ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮರಗಾಲ ಗ್ರಾಮದಲ್ಲಿ ವಿಚಿತ್ರ ಜ್ವರ

ಆತಂಕಪಡುವ ಅಗತ್ಯ ಇಲ್ಲ ಎಂದು ನಾಗರಿಕರಿಗೆ ವೈದ್ಯಾಧಿಕಾರಿಗಳ ಅಭಯ
Last Updated 5 ಜೂನ್ 2018, 9:01 IST
ಅಕ್ಷರ ಗಾತ್ರ

ಮೈಸೂರು/ ನಂಜನಗೂಡು: ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಕಳೆದ ಮೂರು–ನಾಲ್ಕು ದಿನಗಳಿಂದ ಗ್ರಾಮದ 120ಕ್ಕೂ ಹೆಚ್ಚು ಮಂದಿಗೆ ವೈರಲ್ ಜ್ವರ ಕಾಣಿಸಿಕೊಂಡಿದೆ.

ತಾಲ್ಲೂಕಿನ ಸಿಂಧುವಳ್ಳಿ ಬಳಿ ಇರುವ ಕರುಣಾಲಯ ಆಸ್ಪತ್ರೆ ಹಾಗೂ ನಗರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರಕ್ಕೆ ತುತ್ತಾಗಿರುವ ಗ್ರಾಮದ ಜನರು ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳಿದ್ದಾರೆ.

ಶಾಸಕ ಬಿ.ಹರ್ಷವರ್ಧನ್ ಕರುಣಾ ಲಯ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿ ಸಿದರು. ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಲು ಸ್ಥಳದಲ್ಲಿ ಹಾಜರಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ ಅವರಿಗೆ ಸೂಚನೆ ಕೊಟ್ಟರು.

ಡಾ.ಕಲಾವತಿ ಮಾತ ನಾಡಿ, ಮಳೆಗಾಲ ಆರಂಭಗೊಂಡಿರುವು ದರಿಂದ ಗ್ರಾಮದ ನಿವಾಸಿಗಳು ಜ್ವರಕ್ಕೆ ತುತ್ತಾಗುತ್ತಿರುವ ಶಂಕೆ ಇದೆ. ಈಗಾಗಲೇ ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿ ಹಾಗೂ ಗ್ರಾಮದ ಕುಡಿಯುವ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಮದ ನೀರಿನ ಮಾದರಿಯನ್ನು ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಿದರು. ಶುದ್ಧ ಕುಡಿಯುವ ನೀರಿನ ಬಳಕೆ, ಬಿಸಿ ಆಹಾರ ಪದಾರ್ಥ ಸೇವನೆ, ಸೊಳ್ಳೆಗಳು ಹರಡದಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ತಾ.ಪಂ. ಇಒ ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಮ್ಮರಗಾಲ ಶಿವಣ್ಣ, ಸದಸ್ಯ ಸಿ.ಎಂ.ಮಹದೇವಯ್ಯ, ಮುಖಂಡರಾದ ಸುಬ್ಬಣ್ಣ, ಚಿಕ್ಕರಂಗ ನಾಯ್ಕ, ಕೆಂಡಗಣ್ಣಪ್ಪ, ಜಿಪಂ ಮಾಜಿ ಸದಸ್ಯ ಎಸ್.ಎಂ.ಕೆಂಪಣ್ಣ ಇದ್ದರು.

ಟೈಫೈಡ್ ಜ್ವರ ಅಲ್ಲ; ಆತಂಕ ಬೇಡ

ಹೆಮ್ಮರಗಾಲದಲ್ಲಿ ವಿಷಮಶೀತಜ್ವರವಾಗಲಿ ಅಥವಾ ಇನ್ನಾವುದೇ ಆತಂಕ ಹುಟ್ಟಿಸುವ ಜ್ವರವಾಗಲಿ ಕಾಣಿಸಿಕೊಂಡಿಲ್ಲ. ಇದು ವೈರಲ್ ಜ್ವರ. ಜ್ವರ, ವಿಪರೀತ ಮೈ–ಕೈ, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿಚಿತ್ರ ಎಂದರೆ ಒಂದೇ ದಿನದಲ್ಲಿ ಇವರು ಗುಣಮುಖರಾಗುತ್ತಾರೆ. ಸುಮಾರು 200ಕ್ಕೂ ಅಧಿಕ ವೈರಸ್‌ಗಳಿಂದ ಬರುವ ಜ್ವರಗಳು ಇವೆ. ಇವುಗಳಲ್ಲಿ ಯಾವುದೋ ಒಂದು ವೈರಸ್‌ನಿಂದ ಈ ರೀತಿಯ ಜ್ವರ ಕಾಣಿಸಿಕೊಂಡಿದೆ. ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT