7
ತಾಲ್ಲೂಕಿನಲ್ಲಿ ಬಳಕೆ ನಿಷೇಧಿಸುವ ಯತ್ನ ಸಂಪೂರ್ಣ ವಿಫಲ

ಪ್ಲಾಸ್ಟಿಕ್‌ ಮಾಲಿನ್ಯ ತಡೆಗೆ ಮೀನಮೇಷ

Published:
Updated:

ಲಿಂಗಸುಗೂರು: ಭಾರತವು ವಿಶ್ವ ಪರಿಸರ ದಿನಾಚರಣೆ ಸಾರಥ್ಯ ವಹಿಸಿಕೊಂಡಿದ್ದು ಈ ಬಾರಿಯ ವಿಶೇಷ. ಪ್ಲಾಸ್ಟಿಕ್‌ ಮಾಲಿನ್ಯ ಸೋಲಿಸಿ ಎಂಬುದು ಘೋಷವಾಕ್ಯ. ಈ ಘೋಷ ವಾಕ್ಯವನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರಿ ಇಲಾಖೆಗಳು, ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

ನಾಗರಿಕರು ಪ್ರತಿ ಹಂತದಲ್ಲಿ ಪ್ಲಾಸ್ಟಿಕ್‌ ಬಳಕೆ ಸಾಮಾನ್ಯವಾಗಿದ್ದು, ಪ್ಲಾಸ್ಟಿಕ್‌ ಬಳಕೆಯಿಂದ ಕ್ಯಾನ್ಸರ್‌ ಹೃದಯರೋಗ, ಥೈರಾಯ್ಡ್‌, ಅಸ್ತಮಾ, ಲೈಂಗಿಕ ದೌರ್ಬಲ್ಯ, ಕೂದಲು, ಚರ್ಮದ ಸಮಸ್ಯೆ, ನರ ಸಂಬಂಧಿ ಕಾಯಿಲೆಗಳು ಹರಡುತ್ತಿವೆ ಎಂಬುದರ ಜಾಗೃತಿ ಮೂಡಿಸಿದರು ಕೂಡ ಜನತೆ ಅವುಗಳ ಬಳಕೆಯಿಂದ ವಿಮುಕ್ತಿ ಆಗದೆ ಹೋಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ.

ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳು ಸರ್ಕಾರದ ಸುತ್ತೋಲೆ ಆಧರಿಸಿ ವರ್ಷದಲ್ಲಿ ನಾಲ್ಕು ಬಾರಿ ಪ್ಲಾಸ್ಟಿಕ್‌ ಮಾರಾಟ ಮಾಡುವವರ ಮತ್ತು ಬಳಕೆದಾರರ ಮೇಲೆ ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದು ಬಿಟ್ಟರೆ, ಯಾವುದೇ ದಂಡ ಅಥವಾ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ ನಿದರ್ಶನಗಳಿಲ್ಲ.

ಅಸ್ಪೃಶ್ಯತೆ ನಿವಾರಣೆ ಜಾಗೃತಿ ಹಿನ್ನಲೆ ಗ್ರಾಮೀಣ ಪ್ರದೇಶದ ಶೇ 99 ಹೋಟೆಲ್‌, ಟೀ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕಪ್‌ ಬಳಕೆ ಸಾಮಾನ್ಯವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಪ್ರತಿಯೊಂದು ತಿನಿಸು, ಊಟ, ಹಣ್ಣು, ತರಕಾರಿ, ಚಿಕನ್‌, ಮಟನ್‌ ಇತರೆ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತರುವುದು ಫ್ಯಾಷನ್‌ ಆಗಿದೆ. ಸ್ಥಳೀಯ ಸಂಸ್ಥೆಗಳು ಇದ್ಯಾವುದು ನಮಗೆ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿವೆ.

ಪಟ್ಟಣದಾದ್ಯಂತ ಸಂಚರಿಸಿದಾಗ ಕಣ್ವ ಮಾರ್ಟ್‌, ಸೂರ್ಯ ಪ್ರಕಾಶ ಟೀ ಸ್ಟಾಲ್‌, ಉಸ್ಮಾನ್‌ ಖಾನ್‌ ಹಣ್ಣಿನ ವ್ಯಾಪಾರಿ, ಅಲ್ಲಾವುದ್ದೀನ್‌ ಪಾನ್‌ಶಾಪ್‌ನಂತಹ ಕೆಲ ಅಂಗಡಿಗಳು ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಯಥೇಚ್ಛವಾಗಿ ನಡೆದಿದೆ. ಪ್ಲಾಸ್ಟಿಕ್‌ ಬಳಕೆ ಕುರಿತು ವ್ಯಾಪಾರಿಗಳನ್ನು ಸಂಪರ್ಕಿಸಿದಾಗ ಪರ್ಯಾಯ ವ್ಯವಸ್ಥೆಯೆ ಇಲ್ಲ. ಹೀಗಾಗಿ ಬಳಕೆ ಅನಿವಾರ್ಯವಾಗಿ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

‘ಸಂಸ್ಥೆ ಜತೆಗೆ ವ್ಯವಹಾರ ಒಡಂಬಡಿಕೆ ಮಾಡಿಕೊಂಡಾಗಲೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಎಂದು ಹೇಳಲಾಗಿದೆ. ಹೀಗಾಗಿ ತಾವು ಗ್ರಾಹಕರು ಖರೀದಿಸುವ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಹಾಕದೆ, ಸಂಸ್ಥೆ ಪೂರೈಸುವ ಪೇಪರ್‌ ಬ್ಯಾಗ್‌ನಲ್ಲಿ ಹಾಕಿಕೊಡುತ್ತೇವೆ. ತಮ್ಮ ಮಾರ್ಟ್‌ನಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಿದ್ದೇವೆ’ ಎಂದು ಕಣ್ವ ಮಾರ್ಟ್‌ ಮಾಲೀಕ ಶಿವಕುಮಾರ ಸ್ಪಷ್ಟಪಡಿಸಿದರು.

**

ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತು ಸಾಕಷ್ಟು ಜಾಗೃತಿ ಮೂಡಿಸಿ, ಪ್ಲಾಸ್ಟಿಕ್‌ ವಸ್ತು ಜಪ್ತಿ ಮಾಡಿದೆ. ದಂಡ ಅಥವಾ ಪ್ರಕರಣ ದಾಖಲಿಸಿಲ್ಲ

ಗುಂಡಪ್ಪ ಸಾಲಗುಂದ, ಮುಖ್ಯಾಧಿಕಾರಿ, ಪುರಸಭೆ, ಲಿಂಗಸುಗೂರು

-ಬಿ.ಎ. ನಂದಿಕೋಲಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry