ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಬೆಳೆಸಿದರೆ ಪ್ರೋತ್ಸಾಹ ಧನ

ಸಸ್ಯಕಾಶಿಯಲ್ಲಿ ವಿತರಣೆಗೆ ಸಿದ್ಧಗೊಂಡಿವೆ ಹಲವು ಸಸಿ, ಗಿಡಗಳು
Last Updated 5 ಜೂನ್ 2018, 9:12 IST
ಅಕ್ಷರ ಗಾತ್ರ

ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನಾದ್ಯಂತ ಹಲವು ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು ಒಂದೆಡೆ ರೈತರು ಬಿತ್ತನೆ ಕಾರ್ಯ ಮುಗಿಸಿ ಬೆಳೆಗಳಿಗೆ ಕುಂಟೆ ಕಟ್ಟಿ ಉಳುಮೆ ಮಾಡುವುದರಲ್ಲಿ ತಲ್ಲೀನರಾಗಿದ್ದರೆ, ಎಲ್ಲೆಡೆ ಹಸಿರು ನಳನಳಿಸುವಂತಾಗಲು ಅರಣ್ಯ ಇಲಾಖೆ ಹಲವು ಬಗೆಯ ಗಿಡಗಳನ್ನು ಸಿದ್ಧಗೊಳಿಸಿದ್ದು, ರೈತರು ಅವುಗಳನ್ನು ಪಡೆದು ತಮ್ಮ ಹೊಲದಲ್ಲಿ ಮರ ಬೆಳೆಸಲು ಮುಂದಾಗಿದ್ದಾರೆ. ಇದಕ್ಕೆ ಬೆಂಬಲ ನೀಡುವಂತೆ ಇಲಾಖೆ ಪ್ರೋತ್ಸಾಹ ಧನ ಸಹ ನೀಡುತ್ತಿದೆ.

ಎಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ವಲಯದಲ್ಲಿ ವಿವಿಧ ತಳಿಯ ಒಟ್ಟು 1.97 ಲಕ್ಷ ಗಿಡಗಳು ರೈತರ ಕೈ ಸೇರಲು ಸಜ್ಜುಗೊಂಡಿವೆ. ಬೀಚನಹಳ್ಳಿ ಗ್ರಾಮದಲ್ಲಿರುವ ಸಸ್ಯಕ್ಷೇತ್ರದಲ್ಲಿ ಗಿಡಗಳನ್ನು ಅರಣ್ಯ ರಕ್ಷಕ ಸುರೇಶ್ ನೇತೃತ್ವದಲ್ಲಿ ಸಂರಕ್ಷಿಸಲಾಗಿದ್ದು ಸುಮಾರು 1.52ಲಕ್ಷ  ಸಿಲ್ವರ್, 15 ಸಾವಿರ ಸಾಗವಾನಿ, 12 ಸಾವಿರ ಹೆಬ್ಬೇವು, 5 ಸಾವಿರ ಶ್ರೀಗಂಧ ಸೇರಿದಂತೆ ಹಲಸು, ಕಹಿಬೇವು, ಬಟರ್ ಪ್ರೂಟ್ ಹಾಗೂ ನೇರಳೆ ಗಿಡಗಳು ನೆಡಲು ಸಜ್ಜಾಗಿವೆ.

ಈಗಾಗಲೇ ಪ್ರಾದೇಶಿಕ ಅರಣ್ಯ ವಲಯದ ಸಸ್ಯಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ರೈತರು ಪಡೆದುಕೊಂಡಿದ್ದಾರೆ. ಸೋನೆ ಮಳೆಯಾಗುತ್ತಿರುವುದರಿಂದ ಸಸಿಗಳನ್ನು ನೆಡಲು ಸಕಾಲ, ಆದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸಲು ಇಲ್ಲಿಂದ ಗಿಡಗಳನ್ನು ಪಡೆಯಬಹುದಾಗಿದೆ ಎಂದು ಆರ್‌ಎಫ್‌ಒ ಮಧು ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರೋತ್ಸಾಹ ಧನ: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಸಸಿ ಮತ್ತು ಗಿಡಗಳನ್ನು ನೀಡಲಾಗುವುದು, ರೈತರು ಒಂದು ಸಸಿಗೆ ₹ 1 ಮತ್ತು ಒಂದು ಗಿಡಕ್ಕೆ ₹ 3 ಪಾವತಿಸಿ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಉತ್ತಮವಾಗಿ ಬೆಳೆಸಿದರೆ ಒಂದು ಗಿಡಕ್ಕೆ ಮೂರು ವರ್ಷಕ್ಕೆ ₹ 45 ಪ್ರೋತ್ಸಾಹ ಧನವನ್ನು ಈವರೆಗೆ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರ್‌ಎಫ್‌ಒ ತಿಳಿಸಿದರು.

ನಗರ ಸಿರೀಕರಣ (ಜಿಯುಎ) : ತಾಲ್ಲೂಕಿನ ವಿವಿಧ ರಸ್ತೆಗಳಲ್ಲಿ ರಸ್ತೆ ಬದಿ ನೆಡುತೋಪು ನಿರ್ಮಿಸಲು 5,200 ಗಿಡಗಳು ಸಿದ್ಧಗೊಂಡಿದ್ದು, ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ರಸ್ತೆಗಳ ಅಕ್ಕ ಪಕ್ಕದಲ್ಲಿ ಗಿಡಗಳನ್ನು ನೆಡಲು ತಯಾರಿ ನಡೆದಿದೆ.

ಮಗುವಿಗೊಂದು ಮರ ಶಾಲೆಗೊಂದು ಬನ: ಶಾಲೆಯಲ್ಲಿ ಹಸಿರು ವಾತಾವರಣ ಸೃಷ್ಟಿಸಲು ಮತ್ತು ಶಾಲಾ ಮಕ್ಕಳಿಗೆ ಹಸಿರಿನ ಬಗ್ಗೆ ಮಹತ್ವ ಸಾರಲು ‘ಮಗುವಿಗೊಂದು ಮರ ಶಾಲೆಗೊಂದು ಬನ’ ಎಂಬ ಘೋಷವಾಕ್ಯದಲ್ಲಿ ಈ ಯೋಜನೆಯಡಿ 2 ಸಾವಿರ ಗಿಡಗಳನ್ನು ಮೀಸಲಿಡಲಾಗಿದೆ. ಎಲ್ಲ ಶಾಲೆಗಳಿಗೂ ಗಿಡಗಳನ್ನು ವಿತರಿಸಲಾಗುವುದು. ಅವಶ್ಯವುಳ್ಳ ಶಾಲೆಯ ಸಿಬ್ಬಂದಿ ಶಾಲೆಯ ಪತ್ರದೊಂದಿಗೆ ಸಸ್ಯಕ್ಷೇತ್ರಕ್ಕೆ ಬಂದರೆ ಶಾಲೆಗಳಿಗೆ ಅಗತ್ಯ ಗಿಡಗಳನ್ನು ನೀಡಲಾಗುವುದು. ಅವಶ್ಯವೆನಿಸಿದರೆ ಇನ್ನೂ ಹೆಚ್ಚಿನ ಸಸಿಗಳನ್ನು ನೀಡಲಾಗುವುದು. ಪರಿಸರ ದಿನವಾದ ಜೂನ್ 5ರಂದು ಪರಿಸರ ಜಾಗೃತಿ ಜೊತೆಗೆ ಮಕ್ಕಳಿಗೆ ಒಂದರಂತೆ ಸುಮಾರು 700 ಸಸಿಗಳನ್ನು ಎಚ್.ಡಿ.ಕೋಟೆ ನ್ಯಾಯಾಧೀಶರ ಮೂಲಕ ವಿತರಿಸಲಾಗುವುದು ಎಂದು ಆರ್‌ಎಫ್‌ಒ ತಿಳಿಸಿದರು.

ಹಸಿರು ಹೆಚ್ಚಿಸಲು ಅಗತ್ಯ ಕ್ರಮ

ಹಂಪಾಪುರ ಸಮೀಪದಲ್ಲಿರುವ ಮಲ್ಲೇಶ್ವರ ಗುಡ್ಡಕ್ಕೆ ಹಸಿರೀಕರಣ ಮಾಡಲು ಸುಮಾರು 10 ಸಾವಿರ ಸಸಿಗಳನ್ನು ನೀಡಲಾಗಿದೆ. ಅಲ್ಲಿ ಗಿಡಗಳನ್ನು ನೆಡುವ ಕಾರ್ಯ ಭರದಿಂದ ಸಾಗಿದ್ದು, ಗುಡ್ಡವನ್ನು ಹಚ್ಚ ಹಸಿರಾಗಿಸಲು ಪ್ರಯತ್ನಿಸಲಾಗುವುದು. ಜೊತೆಗೆ ತಾಲ್ಲೂಕು ‘ವನಸಿರಿ ನಾಡು’ ಎಂದು ಹೆಸರಾಗಿದ್ದು, ಮತ್ತಷ್ಟು ಹಸಿರಾಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಸಿರಿಕರಣ ಮತ್ತು ಗುಡ್ಡಗಳಲ್ಲಿ ಗಿಡ ನೆಡುವ ಕಾರ್ಯಕ್ಕೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಮಧು ಹೇಳಿದರು.

ರವಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT