ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಬಿತ್ತಿದ ‘ಹಸಿರುಹೊನ್ನು ಬಳಗ’

Last Updated 5 ಜೂನ್ 2018, 12:07 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಹಸಿರುಹೊನ್ನು ಬಳಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಸಿರು ಬಿತ್ತುವ ಕೆಲಸ ಮಾಡುತ್ತಿದೆ. ಇದೊಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದೆ.

ಸಾಹಿತಿ ಸ.ರಘುನಾಥ ಹಸಿರುಹೊನ್ನು ಬಳಗದ ಕಾರ್ಯದರ್ಶಿಯಾಗಿ ಎರಡೂ ಜಿಲ್ಲೆಗಳಲ್ಲಿ ಪರಿಸರ ಕಾಳಜಿ ಹೊಂದಿರುವ ಜನರನ್ನು ಒಗ್ಗೂಡಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಬಳಗದ ಅಧ್ಯಕ್ಷ ಪಿ.ವಿ.ರಾಜಾರೆಡ್ಡಿ, ಅವರ ಯೋಜನೆ ಅನುಷ್ಠಾನಕ್ಕೆ ಬೆನ್ನೆಲುಬಾಗಿದ್ದಾರೆ.

ಹಸಿರುಹೊನ್ನು ಬಳಗ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ, ಗಿಡ ನೆಡುವುದರ ಮೂಲಕ ಪರಿಸರ ರಕ್ಷಣೆ ಮಾಡುವ, ಜೀವ ಸಂಕುಲ ಉಳಿವಿಗೆ ಪ್ರಯತ್ನಿಸು ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಗಡಿಯಲ್ಲಿರುವ ನೀಲ್‌ ಬಾಗ್‌ ಆಶ್ರಯ ಶಾಲೆಯಿಂದ ಪ್ರಾರಂಭಿಸಿ, ರಸ್ತೆ ಬದಿ, ಶಾಲೆ, ಆಸ್ಪತ್ರೆ ಹಾಗೂ ಚರ್ಚ್‌ ಆವರಣದಲ್ಲಿ ಈವರೆಗೆ 28 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದೆ. ಈ ಕಾರ್ಯದಲ್ಲಿ ಅರಣ್ಯ ಇಲಾಖೆ ಹಾಗೂ ಶಾಲಾ ಮಕ್ಕಳು ಕೈಜೋಡಿಸಿದ್ದಾರೆ. ಬಳಗದ ಸದಸ್ಯರು ಹೆಗಲು ಕೊಟ್ಟಿದ್ದಾರೆ. ನಾಟಿ ಮಾಡಲಾದ ಒಟ್ಟು ಸಸಿಗಳ ಪೈಕಿ ಸುಮಾರು 18 ಸಾವಿರ ಸಸಿಗಳು ಉಳಿದುಕೊಂಡಿವೆ. ಬಳಗದ ಮಾರ್ಗದರ್ಶನದಲ್ಲಿ ಸಸಿ ಬೆಳೆಸಿದ 8 ಶಾಲೆಗಳು ಪರಿಸರ ಮಿತ್ರ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ತಾಲ್ಲೂಕಿನ ಸುಣ್ಣಕಲ್‌ ಕಾಡಿನಲ್ಲಿ ಕೆರೆಯೊಂದನ್ನು ದುರಸ್ತಿ ಮಾಡಿ, ಕುಂಟೆಯೊಂದನ್ನು ನಿರ್ಮಿಸಲಾಗಿದೆ. ಈಗ ಈ ಕೆರೆ, ಕುಂಟೆಯಲ್ಲಿ ನೀರು ನಿಂತಿದ್ದು, ಕಾಡಿನ ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಗ್ರಾಮಗಳಿಂದ ಕಾಡಿಗೆ ಮೇಯಲು ಹೋಗುವ ದನ- ಕರುಗಳಿಗೂ ನೀರು ಸಿಗುತ್ತಿದೆ. ಅಂತರ್ಜಲ ವೃದ್ಧಿಗೂ ಸಹಕಾರಿಯಾಗಿದೆ.

ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಈ ವಿಷಯದಲ್ಲಿ ಆರ್‌ಎಫ್‌ಒ ರಾಮಕೃಷ್ಣಪ್ಪ, ಪರಿಸರ ಪ್ರೇಮಿಗಳಾದ ಎಚ್‌.ಎ.ಪುರುಷೋತ್ತಮರಾವ್‌, ಭೀಮಪ್ಪ, ಅಶೋಕ್‌ರೆಡ್ಡಿ, ಗೋಪಾಲ್‌, ಕೊಂಡಕಾವಲಿ ಪೆದ್ದನ್ನ ಅವರು ನೀಡಿದ ಸಹಕಾರ ಸ್ಮರಣಾರ್ಹ ಎಂಬುದು ಬಳಗದ ಪದಾಧಿಕಾರಿಗಳ ಅಭಿಪ್ರಾಯ.

ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಬವಣೆ ನೀಗಲು, ಅಲ್ಲಲ್ಲಿ ಮರಗಳಲ್ಲಿ ನೀರು ತುಂಬಿದ ಡಬ್ಬಿಗಳನ್ನು ಅಳವಡಿಸಿದ್ದು, ಇತರರಿಗೆ ಮಾದರಿಯಾಗಿತ್ತು. ಅದನ್ನು ಕಂಡ ಎಷ್ಟೋ ಮಕ್ಕಳು ತಮ್ಮ ಮನೆ ಆವರಣದಲ್ಲಿನ ಮರಗಳಿಗೆ ಡಬ್ಬಿ ಅಳವಡಿಸಿ ನೀರು ತುಂಬಿದ್ದುಂಟು. ಇದು ಸಂಸ್ಥೆಯೊಂದರ ನಿಜವಾದ ಯಶಸ್ಸು ಎಂದರೆ ತಪ್ಪಾಗಲಾರದು.

ಸಾಹಿತಿ ಸ.ರಘುನಾಥ ಸ್ವಯಂ ಪ್ರೇರಣೆಯಿಂದ ಶಾಲೆಗಳಿಗೆ ಹೋಗಿ ಪರಿಸರ ಮಹತ್ವ ಸಾರುವ ಕತೆಗಳನ್ನು ಹೇಳುತ್ತಾರೆ. ಅವರೇ ಹೇಳುವಂತೆ ಈಗಾಗಲೇ ಸುಮಾರು 6000 ಮಕ್ಕಳಿಗೆ ಪರಿಸರ ರಕ್ಷಣೆಗೆ ಪೂರಕವಾದ ಕತೆಗಳನ್ನು ಹೇಳಲಾಗಿದೆ.

ತಾಲ್ಲೂಕಿನ ಮುದಿಮಡಗು ಸಮೀಪ ಕಾಡಿನ ಅಂಚಿನಲ್ಲಿ ಹಸಿರುಹೊನ್ನು ಬಳಗದ ವತಿಯಿಂದ ‘ಹಸಿರು ಹೊನ್ನೂರು’ ಎಂಬ ನವ ಗ್ರಾಮವನ್ನು ನಿರ್ಮಿಸಿ ಕೆಲವು ಅಲೆಮಾರಿ ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಗ್ರಾಮದ ಸುತ್ತ ಅವಕಾಶ ಇರುವೆಡೆಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. ಗ್ರಾಮದ ಹೆಸರಿಗೆ ತಕ್ಕಂತೆ ಹಸಿರು ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಚಿಂತಾಮಣಿ ತಾಲ್ಲೂಕಿನ ಬೊಮ್ಮಲಾಟಪುರಂ ಗ್ರಾಮದ ತೊಗಲು ಗೊಂಬೆ ಕಲಾವಿದರ ಜಮೀನಲ್ಲಿ ಜೂನ್‌ 17ರಂದು 1,500 ಹುಣಸೆ ಗಿಡ ನಾಟಿ ಮಾಡಲಾಗುವುದು. ಹುಣಸೆ ಮರ ಬೆಳೆಸುವುದರಿಂದ ಪರಿಸರ ಉಳಿಯುವುದರ ಜತೆಗೆ ಆರ್ಥಿಕ ಲಾಭವೂ ಇದೆ ಎಂದು ಸ.ರಘುನಾಥ ಹೇಳಿದರು.

ಹೀಗೆ ಹಸಿರುಹೊನ್ನು ಬಳಗ ತನ್ನದೇ ಆದ ರೀತಿಯಲ್ಲಿ ಪರಿಸರ ಉಳಿಸುವ ಪ್ರಯತ್ನ ಮಾಡುತ್ತಿದೆ. ಸಮಾಜದಲ್ಲಿ ಪರಿಸರ ಪ್ರೇಮ ಬೆಳೆಸುತ್ತಿದೆ. ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಕಾಡುಗಳಲ್ಲಿ ಬೀಜ ಬಿತ್ತನೆ

ಕಾಡುಗಳಲ್ಲಿ ವಿವಿಧ ಜಾತಿಯ ಮರಗಳ ಬೀಜಗಳನ್ನು ಚೆಲ್ಲಿ, ನೈಸರ್ಗಿಕವಾಗಿ ಗಿಡ, ಮರ ಬೆಳೆಸುವ ಕಾರ್ಯಕ್ಕೂ ಬಳಗದ ಸದಸ್ಯರು ಕೈಹಾಕಿದ್ದಾರೆ. ಈಗಾಗಲೇ 50 ಕೆ.ಜಿಯಷ್ಟು ಬೀಜಗಳನ್ನು ಸಮೀಪದ ಕಾಡುಗಳಲ್ಲಿ ಚೆಲ್ಲಿದ್ದಾರೆ. ಅವು ಮೊಳಕೆಯೊಡೆದರೆ ಮರವಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಮದುವೆ ಸಂದರ್ಭದಲ್ಲಿ ವಧು, ವರ ಹಾಗೂ ಅವರ ಹತ್ತಿರದ ಸಂಬಂಧಿಗಳು ಸಸಿ ನೆಡುವ ಸಂಪ್ರದಾಯವನ್ನು ಜಾರಿಗೆ ತಂದಿರುವುದು ವಿಶೇಷ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಶ್ವತ ನಿರಾವರಿ ಯೋಜನೆ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ಪತ್ರ ಚಳವಳಿ ನಡೆಸಿದ ಕೀರ್ತಿ ಹಸಿರುಹೊನ್ನು ಬಳಗಕ್ಕೆ ಸಲ್ಲುತ್ತದೆ.

-ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT