ಗಂಗಾನದಿ ದರ್ಶನಕ್ಕೆ ಕರೆದೊಯ್ಯುವೆ

7
ಪೇಜಾವರ ಶ್ರೀ ಹೇಳಿಕೆಗೆ ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯೆ

ಗಂಗಾನದಿ ದರ್ಶನಕ್ಕೆ ಕರೆದೊಯ್ಯುವೆ

Published:
Updated:
ಗಂಗಾನದಿ ದರ್ಶನಕ್ಕೆ ಕರೆದೊಯ್ಯುವೆ

ಚಿಕ್ಕಮಗಳೂರು: ‘ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಗಂಗಾ ನದಿ ಶುದ್ಧೀಕರಣ ಕೆಲಸ ಸಾಕಷ್ಟು ಆಗಿದೆ. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಒಪ್ಪಿದರೆ ಅವರನ್ನು ವಾರಾಣಸಿಗೆ ಕರೆದೊಯ್ದು ನದಿಯನ್ನು ತೋರಿಸುತ್ತೇನೆ’ ಎಂದು ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಂಗಾ ಶುದ್ಧೀಕರಣ ಆಗಿಲ್ಲ, ಕಪ್ಪು ಹಣ ತಂದಿಲ್ಲ’ ಎಂದು ಪೇಜಾವರ ಶ್ರೀ ಪ್ರಸ್ತಾಪಿಸಿರುವುದು ಆಶ್ಚರ್ಯ ಮತ್ತು ಆಘಾತ ಉಂಟುಮಾಡಿದೆ. ಅವರು ಈಚೆಗೆ ಗಂಗಾ ನದಿಯನ್ನು ನೋಡಿಲ್ಲದಿರಬಹುದು ಎನಿಸುತ್ತಿದೆ. ಸ್ವಾಮೀಜಿ ಅವರನ್ನು ಕರೆದೊಯ್ದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು ಎಂಬ ಅಪೇಕ್ಷೆ ಇದೆ’ ಎಂದು ತಿಳಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಮುಂಚೆಯೂ ವಾರಾಣಸಿ, ಪ್ರಯಾಗ, ಕಾಶಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಗಂಗಾ ನದಿಯಲ್ಲಿ ಅರೆಬೆಂದ ಹೆಣಗಳ ತೇಲಾಟ, ಗಲೀಜು ಆಗ ಮಾಮೂಲಿಯಾಗಿತ್ತು. ಪವಿತ್ರ ನದಿ ಎಂಬ ಕಾರಣಕ್ಕೆ ಜಲವನ್ನು ಪ್ರೋಕ್ಷಣೆ ಮಾಡಿಕೊಂಡಿದ್ದೇನೆ. ಬಿಜೆಪಿ ಸರ್ಕಾರ ಬಂದ ನಂತರ ಶುದ್ಧೀಕರಣ ಕೆಲಸ ಸಾಕಷ್ಟು ಆಗಿದೆ. ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳ ಅಪೇಕ್ಷೆ ಏನಿದೆ ಎಂಬುದನ್ನು ತಿಳಿದು, ಆ ನಿಟ್ಟಿನಲ್ಲಿಯೂ ಗಮನ ಹರಿಸಲಾಗುವುದು’ ಎಂದು ಹೇಳಿದರು.

‘ದೇಶದಲ್ಲಿ ಅನೇಕ ಕಾಳ ಧನಿಕರ ಮೇಲೆ ದಾಳಿಗಳು ನಡೆದಿವೆ. ಕೋಟ್ಯಂತರ ರೂಪಾಯಿ ಕಪ್ಪು ಹಣ ಸಿಕ್ಕಿದೆ. ಪೇಜಾವರ ಸ್ವಾಮೀಜಿ ಅವರ ನಿರೀಕ್ಷೆ ಜಾಸ್ತಿ ಇರಬಹುದು. ಈ ಬಗ್ಗೆ ಸ್ವಾಮೀಜಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದರು.

ತೃತೀಯ ರಂಗ ಎದುರಿಸುವ ಶಕ್ತಿ ಬಿಜೆಪಿಗಿದೆ

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ವೇದಿಕೆಯಲ್ಲಿದ್ದ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಸೋನಿಯಾ ಗಾಂಧಿ ಅವರನ್ನು ಬಿಟ್ಟು ಉಳಿದವರೆಲ್ಲರೂ ಕಾಂಗ್ರೆಸ್‌ ಅನ್ನು ಒಂದೊಮ್ಮೆ ಬೈಯ್ದಿದ್ದರು. ಈಗ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು ಎಂಬ ಏಕೈಕ ಗುರಿ ಇಟ್ಟುಕೊಂಡು ಅವರೆಲ್ಲರೂ ಒಂದಾಗಿದ್ದಾರೆ. ಅವರನ್ನು ಎದುರಿಸುವ ಶಕ್ತಿ ಬಿಜೆಪಿಗೆ ಇದೆ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

‘ರಾಮ ಜನ್ಮಭೂಮಿ ವಿಚಾರದಲ್ಲಿ ರಾಮಭಕ್ತರಿಗೆ ಗುಂಡಿಟ್ಟು ಕೊಂದ ವ್ಯಕ್ತಿಗಳು, ಪಕ್ಷಗಳು ಒಂದಾಗಿವೆ. ಅವೆಲ್ಲವೂ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಈ ಎಲ್ಲ ಪಕ್ಷಗಳನ್ನು ಎದುರಿಸುವ ಶಕ್ತಿ ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನಾಯಕತ್ವಕ್ಕೆ ಇದೆ’ ಎಂದು ಉತ್ತರಿಸಿದರು.

‘ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಸೋಲಿಗೆ ಎಸ್‌.ಆರ್‌.ಪಾಟೀಲ ಅವರನ್ನು ಹೊಣೆ ಮಾಡಿದ್ದಾರೆ. ಗೆದ್ದಿದ್ದರೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವರ್ಚಸ್ಸು ಎಂದು ಹೇಳುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ನ ಅನೇಕ ಶಾಸಕರು ಬಿಜೆಪಿಯೊಟ್ಟಿಗೆ ಸಂಪರ್ಕದಲ್ಲಿ ಇದ್ದರು. ಸುಪ್ರೀಂ ಕೋರ್ಟ್‌ ಬಹುಮತ ಸಾಬೀತಿಗೆ ಒಂದೇ ದಿನ ಅವಕಾಶ ಕೊಟ್ಟಿತ್ತು. ಕಾಂಗ್ರೆಸ್‌ನವರು ತಮ್ಮ ಶಾಸಕರನ್ನು ಬಂಗಾರದ ಪಂಜರದಲ್ಲಿ ಇಟ್ಟುಕೊಂಡಿದ್ದರು. ಕಾಂಗ್ರೆಸ್‌ನಲ್ಲಿನ ಆಂತರಿಕ ಗೊಂದಲ, ಮೈತ್ರಿ ಒಪ್ಪದ ಕೆಲವರು ರಾಜೀನಾಮೆ ಕೊಟ್ಟು ಹೊರಬರಬಹುದು. ಆಗ, ಸರ್ಕಾರ ರಚನೆ ಬಿಜೆಪಿಗೆ ಅವಕಾಶವಾಗಬಹುದು’ ಎಂದು ಉತ್ತರಿಸಿದರು.

‘ಮುದ್ರಾ’ 12.84 ಕೋಟಿ ಉದ್ಯೋಗ

ಚಿಕ್ಕಮಗಳೂರು: ‘ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಮುದ್ರಾ ಯೋಜನೆಯಡಿ 12.84 ಕೋಟಿ ಉದ್ಯೋಗಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿದೆ. ಈ ಪೈಕಿ ದಲಿತರಿಗೆ ಶೇ 61 ಹಾಗೂ ಶೇ 79 ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ’ ಎಂದು ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಮುದ್ರಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದವರಿಗೆ ಶೇ 50 ಪ್ರಾಧಾನ್ಯ ನೀಡಲಾಗಿದೆ. ಉಜ್ವಲಾ ಯೋಜನೆಯಡಿ 3.8 ಕೋಟಿ ಎಲ್‌ಪಿಜಿ ಸೌಕರ್ಯ ಕಲ್ಪಿಸಲಾಗಿದೆ. ಈ ಯೋಜನೆಯಡಿ 2020ರ ಹೊತ್ತಿಗೆ 8 ಕೋಟಿ ಎಲ್‌ಪಿಜಿ ಸೌಕರ್ಯ ಕಲ್ಪಿಸುವ ಗುರಿ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಿಂದುಳಿದವರಿಗೆ ಸಂವಿಧಾನದತ್ತ ಹಕ್ಕು ನೀಡುವ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕಾಂಗ್ರೆಸ್‌ ಕೈವಾಡದಿಂದ ರಾಜ್ಯಸಭೆಯಲ್ಲಿ ಅಂಕಿತ ಸಿಗದೆ ಮಸೂದೆ ಬಾಕಿ ಉಳಿಯಿತು. ರಾಜ್ಯಸಭೆಯಲ್ಲಿ ಬಿಜೆಪಿಗೆ ಈಗ ಹೆಚ್ಚು ಸ್ಥಾನ ಇದೆ. ಈ ಮಸೂದೆಗೆ ಅನುಮೋದನೆ ನೀಡುವ ಕೆಲಸವನ್ನು ಬಿಜೆಪಿ ಮಾಡಲಿದೆ. ತ್ರಿವಳಿ ತಲಾಖ್‌ ಮಸೂದೆಯೂ ಲೋಕಸಭೆಯಲ್ಲಿ ಅನುಮೋದನೆಯಾಗಿತ್ತು. ಕಾಂಗ್ರೆಸ್‌ನವರು ರಾಜ್ಯಸಭೆಯಲ್ಲಿ ಅನುಮೋದಿಸಿಲ್ಲ’ ಎಂದರು.

‘ಈ ಮೊದಲು ದಿನಕ್ಕೆ 69 ಕಿ.ಮೀ ನಿರ್ಮಾಣವಾಗುತ್ತಿದ್ದರೆ, ಈಗ 134 ಕಿ.ಮೀ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 2013–14ರಲ್ಲಿ 90,857 ನಿರ್ಮಾಣವಾಗಿದ್ದರೆ, 2017–18ರಲ್ಲಿ 1.20 ಲಕ್ಷ ಕಿ.ಮೀ ನಿರ್ಮಾಣವಾಗಿದೆ. 2013–14ರಲ್ಲಿ 2,926 ಕೀ.ಮಿ ನಿರ್ಮಾಣವಾಗಿದ್ದರೆ, 2017–18ರಲ್ಲಿ 4454 ಕಿ.ಮೀ ನಿರ್ಮಾಣವಾಗಿದೆ. 2016ರವರೆಗೆ ದೇಶದಲ್ಲಿ ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ 75, ಎರಡು ವರ್ಷದಲ್ಲಿ 25 ವಿಮಾನ ನಿಲ್ದಾಣಗಳು ಹೆಚ್ಚಾ

ಗಿವೆ. ಸ್ವಚ್ಛ ಭಾರತ್‌ ಅಭಿಯಾನದಡಿ 7.8 ಕೋಟಿ ಶೌಚಾಲಯ, ಶಾಲೆ–ಕಾಲೇಜುಗಳನ್ನು 4.10 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದರು.

‘ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ಬಹಳಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. 21 ರಾಜ್ಯದಲ್ಲಿ ವಿವಿಧ ಪಕ್ಷಗಳ ಮೈತ್ರಿಯೊಂದಿಗೆ ಆಡಳಿತದಲ್ಲಿದೆ. ಹಿಂದುತ್ವ ಮತ್ತು ಪ್ರಧಾನಿ ಮೋದಿ ಅವರನ್ನು ಜನ ಬೆಂಬಲಿಸಿದ್ದಾರೆ. ಬಿಜೆಪಿ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಆಯನೂರು ಮಂಜುನಾಥ್‌ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಗಣೇಶ್‌ ಕಾರ್ನಿಕ್‌ ಕಣಕ್ಕಿಳಿದಿದ್ದಾರೆ. ಇಬ್ಬರೂ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದು, ಮತದಾರರು ಬೆಂಬಲಿಸುವ ವಿಶ್ವಾಸ ಇದೆ’ ಎಂದು ಹೇಳಿದರು.

‘ನೈರುತ್ಯ ಪದವೀಧರ ಕ್ಷೇತ್ರದ 30 ವಿಧಾನಸಭಾ ಕ್ಷೇತ್ರಗಳಲ್ಲಿ 27ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಕ್ಷೇತ್ರ ವ್ಯಾಪ್ತಿಯೂ ಐದು ಕಡೆಗಳಲ್ಲಿ ಬಿಜೆಪಿ ಸಂಸದರು ಇದ್ದಾರೆ. ಅವರೆಲ್ಲರೂ ಅಭ್ಯರ್ಥಿಗಳ ಪರವಾಗಿ ದುಡಿಯಲಿದ್ದಾರೆ’ ಎಂದರು.

**

ಕಾಂಗ್ರೆಸ್‌ ಈಗ ರಾಷ್ಟ್ರೀಯ ಪಕ್ಷ ಅಲ್ಲ, ಅದು ಪ್ರಾದೇಶಿಕ ಪಕ್ಷ. ಜೆಡಿಎಸ್‌ ಜತೆಗೆ ಹೆಣಗಾಡುವುದಕ್ಕಿಂತ ಆ ಪಕ್ಷದೊಂದಿಗೆ ಕಾಂಗ್ರೆಸ್‌ ವಿಲೀನವಾಗುವುದು ಒಳಿತು

ಕೆ.ಎಸ್‌.ಈಶ್ವರಪ್ಪ, ಬಿಜೆಪಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry