾರಿಗಳ ಸಭೆ ನಡೆಸಿ ಅವರಿಂದ ಲಿಖಿತ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮಕ್ಕೆ ಸರ್ಕರಕ್ಕೆ ಶಿಫಾರಸು ಮಾಡುತ್ತೇನೆ’ ಎಂದರು.

ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry