6
ಸೊಳ್ಳೆ, ನೊಣ, ಹುಳುಗಳ ಕಾಟ; ಮನೆ, ಅಂಗಡಿ ಬಾಗಿಲಿಗೆ ಹರಿದು ಬರುವ ಕೊಳಕು ನೀರು

ಮರೀಚಿಕೆಯಾದ ಘನತ್ಯಾಜ್ಯ ನಿರ್ವಹಣೆ

Published:
Updated:
ಮರೀಚಿಕೆಯಾದ ಘನತ್ಯಾಜ್ಯ ನಿರ್ವಹಣೆ

ಹುಬ್ಬಳ್ಳಿ: ಆ ರಸ್ತೆಯಲ್ಲಿ ಸಂಜೆ ಹೊರಟರೆ ಕಣ್ಣೆದುರಿಗೆ ಬರುವ ವ್ಯಕ್ತಿ ಮತ್ತು ವಾಹನ ಕಾಣದಂತೆ ದಟ್ಟ ಹೊಗೆ ಆವರಿಸಿಕೊಳ್ಳುತ್ತದೆ. ರಾತ್ರಿಯಾದರೆ ವಿಪರೀತ ಸೊಳ್ಳೆ, ನೋಣ ಹಾಗೂ ಹುಳುಗಳ ಕಾಟ. ಮಳೆ ಬಂದರೆ, ಸುತ್ತಮುತ್ತ ವಾಸಿಸುವವರ ಮನೆ ಮತ್ತು ಅಂಗಡಿಗಳ ಬಾಗಿಲಿಗೆ ಕೊಳಕು ನೀರು ಹರಿದು ಬರುತ್ತದೆ. ಮೂಗು ಹಿಡಿದುಕೊಳ್ಳದೆ ಆ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸವಾಲು...

ಅಂದಹಾಗೆ, ಇದು ಕಾರವಾರ ರಸ್ತೆಯ ಅಯೋಧ್ಯ ಗ್ರಾಮದ ಬಳಿ ಇರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದ ಸ್ಥಿತಿ. ಅವಳಿನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ನೂರಾರು ಟನ್ ತ್ಯಾಜ್ಯವನ್ನು ಇಲ್ಲಿ ವಿಲೇವಾರಿ ಮಾಡುವುದರಿಂದ, ಕಣ್ಣು ಹಾಯಿಸಿದತ್ತೆಲ್ಲಾ ತ್ಯಾಜ್ಯದ ರಾಶಿ ರಾಚುತ್ತದೆ. ಘನ ತ್ಯಾಜ್ಯದ ನಿರ್ವಹಣೆ ಸಮರ್ಪಕವಾಗಿ ಇಲ್ಲ ಎನ್ನುವುದು ಇಲ್ಲಿಗೆ ಒಮ್ಮೆ ಹೋಗಿ ಬಂದರೆ ಗೊತ್ತಾಗುತ್ತದೆ.

2000ನೇ ಇಸವಿಯಲ್ಲಿ ‘ಮುನಿಸಿಪಲ್ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು’ ಜಾರಿಗೆ ಬಂದಿವೆ. 17 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ಪಾಲಿಕೆಯಲ್ಲಿ ಘನ ತ್ಯಾಜ್ಯ ನಿರ್ವಹಣಾ ವಿಭಾಗ ಆರಂಭವಾಗಿ 13 ವರ್ಷಗಳೇ ಆಗಿವೆ. ಆದರೆ, ಘನ ತ್ಯಾಜ್ಯ ನಿರ್ವಹಣೆ ಸಾಧ್ಯವಾಗಿಲ್ಲ ಎನ್ನುವುದು ಕಸದ ರಾಶಿಯನ್ನು ನೋಡಿದವರಿಗೆ ತಿಳಿಯುತ್ತದೆ.

ನಿತ್ಯ 500 ಟನ್ ತಾಜ್ಯ: ಕಾರವಾರ ರಸ್ತೆಯಲ್ಲಿರುವ ಪಾಲಿಕೆಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕ 21 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿದೆ. ಅಂದಾಜು 40 ಲಕ್ಷ ಟನ್ ತ್ಯಾಜ್ಯ ಇಲ್ಲಿ ಬೆಟ್ಟದಂತೆ ಹರಡಿಕೊಂಡಿದ್ದು, ನಿತ್ಯ ಅಂದಾಜು 300 ಟನ್ ತ್ಯಾಜ್ಯ ಇಲ್ಲಿಗೆ ಬಂದು ಬೀಳುತ್ತದೆ.

ಘನ ತ್ಯಾಜ್ಯವನ್ನು ಸಮಪರ್ಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ, ₹ 10 ಕೋಟಿ ವೆಚ್ಚದಲ್ಲಿ ಆಟೊ ಟಿಪ್ಪರ್ ಖರೀದಿಗೆ ಪಾಲಿಗೆ ಮುಂದಾಗಿದೆ. ಸದ್ಯ 50 ಟಿಪ್ಪರ್‌ಗಳು ಬಂದಿವೆ. 67 ವಾಹನಗಳು ನೋಂದಣಿಯ ಹಂತದಲ್ಲಿದ್ದು, ವಾರದೊಳಗೆ ಬರಲಿವೆ. ಪ್ರತಿ ವಾರ್ಡ್‌ಗೆ 3 ಟಿಪ್ಪರ್‌ಗಳನ್ನು ನಿಯೋಜಿಸಿ, ಹಸಿ ಮತ್ತು ಒಣ ತ್ಯಾಜ್ಯವನ್ನು ಮನೆ ಮನೆಯಿಂದ ಪ್ರತ್ಯೇಕವಾಗಿ ಸಂಗ್ರಹಿಸುವುದು ಇವುಗಳ ಉದ್ದೇಶ. ಇದರೊಂದಿಗೆ 1,700 ಪೌರ ಕಾರ್ಮಿಕರು ಕೂಡ ಇರಲಿದ್ದಾರೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು. ಇದರೊಂದಿಗೆ ವಿಂಡ್ರೊ ಕಾಂಪೊಸ್ಟಿಂಗ್ ಮತ್ತು ಬಯೊಮೈನಿಂಗ್ ಎಂಬ ಯೋಜನೆ ರೂಪಿಸಲಾಗಿದ್ದು, ಇವುಗಳ ಜಾರಿ ತೆವಳುತ್ತಾ ಸಾಗಿದೆ.

ವಿಂಡ್ರೊ ಕಾಂಪೊಸ್ಟಿಂಗ್: ವಿಂಗಡಿತ ತ್ಯಾಜ್ಯವನ್ನು ಸಂಸ್ಕರಿಸಿ ಉಂಡೆಗಳನ್ನಾಗಿ ಮಾಡಿ ಉರುವಲಾಗಿ ಬಳಸುವುದು ವಿಂಡ್ರೊ ಕಾಂಪೊಸ್ಟಿಂಗ್. ಪಾಲಿಕೆಯ ವಲಯ ಮಟ್ಟದಲ್ಲಿ ಆರು ಕಾಂಪ್ಯಾಕ್ಟರ್ ಸ್ಟೇಷನ್‌ಗಳು ಸ್ಥಾಪನೆಯಾಗಲಿವೆ. ಈ ಪೈಕಿ ಎರಡು ಧಾರವಾಡದಲ್ಲಿ ಮತ್ತು ನಾಲ್ಕು ಹುಬ್ಬಳ್ಳಿಯಲ್ಲಿ ಆರಂಭವಾಗಲಿವೆ. ಪ್ರತಿ ಸ್ಟೇಷನ್‌ಗೆ ಆರೇಳುವಾರ್ಡ್‌ಗಳ ತ್ಯಾಜ್ಯವನ್ನು ಯಂತ್ರೋಪಕರಣಗಳಿಂದ ಸಂಸ್ಕರಿಸಿ, ವಿಲೇವಾರಿ ಘಟಕಕ್ಕೆ ಕಳುಹಿಸಲಾಗುತ್ತದೆ.

ಅಲ್ಲಿರುವ ದೊಡ್ಡ ಕೇಂದ್ರ ಕಾಂಪ್ಯಾಕ್ಟರ್ ಸ್ಟೇಷನ್‌ನಲ್ಲಿ ವಿವಿಧ ಹಂತದ ಸಂಸ್ಕರಣಾ ಪ್ರಕ್ರಿಯೆ ಮುಗಿದ ನಂತರ, ತ್ಯಾಜ್ಯವನ್ನು ಉರುವಲು ಕೇಕ್‌ಗಳನ್ನಾಗಿ ತಯಾರಿಸಲಾಗುತ್ತದೆ. ಇದನ್ನು ಸ್ಥಳೀಯ ಸಿಮೆಂಟ್ ಕಾರ್ಖಾನೆಗಳು ಸೇರಿದಂತೆ, ಇತರ ಕಾರ್ಖಾನೆಗಳಿಗೆ ಪರ್ಯಾಯ ಉರುವಲು ಸಾಧನವಾಗಿ ಕಳುಹಿಸಿ ಕೊಡಲಾಗುವುದು.

ಕಾಂಪೋಸ್ಟ್ ಗೊಬ್ಬರ: ಹಸಿ ತ್ಯಾಜ್ಯದಿಂದ ಕಾಂಪೊಸ್ಟ್ ಗೊಬ್ಬರ ತಯಾರಿಕಾ ಪ್ರಕ್ರಿಯೆಯೇ ಬಯೊಮೈನಿಂಗ್. ಹುಬ್ಬಳ್ಳಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪನೆಗೆ ಕೆಲ ತಿಂಗಳ ಹಿಂದೆ ಚಾಲನೆ ನೀಡಲಾಗಿದೆ.

ಅನುದಾನ, ಇಚ್ಛಾಶಕ್ತಿ ಕೊರತೆ: 13 ವರ್ಷವಾದರೂ ಪಾಲಿಕೆಯು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗದಿರುವುದಕ್ಕೆ ಅಗತ್ಯ ಅನುದಾನ ಮತ್ತು ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ.

‘ವಿಲೇವಾರಿ ಘಟಕವನ್ನು ನಗರದಿಂದ ಕನಿಷ್ಠ 20 ಕಿಲೋಮೀಟರ್‌ದಲ್ಲಿ ಸ್ಥಾಪಿಸಬೇಕು. ಆದರೆ, ಪಾಲಿಕೆ ಆ ನಿಯಮವನ್ನು ಗಾಳಿಗೆ ತೂರಿದೆ. ಸುತ್ತಮುತ್ತ ತ್ಯಾಜ್ಯದ ಕೊಳಕು ನೀರು ಹರಿದಿರುವುದರಿಂದ, ಅಲ್ಲಿ ಬೆಳೆಯುವ ಬೆಳೆಯಲ್ಲಿ ವಿಷಕಾರಿ ಅಂಶವಿದೆ. ಜನರಿಗೆ ರೋಗ ರುಜಿನಗಳು ಸಾಮಾನ್ಯವಾಗಿವೆ’ ಎಂದು ಹುಬ್ಬಳ್ಳಿಯ ವಕೀಲ ಝಡ್‌.ಕೆ. ತಟಗಾರ ಹೇಳಿದರು.

‘ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪಾಲಿಕೆಗೆ ಅಗತ್ಯ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರಗಳು ವಿಳಂಬ ಧೋರಣೆ ಅನುಸರಿಸುತ್ತಾ ಬಂದಿವೆ. ಹಾಗಾಗಿ, ಪಾಲಿಕೆಯ ಸಾಮಾನ್ಯ ನಿಧಿಯಲ್ಲೇ ಕೆಲಸ ಆಗಬೇಕಿದೆ. ಆಟೊ ಟಿಪ್ಪರ್ ಬರಲು ಆರು ವರ್ಷಗಳು ಬೇಕಾಯಿತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡ ಈ ವಿಷಯದ ಬಗ್ಗೆ ಕಾಳಜಿ ತೋರುತ್ತಿಲ್ಲ. ಕೇವಲ ಬಾಯಿ ಬಡಿದುಕೊಳ್ಳುತ್ತಾರೆಯೇ ಹೊರತು, ಕಾರ್ಯ ಪ್ರವೃತ್ತರಾಗುವುದಿಲ್ಲ. ಹಾಗಾಗಿ, ಅವಳಿನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆ ಎಂಬುದು ಗಗನ ಕುಸುಮವಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಪಾಲಿಕೆ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಪಂದಿಸದ ಅಧಿಕಾರಿಗಳು

‘ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಘನ ತ್ಯಾಜ್ಯ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಆಟೊ ಟಿಪ್ಪರ್‌ಗೆ ಅನುಮತಿ ಸಿಗುವುದಕ್ಕೆ 6 ವರ್ಷ ಕಾಯಬೇಕಾಯಿತು. ಸರ್ಕಾರದ ಮಟ್ಟದಲ್ಲಿಯೂ ಇದೇ ರೀತಿ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಚುನಾಯಿತ ಸದಸ್ಯರು ಜನರಿಂದ ಬೈಯ್ಯಿಸಿಕೊಳ್ಳಬೇಕಾಗಿದೆ’

ಸುಧೀರ ಸರಾಫ್, ಮೇಯರ್

ಸೊಳ್ಳೆಗಳ ಕಾಟ

ತ್ಯಾಜ್ಯ ವಿಲೇವಾರಿ ಘಟಕ ಆರಂಭವಾದಾಗಿನಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಲೇರಿಯಾ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳು ಸಾಮಾನ್ಯವಾಗಿದೆ. ಘಟಕ ಸ್ಥಳಾಂತರ ಮಾಡಿ ಅಥವಾ ಅಗತ್ಯ ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ

ಖಾದರ್‌ಬಿ ತಾರಿಹಾಳ, ಆನಂದನಗರ

ಅಪಾಯಕಾರಿ ದಟ್ಟ ಹೊಗೆ

ಸಂಜೆಯಾದರೆ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದಾಗಿ, ಸುತ್ತಮುತ್ತಲಿನ ಪ್ರದೇಶಗಳು ಹೊಗೆಯಿಂದ ಆವೃತವಾಗುತ್ತವೆ. ಎದುರಿಗೆ ಬರುವವರು ಕಾಣಲಾರದಷ್ಟು ಹೊಗೆ ಬರುತ್ತದೆ. ಇದರಿಂದಾಗಿಯೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ

ಇಕ್ಬಾಲ್, ಗೌರಿಶಂಕರ ನಗರ

ಮನೆ ತೊರೆದವರೆಷ್ಟೊ...

ತ್ಯಾಜ್ಯದ ಕೆಟ್ಟ ವಾಸನೆ, ಕೊಳಕು ನೀರು ಹಾಗೂ ಸೊಳ್ಳೆಗಳ ಕಾಟಕ್ಕೆ ಬೇಸತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ಥಿತಿವಂತರು ಮನೆಯನ್ನು ಬಾಡಿಗೆ ಕೊಟ್ಟು, ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ಕೂಲಿಗಾಗಿ ಹೊರಭಾಗದಿಂದ ಬರುವವರು ಇಲ್ಲಿನ ಮನೆಗಳಲ್ಲಿ ವಾಸವಾಗಿದ್ದಾರೆ. ವಾಸನೆ ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಪಾಲಿಕೆ ಕ್ರಮ ಕೈಗೊಳ್ಳಬೇಕು

ಜಿಲಾನಿ, ಕೆಂಪಗೇರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry