ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶತಕ’ದತ್ತ ಅಂಕಿ ಸಂಖ್ಯೆಗಳ ಆಟಗಾರ

14ರಂದು ನೂರು ಪಂದ್ಯಗಳ ಕ್ಲಬ್ ಸೇರಲಿರುವ ಸಂಖ್ಯಾತಜ್ಞ ಗೋಪಾಲಕೃಷ್ಣ ಸಿದ್ಧತೆ
Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ ಪಂದ್ಯಗಳು ಮತ್ತು ಆಟಗಾರರ ಕುರಿತ ಅಂಕಿಸಂಖ್ಯೆಗಳ ಮಾಹಿತಿಯ ಕಣಜ ವಾಗಿರುವ ಬೆಂಗಳೂರಿನ ಎಚ್‌.ಆರ್. ಗೋಪಾಲಕೃಷ್ಣ ಅವರು ‘ಶತಕ’ ಬಾರಿಸಲಿದ್ದಾರೆ.

71 ವರ್ಷದ ಗೋಪಾಲಕೃಷ್ಣ (ಎಚ್‌ಆರ್‌ಜಿ) ಅವರು ನೂರನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಂಕಿ ಸಂಖ್ಯೆ ನಿರ್ವಹಣೆ ಮಾಡಲಿದ್ದಾರೆ. ಇದೇ 14ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಗಾನಿಸ್ತಾನ ನಡುವಣ ಪಂದ್ಯದಲ್ಲಿ ಅವರು ಈ ದಾಖಲೆ ಬರೆಯಲಿದ್ದಾರೆ. 1974ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್‌ ಇಂಡೀಸ್ ತಂಡ ಗಳ ನಡುವಣ ಟೆಸ್ಟ್‌ನಲ್ಲಿ ಅವರ ಪಯಣ ಆರಂಭವಾಗಿತ್ತು.

ಅವರು 37 ಟೆಸ್ಟ್, 57 ಏಕದಿನ ಮತ್ತು ಐದು ಟ್ವೆಂಟಿ–20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 99 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸಂಖ್ಯಾತಜ್ಞರಾಗಿ ಕಾರ್ಯನಿರ್ವಹಿಸಿದ ದಕ್ಷಿಣ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಮುಂಬೈನ ಸುಧೀರ್ ವೈದ್ಯ ಅವರು 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಸಂಖ್ಯಾಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಂತರ ಎಚ್‌ಆರ್‌ಜಿ ಈ ಸಾಧನೆ ಮಾಡುತ್ತಿದ್ದಾರೆ.

‘ಈ ವೃತ್ತಿ ನನಗೆ ಅಪಾರ ಖುಷಿ ಕೊಟ್ಟಿದೆ. ಅಂಕಿ ಸಂಖ್ಯೆಗಳೊಂದಿಗೆ ಆಟವಾಡುವ ಮಜಾ ಏನೆಂಬುದು ಅನುಭವಿಸಿದವರಿಗೇ ಗೊತ್ತು. ಪ್ರತಿಯೊಂದು ಪಂದ್ಯದಲ್ಲಿಯೂ ಒಂದೊಂದು ದಾಖಲೆಗಳು ಆಗುತ್ತವೆ. ಲಭ್ಯ ಇರುವ ಮಾಹಿತಿಗಳನ್ನು ಕಳೆದು, ಕೂಡಿ, ತಾಳೆ ಹಾಕಿ, ಕೆಲವೊಮ್ಮೆ ಹುಡುಕಿಕೊಡುವುದು ಸಾರ್ಥಕ ಕೆಲಸ. ಈ ಮಾಹಿತಿಯನ್ನು ವೀಕ್ಷಕ ವಿವರಣೆಕಾರರು ಮತ್ತು ಮಾಧ್ಯಮ ಪ್ರತಿನಿಧಿಗಳ ಮೂಲಕ ಕೋಟ್ಯಂತರ ಜನರಿಗೆ ನೀಡುವುದು ದೊಡ್ಡ ಹೊಣೆ’ ಎಂದು ಎಚ್‌ಆರ್‌ಜಿ ಹೇಳುತ್ತಾರೆ.

‘ದೇಶಿ ಕ್ರಿಕೆಟ್‌ ಪಂದ್ಯಗಳು, ಟೆಸ್ಟ್‌, ಏಕದಿನ, ಟ್ವಿಂಟಿ–20 ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಮಾದರಿಯೂ ವಿಭಿನ್ನ. ಸವಾಲುಗಳು ಕೂಡ ಬೇರೆಯೇ. ಈಗ ಇಂಟರ್‌ನೆಟ್‌ ಇರುವುದರಿಂದ ಮಾಹಿತಿ ಹುಡುಕಾಟ ಕಷ್ಟವಲ್ಲ. ಆದರೆ, ನಾನು ವೃತ್ತಿ ಆರಂಭಿಸಿದ ದಿನಗಳಲ್ಲಿ ಬಹಳವೇ ತೊಂದರೆ ಇತ್ತು. ಸ್ಕೋರ್‌ ಕಾರ್ಡ್‌ ಸಿಗುವುದು ಕೂಡ ಕಷ್ಟವಿತ್ತು. ಪಂದ್ಯ ನಡೆದ ಮರುದಿನವೇ ಪತ್ರಿಕಾ ಕಚೇರಿಗಳಿಗೆ ಹೋಗಿ ಸ್ಕೋರ್‌ ಕಾರ್ಡ್‌ ಬರೆದುಕೊಂಡು ಬರಬೇಕಿತ್ತು. ಬೆಂಗಳೂರಿನಿಂದ ಹೊರಗೆ ನಡೆಯುವ ಪಂದ್ಯಗಳಿಗೆ ಮಾಹಿತಿಗಳು ಇರುವ 15–20ಕ್ಕೂ ಹೆಚ್ಚು ಪುಸ್ತಕಗಳ ದೊಡ್ಡ ಚೀಲವನ್ನು ಒಯ್ಯಬೇಕಿತ್ತು’ ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ.

1977ರಲ್ಲಿ ಅವರು ಆಕಾಶವಾಣಿಯ ಅಧಿಕೃತ ಅಂಕಿ–ಸಂಖ್ಯೆ ತಜ್ಞರಾಗಿ ನೇಮಕವಾದರು. ಕಾಮೆಂಟ್ರಿ ತಂಡಕ್ಕೆ ದಾಖಲೆಗಳನ್ನು ಒದಗಿಸುವ ಕಾರ್ಯ ನಿರ್ವಹಿಸಿದರು. ದೂರದರ್ಶನ, ಬಿಸಿಸಿಐ ವೆಬ್‌ಸೈಟ್‌ಗಳಿಗೂ ಕಾರ್ಯನಿರ್ವಹಿಸಿದ್ದಾರೆ.

‘ಹಲವು ವಿಶ್ವದಾಖಲೆಗಳು, ಹಲವು ದಿಗ್ಗಜರ ಆಟಗಳಿಗೆ ಸಾಕ್ಷಿಯಾಗಿದ್ದೇನೆ. ಅವರೆಲ್ಲರ ಸಾಧನೆಗಳನ್ನು ಅಂಕಿಗಳಲ್ಲಿ ದಾಖಲಿಸುವ ಅವಕಾಶ ನನ್ನದಾಗಿದೆ. ಚೆನ್ನೈನಲ್ಲಿ ನಡೆದಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣದ ಟೆಸ್ಟ್‌ನಲ್ಲಿ ಭಾರತ ತಂಡದ 200 ರನ್‌ಗಳ ಜೊತೆಯಾಟದ ದಾಖಲೆಗಳು ಅವಿಸ್ಮರಣೀಯ. ಅದೇ ರೀತಿ ಐಪಿಎಲ್ ಟೂರ್ನಿಯಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಲಾ ನೂರು ಸಿಕ್ಸರ್‌ಗಳನ್ನು ಹೊಡೆದ ವಿಶಿಷ್ಟ ದಾಖಲೆ ಇದೆ. ಕ್ರಿಸ್‌ ಗೇಲ್ (150), ಎಬಿ ಡಿವಿಲಿಯರ್ಸ್‌ (101) ಮತ್ತು ವಿರಾಟ್ ಕೊಹ್ಲಿ (100) ಈ ಸಾಧನೆ ಮಾಡಿದ್ದಾರೆ. ಇದು ಅಪರೂಪ. ಅಲ್ಲದೇ 2010ರಲ್ಲಿ ಸಚಿನ್ ತೆಂಡೂಲ್ಕರ್ ಗ್ವಾಲಿಯರ್‌ನಲ್ಲಿ ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕ ದಾಖಲಿಸಿದ್ದು ಕೂಡ ಸದಾ ನೆನಪಿನಲ್ಲಿ ಉಳಿಯುವ ಇನಿಂಗ್ಸ್‌’ ಎಂದು ಹೇಳುತ್ತಾರೆ ಎಚ್‌ಆರ್‌ಜಿ.

ಐದು ದಶಕಗಳ ಸಾಧನೆ: ಹಾಸನದ ಚನ್ನರಾಯಪಟ್ಟಣದ ಎಚ್‌ಆರ್‌ಜಿ ಬೆಂಗಳೂರಿನ ಆರ್‌.ವಿ.ಕಾಲೇಜಿನ ಕ್ರಿಕೆಟ್‌ ತಂಡದಲ್ಲಿ ಆಡಿದ್ದರು. ಅವರು ಪೂರ್ಣ ಕಾಲಿಕ ಕ್ರಿಕೆಟ್‌ ಸ್ಕೋರರ್– ಅಂಕಿ ಅಂಶ ತಜ್ಞರಾಗಿ 50 ವರ್ಷಗಳ ದೀರ್ಘ ಅನುಭವ ಎಚ್‌ಆರ್‌ಜಿ ಅವರಿಗೆ ಇದೆ. ದಕ್ಷಿಣ ವಲಯ - ಆಸ್ಟ್ರೇಲಿಯನ್ಸ್‌ ನಡುವೆ 1969ರ ಡಿಸೆಂಬರ್‌ನಲ್ಲಿ ಬೆಂಗ ಳೂರಿನಲ್ಲಿ ಕ್ರಿಕೆಟ್‌ ಪಂದ್ಯ ನಡೆದಿತ್ತು. ಈ ವೇಳೆ ಸ್ಕೋರರ್‌ ಆಗಿ ಪದಾರ್ಪಣೆ ಮಾಡಿದ್ದರು.

‘ಕೆಎಸ್‌ಸಿಎ ಮತ್ತು ಬಿಸಿಸಿಐ ಬಹಳಷ್ಟು ಬೆಂಬಲ ನೀಡಿವೆ. ಅದರಲ್ಲೂ ಕೆಎಸ್‌ಸಿಎ ಮಾತ್ರ ಅಂಕಿ ಸಂಖ್ಯೆಗಳ ಪುಸ್ತಕವನ್ನು ಹೊರತರಲು ಅವಕಾಶ ಮಾಡಿಕೊಟ್ಟಿದೆ. ನಾವೇ ನಿರ್ವಹಿಸುತ್ತಿರುವ www.hrgcricstats.com ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿಗಳನ್ನು ದಾಖಲು ಮಾಡಲಾಗಿದೆ’ ಎಂದು ಎಚ್‌ಆರ್‌ಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT