ಐಟಿ ಉದ್ಯೋಗಿಗಳ ಪರಿಸರ ಪ್ರವಾಸ

7
ಗುಬ್ಬಿ ತಾಲ್ಲೂಕು ಮೂಗನಹುಣಸೆ ಗ್ರಾಮದಲ್ಲಿ ನಡೆದ ಕೃಷಿ----– ಪರಿಸರ ಪ್ರವಾಸ

ಐಟಿ ಉದ್ಯೋಗಿಗಳ ಪರಿಸರ ಪ್ರವಾಸ

Published:
Updated:
ಐಟಿ ಉದ್ಯೋಗಿಗಳ ಪರಿಸರ ಪ್ರವಾಸ

‌ಗುಬ್ಬಿ: ‌‘ನಮಗೆ ಇದು ಹೊಸ ಅನುಭವ ನೀಡಿದ ದಿನ. ಕೈತೋಟ ಮಾಡುವುದು, ಅಡಿಕೆ ಪಟ್ಟೆಯಿಂದ ತಟ್ಟೆ ತಯಾರು ಮಾಡುವುದನ್ನು ಕಲಿತೆವು. ಇಷ್ಟೊಂದು ರೀತಿಯ ಮಾವು ನೋಡಿದ್ದಂತೂ ಇದೇ ಮೊದಲು. ಹಲಸಿನ ಕಾಯಿಯಿಂದ ಸಾಂಬಾರು ಮಾಡಬಹುದು ಎನ್ನುವುದು ಇಲ್ಲಿಯೇ ತಿಳಿಯಿತು. ಕೃಷಿಕರ ಬದುಕು ಅರಿಯಲು ಇದೊಂದು ಒಳ್ಳೆಯ ಮಾರ್ಗ’ ಹೀಗೆ ಹೇಳುತ್ತಲೇ ಮುಗುಳ್ನಕ್ಕರು ಬೆಂಗಳೂರಿನ ಕೆಪಿಐಟಿ ಕಂಪನಿಯ ಸಿಬ್ಬಂದಿಗಳು.

ಕಂಪನಿಯಲ್ಲಿ ಕೆಲಸ ಮಾಡುವ ಕರ್ನಾಟಕ, ಜಾರ್ಖಂಡ್, ಒಡಿಶಾ, ತಮಿಳುನಾಡಿನ 20ಕ್ಕೂ ಅಧಿಕ ಸಿಬ್ಬಂದಿ ಇತ್ತೀಚೆಗೆ ಗುಬ್ಬಿ ತಾಲ್ಲೂಕು ಮೂಗನಹುಣಸೆ ಗ್ರಾಮದಲ್ಲಿ ನಡೆದ ಕೃಷಿ ಪರಿಸರ ಪ್ರವಾಸದಲ್ಲಿ ಭಾಗಿಯಾಗಿದ್ದರು.

ತಾಲ್ಲೂಕಿನ ರೈತ ಉತ್ಪಾದಕ ಕಂಪನಿಗಳು ಈ ವಿಭಿನ್ನ ಪ್ರವಾಸವನ್ನು ಮೂಗನಹುಣಸೆಯ ಸ್ವಸಹಾಯ ಸಂಘಗಳು ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಆಯೋಜಿಸಲಾಗಿತ್ತು.

350 ಕೆ.ಜಿ. ಮಾವಿನ ಹಣ್ಣನ್ನು ಪ್ರವಾಸಿಗರು ಗಿಡದಿಂದಲೇ ಸ್ವತಃ ಕಿತ್ತು ಖರೀದಿಸಿದರು. ಸ್ಥಳೀಯವಾಗಿ ದೊರಕುವ ಎಳನೀರು, ಹಲಸು, ಹುಣಸೆ ಹಣ್ಣು, ಪಪ್ಪಾಯಿ, ಸಾವಯವ ತರಕಾರಿಗಳು, ಕೈಯಿಂದ ತಯಾರಿಸಿದ ತುಪ್ಪ, ಗ್ರಾಮದ ಮಹಿಳೆಯರೇ ತಯಾರಿಸಿದ ರಾಗಿ, ಅಕ್ಕಿ ಹಪ್ಪಳ ಮುಂತಾದ ಉತ್ಪನ್ನಗಳನ್ನು ಖರೀದಿಸಿದರು. ಜೇನು ಪೆಟ್ಟಿಗೆಯಿಂದ ತೆಗೆದ ತಾಜಾ ಜೇನು ತುಪ್ಪ ಸವಿದರು.

ಸಂಜೆಯವರೆಗೆ ಗ್ರಾಮದ ಸುಜಾತ-ಬಸವರಾಜು, ಸಿದ್ದರಾಜು, ಪುಟ್ಟಸ್ವಾಮಿ, ಶಿವಮ್ಮ ಅವರ ತೋಟ ಹಾಗೂ ಹೊಲಗಳಲ್ಲಿ ಮಾವಿನ ಹಣ್ಣು ಕೀಳುವುದು, ಮಣ್ಣು ಅಗೆಯುವುದು, ಮಡಿ ತಯಾರಿಸಿ, ಗೊಬ್ಬರ ಎರಚಿ, ಕೈತೋಟಕ್ಕೆ ಬೀಜ ಬಿತ್ತುವುದು, ನೀರುಣಿಸುವುದು ಇತ್ಯಾದಿ ಕೆಲಸಗಳಲ್ಲಿ ಭಾಗಿಯಾದರು. ಮಾವಿನ ಕಾಯಿ ಬೇಯಿಸಿ ಅಪ್ಪೆಸಾರು ಮಾಡುವ ವಿಧಾನ ಕಲಿತರು.

‘ನಗರ ಹಾಗೂ ಹಳ್ಳಿಗಳನ್ನು ಪರಸ್ಪರ ಬೆಸೆಯುವ ಒಂದು ಮಾರ್ಗವಾಗಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ರೈತ ಮತ್ತು ಗ್ರಾಹಕರ ನಡುವೆ ಈಗ ಇರುವ ಹಲವು ಮಧ್ಯವರ್ತಿ ಕೊಂಡಿಗಳನ್ನು ಕಳಚುವ ಪ್ರಯತ್ನ ಇದು’ ಐಡಿಎಫ್ ಸಂಸ್ಥೆಯ ಶ್ರೀಕಾಂತ್ ಶೆಣೈ ತಿಳಿಸಿದರು.

ಸಂಸ್ಥೆಯ ವಿ.ಎನ್.ಸಾಲಿಮಠ್, ‘ನಾವು ತಿನ್ನುವ ಆಹಾರ ಹೇಗೆ ಉತ್ಪತ್ತಿಯಾಗುತ್ತದೆ, ಅದನ್ನು ಬೆಳೆಯುವ ರೈತರ ಕಷ್ಟ-ಸುಖಗಳೇನು ಎಂಬುದನ್ನು ತಿಳಿಸುವುದು ಈ ಪ್ರವಾಸದ ಉದ್ದೇಶ’ ಎಂದರು.‌

ಗುಬ್ಬಿ ಚನ್ನಬಸವೇಶ್ವರ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಯತೀಶ್ ಕುಮಾರ್, ಚೇಳೂರು-ಹಾಗಲವಾಡಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಲೋಗನಾಥ್ ಹಾಗೂ ನಿರ್ದೇಶಕರಾದ ಮಹಾಲಿಂಗಯ್ಯ, ಸೌಭಾಗ್ಯಮ್ಮ, ವಿವಿಧ ಮಹಿಳಾ ಮತ್ತು ಕೃಷಿಕ ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry