ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಕರಣಿಗಳಿಗೆ ನಗರಸಭೆ ಕಾಯಕಲ್ಪ

ನಗರದ 20ನೇ ವಾರ್ಡ್‌ನಲ್ಲಿ ಭೂಗಳ್ಳರ ಸಂಚಿನಿಂದ ಹಾಳಾಗಿದ್ದ ಐತಿಹಾಸಿಕ ಜಲಮೂಲಕ್ಕೆ ಹೊಸ ಮೆರುಗು ತಂದ ಪುನಶ್ಚೇತನ
Last Updated 5 ಜೂನ್ 2018, 13:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭೂಗಳ್ಳರ ಒಳಸಂಚಿಗೆ ಬಲಿಯಾಗಿ ಪಾಳು ಸ್ಥಿತಿಯಲ್ಲೇ ಉಳಿದಿದ್ದ ನಗರದ ಭಾರತಿನಗರದ (20ನೇ ವಾರ್ಡ್‌) ಪುರಾತನ ಪುಷ್ಕರಣಿ ಹೊಸ ರೂಪ ಪಡೆದಿದೆ. ನಗರಸಭೆ ಕೈಗೊಂಡ ಪುನಶ್ಚೇತನ ಕಾಮಗಾರಿಯಿಂದ ಸುಂದರವಾಗಿ ಕಂಗೊಳಿಸುತ್ತ ಎಲ್ಲರಲ್ಲೂ ಸಂತಸ ಮೂಡಿಸಿದೆ.

ಬಹು ಹಿಂದೆ ರಾಜರು, ಪಾಳೇಗಾರರ ಆಳ್ವಿಕೆಯಲ್ಲಿ ಈ ಭಾಗದ ಮುಖ್ಯ ಜಲಮೂಲಗಳ ಪೈಕಿ ಒಂದಾಗಿದ್ದ ಪುಷ್ಕರಣಿ 15 ವರ್ಷಗಳಿಂದ ಪಾಳು ಬಿದ್ದಿತ್ತು. ಚಿನ್ನದ ಬೆಲೆಯ ಇಲ್ಲಿನ ಜಾಗದ ಮೇಲೆ ಕಣ್ಣು ಹಾಕಿದ್ದ ಕೆಲವರು ಆಪೋಶನ ಮಾಡಿಕೊಳ್ಳುವ ಸಂಚು ನಡೆಸಿದ್ದರು. ನಗರದ ಎಲ್ಲಿಯೇ ಕಟ್ಟಡ ಒಡೆದರೂ ಅದರ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯುತ್ತಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ 2015ರ ಮಾರ್ಚ್‌ನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಸಮಾನ ಮನಸ್ಕರ ಸ್ಪಂದನಾ ಸಮಿತಿ ಹಾಗೂ ಇತರ ಸಂಘಟನೆಗಳ ಮುಖಂಡರು ಪುಷ್ಕರಣಿ ಪುನಶ್ಚೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನು ಗಮನಿಸಿದ ಅಂದಿನ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು 2015ರ ಏಪ್ರಿಲ್‌ನಲ್ಲಿ ಪುಷ್ಕರಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆಗ ಅವರು ಪುಷ್ಕರಣಿ ಮುಚ್ಚಲು ಯತ್ನಿಸುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಅಲ್ಲದೆ  ಪುಷ್ಕರಣಿಯಲ್ಲಿ ಸುರಿದಿದ್ದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಸುತ್ತಲೂ ಕಾಂಪೌಂಡ್ ನಿರ್ಮಿಸಿ ಒತ್ತುವರಿ ತಡೆಗಟ್ಟಲು ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.

ಆದರೆ ಎರಡು ವರ್ಷ ಕಳೆದರೂ ಜಿಲ್ಲಾಧಿಕಾರಿ ಆದೇಶ ಅನುಷ್ಠಾನಕ್ಕೆ ಬಂದಿರಲಿಲ್ಲ. ‘ಪ್ರಜಾವಾಣಿ’ 2017ರ ಫೆಬ್ರವರಿಯಲ್ಲಿ ಮತ್ತೆ ಪುಷ್ಕರಣಿ ದುಃಸ್ಥಿತಿ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ನಗರಸಭೆ ಸ್ಥಳೀಯ ಸದಸ್ಯರು ಮತ್ತು ಅಧಿಕಾರಿಗಳು ಪುಷ್ಕರಣಿಯತ್ತ ವಿಶೇಷ ಗಮನ ಹರಿಸಿ ಪುನಶ್ಚೇತನ ಕಾರ್ಯದತ್ತ ಗಮನ ಹರಿಸಿದ್ದರು.

ಕಳೆದ ಜನವರಿಯಲ್ಲಿ ನಗರಸಭೆ 13ನೇ ಹಣಕಾಸು ಯೋಜನೆಯಡಿ ₹ 11.50 ಲಕ್ಷ ವೆಚ್ಚದಲ್ಲಿ ಈ ಪುಷ್ಕರಣಿ ಪುನಶ್ಚೇತನ ಕಾರ್ಯ ಕೈಗೆತ್ತಿಕೊಂಡಿತು. 20ನೇ ವಾರ್ಡ್ ಸದಸ್ಯೆ ಎಂ.ಜಯಮ್ಮ ಅವರ ವಿಶೇಷ ಮುತುವರ್ಜಿಯ ಫಲವಾಗಿ ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿದ್ದ ಜಲಮೂಲದ ಆಳದಲ್ಲಿ ನೀರು ನಳನಳಿಸುತ್ತಿದೆ. ಸದ್ಯ ಪುಷ್ಕರಣಿಯ ಮೂರು ದಿಕ್ಕುಗಳಲ್ಲಿ ತಂತಿಬೇಲಿ ನಿರ್ಮಿಸಲಾಗಿದೆ. ಇನ್ನೊಂದು ಕಡೆ ಬೇಲಿ ಅಳವಡಿಸುವ ಕೆಲಸ ಬಾಕಿ ಇದ್ದು, ಕಾರ್ಯ ಪ್ರಗತಿಯಲ್ಲಿದೆ.

‘ಇಲ್ಲಿ ಒಂದು ಚದರಡಿ ಜಾಗಕ್ಕೆ ₹ 5,000 ಬೆಲೆ ಇದೆ. ಅದಕ್ಕಾಗಿ ಭೂಗಳ್ಳರ ಕಾಕದೃಷ್ಟಿಗೆ ದೇವರ ಜಾಗ ಅಸ್ತಿತ್ವ ಕಳೆದುಕೊಂಡಿತ್ತು. ಅದನ್ನು ನೋಡಿ ಸತ್ಯ, ಧರ್ಮ, ನೀತಿ ಎಲ್ಲಿವೆ ಎಂದು ನೋವಾಗಿತ್ತು. ನಿತ್ಯ ದೇವರ ಹೆಸರು ಹೇಳಿಕೊಂಡು ತಿರುಗುವ ಕೆಲವರು ಮಾಡಿದ ನೀಚ ಕೆಲಸಕ್ಕೆ ಯಾವಾಗ ಶಿಕ್ಷೆಯಾಗುತ್ತದೆಯೋ ಎಂದು ಕಾಯುತ್ತಿದ್ದೆವು. ಇದೀಗ ಪುಷ್ಕರಣಿ ಸ್ವಚ್ಛಗೊಂಡಿದ್ದು ನೋಡಿ ತುಂಬಾ ಸಂತಸವಾಗಿದೆ’ ಎಂದು ಸ್ಥಳೀಯ ನಿವಾಸಿ ಲಕ್ಷ್ಮೀಪತಿ ಹೇಳಿದರು.

10 ವರ್ಷ ಹೋರಾಟ ನಡೆಸಿದೆ

ಪುರಾತನ ಕಾಲದ ಪಳೆಯುಳಿಕೆಯನ್ನು ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ಉದ್ದೇಶದಿಂದ ನಾವು ಉಳಿಸಿಕೊಳ್ಳುವ ಅಗತ್ಯವಿದೆ. ಆದರೆ ಆ ಜಾಗವನ್ನು ಮುಚ್ಚಿ ಕೆಲವರು ನಿವೇಶನ ಮಾಡಿಕೊಳ್ಳಲು ಹವಣಿಸಿದ್ದರು. ಆದರೆ ನಾನು 10 ವರ್ಷಗಳಿಂದ ಅದರ ವಿರುದ್ಧ ಹೋರಾಡುತ್ತ, ಅದಕ್ಕೆ ನಾನು ಅವಕಾಶ ನೀಡಲಿಲ್ಲ. ಪುಷ್ಕರಣಿ ಕಾಯಕಲ್ಪದ ಕಾರ್ಯ ನನಗೆ ಆತ್ಮತೃಪ್ತಿ ತಂದಿದೆ. ಪುಷ್ಕರಣಿಗೆ ಹೊಂದಿಕೊಂಡಂತೆ ಆಂಜನೇಯ ದೇವಸ್ಥಾನಕ್ಕೆ ಸೇರಿದ ಸುಮಾರು 10 ಗುಂಟೆ ಜಾಗವಿದೆ. ಅಲ್ಲಿ ದೇವಾಲಯ ನಿರ್ಮಿಸಲು ಉದ್ದೇಶಿಸಿದ್ದೇವೆ
– ಎಂ.ಜಯಮ್ಮ, ನಗರಸಭೆ 20ನೇ ವಾರ್ಡ್ ಸದಸ್ಯೆ

ಶ್ಲಾಘನೀಯ ಕಾರ್ಯ

ಸ್ಥಳೀಯರು ಪುಷ್ಕರಣಿಯನ್ನೇ ತ್ಯಾಜ್ಯದ ಗುಂಡಿ ಮಾಡಿಕೊಂಡಿದ್ದರು. ಉಂಡುಳಿದ ಆಹಾರ, ಅಡುಗೆ ಮನೆ ತ್ಯಾಜ್ಯವನ್ನು ಅದರಲ್ಲಿ ಎಸೆಯುತ್ತಿದ್ದರು. ಅದರಿಂದಾಗಿ ನಾಯಿಗಳ ಹಾವಳಿಯೂ ಹೆಚ್ಚಾಗಿತ್ತು. ನಾಯಿಗಳ ಹಿಂಡು ತ್ಯಾಜ್ಯವನ್ನು ಎಳೆದಾಡಿ, ಇನ್ನಷ್ಟು ಗಲೀಜು ಮಾಡುತ್ತಿದ್ದವು. ಇದರಿಂದ ಸೊಳ್ಳೆ, ಹುಳು–ಹುಪ್ಪಟೆ ಕಾಟವೂ ವಿಪರೀತವಾಗಿತ್ತು. ಪುಷ್ಕರಣಿ ಅಭಿವೃದ್ಧಿ ಮಾಡಿರುವುದು ಶ್ಲಾಘನೀಯ ಕಾರ್ಯ
– ರವಿಕುಮಾರ್, ಕಂದವಾರ ಬಾಗಿಲು ನಿವಾಸಿ

ಯುವ ಪೀಳಿಗೆ ಮರೆತೇ ಬಿಟ್ಟಿತ್ತು

ಭಾರತಿನಗರ ಪುಷ್ಕರಣಿ ಬಗ್ಗೆ ಯುವ ಪೀಳಿಗೆಯವರಿಗೆ ಗುರುತೇ ಇಲ್ಲದಂತಾಗಿತ್ತು. ತಿಪ್ಪೆಗುಂಡಿಯಂತಾಗಿದ್ದ ಪುಷ್ಕರಣಿ ಯಾರ ಕಣ್ಣಿಗೂ ಬೀಳತ್ತಲೇ ಇರಲಿಲ್ಲ. ನಗರದ ಪ್ರಮುಖ ರಸ್ತೆಯಾದ ಬಿ.ಬಿ.ರಸ್ತೆಯಿಂದ ಕೆಲವೇ ಅಡಿಗಳಷ್ಟು ದೂರವಿದ್ದರೂ ಇದಕ್ಕೆ ಸ್ವಚ್ಛತೆ ಭಾಗ್ಯ ದೊರೆತಿರಲಿಲ್ಲ. ಇದೀಗ ಸ್ವಚ್ಛಗೊಂಡಿರುವ ಆ ಜಾಗ ಎಲ್ಲ ಗಮನ ಸೆಳೆಯುತ್ತಿದೆ. ನೋಡಲು ತುಂಬಾ ಖುಷಿಯಾಗುತ್ತದೆ
ಕೃಷ್ಣವೇಣಿ, ಚಾಮರಾಜಪೇಟೆ ನಿವಾಸಿ

ಎಲ್ಲ ಪುಷ್ಕರಣಿ ಅಭಿವೃದ್ಧಿಯಾಗಲಿ

ಅನೇಕ ಬಾರಿ ನಾನು ಭಾರತಿ ನಗರದಲ್ಲಿ ತಿರುಗಾಡಿದ್ದರೂ ಅಲ್ಲಿ ಪುಷ್ಕರಣಿ ಇದೆ ಎನ್ನುವುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಅತ್ತ ಹೋದಾಗ ತಂತಿ ಬೇಲಿ ಕಂಡು ಕುತೂಹಲಕ್ಕೆ ಹತ್ತಿರ ಹೋಗಿ ಇಣುಕಿದರೆ ಬೃಹತ್ ಪುಷ್ಕರಣಿ ಕಂಡು ಸೋಜಿಗ, ವಿಸ್ಮಯ ಎನಿಸಿತು. ನಗರದಲ್ಲಿರುವ ಎಲ್ಲ ಪುರಷ್ಕರಣಿಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ‌
– ಚಂದ್ರಕಾಂತ್, ಅಣಕನೂರು ನಿವಾಸಿ

ಪುಷ್ಕರಣಿಗಳ ಪುನಶ್ಚೇತನದಿಂದ ನಮ್ಮ ಅಂತರ್ಜಲ ವೃದ್ಧಿಯಾಗಲಿದೆ. ಮುಂಬರುವ ದಿನಗಳಲ್ಲಿ ಕಂದವಾರ ಬಾಗಿಲ ಬಳಿ ಇರುವ ಚೆನ್ನಮ್ಮ ಬಾವಿ ಪುಷ್ಕರಣಿ ಪುನಶ್ಚೇತನಗೊಳಿಸುತ್ತೇವೆ
ಉಮಾಕಾಂತ್, ನಗರಸಭೆ ಆಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT