ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಸಾವಿರ ಗಿಡಗಳ ರಕ್ಷಕ ಶಿವಪ್ಪ

ಪತ್ನಿಯೊಂದಿಗೆ ಸಸಿಗಳ ರಕ್ಷಣೆ ಮಾಡುತ್ತಿರುವ ಅರಣ್ಯ ಪಾಲಕ
Last Updated 5 ಜೂನ್ 2018, 13:47 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಸಮೀಪದ ಹನಗಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುತ್ತ ಮುತ್ತಲಿನ ಅರಣ್ಯ ಇಲಾಖೆಯ ಅಂದಾಜು ಐದಾರು ಎಕರೆ ಭೂ ಪ್ರದೇಶದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ಅದೇ ಗ್ರಾಮದ ಶಿವಪ್ಪ ದೇವಪ್ಪ ಗೊಂಗಡಿ ತಮ್ಮ ಪತ್ನಿ ಗಂಗವ್ವಗಳ ಸಹಕಾರದಿಂದ ಬೆಳೆಸುತ್ತಿದ್ದಾರೆ.

ತೋಟದ ಶಾಲೆಯ ನಾಗಪ್ಪ ಇಟಗೋಣಿ ಅವರ ಸಹಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಭಾಗದಲ್ಲಿ ಅರಣ್ಯ ಪಾಲಕನನ್ನಾಗಿ ಶಿವಪ್ಪ ಅವರನ್ನು ನೇಮಕ ಮಾಡಿದ್ದು, ಎರಡು ವರ್ಷಗಳಿಂದ ಶಿವಪ್ಪ ಸದ್ಯ ಇಲ್ಲಿಯ ಗಿಡಗಳ ಆರೈಕೆಯನ್ನು ಮಾಡುತ್ತಿದ್ದಾರೆ. ಇನ್ನೂ ಎರಡು ಮೂರು ವರ್ಷಗಳಲ್ಲಿ ತಾಲ್ಲೂಕಿನ ಹನಗಂಡಿ ಗ್ರಾಮದ ಬೆಟ್ಟ ಪ್ರದೇಶ ಹಚ್ಚ ಹಸಿರಿನ ಪ್ರದೇಶವಾಗಲಿದೆ.
ದೇವಪ್ಪ ದಿನ ನಿತ್ಯ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10ರವರೆಗೆ ಇಲ್ಲಿ ಗಿಡಗಳ ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಟ್ಟ ಪ್ರದೇಶ ಅಂದರೆ ಸಾಮಾನ್ಯವಾಗಿ ದನ, ಕರು, ಆಡು, ಕುರಿಗಳು ಇಲ್ಲಿಗೆ ಬಂದು ಗಿಡಗಳನ್ನು ತಿನ್ನುತ್ತವೆ. ಆದರೆ ಶಿವಪ್ಪ ಇಲ್ಲಿಗೆ ಯಾವುದೆ ಬಿಡಾಡಿ ದನ ಕರುಗಳನ್ನು ಬರಲು ಬಿಡುವುದಿಲ್ಲ. ಮರ ಕಡಿಯುವವರನ್ನೂ ಬಿಡುವುದಿಲ್ಲ.

ಬೆಳಿಗ್ಗೆ ಆರು ಗಂಟೆಗೆ ಬಂದು ಸಮೀಪದ ಸರ್ಕಾರಿ ಪ್ರೌಢಶಾಲೆಯ ಬೋರ್‌ವೆಲ್‌ನಿಂದ ನೀರನ್ನು ಪೈಪ್‌ ಮೂಲಕ ಪ್ರತಿಯೊಂದು ಗಿಡಗಳಿಗೆ ಹಾಕುತ್ತಾರೆ. ಇದರಿಂದಾಗಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಹಚ್ಚಿದ ಯಾವುದೆ ಗಿಡಗಳು ಒಣಗದಂತೆ ನೋಡಿಕೊಳ್ಳುತ್ತಿದ್ದಾರೆ. ಇಂಥ ಬೇಸಿಗೆಯ ಸಂದರ್ಭದಲ್ಲಿಯೂ ಕೂಡಾ ಈ ಗಿಡಗಳು ಹಚ್ಚ ಹಸಿರಾಗಿವೆ.

ನೀರಿನ ಅಭಾವದ ದಿನಗಳ ಸಂದರ್ಭದಲ್ಲಿ ಪತ್ನಿ ಜೊತೆಗೂಡಿ ಎರಡು ಸಾವಿರ ಗಿಡಗಳಿಗೆ ನೀರನ್ನು ಕೊಡಗಳು ಮೂಲಕ ಹೊತ್ತು ಹಾಕಿದ್ದಾರೆ. ಕೆಲವು ಸಂದರ್ಭದಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಹಾಕುತ್ತಿದ್ದಾರೆ. ಇಲ್ಲಿ ಬೇವು, ಅರಳೆ, ಬಸರಿ, ಇಲಾಚಿ, ಆಲದ ಮತ್ತು ರಾಜಾ ರಾಣಿಗಳನ್ನು ಗಿಡಗಳನ್ನು ಹಚ್ಚಲಾಗಿದೆ.

ಈಚೆಗೆ ಬೀಸಿದ ಭಾರಿ ಗಾಳಿಯಿಂದಾಗಿ ನೂರಾರು ಗಿಡಗಳು ಒಂದು ಕಡೆಗೆ ವಾಲಿವೆ. ಶಿವಪ್ಪ ಅವುಗಳನ್ನು ಸರಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ಇಲ್ಲಿ ಸಾಕಷ್ಟು ಒಣ ಹುಲ್ಲು ಬೆಳೆಯುತ್ತದೆ. ಗಿಡಗಳಿಗೆ ತೊಂದರೆಯಾಗದಂತೆ ಒಂದು ಕಡೆಗೆ ಸಂಗ್ರಹಿಸಿ ಅದನ್ನು ಸುಡಲಾಗುತ್ತದೆ.

ಎರಡು ವರ್ಷಗಳಿಂದ ಅಂದಾಜು ಎರಡೂವರೆ ಸಾವಿರ ಗಿಡಗಳ ಆರೈಕೆ ಮಾಡುತ್ತಿರುವ ಶಿವಪ್ಪ ಗೊಂಗಡಿ ಅವರ ಕಾರ್ಯವನ್ನು ಮೆಚ್ಚಲೆಬೇಕು. ನೋಡಲು ಕಾಡುಗಳ್ಳ ವೀರಪ್ಪನ್‌ನಂತೆ ದಪ್ಪ ಮೀಸೆ ಬಿಟ್ಟಿರುವ ಶಿವಪ್ಪ ನಿಜ ಅರ್ಥದಲ್ಲಿ ಕಾಡು ರಕ್ಷಕರಾಗಿದ್ದಾರೆ.

**
ಶಿವಪ್ಪ ಅರಣ್ಯ ಇಲಾಖೆಯ ಗಿಡಗಳೊಂದಿಗೆ ಶಾಲೆಯ ಗಿಡಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರ ಪರಿಶ್ರಮದಿಂದಾಗಿ ಶಾಲೆಯಲ್ಲಿ ವನವೊಂದು ನಿರ್ಮಾಣಗೊಂಡಿದೆ
ಡಾ.ಶಾರದಾ ಮುಳ್ಳೂರು, ಮುಖ್ಯ ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ, ಹನಗಂಡಿ 

ವಿಶ್ವಜ ಕಾಡದೇವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT