ಹೆಳವ, ಕುರುಡರ ಸಹಕಾರ

7

ಹೆಳವ, ಕುರುಡರ ಸಹಕಾರ

Published:
Updated:

ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಹೆಳವ– ಕುರುಡ (ಪ್ರ.ವಾ., ಮೇ 26) ಪ್ರಸಂಗಕ್ಕೆ ಪ್ರತಿಕ್ರಿಯೆ ನೀಡುತ್ತಾ ಡಾ.ಜಿ. ಕೃಷ್ಣಪ್ಪ ಅವರು ಕವಿ ಅಡಿಗರ ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ, ದಾರಿ ಸಾಗುವುದೆಂತೊ ನೋಡಬೇಕು’ ಎಂಬ ರೂಪಕದ ಸರಳ ಸ್ಪಷ್ಟ ಅರ್ಥವನ್ನು ಅವಗಣಿಸಿದ್ದಾರೆ. ‘ಅಡಿಗರದ್ದೆನ್ನುವ ಮಾತನ್ನು ಮಹಾಕವಿ ಹರಿಹರ ಹಿಂದೆಯೇ ಹೇಳಿದ್ದ ಎನ್ನುವ ತೀರ್ಮಾನ ಮಂಡಿಸಿದ್ದಾರೆ (ವಾ.ವಾ., ಮೇ 29).

ಅಡಿಗರು ಹೇಳಿರುವ ‘ನಡೆಯಲಾರದ ಹೆಳವನು, ಕಾಣಲಾರದ ಕುರುಡನನ್ನು ಹೆಗಲ ಮೇಲೆ ಹೊತ್ತು ದಾರಿ ಸಾಗಿಸಬೇಕಾದ ಪರಿಸ್ಥಿತಿ’ ಸಾಮಾನ್ಯ ಓದುಗರಿಗೆ ಸುಲಭಗ್ರಾಹ್ಯ. ಆದರೆ ಹರಿಹರ ಕವಿಯ ನುಡಿಯು ‘ಹೆಳವನ ಕಣ್ಣಿನ (ದೃಷ್ಟಿಯ) ಸಹಾಯದಿಂದ ಕುರುಡ ನಡೆಯುವ ಪ್ರಯತ್ನವು ಬಲಾಢ್ಯ ವ್ಯಕ್ತಿಯ ನಡಿಗೆಯ ಮಾಳ್ಕೆ(ರೀತಿ)ಯಲ್ಲಿರದು’ ಎನ್ನುವ ಅರ್ಥವನ್ನು ಕೃಷ್ಣಪ್ಪ ಅವರು ತಮ್ಮ ಹೇಳಿಕೆಯಲ್ಲಿ ಸೂಚಿಸಲಿಲ್ಲ. ಹರಿಹರ ಮತ್ತು ಅಡಿಗರ ರೂಪಕಗಳ ಹೋಲಿಕೆಯನ್ನು ಅವರು ಮಾಡಿಲ್ಲ.

ಹೆಳವ- ಕುರುಡರ ಜಂಟಿ ಪ್ರಯತ್ನದ ದೌರ್ಬಲ್ಯವನ್ನು ಹರಿಹರ ನಿರೂಪಿಸಿದರೆ, ಅಡಿಗರು ಜಂಟಿ ಪ್ರಯತ್ನದ ‘ನಕಾರಾತ್ಮಕ ಪರಿ’ಯನ್ನು ರೂಪಕವಾಗಿಸಿ, ಅದರ ವಿಪರ್ಯಾಸವನ್ನು ಮಾರ್ಮಿಕವಾಗಿ ಬಿಂಬಿಸುತ್ತಾರೆ.

ಅಡಿಗರು ಭೂಮಿಗೀತ ರಚಿಸಿದ ಸಮಯದ ಆಚೀಚೆಯಲ್ಲೇ ಅಂದಿನ ಮದ್ರಾಸ್ ಪ್ರಾಂತದ ಕನ್ನಡ ಜಿಲ್ಲೆಯ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗಾಗಿ ಬಹುಭಾಷಾ ವಿದ್ವಾಂಸ, ಕವಿ ಕಯ್ಯಾರ ಕಿಞ್ಞಣ್ಣ ರೈ ರಚಿಸಿದ್ದ ಪಾಠಮಾಲೆಯಲ್ಲಿ ಇದೇ ಕುರುಡ- ಕುಂಟರ ಸಹಕಾರದ ಸಂಗತಿಯ ಒಂದು ಪದ್ಯ ಮಕ್ಕಳ ಕಂಠಪಾಠಕ್ಕೆ ಇತ್ತು. ಅದು ಹರಿಹರ ಕವಿಯಂತೆ, ಹೆಳವ- ಕುರುಡರ ಜಂಟಿ ಪ್ರಯತ್ನದ ದೌರ್ಬಲ್ಯದ ಕುರಿತಾದದ್ದಲ್ಲ. ‘ಕುಂಟ ಮುಂದೆ ನಡೆಯಲಾರ, ಕುರುಡ ಹಾದಿ ಕಾಣಲಾರ’ ಆದರೂ ಅವರಿಬ್ಬರು ಜೊತೆಗೂಡಿ ಪರಸ್ಪರ ಸಹಾನುಭೂತಿಯಿಂದ ಸಹಕರಿಸಿ, ಕುರುಡನ ಹೆಗಲ ಮೇಲೆ ಕುಂಟ ಕುಳಿತುಹಾದಿ ನಿರ್ದೇಶಿಸುತ್ತಾ ಅದರಂತೆ ಕುರುಡ ನಡೆಯುತ್ತಾಗುರಿ ತಲುಪುತ್ತಾರೆ. ಹೀಗೆ ಕಯ್ಯಾರರ ಕುಂಟ- ಕುರುಡರು ಅನ್ಯೋನ್ಯತೆಯಿಂದ ಬದುಕಿನ ಸವಾಲನ್ನೆದುರಿಸಿದ ಸಾಧನೆಯ ಹೀರೊ ಮಾದರಿಗಳಾಗಿದ್ದಾರೆ. ಕುರುಡ- ಕುಂಟ ಜೋಡಿಯನ್ನು ಹರಿಹರ, ಕಯ್ಯಾರ ಮತ್ತು ಅಡಿಗರು ಕಾವ್ಯರೂಪಕವಾಗಿಸಿಕೊಂಡ ಪರಿಯನ್ನು ಸೂಕ್ಷ್ಮವಾಗಿ ಹೋಲಿಸಿ ಸವಿಯುವ ಭಾಗ್ಯ ಮುಕ್ತ ದೃಷ್ಟಿಯ ಕನ್ನಡ ಕಾವ್ಯ ಪ್ರೇಮಿಗಳಿಗಿದೆ.

ಹಾಗೆಯೇ ಈಗಿನ ಸಮ್ಮಿಶ್ರ ಸರ್ಕಾರದ ಜೋಡಿಪಕ್ಷಗಳ ಕಾರ್ಯನಿರ್ವಹಣೆಯ ಪರಿ ಹೇಗಿರಬಾರದೆನ್ನುವ ಅರಿವು ಜಾಗೃತವಾಗಿರಲು ಅಡಿಗರ ರೂಪಕ ಸಮಯೋಚಿತವಾಗಿದೆ.

ಎಂ. ಜಯರಾಮ ಅಡಿಗ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry