‘ಅವ್ವ ಅರಮನೆ’ ಅಂಗಳದಲ್ಲಿ ಅರಳಿದ ಪರಿಸರ..!

7
ಸಿಂದಗಿಯಲ್ಲಿ ಹಸಿರು ಗೃಹ

‘ಅವ್ವ ಅರಮನೆ’ ಅಂಗಳದಲ್ಲಿ ಅರಳಿದ ಪರಿಸರ..!

Published:
Updated:
‘ಅವ್ವ ಅರಮನೆ’ ಅಂಗಳದಲ್ಲಿ ಅರಳಿದ ಪರಿಸರ..!

ಸಿಂದಗಿ: ಪಟ್ಟಣದಲ್ಲೊಂದು ಪರಿಸರ ಮನೆಯಿದೆ. ಅದರ ಹೆಸರು ಅವ್ವ ಅರಮನೆ. ಇಲ್ಲಿನ ಬಂದಾಳ ರಸ್ತೆಯ ಶಾಂತವೀರ ನಗರದಲ್ಲಿರುವ ಈ ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಸುತ್ತಲಿನ ಪರಿಸರ ಹೃನ್ಮನಕ್ಕೆ ಸಂತಸ ನೀಡುತ್ತದೆ.

ವಾಸದ ಮನೆಗಿಂತ ಹೆಚ್ಚಿನ ಸ್ಥಳವನ್ನು ದುಬಾರಿ ದುನಿಯಾದಲ್ಲೂ ಪರಿಸರಕ್ಕಾಗಿ ಮೀಸಲಿಡಲಾಗಿದೆ. ಮನೆ ನಿರ್ಮಾಣಕ್ಕೂ ಮುನ್ನವೇ ಸುತ್ತಲೂ ಸೇರಿದಂತೆ, ಇಡೀ ಬಡಾವಣೆಯಲ್ಲೇ ಅರಣ್ಯ ಇಲಾಖೆ ಸಹಕಾರದಿಂದ ರಸ್ತೆಯುದ್ದಕ್ಕೂ ಬೇವು, ಹೊಂಗೆ ಗಿಡ ನೆಡಲಾಗಿದ್ದು, ವರ್ಷದ ಅವಧಿಯಲ್ಲಿ ಸುಂದರ ಮರಗಳಾಗಿ ಬೆಳೆದಿವೆ.

ಅವ್ವ ಅರಮನೆಯ ಪ್ರವೇಶದ ಬಾಗಿಲಲ್ಲೇ ಅಲಂಕಾರಿಕ ಗಿಡಗಳು ಸ್ವಾಗತಿಸುತ್ತವೆ. ಒಳಗಡೆ ಮೆತ್ತನೆಯ ಹುಲ್ಲಿನ ಹಾಸಿಗೆ. ಸುತ್ತಲೂ ಮಾವು, ಚಿಕ್ಕು, ದಾಳಿಂಬೆ, ಸೀತಾಫಲ, ಬದನೆ ಕಾಯಿ, ಕರಿಬೇವು, ತರ ತರಹದ ಮಲ್ಲಿಗೆ ಹೂವಿನ ಬಳ್ಳಿ, ಗುಲಾಬಿ, ದಾಸವಾಳ, ಸುಗಂಧಿ ಹೂವಿನ ಗಿಡದ ಜತೆ ಕ್ರಿಸ್‌ಮಸ್‌ ಗಿಡವೂ ಈ ಮನೆಯಂಗಳದಲ್ಲಿದೆ.

ಲವಳಸರ, ಲಕ್ಕಿ ಬಾಮ್, ತುಳಸಿ ಅಲ್ಲದೇ ವಿವಿಧ ಅಲಂಕಾರಿಕ ಗಿಡಗಳು ಮನೆಯ ಸುತ್ತಲೂ ಇವೆ. ವರ್ಷದಿಂದ ಹಕ್ಕಿಗಳ ಇಂಪಾದ ಕಲರವ ಮುಂಜಾನೆ, ಮುಸ್ಸಂಜೆ ತಪ್ಪದಾಗಿದೆ. ಗಿಡ–ಮರಗಳ ಆಸರೆಯಲ್ಲಿ ತಮ್ಮ ಗೂಡು ಕಟ್ಟಿಕೊಂಡು, ಸಂಸಾರ ನಡೆಸಿವೆ. ಮನೆಯ ಮಾಲೀಕ ನಿವೃತ್ತ ಉಪನ್ಯಾಸಕ. ನಿತ್ಯ ನಸುಕಿನ ಎರಡು ತಾಸು ಗಿಡಗಳ ಆರೈಕೆಗೆ ಮೀಸಲಿಟ್ಟಿದ್ದಾರೆ.

‘ಪರಿಸರ ಬೆಳೆಸುವುದರಲ್ಲಿ ತುಂಬಾ ಆಸಕ್ತಿ. ಪರಿಸರ ಬೆಳೆಸುವುದು, ಅದನ್ನು ಸಂರಕ್ಷಿಸುವುದು ನನ್ನ ಪ್ರೀತಿಯ ಕೆಲಸ. ಇದನ್ನು ಪ್ರತಿಯೊಬ್ಬರು ಮಾಡಲೇ ಬೇಕು. ಗಿಡ–ಮರಗಳು ಎಲ್ಲರ ಮನಸ್ಸಿಗೆ ಮುದ ನೀಡುತ್ತವೆ. ಅಹ್ಲಾದಕರ ವಾತಾವರಣ ನಿರ್ಮಿಸುತ್ತವೆ’ ಎಂದು ಪರಿಸರದ ಬಗ್ಗೆ ವಿವರಿಸುವ ಅವ್ವ ಅರಮನೆಯ ಮಾಲೀಕ ಪತ್ರಿಕೆಯಲ್ಲಿ ಮಾತ್ರ ನನ್ನ ಹೆಸರು ಬರೆಯಬೇಡಿ ಎನ್ನುತ್ತಾರೆ.

ಶಾಂತೂ ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry