ಪಾಲನೆಯಾಗದ ನ್ಯಾಯಾಲಯದ ಆದೇಶ

7
ಸೊಪ್ಪಿನಿಂದ ಹಿಡಿದು ಉಪ್ಪಿನ ಮಾರಾಟದವರೆಗೂ ಪ್ಲಾಸ್ಟಿಕ್‌ ಬಳಕೆ ಲೀಲಾಜಾಲ

ಪಾಲನೆಯಾಗದ ನ್ಯಾಯಾಲಯದ ಆದೇಶ

Published:
Updated:
ಪಾಲನೆಯಾಗದ ನ್ಯಾಯಾಲಯದ ಆದೇಶ

ಯಾದಗಿರಿ: ನಸುಕಿನಲ್ಲಿ ಮೈಲಾಪುರ ಬೇಸ್‌ ದಾಟಿ ಕಾಯಿಪಲ್ಯೆ ಮಾರುಕಟ್ಟೆ ಪ್ರವೇಶಿಸಿದರೆ ಸಾಲು ಸಾಲು ಸೊಪ್ಪು ಮಾರಾಟ ಮಾಡುವ ಮಹಿಳೆಯರ ದಂಡು ಕಾಣಿಸುತ್ತದೆ. ಪ್ಲಾಸ್ಟಿಕ್ ಚೀಲಗಳ ರಾಶಿಯ ಮೇಲೆಯೇ ಸೊಪ್ಪಿನ ಬುಟ್ಟಿ ಇರುತ್ತದೆ. ಒಂದು ಹಿಡಿಯಷ್ಟು ಸೊಪ್ಪಿಗೂ ಪ್ಲಾಸ್ಟಿಕ್ ಚೀಲ ಬಳಕೆಯಾಗುತ್ತಿದೆ. ಇದೇ ದೃಶ್ಯಗಳು ನಗರದ ರೈಲು ಸ್ಟೇಷನ್ ರಸ್ತೆಯಲ್ಲೂ ಕಾಣಿಸುತ್ತವೆ. ಹಾಗಾಗಿ, ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸೊಪ್ಪಿನಿಂದ ಹಿಡಿದು ಉಪ್ಪಿನ ಮಾರಾಟದವರೆಗೂ ಲೀಲಾಜಾಲವಾಗಿ ಸಾಗಿದೆ.

ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ, ನ್ಯಾಯಾಲಯದ ಆದೇಶವನ್ನು ಜಿಲ್ಲೆಯ ಒಂದೂ ಸ್ಥಳೀಯ ಸಂಸ್ಥೆಗಳು ಪಾಲಿಸಿಲ್ಲ. ನ್ಯಾಯಾಲಯದ ಆದೇಶ ಪರಿಪಾಲಿಸುವಂತೆ ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳಿಗೆ ಒಂದು ಸೂಚನಾಪತ್ರ ರವಾನಿಸಿ ಕೈತೊಳೆದುಕೊಂಡಿದೆ.

ಜಿಲ್ಲೆಯಲ್ಲಿ ಪರಿಸರ ಸ್ವಚ್ಛತೆಯನ್ನು ಕನಿಷ್ಠ ಮಟ್ಟದಲ್ಲೂ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಕಾಪಾಡಲು ಆಸ್ಥೆ ವಹಿಸಿಲ್ಲ. ಜಿಲ್ಲಾಡಳಿತ ಕಠಿಣ ನಿಲುವು ತಾಳದೇ ಇರುವುದರಿಂದ ಸ್ಥಳೀಯ ಸಂಸ್ಥೆಗಳು ನಗರ, ಪಟ್ಟಣ, ಗ್ರಾಮಗಳಲ್ಲಿ ಪರಿಸರವನ್ನು ಉತ್ತಮಪಡಿಸಲು ಮುಂದಾಗಿಲ್ಲ. ಪರಿಣಾಮವಾಗಿ ಮಾನವ ಬದುಕಿನ ನೆಲೆಗಳಾಗಿರುವ ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ, ಗ್ರಾಮಗಳು ಪರಿಸರ ದೃಷ್ಟಿಯಿಂದ ಸುರಕ್ಷಿತವಲ್ಲ ಎಂಬುದಾಗಿ ಜಿಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ತಿಳಿಸಲಾಗಿದೆ.

ಜಾರಿಯಾಗದ ನ್ಯಾಯಾಲಯದ ಆದೇಶ: 2011ರಲ್ಲಿ ಸುಪ್ರೀಂ ಕೋರ್ಟ್‌ ಪ್ಲಾಸ್ಟಿಕ್‌ ನಿಷೇಧ ಆದೇಶ ಜಾರಿ ಮಾಡಿದ್ದರೂ, ಜಿಲ್ಲೆಯಲ್ಲಿ 2016ರಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಪಾಲನೆಯಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಡಾ.ಬಿ.ಸಿ.ಸತೀಶ್‌ ಅವರು ಸುಪ್ರೀಂ ಕೋರ್ಟ್‌ ಪ್ಲಾಸ್ಟಿಕ್‌ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಅಲ್ಲದೇ ಪ್ಲಾಸ್ಟಿಕ್‌ ಬಳಕೆ ಕುರಿತು ನಗರದ ನಾಗರಿಕರಿಗೆ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ನಗರಗಳಲ್ಲಿ ತಲೆ ಎತ್ತಿದ್ದ ಪ್ಲಾಸ್ಟಿಕ್‌ ಫ್ಲೆಕ್ಸ್ ಕೇಂದ್ರಗಳಿಗೆ ಬೀಗ ಹಾಕಿಸಿದ್ದರು. ಅಲ್ಲದೇ ನಗರಸಭೆ ಸಿಬ್ಬಂದಿಯ ಸಹಯೋಗ ಪಡೆದು ಪ್ಲಾಸ್ಟಿಕ್‌ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು.

ಯಾದಗಿರಿ ನಗರಸಭೆ 2012ರಿಂದ 2016ರವರೆಗೆ ಒಟ್ಟು 1,200 ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಒಟ್ಟು 15 ಕ್ವಿಂಟಲ್‌ನಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ₹ 70 ಸಾವಿರ ದಂಡ ವಸೂಲಿ ಮಾಡಿದೆ. ಅದೇ ರೀತಿಯಲ್ಲಿ 2015ರಿಂದ 2016ರವರೆಗೆ ಶಹಾಪುರ ನಗರಸಭೆ 1,500 ಪ್ರಕರಣ ದಾಖಲಿಸಿಕೊಂಡು ಒಟ್ಟು 11 ಕ್ವಿಂಟಲ್ನಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ₹ 69 ಸಾವಿರ ದಂಡ ವಸೂಲಿ ಮಾಡಿದೆ.

2012ರಿಂದ 20016ರವರೆಗೆ ಸುರಪುರ ನಗರಸಭೆ ಒಟ್ಟು 3.50 ಕ್ವಿಂಟಲ್ನಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ₹ 53,500 ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ಗುರುಮಠಕಲ್‌ ಪುರಸಭೆ ಕೇವಲ ₹ 5 ಸಾವಿರ ದಂಡ ಹಾಗೂ 2.60 ಕ್ವಿಂಟಲ್ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಕೆಂಭಾವಿ ಪುರಸಭೆ ₹ 5,000, ಕಕ್ಕೇರಾ ಪುರಸಭೆ ₹ 10,500, ಭೀಮರಾಯನಗುಡಿ ಅಧಿಸೂಚಿತ ಪ್ರದೇಶ ₹ 5,000 ದಂಡ ವಸೂಲಿ ಮಾಡಿವೆ.

2017ನೇ ಸಾಲಿನಿಂದ ಇಲ್ಲಿವಯರೆಗೆ ನಗರ, ಪಟ್ಟಣ, ಹೋಬಳಿಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಒಂದೂ ಚಟುವಟಿಕೆಗಳನ್ನು ಸ್ಥಳೀಯ ಸಂಸ್ಥೆಗಳು ನಡೆಸಿಲ್ಲ. ಪ್ರಸಕ್ತ ಸಾಲಿನ ಸಾರ್ವಜನಿಕ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ನಗರಗಳಲ್ಲಿ ರಾಜಕಾರಣಿಗಳ ಫ್ಲೆಕ್ಸ್‌ ವಿಜೃಂಭಿಸಿದರೂ, ಜಿಲ್ಲಾಡಳಿತ ಜಾಣ ಕುರುಡು ಪಾಲಿಸಿತು. ಪ್ಲಾಸ್ಟಿಕ್ ನಿಷೇಧ ಕುರಿತು ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳಿಗೆ ಚಾಟಿ ಬೀಸಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿಲ್ಲ.

ಗಟಾರಗಳಲ್ಲಿ ತುಂಬಿದ ಪ್ಲಾಸ್ಟಿಕ್‌:

ನಗರದ ಯಾವುದೇ ಗಟಾರ ತುಂಬಿ ಹರಿದಿದೆ ಎಂದರೆ ಗಟಾರದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ ಎಂಬುದು ಇಲ್ಲಿನ ಪೌರಕಾರ್ಮಿಕ ಸಾಮಾನ್ಯ ಊಹೆ. ಅದು ನಿಜವೂ ಹೌದು. ನಗರದಲ್ಲಿರುವ 31 ವಾರ್ಡುಗಳಲ್ಲಿ ಗಟಾರಗಳು, ಖಾಲಿ ಸ್ಥಳಗಳು, ನಿವೇಶನಗಳು ಪ್ಲಾಸ್ಟಿಕ್ ಮಯವಾಗಿವೆ. ರಾಶಿರಾಶಿ ರೂಪದಲ್ಲಿ ಕಂಡುಬರುವ ಪ್ಲಾಸ್ಟಿಕ್‌ ಗಮನಿಸಿದರೆ ಅಚ್ಚರಿ ಹುಟ್ಟಿಸುತ್ತದೆ. ನಗರದಲ್ಲಿ ನಿತ್ಯ ಸಂಗ್ರಹವಾಗುವ 25 ಮೆಟ್ರಿಕ್‌ ಟನ್‌ ಕಸದಲ್ಲಿ ಕನಿಷ್ಠ 13ರಷ್ಟು ಮೆಟ್ರಿಕ್‌ ಟನ್‌ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿದೆ ಎಂಬುದಾಗಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸರ್ವೆ ವರದಿ ತಿಳಿಸುತ್ತದೆ.

ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಯೋಜನೆ ಸಿದ್ಧ: ಡಿಸಿ

ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಜ್ಜೆ ಹಾಕಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಸೇರಿಕೊಂಡು ಸಿಮೆಂಟ್‌ ಕಾರ್ಖಾನೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ತಿಳಿಸಿದರು.

‘ಜಿಲ್ಲೆಯಲ್ಲಿ ಬೀಳುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಮಾರಾಟ ಮಾಡುವುದು ಯೋಜನೆಯ ಉದ್ದೇಶ ಆಗಿದೆ. ಸಮೀಪದ ಸಿಮೆಂಟ್‌ ಕಾರ್ಖಾನೆಯೊಂದು ಜಿಲ್ಲೆಯ ಪ್ಲಾಸ್ಟಿಕ್ ಸಂಗ್ರಹಿಸಿಕೊಟ್ಟರೆ ಖರೀದಿಸುವುದಾಗಿ

ಮುಂದೆ ಬಂದಿದೆ. ಪ್ಲಾಸ್ಟಿಕ್‌ ತೆಗೆದುಕೊಂಡು ಇಂಧನವನ್ನಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶ ಕಾರ್ಖಾನೆ ಆಡಳಿತ ಮಂಡಳಿ. ಪ್ಲಾಸ್ಟಿಕ್ ಸಂಗ್ರಹಗಾರರಿಗೆ ಕೆಜಿ ಪ್ಲಾಸ್ಟಿಕ್ಗೆ ಇಂತಿಷ್ಟು ಎಂದು ಹಣ ನೀಡುವುದರಿಂದ ಪ್ಲಾಸ್ಟಿಕ್ ಆಯುವವರಿಗೂ ಉದ್ಯೋಗ ಸಿಕ್ಕಂತಾಗುತ್ತದೆ’ ಎಂದರು.

‘ಒಂದೆಡೆಯಾದರೆ ಇನ್ನೊಂದೆಡೆ ಪ್ಲಾಸ್ಟಿಕ್ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸುವ ಕಾರ್ಯಕ್ಕೆ ಜೂನ್‌ 5ರಂದು ಚಾಲನೆ ನೀಡಲಾಗುವುದು. ಇದರಿಂದ ನಗರವು ಶೀಘ್ರದಲ್ಲಿ ಪ್ಲಾಸ್ಟಿಕ್‌ ಮುಕ್ತ ನಗರವಾಗಲಿದೆ’ ಎಂದು ಹೇಳಿದರು.

**

ಕಠಿಣ ನಿಲುವು ತಾಳುವುದರಿಂದ ಪ್ಲಾಸ್ಟಿಕ್‌ ನಿಷೇಧ ಸಾಧ್ಯವಿಲ್ಲ. ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಾಣಕ್ಕೆ ನಾಗರಿಕರು ಕೈಜೋಡಿಸಬೇಕು

ಜೆ.ಮಂಜುನಾಥ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry