ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಿಕ್ಷಿತರಿಂದಲೇ ಹೆಚ್ಚು ಮಾಲಿನ್ಯ

ನಗರದ ಅಂದಗೆಡಿಸುತ್ತಿದೆ ಪ್ಲಾಸ್ಟಿಕ್‌ ತ್ಯಾಜ್ಯ, ಚಿಂದಿ ಆಯುವವರಿಂದ ಕಸ ವಿಲೇವಾರಿ
Last Updated 5 ಜೂನ್ 2018, 13:20 IST
ಅಕ್ಷರ ಗಾತ್ರ

ಬೀದರ್‌: ‘ಪ್ಲಾಸ್ಟಿಕ್‌ ಕಸ’ ಪರಿಸರಕ್ಕೆ ಮಾರಕ ಎನ್ನುವುದು ಪ್ರತಿಯೊಬ್ಬರಿಗೆ ಗೊತ್ತಿದ್ದರೂ ಬಹುತೇಕರು ಮತ್ತೆ ಅದನ್ನೇ ಬಳಸುತ್ತಿರುವುದರಿಂದ ಜೀವ ಸಂಕುಲ ಅಪಾಯಕ್ಕೆ ಸಿಲುಕುತ್ತಿದೆ. ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಹೆಚ್ಚುತ್ತಲೇ ಇರುವ ಕಾರಣ ನಗರಸಭೆಗೂ ಇದರ ವಿಲೇವಾರಿ ತಲೆನೋವಾಗಿದೆ.

ಫ್ಲೆಕ್ಸ್‌, ಪ್ಲಾಸ್ಟಿಕ್ ಬಾವುಟ, ತಟ್ಟೆ, ಲೋಟ, ಬಾಟಲಿ, ಮೊಬೈಲ್‌, ಟಿ.ವಿ., ಹಾಳಾದ ಕುರ್ಚಿ, ಬಕೆಟ್‌, ಮಗ್‌, ಒಡೆದ ಕೊಡ, ಗುಟ್ಕಾ ಚೀಟಿಗಳು ನಿತ್ಯ ರಾಶಿ ರಾಶಿ ಸಂಗ್ರಹವಾಗುತ್ತಿವೆ. ಜನರು ಮನೆಗಳ ಮುಂದಿನ ಗಟಾರಗಳಲ್ಲೇ ಪ್ಲಾಸ್ಟಿಕ್‌ ಕಸ ಎಸೆಯುತ್ತಿರುವ ಕಾರಣ ಗಟಾರಗಳು ತುಂಬಿಕೊಳ್ಳುತ್ತಿವೆ. ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.

ಪರಂಪರೆ ನಗರದಲ್ಲಿ ಸುಶಿಕ್ಷಿತರಿಂದಲೇ ಹೆಚ್ಚು ಪ್ಲಾಸ್ಟಿಕ್‌ ಕಸ ಸಂಗ್ರಹವಾಗುತ್ತಿದ್ದು, ಅನಕ್ಷರಸ್ಥರು ಅದರ ವಿಲೇವಾರಿಯಲ್ಲಿ ತೊಡಗಿದ್ದಾರೆ. ಚಿಂದಿ ಆಯುವವರೇ ಈ ಅನಕ್ಷರಸ್ಥರು. ನಗರದಲ್ಲಿ ನಿತ್ಯ 62 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿನ 1.5 ಟನ್‌ನಿಂದ 2 ಟನ್‌ ಪ್ಲಾಸ್ಟಿಕ್‌ ಕಸವನ್ನು ಚಿಂದಿ ಆಯುವವರೇ ವಿಲೇವಾರಿ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

‘ಹಳ್ಳಿಗಳಿಗೆ ಹೋಲಿಸಿದರೆ ನಗರದಲ್ಲೇ ಪ್ಲಾಸ್ಟಿಕ್‌ ಕಸ ಹೆಚ್ಚು. ಶಿವನಗರದಲ್ಲಿರುವ 300 ಮನೆಗಳಿಗೆ ಸ್ವಚ್ಛತಾ ಸಿಬ್ಬಂದಿ ದಿನ ಬಿಟ್ಟು ದಿನ ಭೇಟಿ ಕೊಟ್ಟು ಕಸ ಸಂಗ್ರಹಿಸುತ್ತಿದ್ದಾರೆ. ಸುಶಿಕ್ಷಿತರ ಮನೆಯಲ್ಲೇ ಹೆಚ್ಚು ಪ್ಲಾಸ್ಟಿಕ್‌ ಕಸ ಸಂಗ್ರಹವಾಗುತ್ತಿದೆ. ಇಲ್ಲಿ ನಿತ್ಯ ಸರಾಸರಿ 150 ಕೆ.ಜಿ ಪ್ಲಾಸ್ಟಿಕ್‌ ಕಸ ಸಂಗ್ರಹವಾಗುತ್ತಿದೆ’ ಎಂದು ‘ಸಾಹಸ್’ ಸರ್ಕಾರೇತರ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ದೇವಪ್ಪ ನಾಯಕ ಹೇಳುತ್ತಾರೆ.

‘ನಗರದಲ್ಲಿ ಮೂರು ತಿಂಗಳು ಸಮೀಕ್ಷೆ ನಡೆಸಿದಾಗ ಚಿಂದಿ ಆಯುವ ಹೆಣ್ಣುಮಕ್ಕಳು ಬೆಳಗಾಗುತ್ತಲೇ ಪ್ಲಾಸ್ಟಿಕ್ ಪೇಪರ್, ನೀರಿನ ಬಾಟಲಿ, ಹಾಲಿನ ಪಾಕೇಟ್ ಸಂಗ್ರಹಿಸಿಕೊಂಡು ಒಯ್ಯುತ್ತಿರುವುದು ಕಂಡು ಬಂದಿತು. ಸಂಬಳ ಇಲ್ಲದಿದ್ದರೂ ಬೆಳಗಿನ ಜಾವ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಪೌರ ಕಾರ್ಮಿಕರ ಮೇಲಿನ ಸ್ವಚ್ಛತಾ ಕಾರ್ಯದ ಒತ್ತಡವೂ ಕಡಿಮೆ ಆಗಿದೆ’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ರವೀಂದ್ರ ಕಾಂಬಳೆ ಹೇಳುತ್ತಾರೆ.

‘ಬೀದರ್‌ನಲ್ಲಿ 40 ಗುಜರಿ ಅಂಗಡಿಗಳ ಮಾಲೀಕರು ಚಿಂದಿ ಆಯುವವರಿಂದ ಪ್ಲಾಸ್ಟಿಕ್‌ ಖರೀದಿಸುತ್ತಿದ್ದಾರೆ. ಚಿಂದಿ ಆಯುವವರು ಬೆಳಿಗ್ಗೆ ಎರಡು ಗಂಟೆ ಕೆಲಸ ಮಾಡಿ ಪ್ಲಾಸ್ಟಿಕ್ ತೂಕದ ಆಧಾರದ ಮೇಲೆ ಒಬ್ಬೊಬ್ಬರು ₹ 80 ರಿಂದ ₹ 120 ಪಡೆಯುತ್ತಿದ್ದಾರೆ. ಪರಿಸರ ಹಾನಿ ತಡೆಯುವ ದಿಸೆಯಲ್ಲಿ ಅವರು ಮಾಡುತ್ತಿರುವ ಕೆಲಸಕ್ಕೆ ಬೆಲೆ ಕಟ್ಟಲಾಗದು’ ಎನ್ನುತ್ತಾರೆ ಅವರು.

ಓಲ್ಡ್‌ಸಿಟಿಯಲ್ಲಿರುವ ಕಿರಾಣಿ, ಬಟ್ಟೆ, ಚಪ್ಪಲಿ, ಆಟಿಕೆ ಸಾಮಗ್ರಿ ಮತ್ತಿತರ ಅಂಗಡಿಗಳ ಮಾಲೀಕರು ನಿತ್ಯ ರಸ್ತೆ ಮೇಲೆಯೇ ಕಸ ಸುರಿಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಹರಡಿ ಪರಿಸರ ಹದಗೆಡಿಸುತ್ತಿದೆ. ಚರಂಡಿ, ಗಟಾರಗಳಿಗೆ ಬಿದ್ದು ಅವಾಂತರ ಸೃಷ್ಟಿ ಮಾಡುತ್ತಿದೆ.

‘ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆಯನ್ನು ಸರ್ಕಾರ ನಿಷೇಧಿಸಿರುವುದನ್ನು ಸಾರ್ವಜನಿಕರ ಗಮನಕ್ಕೆ ತರಲಾಗುತ್ತಿದೆ. ಮೊದಲ ಹಂತದಲ್ಲಿ ಪ್ಲಾಸ್ಟಿಕ್‌ ಬಳಕೆ ಹಾಗೂ ಮಾರಾಟ ತಡೆಯುವ ಉದ್ದೇಶದಿಂದ ಅಂಗಡಿಗಳ ಮಾಲೀಕರು, ಶಾದಿಮಹಲ್, ಕಲ್ಯಾಣ ಮಂಟಪ, ಫಂಕ್ಷನ್‌ ಹಾಲ್‌ ಮಾಲೀಕರ ಸಭೆ ಕರೆದು ತಿಳಿವಳಿಕೆ ನೀಡಲಾಗಿದೆ. ಎರಡನೇ ಹಂತದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಬ್ಯಾಗ್‌ ಕಂಡು ಬಂದರೆ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಹೇಳುತ್ತಾರೆ.

19 ರಿಂದ ಜಿಲ್ಲೆ ಪ್ಲಾಸ್ಟಿಕ್‌ ಮುಕ್ತ

ಬೀದರ್‌: ಜೂನ್‌ 19ರ ನಂತರ ಪ್ಲಾಸ್ಟಿಕ್‌ ಬಳಸದಂತೆ ಜಿಲ್ಲಾ ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ. ಪ್ಲಾಸ್ಟಿಕ್‌ ಚೀಲ, ತಟ್ಟೆ, ಲೋಟ, ಚಮಚ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮಾಲೀಕರಿಗೂ ಎಚ್ಚರಿಕೆ ನೀಡಿದೆ.

ಬೀದರ್‌ ನಗರಸಭೆಯ ಅಧಿಕಾರಿಗಳು ಒಂದು ವರ್ಷದ ಅವಧಿಯಲ್ಲಿ ಸುಮಾರು 100 ಅಂಗಡಿಗಳ ಮೇಲೆ ದಾಳಿ ನಡೆಸಿ 2 ಸಾವಿರ ಕೆಜಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕರಿಂದ ₹ 3 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ನಿರಂತರ ದಾಳಿ ನಡೆಯದ ಕಾರಣ ವ್ಯಾಪಾರಿಗಳು ಈಗಲೂ ತೆರೆಮರೆಯಲ್ಲಿ ವಹಿವಾಟು ನಡೆಸಿರುವುದು ಕಂಡು ಬರುತ್ತಿದೆ.

ಪ್ಲಾಸ್ಟಿಕ್‌ ಪರ್ಯಾಯ ಬಳಕೆಗೆ ಸೂಚನೆ ನೀಡಲಾಗಿದೆ. ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಜಿಲ್ಲಾಧಿಕಾರಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಶಾರದಾ ರುಡ್‌ಸೆಟಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಬಟ್ಟೆ, ಸೆಣಬು ಹಾಗೂ ಕಾಗದದಿಂದ ಕೈಚೀಲ ತಯಾರಿಸುವ ತರಬೇತಿ ನೀಡಲಾಗುತ್ತಿದೆ.

‘ಜಿಲ್ಲೆಯ 20 ಮಹಿಳಾ ಸ್ವಸಹಾಯ ಗುಂಪುಗಳ 60 ಸದಸ್ಯೆಯರು 10 ದಿನಗಳ ತರಬೇತಿ ಪಡೆಯುತ್ತಿದ್ದಾರೆ. ಗೃಹಿಣಿಯರು ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಬಟ್ಟೆಯಿಂದ ಕೈಚೀಲ ತಯಾರಿಸಬಹುದು. ಜೂನ್‌ 5 ರಂದು ಪೇಪರ್‌ ಬ್ಯಾಗ್‌ ತರಬೇತಿ ಆರಂಭವಾಗಲಿದೆ. ಜಿಲ್ಲಾ ಆಡಳಿತವು ತರಬೇತಿ ಪೂರೈಸಿದವರಿಗೆ ಯಂತ್ರೋಪಕರಣಗಳ ಖರೀದಿಗೆ ಸಾಲ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ.

‘ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ಮಾಡುತ್ತಿದ್ದೇವೆ. ಅಂಗಡಿಗಳ ಮಾಲೀಕರಿಗೂ ತಿಳಿವಳಿಕೆ ನೀಡಿದ್ದೇವೆ. ಇನ್ನು ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಹೇಳಿದ್ದಾರೆ.

ನಗರಕ್ಕೆ ಬರಲಿವೆ 16 ಎಲೆಕ್ಟ್ರಿಕ್‌ ವಾಹನ

ಬೀದರ್‌: ಮಾರ್ಚ್‌ ಎರಡನೇ ವಾರದಲ್ಲಿ ಅಡಾಪ್ಟ್‌ ಮೋಟರ್ಸ್‌ ಕಂಪನಿಯ ಹೊಸ ಎಲೆಕ್ಟ್ರಿಕ್‌ ವಾಹನವನ್ನು ಕಸ ವಿಲೇವಾರಿಗೆ ಬಳಸಲಾಗಿತ್ತು. ಒಮ್ಮೆ ಚಾರ್ಜ್‌ ಮಾಡಿದರೆ 90 ಕಿ.ಮೀ ಚಲಿಸುತ್ತದೆ. ಪ್ರತಿ ಗಂಟೆಗೆ 30 ಕಿ.ಮೀ ಚಲಿಸುವ ಈ ವಾಹನ 400 ಕೆ.ಜಿ ಭಾರ ಸಾಗಿಸುತ್ತಿದೆ. ಬ್ಯಾಟರಿ ಚಾರ್ಜ್‌ ಮಾಡುವುದನ್ನು ಬಿಟ್ಟರೆ ಇದರ ನಿರ್ವಹಣಾ ಏನೂ ವೆಚ್ಚ ಇಲ್ಲ. ಹೀಗಾಗಿ ನಗರಸಭೆಯು 14ನೇ ಹಣಕಾಸು ನಿಧಿಯಲ್ಲಿ 16 ಹೊಸ ವಾಹನಗಳನ್ನು ಖರೀದಿಸಲು ನಿರ್ಧರಿಸಿದೆ.

‘ಎಲೆಕ್ಟ್ರಿಕ್‌ ವಾಹನಕ್ಕೆ ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿಲ್ಲ. ಬೈಕ್‌ ಓಡಿಸುವ ವ್ಯಕ್ತಿಗಳು ಇದನ್ನು ಸುಲಭವಾಗಿ ಚಲಾಯಿಸಬಹುದು. ಹೊಸ ವಾಹನಗಳಿಗೆ 16 ಚಾಲಕರು ಹಾಗೂ ಕ್ಲೀನರ್‌ಗಳನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ಮನೆಯಿಂದ ಒಣ ಹಾಗೂ ಹಸಿ ಕಸ ಬೇರ್ಪಡಿಸಲಾಗುವುದು. ಮೊದಲ ಹಂತದಲ್ಲೇ ಪ್ಲಾಸಿಕ್‌ ಕಸ ಬೇರ್ಪಡಿಸುವ ವ್ಯವಸ್ಥೆ ಶೀಘ್ರ ಆರಂಭವಾಗಲಿದೆ’ ಎಂದು ನಗರಸಭೆ ಆಯುಕ್ತ ಮನೋಹರ ತಿಳಿಸಿದ್ದಾರೆ.

**
ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯ ಇದೆ. ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಈಗಾಗಲೇ ಅಭಿಯಾನ ಆರಂಭಿಸಲಾಗಿದೆ
ಅನಿರುದ್ಧ ಶ್ರವಣ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT