4
ಕೆರೆ, ಚೆಕ್ ಡ್ಯಾಂ ನಿರ್ಮಿಸಿದ ರೈತ, ವಾರ್ಷಿಕ 75 ಸಾವಿರ ಕ್ಯುಬಿಕ್ ಮೀಟರ್ ನೀರು ಸಂಗ್ರಹ,

ಬರ ಪ್ರದೇಶದಲ್ಲಿ ನೀರು ಸಂಗ್ರಹಿಸಿದ ಭಗೀರಥ !

Published:
Updated:
ಬರ ಪ್ರದೇಶದಲ್ಲಿ ನೀರು ಸಂಗ್ರಹಿಸಿದ ಭಗೀರಥ !

ಹೊಳಲ್ಕೆರೆ: ‘ಸದಾ ಬರಕ್ಕೆ ತುತ್ತಾಗುವ ಪ್ರದೇಶ. ಸುತ್ತಲೂ ಬೋಳುಗುಡ್ಡಗಳಿದ್ದು, ಮಳೆಗಾಲದಲ್ಲಿ ಗುಡ್ಡದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ‌ಮಟ್ಟ ಗಣನೀಯವಾಗಿ ಕುಸಿದು ಹೋಗಿತ್ತು. ಕೈಕಟ್ಟಿ ಕುಳಿತರೆ ಈ ಭಾಗದ ರೈತರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಎಂದು ಜಾಗೃತಗೊಂಡ ಇಲ್ಲಿನ ಪ್ರಗತಿಪರ ರೈತ ಕೆ.ಸಿ.ದಿನೇಶ್ ನೀರು ಸಂಗ್ರಹಿಸಲು ಮುಂದಾದರು.

ತಾಲ್ಲೂಕಿನ ಗಡಿಭಾಗದಲ್ಲಿರುವ ಉಪ್ಪರಿಗೇನಹಳ್ಳಿಯ ರೈತ ದಿನೇಶ್ ಈ ಭಾಗದ ರೈತರ ಪಾಲಿಗೆ ಸಂಜೀವಿನಿಯಾಗಿದ್ದಾರೆ. ತಮ್ಮ ಜಮೀನಿನ ಪಕ್ಕದಲ್ಲಿರುವ ಗುಡ್ಡದಲ್ಲಿ ಕೆರೆ, ಗೋಕಟ್ಟೆ, ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವ ಮೂಲಕ  ಈ ಭಾಗದ ಜನರ ಪಾಲಿಗೆ ಭಗೀರಥರಾಗಿದ್ದಾರೆ!

75 ಸಾವಿರ ಕ್ಯುಬಿಕ್ ಮೀಟರ್ ನೀರು ಸಂಗ್ರಹ: ರೈತ ಕೆ.ಸಿ.ದಿನೇಶ್ ಕೃಷಿ ಇಲಾಖೆಯ ಸಹಯೋಗದಲ್ಲಿ ಕಾಡಂಚಿನಲ್ಲಿ ಒಂದು ಸಮುದಾಯ ಕೆರೆ ಹಾಗೂ ಮೂರು ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಇವರು ನಿರ್ಮಿಸಿದ ಕೆರೆ 45 ಸಾವಿರ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, 10 ಸಾವಿರ ಕ್ಯುಬಿಕ್ ಮೀಟರ್ ಸಾಮರ್ಥ್ಯದ ಗೋಕಟ್ಟೆ, 20 ಸಾವಿರ ಕ್ಯುಬಿಕ್ ಮೀಟರ್ ಸಾಮರ್ಥ್ಯದ ಚೆಕ್ ಡ್ಯಾಂ ಹಾಗೂ ಕೃಷಿ ಹೊಂಡ ನಿರ್ಮಿಸಿದ್ದಾರೆ. ಈಚೆಗೆ ಸುರಿದ ಮಳೆಗೆ ಇವರು ನಿರ್ಮಿಸಿರುವ ಎಲ್ಲ ಜಲಾಗಾರಗಳು ಭರ್ತಿಯಾಗಿದ್ದು, ಸುತ್ತಲಿನ ರೈತರ ಮೊದಗಲ್ಲಿ ಮಂದಹಾಸ ಮೂಡಿದೆ.

10 ಎಕರೆಯಲ್ಲಿ ಶ್ರೀಗಂಧ: ಬೆಟ್ಟದ ಪಕ್ಕದ ಪ್ರಶಾಂತ ವಾತಾವರಣದಲ್ಲಿ ಜಮೀನು ಹೊಂದಿರುವ ರೈತ ದಿನೇಶ್ 10 ಎಕರೆಯಲ್ಲಿ ಶ್ರೀಗಂಧ ಬೆಳೆದಿದ್ದಾರೆ. 7 ವರ್ಷ ಪ್ರಾಯದ 3 ಸಾವಿರ ಶ್ರೀಗಂಧದ ಮರಗಳಿದ್ದು, ಇಡೀ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ವಿಭಿನ್ನ ಪ್ರಯೋಗಗಳನ್ನು ನಡೆಸುವ ದಿನೇಶ್ ಗೋಡಂಬಿ, ಸೇಬು ಬೆಳೆಯಲು ಮುಂದಾಗಿದ್ದಾರೆ.

‘ನಾನು ಪದವಿ ವ್ಯಾಸಂಗ ಮಾಡಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೆ. ಗಿಡ, ಮರಗಳನ್ನು ಬೆಳೆಸುವ ಉದ್ದೇಶದಿಂದಲೇ 2005ರಲ್ಲಿ ಗ್ರಾಮದಿಂದ ದೂರ ಇರುವ ಗಿರಿಧಾಮದಂತಹ ಪ್ರದೇಶದಲ್ಲಿ 20 ಎಕರೆ ಜಮೀನು ಖರೀದಿಸಿದ್ದೆ. ಆದಾಯ ಗಳಿಕೆಯೊಂದಿಗೆ ಪರಿಸರವನ್ನೂ ಉಳಿಸುವ ದೃಷ್ಠಿಯಿಂದ ಶ್ರೀಗಂಧದ ಮರಗಳನ್ನು ಬೆಳೆಸಿದ್ದೇನೆ. 3 ಸಾವಿರ ಸಸಿಗಳನ್ನು ಬೆಳೆಸುವುದು ಸುಲಭದ ಮಾತಲ್ಲ. ಮೊದಲ ಎರಡು ವರ್ಷ ಹನಿ ನೀರಾವರಿ ಮೂಲಕ ಸಸಿಗಳನ್ನು ಪೋಷಿಸಿದ್ದೆ. ಈಗ ಐದು ವರ್ಷಗಳಿಂದ ಮಳೆಯ ಆಶ್ರಯದಲ್ಲೇ ಮರಗಳು ಬೆಳೆದಿವೆ. ಕೆರೆ, ಗೋಕಟ್ಟೆ ನಿರ್ಮಿಸಿರುವುದರಿಂದ ಸುತ್ತಲಿನ ಹತ್ತಾರು ಕಿ.ಮೀ. ದೂರದವರೆಗೆ ಅಂತರ್ಜಲ ಹೆಚ್ಚಿದೆ. ಕಾಡುಪ್ರಾಣಿಗಳು, ಸುತ್ತಲಿನ ಹಳ್ಳಿಗಳ ಕುರಿ, ಮೇಕೆ, ಹಸು, ಎಮ್ಮೆಗಳು ಇದೇ ನೀರು ಅವಲಂಬಿಸಿವೆ’ ಎನ್ನುತ್ತಾರೆ ರೈತ ದಿನೇಶ್.

**

 ಗಿಡ, ಮರಗಳನ್ನು ಬೆಳೆಸುವ ಉದ್ದೇಶದಿಂದಲೇ ಗುಡ್ಡದ ಸಮೀಪ 20 ಎಕರೆ ಜಮೀನು ಖರೀದಿಸಿದ್ದು, 3 ಸಾವಿರ ಶ್ರೀಗಂಧದ ಮರಗಳನ್ನು ಬೆಳೆಸಿದ್ದೇನೆ

- ಕೆ.ಸಿ.ದಿನೇಶ್, ಉಪ್ಪರಿಗೇನಹಳ್ಳಿ ರೈತ 

-ಸಾಂತೇನಹಳ್ಳಿ ಸಂದೇಶ್ ಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry