3
ಮೂರು ದಶಕ ಕಳೆದರೂ ಅಭಿವೃದ್ಧಿ ಕಾಣದ ಪಂಚಾಕ್ಷರಿ ನಗರದ ರಸ್ತೆ

ರಸ್ತೆ ದುರವಸ್ಥೆ; ಮತ್ತದೇ ಅವಸ್ಥೆ

Published:
Updated:
ರಸ್ತೆ ದುರವಸ್ಥೆ; ಮತ್ತದೇ ಅವಸ್ಥೆ

ಗದಗ: ‘ಮೂರು ದಶಕದಿಂದ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ. ಇರುವ ರಸ್ತೆಯಲ್ಲಿ ತಗ್ಗು, ಗುಂಡಿಗಳದ್ದೇ ಕಾರುಬಾರು. ಮಳೆ ಬಂದರಂತೂ ಸಂಚಾರ ದುಸ್ತರವಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದರೂ ಯಾರೊಬ್ಬರು ವಾರ್ಡ್‌ ಅಭಿವೃದ್ಧಿಯತ್ತ ಚಿತ್ತ ಹರಿಸಿಲ್ಲ ಎಂದು ಪಂಚಾಕ್ಷರಿ ನಗರದ ನಿವಾಸಿಗಳು ಗೋಳು ತೋಡಿಕೊಂಡರು.

ಜಿಲ್ಲಾ ಕ್ರೀಡಾಂಗಣದಿಂದ ಕೂಗಳತೆ ದೂರದಲ್ಲಿರುವ ವಾರ್ಡ್‌ ನಂಬರ್ 28ರ ವ್ಯಾಪ್ತಿಗೆ ಬರುವ ಪಂಚಾಕ್ಷರಿ ನಗರದಲ್ಲಿ ರಸ್ತೆಯದ್ದೆ ದೊಡ್ಡ ಸಮಸ್ಯೆ. ಇಲ್ಲಿ ನಗರದಲ್ಲಿ ಒಟ್ಟು 6 ಅಡ್ಡ ರಸ್ತೆಗಳಿವೆ. ಮೂರು ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಕೆಲವು ಉಪ ರಸ್ತೆ ನಿರ್ಮಿಸಿರುವುದನ್ನು ಬಿಟ್ಟರೆ, ಉಳಿದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ.

3ನೇ ಕ್ರಾಸ್‌ನಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಯಿತು. ಆದರೆ, ಅದು ವರ್ಷದೊಳಗೆ ಹಿಂದಿನ ಸ್ಥಿತಿಗೆ ಮರಳಿತು. ಬಳಿಕ ರಸ್ತೆ ಅಗೆದು ಒಳಚರಂಡಿ, 24X7 ನೀರಿನ ಯೋಜನೆ ಕಾಮಗಾರಿ ಕೈಗೊಳ್ಳಲಾಯಿತು. ಉಳಿದಿದ್ದ ಅಲ್ಪಸ್ವಲ್ಪ ಭಾಗವೂ ಹದಗೆಟ್ಟು ಹೋಯಿತು. ‘ಮಳೆಯಾದರೆ, ಇಲ್ಲಿನ ರಸ್ತೆಗಳು ಕೆಸರುಗದ್ದೆಯಾಗಿ ಬದಲಾಗುತ್ತವೆ’ ಎನ್ನುತ್ತಾರೆ ನಿವಾಸಿಗಳು.

‘ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಳೆದ ಮೂರು ದಶಕಗಳಿಂದ ಇಲ್ಲಿ ಡಾಂಬರ್‌ ರಸ್ತೆ ನಿರ್ಮಾಣ ನಡೆಯುತ್ತಿದೆ. ಆದರೆ, ಈ ವರ್ಷದೊಳಗೆ ಡಾಂಬರ್ ರಸ್ತೆ ಹಾಳಾಗಿ ಹೋಗುತ್ತದೆ. ಪದೇ ಪದೇ ರಸ್ತೆ ಅಗೆದು, ಡಾಂಬರ್‌ ಹಾಕಿ ಕಳಪೆ ಕಾಮಗಾರಿ ಮಾಡುವ ಬದಲು, ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಬೇಕು’ ಎಂದು ಬಡಾವಣೆಯ ಮಲ್ಲಮ್ಮ ಹುರಕಡ್ಲಿ, ಪಾರ್ವತಿ ತಳವಾರ ಒತ್ತಾಯಿಸಿದರು.

‘ವಾರ್ಡ್‌ ಮೆಂಬರ್‌ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಉಳಿದ ಕಡೆಗಳಲ್ಲಿರುವ ಬಹುತೇಕ ರಸ್ತೆಗಳು ದುಸ್ಥಿತಿಯಲ್ಲಿವೆ. ಪಂಚಾಕ್ಷರಿ ನಗರದ ಹತ್ತಿರವಿರುವ ಶುದ್ಧ ನೀರಿನ ಘಟಕದಿಂದ 6ನೇ ಅಡ್ಡ ರಸ್ತೆಗೆ ಸಂಪರ್ಕ ಕಲ್ಪಿಸಲು, ರಸ್ತೆ ನಿರ್ಮಿಸಲು ಜಲ್ಲಿ ಕಲ್ಲು ಹಾಕಿ, 2 ತಿಂಗಳು ಕಳೆದಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಪಾದಚಾರಿಗಳು, ವಾಹನ ಸವಾರರು ಅನಿವಾರ್ಯವಾಗಿ ಜಲ್ಲಿಯ ಮೇಲೆ ಸಂಚರಿಸುತ್ತಿದ್ದಾರೆ. ಕೆಲವರು ಬಿದ್ದುಗಾಯ ಮಾಡಿಕೊಂಡಿದ್ದಾರೆ. ‘ರಸ್ತೆ ಅಭಿವೃದ್ಧಿಪಡಿಸಬೇಕು, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡಬೇಕು’ ಎಂದು ಹುಲ್ಲಣ್ಣ ಗೌಡರ, ಅಪ್ಪಣ್ಣ ಬೂದಿಹಾಳ, ಲಾಲಸಾಬ್‌ ಆಗ್ರಹಿಸಿದರು.

**

ಕಳಪೆ ಕಾಮಗಾರಿ ಕುರಿತು ನಗರಸಭೆ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. ಶುದ್ಧ ನೀರಿನ ಘಟಕದಿಂದ 6ನೇ ಅಡ್ಡ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಆರಂಭವಾಗಿದೆ

- ಶಿವಲೀಲಾ ಅಕ್ಕಿ, 28ನೇ ವಾರ್ಡ್‌ ಸದಸ್ಯೆ

ಹುಚ್ಚೇಶ್ವರ ಅಣ್ಣಿಗೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry