ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೂ ಹೆಂಡತಿ, ಮಕ್ಕಳು ಇಲ್ವಾ...

ಮಳೆಯಿಂದ ಹಾನಿಯಾದ ಸ್ಥಳಕ್ಕೆ ಅಧಿಕಾರಿಗಳ ಭೇಟಿ; ನಿವಾಸಿಗಳ ಆಕ್ರೋಶ
Last Updated 5 ಜೂನ್ 2018, 11:16 IST
ಅಕ್ಷರ ಗಾತ್ರ

ಗಂಗಾವತಿ: ‘ನಿಮಗೂ ಹೆಂಡತಿ, ಮಕ್ಕಳು ಇಲ್ವಾ? ನೀವು ಇಂಥಹ ಸ್ಥಿತಿಯಲ್ಲಿ ಒಂದು ಗಂಟೆ ಕಳೆಯಿರಿ ನೋಡೋಣ? ಇನ್ನು ಎಷ್ಟು ದಿನ ಈ ಸಂಕಷ್ಟ ಸಹಿಸಬೇಕು ನಾವ...’

ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಸಂಕಷ್ಟಕ್ಕೀಡಾದ ಇಲ್ಲಿನ ಆನೆಗೊಂದಿ ರಸ್ತೆಯಲ್ಲಿನ 31ನೇ ವಾರ್ಡ್‌ ವಿರುಪಾಪುರ ತಾಂಡಾದ ನಿವಾಸಿಗಳು ಶಾಸಕರು ಹಾಗೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ರೀತಿ ಇದು.

ಮಳೆ ನೀರು ಮನೆಗೆ ಹೊಕ್ಕ ಈ ಪ್ರದೇಶಕ್ಕೆ ಶಾಸಕ ಪರಣ್ಣ ಮುನವಳ್ಳಿ ನಗರಸಭೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದರು. ಅಧಿಕಾರಿಗಳನ್ನು ನೋಡುತ್ತಿದ್ದಂತಯೇ ಜನರ ಸಹನೆ ಕಟ್ಟೆಯೊಡೆಯಿತು. ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಸಂತ್ರಸ್ತರನ್ನು ಸಮಾಧಾನ ಮಾಡಿದ ಶಾಸಕ ಮುನವಳ್ಳಿ, ಮಳೆ ನೀರು ಹರಿದು ಹೋಗಲು ತಕ್ಷಣ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆ ಕಳೆದುಕೊಂಡ ಹಿರೇಜಂತಕಲ್‌ನಲ್ಲಿ ಲಯನ್ಸ್ ಶಾಲೆಯ ಪರಿಚಾರಕಿ ನೀಲಮ್ಮ ಅವರಿಗೂ ಸಮಾಧಾನ ಹೇಳಿದರು.

20ನೇ ವಾರ್ಡ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ರಿಕ್ಷಾ ಕಾರ್ಮಿಕ ಮಲಿಯಪ್ಪ ಯಮುನಪ್ಪ ಎಂಬುವವರ ಮನೆ ಕುಸಿದಿದ್ದು, ಸ್ಥಳಕ್ಕೆ ಶಾಸಕ ಭೇಟಿ ನೀಡಿದರು. ಚರಂಡಿ ಸಮಸ್ಯೆ ಬಗ್ಗೆ ಸ್ಥಳೀಯರು ದೂರು ನೀಡಿದರು.

‘ಮಳೆಯಿಂದಾಗಿ ನಗರದ ಅಲ್ಲಲ್ಲಿ ಮೂರು ಗುಡಿಸಲು ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ಬಗ್ಗೆ ತಕ್ಷಣ ಪರಿಹಾರ ನೀಡುವಂತೆ ಕಂದಾಯ ಮತ್ತು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ನಗರದಲ್ಲಿನ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇನೆ’ ಎಂದು ಶಾಸಕ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ, ಸದಸ್ಯರಾದ ರಾಘವೇಂದ್ರ ಶೆಟ್ಟಿ, ರಾಮಚಂದ್ರಪ್ಪ, ಪರಮೇಶಪ್ಪ, ಸಿದ್ದಾಪುರ ರಾಚಪ್ಪ, ಪ್ರಮುಖರು ಇದ್ದರು.

**
ಮಳೆಯಿಂದಾಗಿ ನಗರದಲ್ಲಿ ಮೂರು ಗುಡಿಸಲು ಬಿದ್ದಿವೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
ಪರಣ್ಣ ಮುನವಳ್ಳಿ, ಶಾಸಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT