ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಕಡಲ ತೀರದಲ್ಲಿ ಪರಿಸರ ಕಾಳಜಿ

ವಿಶ್ವ ಪರಿಸರ ದಿನದ ಅಂಗವಾಗಿ ಬೀಚ್‌ ಸ್ವಚ್ಛತಾ ಸಪ್ತಾಹ; ಮಕ್ಕಳಿಂದ ತ್ಯಾಜ್ಯ ಸಂಗ್ರಹ
Last Updated 5 ಜೂನ್ 2018, 10:01 IST
ಅಕ್ಷರ ಗಾತ್ರ

ಉಡುಪಿ: ಸಮೀಪದ ಮಲ್ಪೆ ಕಡಲತೀರದಲ್ಲಿ ಸೋಮವಾರ ಬೆಳಿಗ್ಗೆ ಶಾಲಾ ಮಕ್ಕಳ ಕಲರವ ಮನೆಮಾಡಿತ್ತು. ಕೈಗೆ ಗ್ಲೌಸ್‌, ತಲೆಗೆ ಟೋಪಿ, ಟೀ ಶರ್ಟ್ ಧರಿಸಿದ್ದ ಮಕ್ಕಳು ಬೀಚ್‌ನಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಬಾಟಲಿ, ಚಪ್ಪಲಿ, ಹರಿದ ಮೀನಿನ ಬಲೆ, ಹೀಗೆ ಪ್ರಕೃತಿಗೆ ಮಾರಕ ವಸ್ತುಗಳನ್ನೆಲ್ಲ ಹೆಕ್ಕಿ ಹೆಕ್ಕಿ ಒಂದೆಡೆ ಸುರಿಯುತ್ತಿದ್ದರು. ಮಕ್ಕಳ ಪರಿಸರ ಪ್ರೇಮಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದರು.

ಜಿಲ್ಲಾಡಳಿತ, ನಗರಸಭೆ, ಪರಿಸರ ಇಲಾಖೆ, ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಸಹಯೋಗದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ ಇವು.

ಮಕ್ಕಳ ಇಕೋ ಕ್ಲಬ್‌ ಸದಸ್ಯರು ಹಾಗೂ ಸಮೀಪದ ಶಾಲೆಗಳ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೀಚ್‌ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಕಾಳಜಿ ಮೆರೆದರು. ಕಿನಾರೆಯಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನೆಲ್ಲ ಒಟ್ಟುಮಾಡಿ ಒಂದೆಡೆ ಸೇರಿಸಲಾಯಿತು. ಬಳಿಕ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಪರಿಸರ ಪಾಠ ಹೇಳಿದರು. ಪರಿಸರ ಗೀತೆಗಳನ್ನು ಹಾಡಿ ಸಂಭ್ರಮಿಸಲಾಯಿತು.

ಕಲಾವಿದ ಜನಾರ್ದನ ಹಾವಂತೆ ಬೀಚ್‌ನಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನೇ ಬಳಸಿಕೊಂಡು ನಿರ್ಮಿಸಿದ್ದ ಮೀನಿನ ಕಲಾಕೃತಿ ಗಮನ ಸೆಳೆಯಿತು. ಪ್ಲಾಸ್ಟಿಕ್‌ ಬಾಟೆಲ್‌ಗಳು, ಹರಿದ ಮೀನಿನ ಬಲೆ, ಮೀನುಗಾರರು ಬಳಸಿ ಬಿಸಾಡಿದ ವಸ್ತುಗಳು, ಟಯರ್‌ಗಳನ್ನೇ ಬಳಸಿಕೊಂಡು ಆಕರ್ಷಕ ಕಲಾಕೃತಿ ನಿರ್ಮಿಸಿ ಪರಿಸರ ಕಾಳಜಿ ಮೆರೆದರು.

ಬಳಿಕ ಮಾತನಾಡಿದ ಹಾವಂಜೆ, ಜನರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ಪ್ರತಿಷ್ಠಾಪನಾ ಕಲೆ ಪ್ರದರ್ಶನ ಮಾಡಲಾಗಿದೆ. ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಕಲೆಯ ಮೂಲಕ ಅಭಿವ್ಯಕ್ತಗೊಳಿಸುವ ಮೂಲಕ ಜನರನ್ನು ಸೆಳೆಯಲು ಈ ಪ್ರಯತ್ನ ಮಾಡಲಾಗಿದೆ. ಸುಮಾರು 1 ಟನ್‌ ತ್ಯಾಜ್ಯಗಳನ್ನು ಬಳಸಿಕೊಂಡು ಮೀನಿನ ಕಲಾಕೃತಿ ನಿರ್ಮಿಸಲಾಗಿದೆ ಎಂದರು.

ಮಲ್ಪೆ ಬೀಚ್ ಹಾಗೂ ಸೇಂಟ್‌ ಮೇರಿಸ್ ದ್ವೀಪದ ನಿರ್ವಹಣಾಧಿಕಾರಿ ಸುದೇಶ್‌ ಶೆಟ್ಟಿ ಮಾತನಾಡಿ, ‘ಬೀಚ್‌ನಲ್ಲಿ ಪ್ರವಾಸಿಗರು ಬಿಸಾಡುವ ಪ್ಲಾಸ್ಟಿಕ್‌ ತ್ಯಾಜ್ಯ ಶೇ 10 ರಷ್ಟಾದರೆ, ಸ್ಥಳೀಯರು ಬಿಸಾಡುವ ಹಾಗೂ ಚರಂಡಿಗಳಿಂದ ಸಮುದ್ರ ಸೇರುತ್ತಿರುವ ತ್ಯಾಜ್ಯದ ಪ್ರಮಾಣ ಶೇ 90ರಷ್ಟಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪರಿಸರ ಕಾಳಜಿ ಅಗತ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ‘ಮನುಷ್ಯ ಪರಿಸರವನ್ನು ಹಾಳ ಮಾಡುತ್ತಿರುವುದೇ ಪ್ರಾಕೃತಿಕ ವೈಪರೀತ್ಯಗಳಿಗೆ ಪ್ರಮುಖ ಕಾರಣ ಎಂದರು.

ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಹೆಚ್ಚು ಹಸಿರು ಬೆಳೆಸಬೇಕಿದೆ. ಸಮುದ್ರದಲ್ಲಿ ತ್ಯಾಜ್ಯ ಬಿಸಾಡುವುದರಿಂದ ಜಲರಾಶಿಗಳು ನಾಶವಾಗುತ್ತಿದ್ದು, ಜೈವಿಕ ಅಸಮತೋಲನ ಉಂಟಾಗುತ್ತಿದೆ.ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ನಗರಸಭೆ ಆಯುಕ್ತ ಜನಾರ್ಧನ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಶಿವಪ್ರಕಾಶ್, ಲಯನ್ಸ್ ಕ್ಲಬ್‌ನ ಜಯಶ್ರೀ ಕೃಷ್ಣರಾಜ್ ಇದ್ದರು.
ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಲಕ್ಷ್ಮೀಪತಿ ವಂದಿಸಿದರು.

‘ತ್ಯಾಜ್ಯ ಚರಂಡಿಗೆ ಬಿಸಾಡದಿರಿ’

ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ನಾಲ್ಕು ಒಳಚರಂಡಿಗಳ ಮೂಲಕ ತ್ಯಾಜ್ಯ ಸಮುದ್ರ ಸೇರುತ್ತಿದೆ. ಇದರಿಂದ ಸಮದ್ರ ಮಲಿನಗೊಳ್ಳುತ್ತಿದ್ದು, ಜಲಚರಗಳು ಸಾವನ್ನಪ್ಪುತ್ತಿವೆ. ನಾಗರಿಕರು ಮನೆಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಚರಂಡಿಗೆ ಬಿಸಾಡಬಾರದು ಎಂದು ಮಲ್ಪೆ ಬೀಚ್ ಹಾಗೂ ಸೇಂಟ್‌ ಮೇರಿಸ್ ದ್ವೀಪದ ನಿರ್ವಹಣಾಧಿಕಾರಿ ಸುದೇಶ್‌ ಶೆಟ್ಟಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT