ಮಳಿಗೆ ತೆರವು: ಸಾರ್ವಜನಿಕರ ಆಕ್ರೋಶ

7
ರೈಲ್ವೆ ನಿಲ್ದಾಣದ ರಸ್ತೆ ಪಾದಚಾರಿಗಳ ಓಡಾಟಕ್ಕೆ ಅಡ್ಡಿ; 60ಕ್ಕೂ ಹೆಚ್ಚು ಮಳಿಗೆಗಳನ್ನು ಎತ್ತಂಗಡಿ

ಮಳಿಗೆ ತೆರವು: ಸಾರ್ವಜನಿಕರ ಆಕ್ರೋಶ

Published:
Updated:
ಮಳಿಗೆ ತೆರವು: ಸಾರ್ವಜನಿಕರ ಆಕ್ರೋಶ

ತುಮಕೂರು: ನಗರದ ರೈಲ್ವೆ ನಿಲ್ದಾಣದ ಮುಂಭಾಗ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಇಟ್ಟಿರುವ ಮಳಿಗೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.

ಪಾದಚಾರಿಗಳ ಓಡಾಟಕ್ಕೆ ಅಡ್ಡಿ ಆಗುತ್ತಿದೆ ಎಂಬ ಕಾರಣ ನೀಡಿ ರೈಲ್ವೆ ನಿಲ್ದಾಣದಿಂದ ಪಾಲಿಕೆ ಕಚೇರಿವರೆಗೂ ಸುಮಾರು 60ಕ್ಕೂ ಹೆಚ್ಚು ಮಳಿಗೆಗಳನ್ನು ಎತ್ತಂಗಡಿ ಮಾಡಲಾಯಿತು.

ಸುಮಾರು 20- 25 ವರ್ಷಗಳಿಂದ ಸಣ್ಣ ಸಣ್ಣ ಮಳಿಗೆಗಳಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಮಳಿಗೆಗಳು ಪಾದಚಾರಿ ಮಾರ್ಗದಲ್ಲಿ ಇಲ್ಲ, ಚರಂಡಿ ಮೇಲೆ ಇವೆ. ಇದರಿಂದ ಪಾದಚಾರಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಟೀ ಅಂಗಡಿ ಮಾಲೀಕ ಮೋಹನ್‌ ಪ್ರಜಾವಾಣಿಗೆ ತಿಳಿಸಿದರು.

ಅಕ್ರಮವಾಗಿ ಮಳಿಗೆ ಇಟ್ಟಿಕೊಂಡಿಲ್ಲ. ಪಾಲಿಕೆ ಗಮನಕ್ಕೆ ತಂದು ಮಳಿಗೆ ಇಟ್ಟಿದ್ದು, ತೆರಿಗೆ ಪಾವತಿಸಬೇಕೆಂದರೆ ಪಾವತಿಸಲಾಗುವುದು. ಆದರೆ ನೋಟಿಸ್‌ ನೀಡದೆ ಏಕಾಏಕಿ ತೆರವುಗೊಳಿಸಿರುವುದು ಖಂಡನೀಯ ಎಂದು ಎಚ್‌.ಆರ್‌.ಪ್ರಭಾಕರ್‌ ಹೇಳಿದರು.

ತೆರವುಗೊಳಿಸುವ ಬಗ್ಗೆ ಪತ್ರಿಕೆಗಳಲ್ಲಿ ಇತ್ತೀಚೆಗೆ ಸುದ್ದಿ ಪ್ರಕಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ಅನಕ್ಷರಸ್ಥರಾಗಿರುವ ಬೀದಿ ವ್ಯಾಪಾರಿಗಳಿಗೆ ಏನು ತಿಳಿಯಲು ಸಾಧ್ಯ. ಹೀಗಿದ್ದರೂ ಯಾವುದೇ ನೋಟಿಸ್‌ ನೀಡಿಲ್ಲ. ಅಲ್ಲದೆ ತೆರವುಗೊಳಿಸುವ ಸಮಯದಲ್ಲಿಯೂ ಯಾವುದೇ ಆದೇಶ ತೋರಿಸದೆ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಸೃಷ್ಟಿತ್‌ ಆಕ್ರೋಶ ವ್ಯಕ್ತಪಡಿಸಿದರು.

ಬೀದಿ ವ್ಯಾಪಾರಿಗಳ ಅಧಿನಿಯಮ–2014ರ ಅನ್ವಯ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡು ವ್ಯಾಪಾರ ಮಾಡುವವರ ಮೇಲೆ ಯಾವುದೇ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬಹುದು.

ಆದರೆ ಸಣ್ಣ ಸಣ್ಣ ಮಳಿಗೆಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರಿಗೆ ಪರಿಹಾರ ನೀಡಿ ತೆರವುಗೊಳಿಸಬೇಕು. ಆದರೆ ಇವ್ಯಾವು ಪಾಲಿಕೆ ಮಾಡದೆ ಈ ಕ್ರಮ ಕೈಗೊಂಡಿರುವುದು ಬೀದಿ ವ್ಯಾಪಾರಿಗಳ ಅಧಿನಿಯಮವನ್ನು ಉಲ್ಲಂಘನೆ ಮಾಡಿದೆ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಎಂ.ಕೆ.ಸುಬ್ರಹ್ಮಣ್ಯ ತಿಳಿಸಿದರು.

ಬೀದಿ ವ್ಯಾಪಾರಿಗಳಿಗೆ ಪಾಲಿಕೆಯಿಂದಲೇ ಗುರುತಿನ ಚೀಟಿ ನೀಡಲಾಗಿದೆ. ಇವು ತಾತ್ಕಾಲಿಕ ಗುರುತಿನ ಚೀಟಿಯಾಗಿವೆ,

ಇದರಿಂದ ಕಾಯಂ ಹಕ್ಕು ಪ್ರಾಪ್ತವಾಗುವುದಿಲ್ಲ ಎಂದು ನಮೂದಿಸಲಾಗಿದೆ. ಹಾಗಾದ ಮಾತ್ರಕ್ಕೆ ಯಾವುದೇ ಮಾಹಿತಿ ನೀಡದೆ ಇಂತಹ ಕ್ರಮ ಕೈಗೊಳ್ಳಲಾಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಬೀದಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

ಈ ಜಾಗದಲ್ಲಿಯೇ ಮಳಿಗೆಯನ್ನು ಇಟ್ಟುಕೊಳ್ಳುತ್ತೇವೆ ಎಂದು ಯಾರು ತಿಳಿಸಿಲ್ಲ. ನಗರದಲ್ಲಿ ಸೂಕ್ತ ಸ್ಥಳ ಗುರುತಿಸಿ ಮಳಿಗೆ ಇಟ್ಟಿಕೊಳ್ಳಲು ಅವಕಾಶ ನೀಡಿದಲ್ಲದೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು. ಈ ಬಗ್ಗೆ ಪಾಲಿಕೆ ಮಹಾಪೌರರು, ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ತಿಳಿಸಲಾಗುವುದು. ಇದಕ್ಕೆ ಸ್ಪಂದಿಸದೆ ಇದ್ದಲ್ಲಿ ನಗರದ ಎಲ್ಲ ಬೀದಿ ವ್ಯಾಪಾರಿಗಳು ಸೇರಿ ಚರ್ಚಿಸಿ, ಪ್ರತಿಭಟನೆ ಮಾಡಲಾಗುವುದು ಎಂದು ಜೆ.ಕೆ.ಸಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry