ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಡಾ ಖಾನಾ ಉಳಿಸಿ, ಇಲ್ಲ ಉರುಳಿಸಿ

Last Updated 30 ಸೆಪ್ಟೆಂಬರ್ 2018, 19:53 IST
ಅಕ್ಷರ ಗಾತ್ರ

ಬೀದರ್: ನಗರದ ರಟಕಲ್‌ಪುರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಘೋಡಾ ಖಾನಾ ಹಲವು ವರ್ಷಗಳಿಂದ ಪಾಳು ಬಿದ್ದಿರುವ ಕಾರಣ ವಿದ್ಯಾರ್ಥಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಘೋಡಾ ಖಾನಾ ಗೋಡೆಗಳು ನಿರ್ವಹಣೆ ಇಲ್ಲದ್ದಕ್ಕೆ ಸಾಮರ್ಥ್ಯ ಕಳೆದುಕೊಂಡಿದ್ದು, ಗೋಡೆಯಲ್ಲಿನ ಕಲ್ಲುಗಳು ಒಂದೊಂದಾಗಿ ಉರುಳಿ ಬೀಳಲಾರಂಭಿಸಿವೆ.

ನಿಜಾಮರ ಆಳ್ವಿಕೆಯ ಕಾಲದಲ್ಲಿ ರಟಕಲ್‌ಪುರದಲ್ಲಿ ಪ್ರವಾಸದ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಲು ರಾಣಿ ಮಹಲ್, ಘೋಡಾ ಖಾನಾ ಹಾಗೂ ಚಿತಾಖಾನಾ ನಿರ್ಮಿಸಲಾಗಿತ್ತು. ಜಿಲ್ಲಾ ಆಡಳಿತ ಚಿತಾಖಾನಾ ಕಟ್ಟಡವನ್ನು ದುರಸ್ತಿ ಪಡಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಯ ಕೊಠಡಿಯನ್ನಾಗಿ ಪರಿವರ್ತಿಸಿಕೊಟ್ಟಿದೆ. ರಾಣಿ ಮಹಲ್‌ನಲ್ಲಿ ಬಾಲಕಿಯರ ಸರ್ಕಾರಿ ಉರ್ದು ಪ್ರೌಢ ಶಾಲೆ ನಡೆಯುತ್ತಿದೆ.
ಘೋಡಾ ಖಾನಾ ಇರುವ ಸ್ಥಳದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಾಲಕರ ಉರ್ದು ಹಾಗೂ ಮರಾಠಿ ಪ್ರೌಢ ಶಾಲೆಗಳು ನಡೆಯುತ್ತಿವೆ.

ನಿರ್ವಹಣೆ ಇಲ್ಲದ ಕಾರಣ ಘೋಡಾ ಖಾನಾದ ಕಟ್ಟಡದ ಮೇಲೆ ಗಿಡಗಳು ಬೆಳೆದಿವೆ. ಗಿಡಗಳು ಆಳವಾಗಿ ಬೇರು ಬಿಟ್ಟಿರುವ ಕಾರಣ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. ಕಟ್ಟಡದ ಇನ್ನುಳಿದ ಭಾಗಗಳಲ್ಲಿ ಕಮಾನುಗಳು ಕುಸಿಯದಂತೆ ಗೋಡೆ ಕಟ್ಟಲಾಗಿದೆ. ಆದರೆ ಕಟ್ಟಡದ ಕಲ್ಲುಗಳು ಕುಸಿದು ಬೀಳುತ್ತಲೇ ಇವೆ. ಶಾಲಾ ವಿದ್ಯಾರ್ಥಿಗಳು ಕಟ್ಟಡದೊಳಗೆ ಹೋಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕೆಲವು ಬಾಲಕರು ಕಟ್ಟಡದೊಳಗೆ ಸೈಕಲ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿರುವ ಕಾರಣ ಯಾವುದೇ ಸಂದರ್ಭದಲ್ಲಿ ಕುಸಿಯುವಂತಹ ಸ್ಥಿತಿ ಇದೆ.

ಪುರಾತನ ಕಟ್ಟಡದೊಳಗೆ ಬಾಲಕರು ಹೋಗದಂತೆ ನಿಗಾ ವಹಿಸುವುದು ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ತಲೆ ನೋವಾಗಿದೆ. ಶಿಕ್ಷಕರು ಶಿಕ್ಷಣ ಇಲಾಖೆಯ ಮೂಲಕ ಜಿಲ್ಲಾ ಆಡಳಿತಕ್ಕೆ ಹಲವು ಬಾರಿ ದುರಸ್ತಿ ಮಾಡಬೇಕು ಇಲ್ಲವೇ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲಾ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಹೋಗಿದ್ದಾರೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ.

‘ಶಾಲಾ ಆವರಣದಲ್ಲಿರುವ ಕಟ್ಟಡ ಅಪಾಯದ ಅಂಚಿನಲ್ಲಿದೆ. ಜಿಲ್ಲಾ ಆಡಳಿತ ಪುರಾತತ್ವ ಇಲಾಖೆಯ ಮೂಲಕ ದುರಸ್ತಿ ಪಡಿಸಿದರೆ ಬಳಸಿಕೊಳ್ಳಬಹುದಾಗಿದೆ. ದುರಸ್ತಿ ಸಾಧ್ಯ ಇಲ್ಲ ಎನ್ನುವುದು ಸ್ಪಷ್ಟವಾದರೆ ಅದನ್ನು ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಆಟದ ಮೈದಾನ ನಿರ್ಮಾಣ ಮಾಡಬಹುದಾಗಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಹೇಳುತ್ತಾರೆ.

ಉತ್ತಮ ಪರಿಸರ ನಿರ್ಮಾಣ
‘ಶಾಲೆಯ ಆವರಣದಲ್ಲಿ ಗಿಡಮರಗಳನ್ನು ಬೆಳೆಸಿದ್ದೇವೆ. ಮುರಿದ ಡೆಸ್ಕ್‌ ಹಾಗೂ ಬೆಂಚ್‌ಗಳ ಗ್ರಿಲ್‌ಗಳನ್ನು ಗಿಡಗಳ ರಕ್ಷಣೆಗೆ ಬಳಸಿಕೊಂಡಿದ್ದೇವೆ. ಸಸಿಗಳ ರಕ್ಷಣೆಯ ಹೊಣೆಯನ್ನು ವಿದ್ಯಾರ್ಥಿಗಳಿಗೆ ವಹಿಸಿ ಮೇಲುಸ್ತುವಾರಿ ಮಾಡುತ್ತಿದ್ದೇವೆ. ಉತ್ತಮ ಪರಿಸರ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ.
–ಎ.ಎಂ.ಹಳ್ಳಿಖೇಡೆ,ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ

ದುರಸ್ತಿ ಮಾಡಿ
ಘೋಡಾ ಖಾನಾ ಪೂರ್ಣ ದುರಸ್ತಿ ಮಾಡಿಸಿದರೆ ನಮ್ಮ ಸೈಕಲ್‌ಗಳನ್ನು ಇಡಲು ಸಾಧ್ಯವಾಗಲಿದೆ. ಮಣ್ಣು ಕಲ್ಲು ತುಂಬಿದ್ದರಿಂದ ಕಟ್ಟಡ ಮುಚ್ಚಲಾಗಿದೆ. ಇದರಿಂದ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡರೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
–ಮಹಮ್ಮದ್‌, ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿ

* 2 ಪ್ರೌಢ ಶಾಲೆಗಳು ಒಂದೇ ಆವರಣದಲ್ಲಿ

* 1172 ವಿದ್ಯಾರ್ಥಿಗಳು ಇದ್ದರೂ ಇಲ್ಲ ಮೈದಾನ

* ನಗರದಲ್ಲಿರುವ ಏಕೈಕ ಮರಾಠಿ ಪ್ರೌಢ ಶಾಲೆ

* ಸಸಿಗಳನ್ನು ಬೆಳೆಸಲು ಪಣ ತೊಟ್ಟ ಶಿಕ್ಷಕರು

* ಪರಿಸರ ನೈರ್ಮಲ್ಯಕ್ಕೆ ಕೈಜೋಡಿಸಿದ ವಿದ್ಯಾರ್ಥಿಗಳು

* ಪ್ರೌಢ ಶಾಲೆಗೆ ಮೂಲ ಸೌಕರ್ಯ ಒದಗಿಸಲು ಪಾಲಕರ ಮನವಿ

* ಉದ್ಯಾನ ನಿರ್ಮಿಸಲು ನಗರಸಭೆ ನೆರವಿಗೆ ಬರಲಿ

* ಕಿಡಿಗೇಡಿಗಳನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಿ

* ಉರ್ದು ವಿದ್ಯಾರ್ಥಿಗಳ ಸಂಖ್ಯೆ 79
* ಮರಾಠಿ ವಿದ್ಯಾರ್ಥಿಗಳ ಸಂಖ್ಯೆ 31

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT