ಉಸಿರು ನೀಡುವ ಕಾಡಿನ ರಕ್ಷಕರಿವರು...

7

ಉಸಿರು ನೀಡುವ ಕಾಡಿನ ರಕ್ಷಕರಿವರು...

Published:
Updated:
ಉಸಿರು ನೀಡುವ ಕಾಡಿನ ರಕ್ಷಕರಿವರು...

ಪರಿಸರ ರಕ್ಷಣೆಯ ಬಗ್ಗೆ ಉಪನ್ಯಾಸಗಳನ್ನು ನೀಡುವವರು ಲಕ್ಷೋಪಲಕ್ಷ ಮಂದಿ ಇದ್ದಾರೆ. ಕಾಡು ಇರಬೇಕು, ಜೀವ ವೈವಿಧ್ಯ ಇರಬೇಕು ಎಂಬುದಾಗಿ ಹೇಳುವುದು ಸುಲಭ. ಇರುವ ಕಾಡನ್ನು ರಕ್ಷಿಸುವುದು ಸುಲಭದ ಮಾತೇ ? ಕಾಡನ್ನು ಕಾಯುವ ಪರಿಸ್ಥಿತಿ ನಿರ್ಮಾಣ ಆಗಿರುವುದೇ ಒಂದು ವಿಪರ್ಯಾಸ ಎನ್ನಬೇಕು.

ಅರಣ್ಯ ಇರಬೇಕು ಎಂದು ಹೋರಾಟ ಮಾಡುವ ಬೃಹತ್‌ ಸಂಖ್ಯೆಯ ಜನರು ಒಂದೆಡೆ. ಅರಣ್ಯವನ್ನು ರಕ್ಷಣೆ ಮಾಡುವ ಇಲಾಖೆ ಮತ್ತು ರಕ್ಷಕರ ಬಗ್ಗೆ ಹಗುರವಾಗಿ ಮಾತನಾಡುವವರ ಇನ್ನೊಂದು ಕಡೆ. ಈ ಎರಡು ಅತಿರೇಕಗಳ  ನಡುವೆ ನಿಜವಾಗಿಯೂ ಅರಣ್ಯವನ್ನು ಪ್ರೀತಿಸುವವರು ಇದ್ದಾರೆ. ಕಾಡಿನ ಅಂಚಿನಲ್ಲಿ ಮಳೆ ಗಾಳಿ ಎನ್ನದೇ ಕಾವಲು ಕಾಯುತ್ತಾ, ಬೀಟ್‌ ಹೋಗುತ್ತಾ ಅರಣ್ಯಲೂಟಿಕೋರರಿಂದ ಮರಗಳನ್ನು ರಕ್ಷಿಸುವವ ಇವರ ಬದುಕೇ ಅಧ್ಯಯನಕ್ಕೆ ಅರ್ಹ. ರೋಚಕ ಕತೆಗಳನ್ನು ಪ್ರಶಾಂತ ಮನಸ್ಥಿತಿಯಲ್ಲಿ ನಿಭಾಯಿಸುವ ಅರಣ್ಯ ರಕ್ಷಕರು ಈ ವೃತ್ತಿಯಲ್ಲಿ ಇರುವಾಗ ಅರಣ್ಯವೇ ಮುನಿದು ಅವರನ್ನು ಕಾಡಿಸಿದೆ. ಅರಣ್ಯದ ಹೊರಗೆ ಇರುವ ಅಧಿಕಾರಿ ವರ್ಗದ ವಿವಿಧ ಮನಸ್ಥಿತಿಗಳನ್ನು ಕಂಡವರಿದ್ದಾರೆ. ಅವರೆಲ್ಲರೂ ಅನುಭವಿಸುತ್ತಿದ್ದ ತೊಂದರೆಗಳಿಗೆ ಇತ್ತೀಚೆಗಿನ ವರ್ಷಗಳಲ್ಲಿ ಹೊಸದೊಂದು ತೊಂದರೆ ಸೇರಿಕೊಂಡಿದೆ. ಅದು ಪ್ಲಾಸ್ಟಿಕ್‌ ಎಂಬ ಮಹಾಮಾರಿ. ಹರಿವ ನೀರಿಗೆ ತಡೆ ಒಡ್ಡುವ, ತರಗೆಲೆ ಕೊಳೆಯದಂತೆ ತಡೆಯುವ, ಕಾಡುಪ್ರಾಣಿಗಳ ಆರೋಗ್ಯ ಹಾಳು ಮಾಡುವ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯ ಒಂದು ದೊಡ್ಡ ತಲೆನೋವೇ ಆಗಿದೆ. ಕಾಡಿನೊಳಗೆ ಪ್ಲಾಸ್ಟಿಕ್‌ ತರಬೇಡಿ ಎಂಬ ಕಿವಿ ಮಾತನ್ನು ಕೇಳದ ಅನೇಕ ಚಾರಣ ಪ್ರಿಯರನ್ನು ನಿಭಾಯಿಸುವುದೂ ಅವರಿಗೆ ಕಷ್ಟವೇ ಆಗಿದೆ.

ನಾಡಿನಲ್ಲಿರುವ ನಮ್ಮೆಲ್ಲರಿಗೂ ಜೀವದ ಉಸಿರನ್ನು ಕೊಡುವ ಕಾಡನ್ನು ಕಾಯುವ ಇವರ ಕಾಯಕ ದೊಡ್ಡದು. ಪರಿಸರದ ದಿನದ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿದಾಗ ತಮ್ಮ ಅನಿಸಿಕೆಗಳನ್ನು ಅವರು ಸರಳ ಮಾತುಗಳಲ್ಲಿ ಹೇಳಿದ್ದು ಹೀಗೆ :

ಪರಿಸರ ಉಳಿಸಬೇಕು ಎಂಬ ಭಾಷಣಗಳನ್ನು ಕೇಳಿ ಎಲ್ಲರಿಗೂ ಸುಸ್ತಾಗಿದೆ. ಛಾಯಾಚಿತ್ರಕ್ಕಾಗಿ ಗಿಡನೆಡುವ ಯೋಜನೆಗಳ ಕುರಿತ ನಂಬಿಕೆ ಸಡಿಲವಾಗುತ್ತಿದೆ. ಈ ದಣಿವು, ಅಪನಂಬಿಕೆಗಳ ನಡುವೆ ಪರಿಸರಕ್ಕಾಗಿ ಶ್ರಮಿಸುವ ಮನಸ್ಸುಗಳು ತಣ್ಣಗೆ ಕೆಲಸ ಮಾಡುತ್ತಿವೆ. ಅಂತಹ ಕೆಲಸ ಕಾರ್ಯಗಳನ್ನು ಗುರುತಿಸುವ ಪ್ರಯತ್ನ ಇಲ್ಲಿದೆ. ಇದು ವಿಶ್ವಪರಿಸರ ದಿನದ ವಿಶೇಷ ಪುಟ .

**

ಪ್ರಕೃತಿಯ ಮಡಿಲಲ್ಲಿ ಎಲ್ಲೆಲ್ಲೂ ಹರಡಿಕೊಂಡಿರುವ ಪ್ಲಾಸ್ಟಿಕ್ ವಸ್ತುಗಳು ಹಾಗೂ ಇತರೇ ತ್ಯಾಜ್ಯಗಳ ಅಟ್ಟಹಾಸದಿಂದ ರೋಸಿಹೋದ ನಾನು, ಸುತ್ತಮುತ್ತಲ ಪರಿಸರದ ಸುಸ್ಥಿತಿಗೆ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿದೆ. ಹಾಗಾಗಿ ಸ್ವಚ್ಛ ಪಶ್ಚಿಮ ಘಟ್ಟ ಅಭಿಯಾನದ ಮೂಲಕ ಪಶ್ಚಿಮ ಘಟ್ಟದ ಕಾಡು, ಬೆಟ್ಟ ಹಾಗೂ ನದಿ ಮೂಲಗಳನ್ನು ಸ್ವಚ್ಛಗೊಳಿಸುವ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಾಲೇಜು ಆವರಣ ಮತ್ತು ಊರನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡೆ. ಚಾರಣದ ಹವ್ಯಾಸ ಹೊಂದಿದ್ದ ನಾನು ನಿಸರ್ಗದ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯ, ಅಲ್ಲಿನ ವಾತಾವರಣ ಹಾಗೂ ಮಳೆಕಾಡುಗಳ ಕುರಿತು ತಿಳಿದು, ಅವುಗಳ ಮಹತ್ವವನ್ನು ಅರಿತು ಇತರರಿಗೂ ತಿಳಿಸಿದೆ‌. ಇದರಿಂದ ಪರಿಸರದ ಕುರಿತು ಇನ್ನಷ್ಟು ಕಾಳಜಿ ಅಧಿಕಗೊಳ್ಳುವಂತಾಯಿತು. ಪ್ಲಾಸ್ಟಿಕ್ ವಿರುದ್ಧ ನನ್ನ ತಂದೆ ನಡೆಸುತ್ತಿರುವ ಅಭಿಯಾನದಲ್ಲಿ ನಾನು ಕೂಡ ಸಹಕರಿಸಿದೆ. ಇದರ ಮೂಲಕ ಬೇರೆಬೇರೆ ಶಾಲೆಗಳಿಗೆ ತೆರಳಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕಾಗುವ ದುಷ್ಪರಿಣಾಮಗಳು, ಪ್ಲಾಸ್ಟಿಕ್ ಬಳಕೆ ಮಿತಗೊಳಿಸಲು ಕ್ರಮಗಳು, ಮಾನವ ಹಾಗೂ ಪರಿಸರದ ನಡುವಿನ ಸಂಬಂಧದ ಕುರಿತು ಶಾಲಾ ಮಕ್ಕಳಿಗೆ ತಿಳಿಸುವ ಕಾರ್ಯದಲ್ಲಿ ಭಾಗಿಯಾದೆ. ಈ ರೀತಿ ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಿಸರದ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದೇ ರೀತಿ ಎಲ್ಲರೂ ಪ್ರಕೃತಿಯ ರಕ್ಷಣೆಯಲ್ಲಿ ಕೈ ಜೋಡಿಸಬೇಕೆನ್ನುವುದೇ ನನ್ನ ಆಶಯ

– ಮೇಧಾ ರಾಮಕುಂಜ, ಬಂಟ್ವಾಳ

**

ನಾನು ಪರಿಸರದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕಾಲೇಜಿಗೆ ಹೋಗುವಾಗ ಬಸ್ಸಿನಲ್ಲಿ ನನ್ನ ಗೆಳತಿ ಕಿಟಕಿಯ ಹೊರಗಡೆ ಯಾರಾದರೂ ಕಸ ಎಸೆದರೆ ಬಯ್ಯುತ್ತಿದ್ದಳು. ಇದು ನನಗೂ ಅನ್ವಯವಾಗಿತ್ತು. ಗೆಳತಿಯ ಈ ಸ್ವಭಾವ ನನ್ನಲ್ಲೂ ಪರಿಸರದ ಕುರಿತು ಕಾಳಜಿ ಹುಟ್ಟಿಸಿತು. ಇದರ ಕುರಿತು ಯೋಚಿಸುವಾಗ ನಾವು ನಿರ್ಲಕ್ಷ್ಯ ಮಾಡಿ,ಎಲ್ಲೆಂದರಲ್ಲಿ ಕಸ ಹಾಕುವುದರಿಂದ ನಮ್ಮ ಪರಿಸರ ಎಷ್ಟು ನಾಶ ಆಗುತ್ತಿದೆ ಎಂದು ಅರಿವಾಯ್ತು. ನಮ್ಮ ರಾಷ್ಟ್ರದ ಕಸ ನಿರ್ಮೂಲನೆಯನ್ನು ಬೇರೆ ರಾಷ್ಟ್ರಗಳೊಂದಿಗೆ ಹೋಲಿಸುವ ಮುನ್ನ ವಿದೇಶಿಗರು ಅವರ ರಾಷ್ಟ್ರ ದೊಳಗೆ ಕೊಳಕು ಮಾಡುವುದಿಲ್ಲ ಎಂಬುದನ್ನೂ ಅರಿಯಬೇಕು ಅಂತ ಅನಿಸಿತು. ಹಾಗಾಗಿ ಇನ್ನು ಕಂಡಕಂಡಲ್ಲಿ ಕಸ ಎಸೆಯುವುದಿಲ್ಲ ಹಾಗೂ ಯಾರಾದರೂ ಆ ರೀತಿ ಮಾಡುವುದನ್ನು ಕಂಡರೆ ತಿದ್ದಿ ಹೇಳುತ್ತೇನೆ ಎಂದು ತೀರ್ಮಾನಿಸಿದೆ. ಪರಿಸರ ಸ್ನೇಹಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ನನ್ನ ಸುತ್ತಮುತ್ತ ಇರುವವರಿಗೂ ಈ ಕುರಿತು ಅರಿವು ಮೂಡಿಸುತ್ತಿದ್ದೇನೆ

– ಸುಮಯ್ಯ ಅಥಾವುಲ್ಲಾ, ಮೂಡುಬಿದಿರೆ

**

ಪರಿಸರ ನಮ್ಮ ಅವಿಭಾಜ್ಯ ಅಂಗ ಎಂಬುದನ್ನು ಅರಿತು ಅದರ ಕುರಿತು ಕಾಳಜಿ ವಹಿಸುವುದು ಅತ್ಯಗತ್ಯ. ಮಾರ್ಕೆಟ್ ನಲ್ಲಿ ಇಂದು ಮೂರು ರೂಪಾಯಿಯ ’ಯೂಸ್ ಆ್ಯಂಡ್ ತ್ರೋ’ ಪೆನ್ನುಗಳು ದೊರೆಯುತ್ತವೆ. ಅವುಗಳನ್ನು ಒಮ್ಮೆ ಬಳಸಿದ ನಂತರ ಮರುಬಳಕೆ ಮಾಡಲಾಗುವುದಿಲ್ಲ. ಆ ಪೆನ್ನುಗಳು ಪ್ಲಾಸ್ಟಿಕ್ ನಿಂದ ತಯಾರಾದವು. ಇವನ್ನು ಎಸೆಯುವುದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹಾಗಾಗಿ ನಾನು ಈ ಪೆನ್ನುಗಳನ್ನು ಆದಷ್ಟು ಕಡಿಮೆ ಬಳಸುತ್ತೇನೆ. ಇದಲ್ಲದೇ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಮುಂತಾದ ವಸ್ತುಗಳನ್ನು ಮರುಬಳಕೆ ಮಾಡುತ್ತೇನೆ, ಅಥವಾ ಕ್ರಾಫ್ಟ್ ಮಾಡಲು ಉಪಯೋಗಿಸುತ್ತೇನೆ

–ದುರ್ಗಾಪ್ರಸನ್ನ ಭಟ್, ಮೂಡುಬಿದಿರೆ

ದಿನೇಶ್‌ ಹೊಳ್ಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry