ಭಾನುವಾರ, ಮಾರ್ಚ್ 29, 2020
19 °C

ಪ್ರವಾಸದಲ್ಲಿ ಫೋನ್‌ ಬಳಕೆ ಈ ಸಂಗತಿ ಮರೆಯಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಸದಲ್ಲಿ ಫೋನ್‌ ಬಳಕೆ ಈ ಸಂಗತಿ ಮರೆಯಬೇಡಿ

ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೆ ಒಂದು ದಿನ ಕಳೆಯುವುದೂ ಸವಾಲಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ. ಹೀಗಿರುವಾಗ ಪ್ರವಾಸದ ವೇಳೆ ಅದರಲ್ಲೂ ವಿದೇಶಗಳಿಗೆ ಹೋದಾಗ ಅದನ್ನು ಬಿಟ್ಟಿರಲಾದೀತೇ? ಸ್ಮಾರ್ಟ್‌ಫೋನೊಂದು ಪ್ರವಾಸದ ವೇಳೆ ಕೈಯಲ್ಲಿದ್ದರೆ ಆಪ್ತ ಸ್ನೇಹಿತನೊಬ್ಬ ಜತೆಗಿದ್ದಂತೆ.

ಗುರುತು ಪರಿಚಯವಿಲ್ಲದ ಊರಿನಲ್ಲಿ ನಿರ್ದಿಷ್ಟ ಪ್ರದೇಶವೊಂದನ್ನು ಪತ್ತೆಹಚ್ಚಲು, ಹೋಟೆಲ್‌ಗಳನ್ನು ಹುಡುಕಲು, ದೃಶ್ಯಗಳನ್ನು ಸೆರೆಹಿಡಿಯಲು, ಫೋಟೊ ಕ್ಲಿಕ್ಕಿಸಲು... ಹೀಗೆ ಎಲ್ಲದಕ್ಕೂ ಸ್ಮಾರ್ಟ್‌ಫೋನ್ ನೆರವಾಗಬಲ್ಲದು.

ಆದರೆ, ಪ್ರವಾಸ ತೆರಳುವುದಕ್ಕೂ ಮುನ್ನ ಸ್ಮಾರ್ಟ್‌ಫೋನ್‌ಗಾಗಿಯೇ ಕೆಲವು ತಯಾರಿಗಳನ್ನು ಮಾಡಿಕೊಳ್ಳದಿದ್ದರೆ ಅದನ್ನು ತೆಗೆದುಕೊಂಡು ಹೋದರೂ ಉಪಯೋಗ ಇಲ್ಲದಂತೆ ಆಗುತ್ತದೆ. ಕೆಲಸದ ಒತ್ತಡ, ದಿನನಿತ್ಯದ ಜಂಜಾಟ ಇತ್ಯಾದಿಗಳಿಂದ ಮುಕ್ತಿ ಹೊಂದಲೆಂದು ಪ್ರವಾಸ ತೆರಳಿ ಕೊನೆಗೆ ಸ್ಮಾರ್ಟ್‌ಫೋನ್‌ ಕಿರಿಕಿರಿಯಿಂದಾಗಿ ಸಂತಸ ಕಳೆದುಕೊಂಡಂತಾಗಬಹುದು.

ಹೌದು, ಕೆಲವೊಮ್ಮೆ ಬೇರೆಡೆ ತೆರಳಿದ ಸಂದರ್ಭದಲ್ಲೇ ಸ್ಮಾರ್ಟ್‌ಫೋನ್‌ಗಳು ಕೈಕೊಡುವ ಸಾಧ್ಯತೆ ಹೆಚ್ಚು. ಕೆಲವೊಂದು ಕಿರುತಂತ್ರಾಂಶಗಳು (ಆ್ಯಪ್‌) ಕೆಲಸ ನಿರ್ವಹಿಸದೇ ಇರುವುದು, ಮ್ಯಾಪ್‌ ಕಾರ್ಯನಿರ್ವಹಿಸದಿರುವುದು, ಸಂದೇಶಗಳು ಸೆಂಡ್ ಆಗದೇ ಇರುವುದು, ಬ್ಯಾಟರಿ ಮುಗಿಯುವುದು ಇತ್ಯಾದಿ ಹಲವು ಸಮಸ್ಯೆಗಳು ಎದುರಾಗುವುದು ಪ್ರವಾಸ ಕೈಗೊಂಡ ಸಂದರ್ಭದಲ್ಲೇ.

ಇವುಗಳಿಂದ, ‘ಯಾಕಾದರೂ ಈ ಸ್ಮಾರ್ಟ್‌ಫೋನ್‌ ತೆಗೆದುಕೊಂಡು ಬಂದೆವೋ’ ಎಂಬ ಭಾವನೆ ನಮ್ಮನ್ನು ಕಾಡಿದರೂ ಅಚ್ಚರಿಯಿಲ್ಲ. ಹಾಗಾದರೆ ಇವುಗಳನ್ನು ತಡೆಯಲು ಏನು ಮಾಡಬೇಕು? ಪ್ರವಾಸ ತೆರಳುವುದಕ್ಕೂ ಮುನ್ನ ಸ್ಮಾರ್ಟ್‌ಫೋನ್‌ಗೆಂದೇ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಮೂಲಕ ಸಮಸ್ಯೆ ತಡೆಗಟ್ಟಬಹುದು.

ಸ್ಮಾರ್ಟ್‌ಫೋನ್ ಬಳಕೆಗೆ ಅಗತ್ಯವಿರುವ ಕೆಲವು ಬಿಡಿಭಾಗಗಳನ್ನು ಒಯ್ಯುವುದು ತೀರಾ ಅಗತ್ಯ.

ಬ್ಯಾಕಪ್ ಬ್ಯಾಟರಿ ಜತೆಗಿರಲಿ

ಪ್ರವಾಸದ ವೇಳೆ ಹಲವು ಕೆಲಸಗಳಿಗೆ ಬಳಸುವುದರಿಂದ ಸ್ಮಾರ್ಟ್‌ಫೋನ್‌ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹೀಗಾಗಿ ಬ್ಯಾಕಪ್ ಬ್ಯಾಟರಿ ಕೊಂಡೊಯ್ಯುವುದು ಬಹಳ ಉತ್ತಮ. ಹಗುರವಾದ ಎಕ್ಸ್‌ಟರ್ನಲ್ ಬ್ಯಾಟರಿ ಪ್ಯಾಕ್ ಅಥವಾ ಪವರ್ ಬ್ಯಾಂಕ್ ಜತೆಗಿರಲಿ. ಇವು ಸ್ಮಾರ್ಟ್‌ಫೋನ್‌ ಅನ್ನು ಕನಿಷ್ಠ ಎರಡು ಬಾರಿ ಚಾರ್ಜ್‌ ಮಾಡಬಲ್ಲ ಸಾಮರ್ಥ್ಯವುಳ್ಳವುಗಳಾಗಿದ್ದರೆ ಒಳ್ಳೆಯದು.

ಮೂರು ಪವರ್‌ ಕೇಬಲ್‌ಗಳಿರಲಿ

ಕನಿಷ್ಠ ಮೂರು ಪವರ್‌ ಕೇಬಲ್‌ಗಳು ಜತೆಗಿರಲಿ. ಒಂದು ನಾವು ತಂಗಿರುವ ಹೋಟೆಲ್‌ ಕೊಠಡಿಯಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ಬಳಸಬಹುದು. ಮತ್ತೊಂದನ್ನು ಪವರ್‌ ಬ್ಯಾಂಕ್ ಅಥವಾ ಬ್ಯಾಕಪ್ ಬ್ಯಾಟರಿ ಚಾರ್ಜ್‌ ಮಾಡಲು ಬಳಸಬಹುದು. ಇನ್ನೊಂದನ್ನು ಪ್ರಯಾಣದ ವೇಳೆ ಬ್ಯಾಟರಿ ಪ್ಯಾಕ್‌ ಜತೆಗೆ ಕೊಂಡೊಯ್ಯಬಹುದು. ಇದರಿಂದ ಸ್ಮಾರ್ಟ್‌ಫೋನ್ ಚಾರ್ಜ್ ಖಾಲಿಯಾಗಿ ಎದುರಾಗುವ ಸಮಸ್ಯೆಯನ್ನು ನಿವಾರಿಸಿದಂತೆಯೇ ಸರಿ.

ಮಲ್ಟಿಪೋರ್ಟ್‌ ವಾಲ್ ಚಾರ್ಜರ್: ದೂರದ ಪ್ರವಾಸವಾದರೆ ಮಲ್ಟಿಪೋರ್ಟ್‌ ವಾಲ್ ಚಾರ್ಜರ್ ಕೊಂಡೊಯ್ಯುವುದು ಉತ್ತಮ. ಇದರಿಂದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನವರ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಚಾರ್ಜ್ ಮಾಡಬಹುದು.

ಪ್ಲಗ್‌ ಅಡಾಪ್ಟರ್

ವಿದೇಶ ಪ್ರಯಾಣವಾದರೆ ಪ್ಲಗ್‌ ಅಡಾಪ್ಟರ್‌ ಜತೆಗೆ ಒಯ್ಯುವುದನ್ನು ಮರೆಯಬೇಡಿ. ಕೆಲವು ದೇಶಗಳಲ್ಲಿ ವಿದ್ಯುತ್‌ ಪೂರೈಕೆ ಪ್ರಮಾಣ ನಿಮ್ಮ ಪ್ಲಗ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಇಲ್ಲದೇ ಇರಬಹುದು. ಅಂತಹ ಸಂದರ್ಭದಲ್ಲಿ ಪ್ಲಗ್‌ ಅಡಾಪ್ಟರ್‌ ನೆರವಿಗೆ ಬರಲಿದೆ. ಇಲ್ಲವಾದಲ್ಲಿ ಅಲ್ಲಿಗೆ ತೆರಳಿದ ಮೇಲೆ ಪ್ಲಗ್‌ ಅಡಾಪ್ಟರ್‌ ಖರೀದಿಸಬೇಕಾಗಬಹುದು.

ಆದರೆ, ಇದಕ್ಕೆಲ್ಲ ಸಮಯ ತಗಲುವುದರಿಂದ, ಅದಕ್ಕೂ ಮುನ್ನ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾದರೆ ಸಂವಹನ ಕಷ್ಟಸಾಧ್ಯ. ಹೀಗಾಗಿ ಪ್ರವಾಸ ಹೊರಡುವ ಮುನ್ನವೇ ಈ ಪರಿಕರ ಜತೆಗಿದ್ದರೆ ಅನುಕೂಲ.

ಸಿಮ್ ಕಾರ್ಡ್‌ ಎಜೆಕ್ಟರ್

ಸಿಮ್‌ ಕಾರ್ಡ್‌ ಎಜೆಕ್ಟರ್‌ (ಸ್ಮಾರ್ಟ್‌ಫೋನ್‌ನಿಂದ ಸಿಮ್‌ ಅನ್ನು ತೆಗೆಯಲು ಬಳಸುವ ಲೋಹದ ಚಿಕ್ಕ ಪಿನ್. ಇದು ಸ್ಮಾರ್ಟ್‌ಫೋನ್ ಖರೀದಿಸುವ ಸಂದರ್ಭದಲ್ಲೇ ಜತೆಗೆ ದೊರೆತಿರುತ್ತದೆ) ಸಹ ಸ್ಮಾರ್ಟ್‌ಫೋನ್ ಕಿಟ್‌ನಲ್ಲಿರಲಿ.

ವಿದೇಶಗಳಿಗೆ ತೆರಳಿದ ವೇಳೆ ಸಿಮ್ ಕಾರ್ಡ್ ಬದಲಾಯಿಸಬೇಕಾದ ಅವಶ್ಯಕತೆ ಎದುರಾಗುವುದರಿಂದ ಇದು ಅಗತ್ಯ. ಇಲ್ಲವಾದಲ್ಲಿ ಇನ್ನೂ ಒಂದು ವಿಧಾನ ಅನುಸರಿಸಬಹುದು. ಅಂತರರಾಷ್ಟ್ರೀಯ ರೋಮಿಂಗ್ ಫ್ರೀ ಸೌಲಭ್ಯಕ್ಕಾಗಿ ಪಾವತಿ ಮಾಡಿ ಈಗಿರುವ ಸಿಮ್ ಅನ್ನೇ ಬೇರೆ ದೇಶದಲ್ಲಿಯೂ ಬಳಸಬಹುದು. (ಟಿ–ಮೊಬೈಲ್ ಅಥವಾ ಗೂಗಲ್‌ನ ಪ್ರಾಜೆಕ್ಟ್‌ ಫೈ ಗ್ರಾಹಕರಿಗೆ ಹಲವು ದೇಶಗಳಲ್ಲಿ ಈ ಸೌಕರ್ಯ ಲಭ್ಯವಿದೆ) ಆದರೆ, ಇದು ದುಬಾರಿಯಾಗಲಿದೆ. ಹೀಗಾಗಿ ವಿದೇಶಿ ಸಿಮ್‌ ಬಳಸುವುದೇ ಉತ್ತಮ.

ವಿದೇಶಿ ಸಿಮ್‌ ಕಾರ್ಡ್‌ಗಳನ್ನು ಬಳಸಬೇಕಾದರೆ ಸ್ಮಾರ್ಟ್‌ಫೋನ್‌ ಅನ್‌ಲಾಕ್‌ ಆಗಿರಬೇಕು ಎಂಬುದನ್ನು ಗಮನಿಸಿ. ವಿದೇಶಕ್ಕೆ ತೆರಳುವ ಮುನ್ನವೇ ಆನ್‌ಲೈನ್‌ ಮೂಲಕ ಸಿಮ್‌ ಕಾರ್ಡ್‌ಗೆ ಆರ್ಡರ್ ಮಾಡಿ, ನಾವು ಅಲ್ಲಿಗೆ ತಲುಪುವ ವೇಳೆ ಅದು ಲಭ್ಯವಿರುವಂತೆ ನೋಡಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅಲ್ಲಿ ವಿಮಾನ ನಿಲ್ದಾಣಗಳ ಹೊರಗಿರುವ ಸ್ಥಳೀಯ ಮೊಬೈಲ್‌ಫೋನ್ ಅಂಗಡಿಗಳಿಂದ ಖರೀದಿಸಬಹುದು.

ಅಗತ್ಯ ಆ್ಯಪ್‌ಗಳ  ಡೌನ್‌ಲೋಡ್‌: ವಿದೇಶದಲ್ಲಿ ಸಿಮ್‌ ಕಾರ್ಡ್‌ ಬದಲಾಯಿಸುವುದರಿಂದ ನಮ್ಮ ಮೊಬೈಲ್‌ ಸಂಖ್ಯೆ ಬದಲಾಗುತ್ತದೆ. ಬದಲಾದ ಸಂಖ್ಯೆಯಲ್ಲಿ ಕೆಲವೊಂದು ಆ್ಯಪ್‌ಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ಇನ್ನು ಕೆಲವೊಂದು ಲಾಗಿನ್ ಆಗದೇ ಇರಬಹುದು.

ಈ ಬಗ್ಗೆ ಮೊದಲೇ ಎಚ್ಚರದಿಂದಿರಬೇಕು. ಅಲ್ಲದೆ, ತೀರಾ ಅಗತ್ಯವೆನಿಸಿದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಪರಿಶೀಲನೆ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು. ಗೂಗಲ್‌ ಮ್ಯಾಪ್, ಗೂಗಲ್‌ ಟ್ರಾನ್ಸ್‌ಲೇಟ್‌ನಂಥ ಆ್ಯಪ್‌ಗಳು ವಿದೇಶಗಳಲ್ಲಿ ತುಂಬಾ ನೆರವಿಗೆ ಬರುತ್ತವೆ. ಆದಷ್ಟೂ ಆಫ್‌ಲೈನ್ ಮ್ಯಾಪ್‌ ಸೇವ್‌ ಮಾಡಿಟ್ಟುಕೊಂಡಲ್ಲಿ ಡೇಟಾ ಮತ್ತು ಬ್ಯಾಟರಿ ಉಳಿತಾಯಕ್ಕೆ ನರವಾಗಲಿದೆ.

ಹೀಗೆ, ಸ್ಮಾರ್ಟ್‌ಫೋನ್‌ ಜತೆಗೆ ಒಯ್ಯಬೇಕಾದ ಪರಿಕರಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಲ್ಲಿ, ಸೂಕ್ತ ಸಿದ್ಧತೆ ಮಾಡಿಕೊಂಡಲ್ಲಿ ಪ್ರವಾಸದ ಸಂದರ್ಭದಲ್ಲಿ ಎದುರಾಗುವ ಪ್ರಯಾಸ ತಪ್ಪಿಸಬಹುದು.

–ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)