ಭಾನುವಾರ, ಮೇ 9, 2021
19 °C

ಗುರುವಾರ 6–6–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಬರ್ಟ್ ಕೆನೆಡಿಗೆ ಗುಂಡೇಟು: ಸ್ಥಿತಿ ವಿಷಮ, ಉಳಿಸಲು ಸರ್ವ ಪ್ರಯತ್ನ 

ಲಾಸ್ಏಂಜಲ್ಸ್, ಜೂ. 5– ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ 42 ವರ್ಷ ವಯಸ್ಸಿನ ಸೆನೆಟರ್ ರಾಬರ್ಟ್ ಕೆನೆಡಿ ಅವರ ಮೇಲೆ ಇಂದು ಮುಂಜಾನೆ ಗುಂಡು ಹಾರಿಸಲಾಯಿತು. ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.

ರಕ‍್ತ ಚಿಮ್ಮುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆ‌ಗ ಅವರ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ಸೇರಿಸಿದ ಎರಡು ಗಂಟೆ ನಂತರ ರಕ‍್ತಸ್ರಾವ ನಿಂತಿತು.

ದಕ್ಷಿಣ ಡಕೋಟ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ ವಿಜಯ ಗಳಿಸಿದ್ದ ಕೆನೆಡಿಯವರು ಇಲ್ಲಿನ ಅಂಬಾಸೆಡರ್ ಹೋಟೆಲಿನಲ್ಲಿ ಅದೇ ತಾನೆ ತಮ್ಮ ವಿಜಯದ ವಾರ್ತೆಯನ್ನು ‍ಪ್ರಕಟಿಸಿದ್ದರು.

ಆದರೆ ಮರುಕ್ಷಣವೇ ಈ ಭೀಕರ ದುರ್ಘಟನೆ ಸಂಭವಿಸಿತು. ಗುಂಡೇಟುಗಳಿಂದ ಇತರ ಮೂವರಿಗೆ ಗಾಯಗಳಾಗಿವೆ.

ಭೀಕರ ಪ್ರಕರಣ: ಜಾನ್ಸನ್

ವಾಷಿಂಗ್ಟನ್, ಜೂ. 5– ‘ಇದು ಅತ್ಯಂತ ಭೀಕರ ಪ್ರಕರಣ. ಈ ದುರಂತದ ಭೀಕರತೆಗೆ ಸರಿಸಮವಾದ ಪದಗಳೇ ಇಲ್ಲ’ ಇದು ರಾಬರ್ಟ್ ಕೆನೆಡಿಯವರಿಗೆ ಗುಂಡೇಟು ಬಿದ್ದ ಸುದ್ದಿ ಕೇಳಿ ಅಧ್ಯಕ್ಷ ಜಾನ್ಸನ್ ನೀಡಿದ ಹೇಳಿಕೆ.

ಕೆನೆಡಿ ಬದುಕುವ ಸಂಭವ ತೀರಾ ಕಡಿಮೆ? 

ನ್ಯೂಯಾರ್ಕ್, ಜೂ. 5– ‘ಗುಂಡೇಟು ತಗಲಿರುವ ಸೆನೆಟರ್ ರಾಬರ್ಟ್ ಕೆನೆಡಿ ಮೃತ್ಯುವಿನಿಂದ ಪಾರಾಗುವ ಸಂಭವ ಬಹು ಕಡಿಮೆಯಾಗಿದೆ’ ಎಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಮೂವರು ಶಸ್ತ್ರ ವೈದ್ಯರಲ್ಲೊಬ್ಬರಾದ ಡಾ. ಹೆನ್ಸಿ ಕ್ಯುನವೊ ತಮಗೆ ಟೆಲಿಫೋನಿನಲ್ಲಿ ತಿಳಿಸಿದರೆಂದು ಶಸ್ತ್ರ ವೈದ್ಯ ಡಾ. ಲಾರೆನ್ಸ್ ಪೂಲ್ ಇಂದು ಇಲ್ಲಿ ತಿಳಿಸಿದರು.

ವಿಚಿತ್ರ ಮೂಗಿನ ಹುಡುಗಿಯ ಕೂಗು ಇದು ವಿಚಿತ್ರ ವ್ಯಕ್ತಿಯ ಯತ್ನವೋ ಅಥವ ಹತ್ಯೆ ಯತ್ನದ ಗುಂಪೊಂದರ ಸಂಚಿದೆಯೋ ಕೂಡಲೇ ಗೊತ್ತಾಗಿಲ್ಲ.

ವಿಚಿತ್ರ ಮೂಗಿನ ಹುಡುಗಿಯೊಬ್ಬಳು ‘ನಾವು ಅವರನ್ನು ಕೊಂದೆವು’ ಎಂದು ಕೂಗಿಕೊಂಡಳೆಂದು ಕೆನೆಡಿ ಪ್ರಚಾರ ಸಿಬ್ಬಂದಿಯ ಮಹಿಳೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.